ನಟ ಪುನೀತ್‌ ರಾಜ್‌ ಕುಮಾರ್‌ ಸ್ಮರಣಾರ್ಥವಾಗಿ ಕಳೆದ ಒಂದು ವಾರದಿಂದ ಪುರುಷರು, ಮಹಿಳೆಯರು ಸೇರಿದಂತೆ 160 ಮಂದಿ ಕೂದಲು ದಾನ ಮಾಡುವ ಮೂಲಕ ಕ್ಯಾನ್ಸರ್‌ ರೋಗಿಗಳಿಗೆ ನೆರವಾಗಿದ್ದಾರೆ. ನಟಿ ರಿಷಿಕಾ ರಾಜ್‌ ಅವರು ಸ್ವತಃ ಕೂದಲು ದಾನ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಮೈಸೂರು (ಜ.04): ನಟ ಪುನೀತ್‌ ರಾಜ್‌ ಕುಮಾರ್‌ (Puneeth Rajkumar) ಸ್ಮರಣಾರ್ಥವಾಗಿ ಕಳೆದ ಒಂದು ವಾರದಿಂದ ಪುರುಷರು, ಮಹಿಳೆಯರು ಸೇರಿದಂತೆ 160 ಮಂದಿ ಕೂದಲು ದಾನ ಮಾಡುವ ಮೂಲಕ ಕ್ಯಾನ್ಸರ್‌ ರೋಗಿಗಳಿಗೆ ನೆರವಾಗಿದ್ದಾರೆ.

ಮೈಸೂರು ಹೇರ್‌ ಆ್ಯಂಡ್‌ ಬ್ಯೂಟಿ ಅಸೋಸಿಯೇಷನ್‌ ಶಾರದಾದೇವಿ ನಗರದ ನಿವೇದಿತಾ ಪಾರ್ಕ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕೂದಲು ದಾನ ಕಾರ್ಯಕ್ರಮದಲ್ಲಿ 'ಟಗರು' ಸರೋಜ ಖ್ಯಾತಿಯ ನಟಿ ರಿಷಿಕಾ ರಾಜ್‌ (Rishika Raj) ಅವರು ಸ್ವತಃ ಕೂದಲು ದಾನ ಮಾಡುವ ಮೂಲಕ ಚಾಲನೆ ನೀಡಿದರು. ಇವರೊಂದಿಗೆ ಮೈಸೂರು ಕೇಂದ್ರ ಕಾರಾಗೃಹದ ಸಹಾಯಕ ಜೈಲರ್‌ ವಿಮಲ ಎಸ್‌. ಪಂಡಿತ್‌ (Vimala.S.Pandit) ಅವರು ಸಹ ಕೂದಲು ದಾನ ನೀಡಿದರು. ಮಧ್ಯಾಹ್ನದವರೆಗೂ ನಡೆದ ಕಾರ್ಯಕ್ರಮದಲ್ಲಿ ಪುರುಷರು ಸೇರಿದಂತೆ 60 ಮಂದಿ ಮಹಿಳೆಯರು ಕೂದಲು ದಾನ ಮಾಡಿದರು.

ವಾರದಲ್ಲಿ 100 ಮಂದಿ: ಸಂಘದ ಕಾರ್ಯದರ್ಶಿ ಬಿ.ಡಿ. ಜ್ಯೋತಿ ಮಾತನಾಡಿ, ಕಳೆದ ಒಂದು ವಾರದಿಂದ ಕಾರ್ಯಕ್ರಮ ನಡೆಯುವ ಬಗ್ಗೆ ಪ್ರಚಾರ ಕಾರ್ಯ ನಡೆಸಿದ್ದರಿಂದ ಸಾಕಷ್ಟುಮಂದಿ ಮಹಿಳೆಯರು ಕರೆ ಮಾಡಿ, ಕೂದಲು ದಾನ ಮಾಡಿದ್ದಾರೆ. ಮೈಸೂರು, ಮಂಡ್ಯ ಜಿಲ್ಲೆಯಿಂದಲ್ಲೂ ಕರೆ ಬಂದಿದ್ದು, ಬ್ಯೂಟಿ ಪಾರ್ಲರ್‌ಗಳಲ್ಲಿ ಕೂದಲು ಪಡೆಯುವ ಮೂಲಕ ಸಂಗ್ರಹಿಸಲಾಗಿದೆ. ಮೈಸೂರು ನಗರದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ವ್ಯಾಪಕ ಸ್ಪಂದನೆ ಸಿಕ್ಕಿದೆ ಎಂದರು. ನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್‌, ಸಂಘದ ಅಧ್ಯಕ್ಷೆ ಉಮ ಜಾಧವ್‌ ಹಾಗೂ ಪದಾಧಿಕಾರಿಗಳು ಇದ್ದರು.

ಮನೆಯಲ್ಲೇ ಇದ್ದು ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ಸುಕೃತ ವಾಗ್ಲೆ

ಈ ಹಿಂದೆ ಸ್ಯಾಂಡಲ್‌ವುಡ್‌ನ ತಾರೆಯರೂ ಕೂದಲು ದಾನ ಮಾಡುವ ಮೂಲಕ ಕ್ಯಾನ್ಸರ್‌ ರೋಗಿಗಳಿಗೆ ನೆರವಾಗಿದ್ದಾರೆ. ಇತ್ತೀಚೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್‌ ದೇವರಾಜ್‌ (Prajwal Devaraj) ಅವರು ತಮ್ಮ ಕೂದಲನ್ನು ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದರು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhuruva Sarja) 'ಪೊಗರು' ಚಿತ್ರದ ನಂತರ ತಮ್ಮ ಕೂದಲನ್ನು ದಾನ ಮಾಡಿದ್ದರು. ನಟಿ ಕಾರುಣ್ಯ ರಾಮ್ (Karunya Ram) ತಾವು ಸಹ ಕ್ಯಾನ್ಸರ್ ರೋಗಿಗಳ ಕಷ್ಟಕ್ಕೆ ಸ್ಪಂದಿಸಿದ್ದು, ತಮ್ಮ 14 ಇಂಚು ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ. 

ಈ ಹಿಂದೆ ನಟಿ ಕಾವ್ಯ ಶಾಸ್ತ್ರಿ (Kavya Shahtry), ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ. 'ನೀವೆಲ್ಲರೂ ಯಾಕೆ ಎಂದು ಪ್ರಶ್ನಿಸಬಹುದು. ಯಾಕೆ ಮಾಡಿಸಿಕೊಳ್ಳಬಾರದು ಎಂದು ನಾನು ಹೇಳುವೆ. ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ನೀಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸೋಣ. ಅದೆಷ್ಟೋ ಮಹಿಳೆಯರು ಹಾಗೂ ಮಕ್ಕಳು ಕೂದಲು ಉದುರುವುದನ್ನು ನೋಡಿಯೇ ಖಿನ್ನತೆಗೆ ಒಳಗಾಗುತ್ತಾರೆ' ಎಂದು ಬರೆದು ಕಾವ್ಯಾ ಬಾಬ್‌ ಹೇರ್‌ ಫ್ಲಾಂಟ್ ಮಾಡಿದ್ದಾರೆ. 

ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

'ಹೌದು! ನಾನು ಕೂದಲು ದಾನ ಮಾಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಿಗೆ ಉಪಯೋಗವಾಗಲಿ ಎಂದು. ಕ್ಯಾನ್ಸರ್‌ನಿಂದ ನನ್ನ ಪ್ರೀತಿಯ ಚಿಕ್ಕಪ್ಪ ನಿಧನರಾದರು. ಕೀಮೋ ಥೆರಪಿ ಅದರ ಹಿಂಸೆ ಎಲ್ಲವೂ ಕಣ್ಣಾರೆ ಕಂಡ ನನಗೆ ಈ ಯೋಚನೆ ಮೂಡಿತ್ತು. ಇದೊಂದು ಸಣ್ಣ ಕೆಲಸವಿರಬಹುದು ಆದರೆ ನನ್ನಿಂದ ಆಗುವುದನ್ನು ಮಾಡಿದೆ. ಒಂದೊಳ್ಳೆ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಬನ್ನಿ' ಎಂದು ಕಾವ್ಯ ಬರೆದುಕೊಂಡಿದ್ದರು. ಇನ್ನು ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರಿಟಿಗಳು ಕೂದಲು ದಾನ ಮಾಡಿದ ಉದಾಹರಣೆ ಕೂಡ ಇದೆ.