Asianet Suvarna News Asianet Suvarna News

ನಾನು ಕಂಡ ಮೂಲ ಬೆಂಗಳೂರಿಗರು ಅಪ್ಪಟ ಕನ್ನಡಿಗರು : ರಂಜನಿ ರಾಘವನ್

ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡದ ಪ್ರಾಮುಖ್ಯತೆ ಬಗ್ಗೆ ತಮ್ಮ ಅನಿಸಿಕೆ ತಿಳಿಸಿರುವ ನಟಿ ರಂಜಿನಿ ರಾಘವನ್ ಕಿರುತೆರೆಯಿಂದ ಹಿರಿತೆರೆಗೆ ಬಂದು  ‘ಪುಟ್ಟ ಗೌರಿ ಮದುವೆ’, ‘ಇಷ್ಟದೇವತೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳ ಮೂಲಕ ಚಿರಪರಿಚಿತ ನಟಿ. ‘ರಾಜಹಂಸ’ ಮೂಲಕ ಬೆಳ್ಳಿತೆರೆಗೆ ಬಂದ ಮೇಲೆ ‘ಟಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳಲ್ಲಿ ನಟಿಸಿದ್ದು, ಇವು ಬಿಡುಗಡೆ ಆಗಬೇಕಿದೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಂಜನಿ ರಾಘವನ್ ಇತ್ತೀಚಿಗೆ ಬರೆದ ಕತೆಡಬ್ಬಿ ಸಂಕಲನ ನಾಲ್ಕು ಮುದ್ರಣವನ್ನು ಕಂಡಿತ್ತು.  

Kannada actress Ranjani Raghavan writes about language and culture snr
Author
Bengaluru, First Published Nov 1, 2021, 1:07 PM IST
  • Facebook
  • Twitter
  • Whatsapp

ರಂಜನಿ ರಾಘವನ್  - ನಟಿ, ಲೇಖಕಿ 

ಕಿರುತೆರೆಯಿಂದ ಹಿರಿತೆರೆಗೆ ಬಂದ ನಟಿ ರಂಜನಿ ರಾಘವನ್ (Ranjani Raghavan). ‘ಪುಟ್ಟ ಗೌರಿ ಮದುವೆ’, ‘ಇಷ್ಟದೇವತೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳ ಮೂಲಕ ಚಿರಪರಿಚಿತ ನಟಿ. ‘ರಾಜಹಂಸ’ ಮೂಲಕ ಬೆಳ್ಳಿತೆರೆಗೆ ಬಂದ ಮೇಲೆ ‘ಟಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳಲ್ಲಿ ನಟಿಸಿದ್ದು, ಇವು ಬಿಡುಗಡೆ ಆಗಬೇಕಿದೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ರಂಜನಿ ರಾಘವನ್ ಇತ್ತೀಚಿಗೆ ಬರೆದ ಕತೆಡಬ್ಬಿ ಸಂಕಲನ ನಾಲ್ಕು ಮುದ್ರಣವನ್ನು ಕಂಡಿತ್ತು.  

 ರಾಜ್ಯೋತ್ಸವದ (Kannada Rajyotsava) ಈ ಸಂದರ್ಭದಲ್ಲಿ, ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ (School) ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಡಿದ ಹಾಡಿನ ಈ ಸಾಲುಗಳು ನೆನಪಾದವು. ನಾನು ಓದಿದ್ದು ಇಂಗ್ಲಿಷ್ ಮೀಡಿಯಂ ನಲ್ಲಾದರೂ ಕನ್ನಡದ ವಾತಾವರಣ ಹಾಡುಗಳ ಸಾಹಿತ್ಯದಲ್ಲಿ, ಕತೆ ಪುಸ್ತಕದ ರೂಪದಲ್ಲಿ, ಸ್ಪರ್ಧೆಗಳಲ್ಲಿ ಹೆಜ್ಜೆಹಾಕುತಿದ್ದ ಜನಪದ ಗೀತೆಗಳಲ್ಲಿ, ಎಲ್ಲದಕ್ಕಿಂತ ಹೆಚ್ಚಾಗಿ ಮನೆ ಮಾತಾಗಿರುವ ಕನ್ನಡ ಭಾಷೆ ನನ್ನನ್ನು ಅಂಟಿಕೊಂಡೇ ಇತ್ತು. 

Kannada Rajyotsava| ಕನ್ನಡ ಉಳಿಸಿ, ಬೆಳೆಸಲು  ಏನು ಮಾಡಬೇಕು?

ಕನ್ನಡದ (Kannada) ಅಭಿಮಾನ ನನ್ನೊಳಗಿನಿಂದ ಮಾತ್ರ ಬಂದದ್ದಲ್ಲ, ನಮ್ಮ ಮನೆಯಿಂದ, ಶಾಲೆಯಿಂದ, ನಾನು ಬೆಳೆದ ಪರಿಸರದಲ್ಲಿ ಕನ್ನಡ ಪ್ರೇಮ ಇದ್ದೇ ಇತ್ತು. ಹಾಗಾಗಿ ಕನ್ನಡ, ನನ್ನ ಆತ್ಮಭಾಷೆ. ನಾನು ಯೋಚಿಸುವುದು ಕನ್ನಡದಲ್ಲಿ, ಕತೆಗಳನ್ನು ಬರೆಯುವುದು ಕನ್ನಡದಲ್ಲಿ, ನಾನು ಕನ್ನಡ ಸಿನಿಮಾ ಮತ್ತು ಧಾರಾವಾಹಿ ನಟಿ. ಒಟ್ಟಾರೆಯಾಗಿ ಕನ್ನಡದ ಅಕ್ಷರಗಳೇ ನನ್ನ ವೃತ್ತಿಜೀವನದ ಮೂಲ ಆಧಾರ. 

ನನ್ನನ್ನು ನೋಡಿದ ಕೆಲವರು ನೀವು ಬೆಂಗಳೂರಿನವರಾ ಎಂದು ಆಶ್ಚರ್ಯ ಪಟ್ಟಿದ್ದಾರೆ. ಬಹುಶಃ ಅದಕ್ಕೆ ಕಾರಣ ಟಿವಿ, ಸಿನಿಮಾಗಳಲ್ಲಿ ಬೆಂಗಳೂರಿನವರೆಂದರೆ ಬ್ರಿಟಿಷಿನವರಂತೆ ಕನ್ನಡ ಬಾರದವರು, ತಿಂಡಿ ಊಟಕ್ಕೆ ಪಿಜ್ಜ ಬರ್ಗರ್ ತಿನ್ನುವವರು ಎಂಬಂತೆ ಬಿಂಬಿಸುವುದು. ಆದರೆ ನಾನು ಚಿಕ್ಕಂದಿನಿಂದ ಕಂಡ ಬೆಂಗಳೂರು ಇದ್ಯಾವುದೂ ಅಲ್ಲ. ನಾನು ನೋಡಿದ ಬೆಂಗಳೂರಿಗರು ರವೀಂದ್ರ ಕಲಾಕ್ಷೇತ್ರದಲ್ಲಿ, ಸೇವಾ ಸದನದಲ್ಲಿ ಕನ್ನಡ ನಾಟಕಗಳನ್ನು, ರೂಪಕಗಳನ್ನು ನೋಡುವವರು, ಮನೆಯಲ್ಲಿ ಕನ್ನಡ ದಿನಪತ್ರಿಕೆ, ಕಾದಂಬರಿಗಳನ್ನು ಓದುವವರು, ವಾರಾಂತ್ಯಗಳಲ್ಲಿ ಅಡಿಗಾಸ್ ನಂತಹ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದು, ಸ್ಟ್ರಾಂಗ್ ಕಾಫಿ ಕುಡಿದು, ಮಲ್ಲೇಶ್ವರಂ (Malleshwaram) ಎಂಟನೇ ಕ್ರಾಸ್‌ನ ಫುಟ್‌ಪಾತ್ ನಲ್ಲಿ, ಹೆಚ್ಚೆಂದರೆ ಅಲಂಕಾರ ಪ್ಲಾಾದಲ್ಲಿ ಶಾಪಿಂಗ್ ಮಾಡುವವರು. ಇಲ್ಲೆಲ್ಲಾ ಕನ್ನಡ ಬಿಟ್ಟು ಬೇರೆ ಮಾತನಾಡುವ ಸಂದರ್ಭವಾಗಲೀ ಅನಿವಾರ್ಯ ವಾಗಲೀ ಬರುವುದೇ ಇಲ್ಲ. 

ಕನ್ನಡ ಉಳಿಸಿ, ಬೆಳೆಸಲು ಸರ್ಕಾರ ಏನು ಮಾಡಬೇಕು? 10 ಸರಳ ಸಲಹೆಗಳು

ಬೆಂಗಳೂರಿನ (Bengaluru) ಬಗ್ಗೆ ತಮಾಷೆಯ ಉದಾಹರಣೆ ಕೊಡಬಹುದಾದರೆ, ಸಾಮಾನ್ಯವಾಗಿ ಮನೆಯನ್ನು ನಾವು ಹೇಗೆ ಆರೇಂಜ್ ಮಾಡುತ್ತೇವೆ? ಹಾಲ್‌ನಲ್ಲಿ ಹೆಚ್ಚಿನ ಅಲಂಕಾರಿಕ ವಸ್ತುಗಳು, ಡೈನಿಂಗ್ ಹಾಲಿನಲ್ಲಿ, ಶೋ ಕೇಸ್‌ಗಳಲ್ಲಿ ಅತಿಥಿಗಳ ಕಣ್ಣು ಸೆಳೆಯಬಹುದಂತಾದ ವಸ್ತುಗಳನ್ನು ಪೀಠೋಪಕರಣಗಳನ್ನು ಜೋಡಿಸಿರುತ್ತೇವೆ. ಅಲ್ಲಿ ನಮ್ಮತನಕ್ಕಿಂತ ಹೆಚ್ಚಾಗಿ ಬಂದವರಿಗೆ ಮನೆ ಚೆನ್ನಾಗಿ ಕಾಣುವುದು ನಮ್ಮ ಆದ್ಯತೆಯಾಗಿರುತ್ತದೆ. ಆದರೆ ರೂಮು ಬಚ್ಚಲುಮನೆ ಸ್ಟೋರ್ ರೂಮುಗಳಂತ ಜಾಗಗಳು ನಮ್ಮ ಅಗತ್ಯಗಳಿಗೆ ತಕ್ಕನಾಗಿರುತ್ತದೆ. ನನ್ನ ಪ್ರಕಾರ ಬೆಂಗಳೂರು ಕೂಡ ಹಾಗೆಯೇ. ಈ ಎಂ.ಜಿ. ರೋಡು, ಬ್ರಿಗೇಡ್ ರೋಡು- ಎಲ್ಲಾ ಹೊರಗಡೆಯಿಂದ ನಮ್ಮೂರಿಗೆ ಬಂದವರಿಗೆ ತೋರಿಸಲು ಇರೋ ಜಾಗಗಳಿದ್ದ ಹಾಗೆ. ಅದಷ್ಟೇ ಬೆಂಗಳೂರಲ್ಲ. ಬದುಕು ಕಟ್ಟಿಕೊಳ್ಳಲು ಬಂದ ಬೇರೆಬೇರೆ ಭಾಷೆಯ ಬೇರೆ ಬೇರೆ ಸಂಸ್ಕೃತಿಯ ಜನಗಳ ಪ್ರಭಾವದಿಂದ ಅಲ್ಲಿ ಕನ್ನಡತನ ಕಾಣಸಿಗುವುದು ಕಷ್ಟವಾಗಿದೆ. ಆದರೆ ಮೂಲ ಬೆಂಗಳೂರಿಗರು ಅಪ್ಪಟ ಕನ್ನಡಿಗರು  

ಆದರೆ ಇತ್ತೀಚೆಗೆ ಪರಿಸ್ಥಿತಿ ಬೇರೆಯಾಗಿದೆ. ತೀರಾ ಸಾಮಾನ್ಯ ಅನ್ನುವ ಏರಿಯಾದ ಬಸ್ ಹತ್ತಿದರೂ ಪ್ರಯಾಣಿಕರು ತಮ್ಮ ತಮ್ಮೊಡನೆ ಇಂಗ್ಲಿಷ್ ನಮ್ಮ ಸ್ಥಳೀಯ ಭಾಷೆಯೆಂಬಂತೆ ಮಾತನಾಡುವುದು ಹೇರಳವಾಗಿ ಕಾಣಸಿಗುತ್ತಿದೆ. ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷೆಗಳ ಪ್ರಭಾವಕ್ಕೊಳಗಾಗಿ ಕನ್ನಡ ಕನ್ನಡಿಗರ ಬಾಯಲ್ಲಿ ನಶಿಸಿಹೋಗುತ್ತಿದೆ ಅನ್ನೋದು ಸುಳ್ಳಲ್ಲ. 

ಈ ಸಮಸ್ಯೆಯ ಮೂಲ ಏನು ಅಂತ ಯೋಚಿಸಿದಾಗ ನನಗನಿಸಿದ್ದು, ಅದಕ್ಕೆ ಕಾರಣ ನಮಗೆ ನಮ್ಮ ಭಾಷೆಯ ಮೇಲಿರುವ ಕೀಳರಿಮೆ. ಎಷ್ಟೋ ಜನ ಮಾತೃಭಾಷೆಯನ್ನು ಆಡಿದರೆ ಲೆವೆಲ್ ಕಮ್ಮಿಯಾಗುತ್ತೆ ಅಂತ ಅಂದುಕೊಂಡಿರುವುದು ದುರಂತವೇ ಸರಿ. ನಮ್ಮ ಭಾಷಾ ಬಳಕೆ ಹೆಚ್ಚಿಸಲು ಕನ್ನಡ ಶಾಲೆಗಳನ್ನು ಉತ್ತೇಜಿಸುವುದು, ಕನ್ನಡ ಕಲಿಕೆಗೆ ಪೊ್ರೀತ್ಸಾಹಿಸುವುದು, ಕನ್ನಡ ಮಾತನಾಡದೇ ಇರುವವರನ್ನು ಹೀಯಾಳಿಸುವುದು, ಗಾಂಚಲಿ ಬಿಡಿ ಕನ್ನಡ ಮಾತಾಡಿ ಅನ್ನುವಂತಹ ಬರಹ ಇರೋ ಟಿ ಶರ್ಟ್‌ಗಳನ್ನು ಹಾಕಿಕೊಳ್ಳೋದು, ಇಂತಹ ಪ್ರಯತ್ನ ಗಳು ನಡೆಯುತ್ತಿವೆ. ಆದರೆ ನನ್ನ ಪ್ರಕಾರ, ಈ ಸಮಸ್ಯೆ ನೇರಾನೇರ ಸುಲಭವಾಗಿ ಪರಿಹರಿಸಿಕೊಳ್ಳುವಂಥದ್ದಲ್ಲ. 

Kannada Rajyotsava| ಕನ್ನಡ ಬೆಳೆಸಲು ಕನ್ನಡಿಗರೇನು ಮಾಡಬಹುದು?

ಇದು ಮಾನಸಿಕವಾಗಿ ಬಗೆಹರಿಯ ಬೇಕಾಗಿ ರುವಂಥದ್ದು. ಮೊದಲು ಮನೋಭಾವ ಬದಲಾಗ ಬೇಕು. ಸ್ಲೋಗನ್ ಕೂಗಿ, ಬೈದು ಸರಿಮಾಡಿಕೊಳ್ಳುವುದಕ್ಕಾಗುವುದಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಾತ್ರಕ್ಕೆ ಕನ್ನಡ ಪ್ರೇಮ ಇರುವುದಿಲ್ಲ ಅನ್ನೋದು ಪೂರ್ತಿಯಾಗಿ ಸರಿಯಾದ ವಾದವಲ್ಲ. ಕನ್ನಡ ಮೀಡಿಯಮ್ ಓದಿದವರೆಲ್ಲಾ ತಮ್ಮ ಬದುಕಿನಲ್ಲಿ ಕನ್ನಡವನ್ನೇ ಅಳವಡಿಸಿಕೊಂಡಿರುತ್ತಾರೆ ಅನ್ನುವುದಕ್ಕೆ ಸಾಧ್ಯವಿಲ್ಲ. ಇವತ್ತಿನ ದಿನದಲ್ಲಿ ಯಾವುದೇ ಭಾಷಿಗರಿಗಾದರೂ ಇಂಗ್ಲಿಷ್ ವ್ಯಾಮೋಹ ಬಿಟ್ಟಿಲ್ಲ. ಕನ್ನಡಪ್ರೇಮ ಬರಬೇಕಾದುದು ಮನೆಯಿಂದ. ತಂದೆ ತಾಯಂದಿರು ಮಕ್ಕಳ ಜೊತೆ ಆಡುವ ಮಾತು ಕನ್ನಡವಾಗಬೇಕು. ಮದುವೆ-ಮುಂಜಿಯಂತಹ ಕುಟುಂಬ ಸಮಾರಂಭಗಳಲ್ಲಿ ಕನ್ನಡ ರಾರಾಜಿಸಬೇಕು. ಅದು ಪ್ರಯತ್ನಪೂರ್ವಕವಾಗಿ ಆಗುವುದಲ್ಲ. ಸಹಜವಾಗೇ ಬರುವಷ್ಟು. ಆಗ ಮಾತ್ರ ಭಾಷೆಯ ಬಳಕೆ ವೈರಲ್ ಆಗೋದಕ್ಕೆ ಸಾಧ್ಯ ಅನ್ನಿಸುತ್ತೆ.

ನಾವು ನಮ್ಮ ಆಪ್ತರೊಂದಿಗೆ ಮಾತನಾಡುವಾಗ ಯಾವ ಭಾಷೆಯಲ್ಲಿ (Language) ಮಾತನಾಡಬೇಕೆಂದು ಯೋಚಿಸುವು ದಿಲ್ಲ, ಸಹಜವಾಗೇ ನಮ್ಮ ಮಾತುಕತೆ ಶುರುವಾಗುತ್ತೆ. ಕನ್ನಡಿಗರಾಗಿರೋ ನಾವು ಇಂತಹ ಸಂದರ್ಭದಲ್ಲಾದರೂ ಇಂಗ್ಲಿಷ್ ಅಥವಾ ಇನ್ಯಾವುದೋ ಭಾಷೆ ನಮ್ಮನ್ನ ಆಕ್ರಮಿಸಿಕೊಳ್ಳದಿರುವ ಹಾಗೆ ನೋಡಿಕೊಂಡರೆ ಸಾಕು. ಇನ್ನೊಂದು ನನಗನಿಸೋದು, ನಮ್ಮ ಅಂತರಾಳದ ಮಾತನ್ನು ನಮ್ಮ ಭಾಷೆಯಲ್ಲಿ ಹೇಳಿದಾಗಲೇ ಹೆಚ್ಚು ನಿಜ ವೇನೋ ಅನ್ನಿಸುವಂಥದ್ದು. ಉದಾ ಹರ ಣೆಗೆ ಸಾರಿ ಅನ್ನುವುದಕ್ಕಿಂದ ಕ್ಷಮಿಸಿ ಅಂದರೆ ನಿಜವಾಗಿಯೂ ಕ್ಷಮೆ ಕೇಳುತ್ತಿ ದ್ದಾರೇನೋ ಅನ್ನುವ ಭಾವನೆ ಬರುತ್ತದೆ. ಲವ್ ಅನ್ನೋದಕ್ಕಿಂತ ಪ್ರೀತಿ ಅನ್ನೋ ಶಬ್ದ ದಲ್ಲಿ ಹೆಚ್ಚು ತೂಕವಿದೆ ಯೇನೋ ಅನ್ನಿ ಸುತ್ತದೆ. ಅಷ್ಟೇ ಯಾಕೆ ಇಂಗ್ಲಿಷ್‌ನಲ್ಲಿ ಬೈಯ್ಯೋ ದ ಕ್ಕಿಂತ ಕನ್ನಡದ ಅವಾಚ್ಯ ಶಬ್ದ ಗಳನ್ನು ಬೈದಾಗಲೇ ತೃಪ್ತಿಯಾಗುವು ದುಂಟು. 

ನನ್ನ ಅನುಭವ ಅಂದು ಕೊಳ್ಳಬೇಡಿ ಮತ್ತೆ! ಹೀಗಿರುವಾಗ, ಕನ್ನಡವನ್ನು ಬಳಸೋದು ನಾಟ್ ಕೂಲ್ ಅಂತ ಯಾರು ಹೇಳಿರುವ ಮಾತು? ಉತ್ತರಭಾರತದವರು ಹೇಳಿಲ್ಲ, ವಿದೇಶೀಯರು ಹೇಳಿಲ್ಲ. ನಾವೇ, ಅಂದರೆ ಕನ್ನಡಿಗರೇ ಸೃಷ್ಟಿಸಿಕೊಂಡಿರುವ ಸುಳ್ಳು ಸುಳ್ಳು ಭಾವನೆ. ನಾವದನ್ನು ತೊರೆಯುವುದಕ್ಕೆ ಸಾಧ್ಯವಾದರೇ ಎಲ್ಲಾ ಸಮಸ್ಯೆಗಳು ತಾನಾಗೇ ಸರಿಹೋಗುತ್ತದೆ. ಎಲ್ಲರೂ ಹೇಳುವಂತೆ ಕನ್ನಡವನ್ನು ಬೆಳೆಸುವುದು ಬೇಕಿಲ್ಲ ಬಳಸಿದರೆ ಸಾಕು. ಇಷ್ಟೆಲ್ಲಾ ಹೇಳಿದ ಮಾತ್ರಕ್ಕೆ ನಮ್ಮ ಭಾಷೆಗೆ ಹೀನಾಯ ಪರಿಸ್ಥಿತಿ ಬಂದಿದೆ ಅಂತ ಅಲ್ಲ. ಕೂಲಂಕಷವಾಗಿ ಗಮನಿಸಿದರೆ ಟ್ರೆಂಡ್ ಬದಲಾಗುತ್ತಿದೆ. ಕೆಲವರ್ಷಗಳ ಹಿಂದೆ ಹೆಚ್ಚಿನ ಸಮಾರಂಭಗಳಲ್ಲಿ ಹಿಂದಿ ಸಿನಿಮಾ ಹಾಡುಗಳನ್ನು ಬಳಸುತ್ತಿದ್ದರು. ಟಿವಿಯಲ್ಲೂ ಸಹ ಹೆಂಗಸರು ಹಿಂದಿ ಸೀರಿಯಲ್‌ನ ನೋಡುವುದಕ್ಕೋಸ್ಕರ ಹಿಂದಿ ಕಲಿತದ್ದು ನನ್ನ ನೆನಪಿನಲ್ಲಿದೆ. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. 

ಮನೆಮನೆಗಳಲ್ಲಿ ಕನ್ನಡದ ಕಾರ್ಯಕ್ರಮಗಳು ಟಿವಿಯ ಮೂಲಕ ಜನರ ಮನಸೆಳೆಯುತ್ತಿದೆ, ಕಾಲೇಜು ಹುಡುಗರ ಗುಂಪುಗಳಲ್ಲಿ ಕನ್ನಡದ ಸ್ಲಾಂಗ್ ಮಾತುಗಳದ್ದೇ ದರ್ಬಾರಾಗುತ್ತಿದೆ. ಸ್ಲಾಂಗ್ ಅಂದಾಗ, ಶುದ್ಧ ಕನ್ನಡವನ್ನು ಮಾತ್ರ ಮಾತನಾಡಬೇಕು ಅನ್ನೋ ವಾದದ ನೆನಪಾಯಿತು. ನನ್ನ ಪ್ರಕಾರ ಭಾಷೆ ಬೆಳೆಯುವುದು ಅದರ ಆಡುಭಾಷೆಯಿಂದ. ಶುದ್ಧರೂಪದಲ್ಲೇ ಉಳಿದಿರೋ ಸಂಸ್ಕೃತದ ಪರಿಸ್ಥಿತಿಯಂತೂ ನಮಗೆಲ್ಲಾ ತಿಳಿದಿರುವ ವಿಚಾರ. ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಫ್ಲುಯೆನ್‌ಸ್ ಮಾರ್ಕೆಟಿಂಗ್‌ಗೆ ಬಹಳ ಪ್ರಾಮುಖ್ಯತೆ ಸಿಗುತ್ತಿದೆ. ಕಾರಣ, ಅನುಕರಣೆ ಜನರ ಸಹಜ ಗುಣ. ರೂಪದರ್ಶಿಗಳಿಲ್ಲದ ಕಾಲದಲ್ಲಿ ರಾಜ ರಾಣಿಯರೇ ವಸ್ತ್ರವಿನ್ಯಾಸಗಳಿಗೆ, ಫ್ಯಾಶನ್‌ಗೆ ಮಾದರಿಯಾಗುತ್ತಿದ್ದರಂತೆ, ಜನ ಅವರನ್ನೇ ಅನುಕರಿಸುತ್ತಿದ್ದರಂತೆ. ಸಿನಿಮಾ, ಕ್ರೀಡೆ, ಸಂಗೀತ ಯಾವುದೇ ಕ್ಷೇತ್ರದಲ್ಲಾದರೂ ಪ್ರಭಾವ ಬೀರುವಂತ ಆದರ್ಶ ವ್ಯಕ್ತಿಗಳು ಹುಟ್ಟಿಕೊಂಡರೆ ಅವರು ಇಡೀ ಕ್ಷೇತ್ರದ ಬೆಳವಣಿಗೆಗೇ ಕೊಡುಗೆಯಾಗುತ್ತಾರೆ. 

ಈಗಲೂ ಡಾ. ರಾಜ್ ಕುಮಾರ್ (Rajkumar) ಅವರ ಸಿನೆಮಾಗಳನ್ನು ನೋಡಿ ನಾವು ಕನ್ನಡ ಕಲಿತೆವು ಅಂತ ಹೇಳೋರನ್ನು ನಾನು ನೋಡಿದ್ದೇನೆ. ಅವರಂತೆ ಈಗಿನ ಕಾಲದಲ್ಲೂ ಸಾಮಾನ್ಯ ಜನರನ್ನು ಕನ್ನಡ ಮಾತನಾಡಲು, ಕನ್ನಡದಲ್ಲೇ ವ್ಯವಹರಿಸಲು, ಕನ್ನಡ ಪುಸ್ತಕ ಓದಲು ಪ್ರಭಾವಿಯಾಗುವಂತಹ ವ್ಯಕ್ತಿಗಳ, ಸಿನೆಮಾಗಳ, ಇನ್‌ಫ್ಲುಯೆನ್ಸರ್‌ಗಳ ಅಗತ್ಯ ಇದೆ ಅನ್ನೋದು ನನ್ನ ಅಭಿಪ್ರಾಯ. ಏಕೆಂದರೆ, ಭಾಷೆಯನ್ನು ದೊಡ್ಡ ಮಟ್ಟದಲ್ಲಿ ಪ್ರತಿನಿಧಿಸುವುದು ಅಲ್ಲಿನ ಸಾಹಿತ್ಯ ಮತ್ತು ಸಿನೆಮಾ. ಅಲ್ಲಿಂದ ಕನ್ನಡ ಪ್ರೇಮ, ಕಾಳಜಿ ಹೆಚ್ಚಾದರೆ ಅದರ ಪ್ರಭಾವ ಎಲ್ಲಡೆ ಪಸರಿಸಿ, ಕನ್ನಡಕ್ಕೆ ಇಂತಹ ಒಂದು ಸಮಸ್ಯೆ ಇತ್ತು ಅಂತ ಚರ್ಚೆಮಾಡುವ ದಿನಗಳೇ ಕೊನೆಗೊಳ್ಳಬಹುದು.  

Follow Us:
Download App:
  • android
  • ios