ಕನ್ನಡ ಉಳಿಸಿ, ಬೆಳೆಸಲು ಸರ್ಕಾರ ಏನು ಮಾಡಬೇಕು? 10 ಸರಳ ಸಲಹೆಗಳು

ರಾಜ್ಯದ ಬಹುತೇಕ ಬ್ಯಾಂಕ್‌ಗಳಲ್ಲಿ ಅನ್ಯರಾಜ್ಯದವರೇ ತುಂಬಿರುವುದರಿಂದ ಬ್ಯಾಂಕ್‌ಗಳಲ್ಲಿ ಕನ್ನಡ ಮಾಯವಾಗಿದೆ. ಗ್ರಾಹಕರು ಕಷ್ಟಪಟ್ಟು ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯಗೊಳ್ಳಬೇಕಿದೆ. 

Kannada Rajyothsava 2021  Kannada Culture 10 Simple Steps Govt Must  Implement hls

ಬೆಂಗಳೂರು (ನ. 01): ಮತ್ತೊಂದು ಕನ್ನಡ ರಾಜ್ಯೋತ್ಸವ ಬಂದಿದೆ. ಹಳದಿ ಮತ್ತು ಕೆಂಪು ಬಾವುಟ ಎಲ್ಲೆಲ್ಲೂ ರಾರಾಜಿಸುತ್ತಿದೆ. ಇದು ಪ್ರತೀ ವರ್ಷ ನಡೆಯುವಂಥದ್ದೇ. ಆದರೆ ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಸರ್ಕಾರ ಕೈಗೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರ ಸುಲಭವಾಗಿ ಸಿಗುವುದಿಲ್ಲ.

ಕನ್ನಡ ಅನ್ನೋದು ಕೇವಲ ಭಾಷೆಯಲ್ಲ, ಅದು ಕರ್ನಾಟಕದ ಅಸ್ಮಿತೆ. ಕನ್ನಡಿಗರ ಕುರುಹು, ಹೀಗಿರುವಾಗ ರಾಜ್ಯ ಉಳಿಯಬೇಕಾದರೆ ಮೊದಲು ಭಾಷೆ ಉಳಿಯಬೇಕು ಎನ್ನುವುದನ್ನು ಅರಿಯಬೇಕು. ಕನ್ನಡ ಸರಳ ಮತ್ತು ಸುಂದರ ಭಾಷೆ. ಮೂರು ಸಾವಿರ ವರ್ಷದಷ್ಟುಇತಿಹಾಸವಿದೆ. ಸುಲಿದ ಬಾಳೆ ಹಣ್ಣಿನಂತೆ, ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ ಎಂದು 17ನೇ ಶತಮಾನದಲ್ಲೇ ಕವಿ ಮಹಲಿಂಗರಂಗ ಕನ್ನಡದ ಸರಳತೆಯನ್ನು ಹಾಡಿ ಹೊಗಳಿದ್ದಾರೆ. ಇಷ್ಟುಸರಳ, ಸುಲಲಿತ, ಸುಂದರ ಭಾಷೆ ರಾಜಧಾನಿಯಲ್ಲೇ ಕಳೆದುಹೋಗುತ್ತಿದೆ ಎಂಬ ಭಾವ ಮೂಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಅತ್ಯಗತ್ಯವಾಗಿ ಮಾಡಬೇಕಾದ ಕೆಲ ಕಾರ್ಯಗಳ ಬಗ್ಗೆ ಗಮನ ಹರಿಸೋಣ.

1.ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ

ಸರ್ಕಾರ ಮೊಟ್ಟಮೊದಲು ಮಾಡಬೇಕಾದ ಕಾರ್ಯವಿದು. ಮಾತೃಭಾಷೆಯಲ್ಲಿನ ಶಿಕ್ಷಣ ಪರಿಣಾಮಕಾರಿಯಾಗಿರುತ್ತದೆ ಮತ್ತು ಮಗುವಿನಲ್ಲಿ ಕಲಿಕೆಯ ಒಲವು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಅನ್ಯ ಭಾಷೆಗಳನ್ನು ಮಕ್ಕಳ ಮೇಲೆ ಒತ್ತಾಯವಾಗಿ ಹೇರುವುದಕ್ಕಿಂತ, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡುವುದನ್ನು ಅಥವಾ ಶಿಕ್ಷಣದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸಬೇಕು. ಕನಿಷ್ಠ 1ರಿಂದ 5ನೇ ತರಗತಿವರೆಗಾದರೂ ಕಡ್ಡಾಯಗೊಳಿಸಬೇಕಾದ ತುರ್ತು ಇದೆ.

2.ಆಡಳಿತದಲ್ಲಿ ಕನ್ನಡ ಕಡ್ಡಾಯ

ಸರ್ಕಾರ ಹೊರಡಿಸುವ ಸುತ್ತೋಲೆಗಳು, ಆದೇಶಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಕನ್ನಡ ಆಡಳಿತ ಭಾಷೆಯಾಗಿ ಬಳಕೆಯಾದಾಗ ಮಾತ್ರ ಅದರ ಬೆಳವಣಿಗೆಗೆ ಪೂರಕವಾಗಲಿದೆ. ಮೊದಲು ಸರ್ಕಾರವೇ ಈ ನಿಯಮ ಪಾಲಿಸಿದಲ್ಲಿ, ಸಹಜವಾಗಿ ಆಡಳಿತ ವರ್ಗ ಎಚ್ಚೆತ್ತುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಆಡಳಿತ ಭಾಷೆ ಅನ್ನೋದು ಮಾತಿಗಿಂತ ಕೃತಿಗಿಳಿಯುವುದು ಮುಖ್ಯವಾಗಿದೆ.

3.ಬ್ಯಾಂಕ್‌ನಲ್ಲಿ ಕನ್ನಡ ವ್ಯವಹಾರ

ರಾಜ್ಯದ ಬಹುತೇಕ ಬ್ಯಾಂಕ್‌ಗಳಲ್ಲಿ ಅನ್ಯರಾಜ್ಯದವರೇ ತುಂಬಿರುವುದರಿಂದ ಬ್ಯಾಂಕ್‌ಗಳಲ್ಲಿ ಕನ್ನಡ ಮಾಯವಾಗಿದೆ. ಗ್ರಾಹಕರು ಕಷ್ಟಪಟ್ಟು ವ್ಯವಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯಗೊಳ್ಳಬೇಕಿದೆ. ಬ್ಯಾಂಕ್‌ ಸಿಬ್ಬಂದಿ ಕನ್ನಡ ಕಲಿಯಲೇಬೇಕೆಂಬ ನಿಯಮ ಜಾರಿ ಮಾಡಬೇಕು. ಇದರಿಂದ ಗ್ರಾಮೀಣ ಭಾಗದ ಗ್ರಾಹಕರಿಗೂ ಅನುಕೂಲ ಹೆಚ್ಚುತ್ತದೆ. ಭಾಷೆ ಬೆಳವಣಿಗೆಗೂ ಸಹಕಾರಿ.

4.ಸರೋಜಿನಿ ಮಹಿಷಿ ವರದಿ ಜಾರಿ

1984ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಡಾ.ಸರೋಜಿನಿ ಮಹಿಷಿ ವರದಿಯಲ್ಲಿ, ಕರ್ನಾಟಕದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೇ ಶೇ.100ರಷ್ಟುಮೀಸಲಾತಿ ನೀಡಬೇಕೆಂಬುದು ಪ್ರಮುಖ ಶಿಫಾರಸಾಗಿದೆ. ಸರ್ಕಾರ ಅದನ್ನೇ ಇನ್ನೂ ಜಾರಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಬಹುದಿನದ ಬೇಡಿಕೆಯಾಗಿರುವ ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ತಕ್ಷಣ ಜಾರಿ ಮಾಡಬೇಕಿದೆ.

5.ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ

ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಕನ್ನಡ ಮಾಧ್ಯಮದವರಿಗೆ ಈಗಿರುವ ಶೇ.5ರಷ್ಟುಮೀಸಲಾತಿಯನ್ನು ಶೇ.15ಕ್ಕೆ ಹೆಚ್ಚಿಸಬೇಕು. ಹೀಗಾದಾಗ ಸಹಜವಾಗಿ ನೌಕರಿ ಆಸೆಗಾಗಿಯಾದರೂ ಜನರಲ್ಲಿ ಕನ್ನಡದ ಬಗ್ಗೆ ಒಲವು ಹೆಚ್ಚಾಗಿ ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳನ್ನು ಓದಿಸಲು ಆಸಕ್ತಿ ತೋರುತ್ತಾರೆ. ಈ ನಿಟ್ಟಿನಲ್ಲಿ ಭಾಷಾ ಮೀಸಲಾತಿಯನ್ನು ಹೆಚ್ಚಿಸಬೇಕು.

6. ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ

ಕನ್ನಡ ಕಲಿಕೆಗೆ ಇವತ್ತಿಗೂ ಒತ್ತು ಸಿಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಪೋಷಕರಿಗೆ ಖಾಸಗಿ ಶಾಲೆಗಳ ಬಗ್ಗೆ ಒಲವು ಹೆಚ್ಚುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಮತ್ತು ಮೂಲಸೌಕರ್ಯ ದೊರೆಯುವಂತಾದರೆ ಮಕ್ಕಳ ದಾಖಲಾತಿ ಹೆಚ್ಚುತ್ತದೆ. ಆಗ ಸಹಜವಾಗಿಯೇ ಕನ್ನಡದ ಕಲಿಕೆಯೂ ಹೆಚ್ಚುತ್ತದೆ. ಅದು ಕನ್ನಡವನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಸಹಕಾರಿ.

7.ಕನ್ನಡ ತಂತ್ರಾಂಶ ಬಳಕೆ ಹೆಚ್ಚಳ

ಇಂದಿನ ಜಗತ್ತು ತಂತ್ರಜ್ಞಾನದ ಮೇಲೆಯೇ ಹೆಚ್ಚು ಅವಲಂಬಿತವಾಗಿರುವಾಗ ಗ್ಯಾಜೆಟ್‌ ಲೋಕದಲ್ಲೂ ಸರ್ಕಾರ ಕನ್ನಡ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಇರುವ ನುಡಿ ತಂತ್ರಾಂಶದ ಜತೆಗೆ ಇನ್ನಷ್ಟುಕನ್ನಡ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು. ಹೆಚ್ಚು ಹೆಚ್ಚು ತಂತ್ರಾಂಶಗಳು ಹಾಗೂ ಸುಲಭ ತಂತ್ರಾಂಶಗಳು ಲಭ್ಯವಾದಾಗ ಸಹಜವಾಗಿಯೇ ಬಳಕೆಯೂ ಹೆಚ್ಚುತ್ತದೆ.

8.ಅಧಿಕಾರಿಗಳಿಗೆ ಕಡ್ಡಾಯ ಕನ್ನಡ ತರಬೇತಿ

ಯುಪಿಎಸ್‌ಸಿ ಪರೀಕ್ಷೆ ಪಾಸಾಗಿ ಸೇವೆ ಸಲ್ಲಿಸಲು ಕರ್ನಾಟಕ ಅಯ್ಕೆ ಮಾಡಿಕೊಳ್ಳುವ ಅದೆಷ್ಟೋ ಅಧಿಕಾರಿಗಳಿಗೇ ಕನ್ನಡವೇ ಬರುವುದಿಲ್ಲ. ತರಬೇತಿ ಅವಧಿಯಲ್ಲೂ ಅನೇಕರು ಒತ್ತು ಕೊಟ್ಟು ಕಲಿತಿರುವುದಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ಕೇಡರ್‌ ಆಯ್ಕೆಮಾಡಿಕೊಳ್ಳುವ ಅಧಿಕಾರಿಗಳು ರಾಜ್ಯಕ್ಕೆ ಬಂದ ನಂತರ ಅವರಿಗೆ ಸರ್ಕಾರದಿಂದಲೇ ವಿಶೇಷ ತರಬೇತಿ ನೀಡಬೇಕು. ಇದು ಆಡಳಿತಕ್ಕೂ ಅನುಕೂಲ, ಜನಸಾಮಾನ್ಯರ ಸಮಸ್ಯೆ ಅರಿಯಲೂ ಸಹಾಯಕ.

9.ಗಡಿನಾಡ ಕನ್ನಡಿಗರಿಗೆ ಆದ್ಯತೆ

ರಾಜ್ಯದ ಗಡಿಗಳಲ್ಲಿ ಭಾಷಾ ಅಸ್ಮಿತೆಗಾಗಿ ಹೋರಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕಾಗಿ ಸೇವೆ ಸಲ್ಲಿಸುತ್ತಿರುವ ಗಡಿನಾಡ ಕನ್ನಡಿಗರನ್ನು ಹೆಚ್ಚಾಗಿ ಗುರುತಿಸಿ, ಗೌರವಿಸುವ ಕೆಲಸವಾಗಬೇಕಿದೆ. ಜೊತೆಗೆ ಗಡಿ ಭಾಗಗಳಲ್ಲಿನ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಅಗತ್ಯವಿದೆ. ಗಡಿನಾಡ ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಇರುವ ಅಭಿಮಾನವನ್ನು ಪ್ರೋತ್ಸಾಹಿಸಿದರೆ ಕನ್ನಡಕ್ಕೆ ಬಲ ಬರುತ್ತದೆ.

10.ಹೊರನಾಡ ಕನ್ನಡಿಗರಿಗೆ ಪ್ರೋತ್ಸಾಹ

ವಿಶ್ವದ ನಾನಾ ಕಡೆ ನೆಲೆಸಿರುವ ಅನಿವಾಸಿ ಕನ್ನಡಿಗರು ಭಾಷಾ ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಅವರನ್ನು ಇನ್ನಷ್ಟುಪ್ರೋತ್ಸಾಹಿಸಿ, ವಿದೇಶಗಳಲ್ಲಿ ಹೆಚ್ಚೆಚ್ಚು ಕನ್ನಡ ಸಮ್ಮೇಳನಗಳು, ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸರ್ಕಾರ ಪ್ರೋತ್ಸಾಹಿಸಬೇಕು. ಹಣಕಾಸಿನ ನೆರವು ಒದಗಿಸುವುದರ ಜತೆಗೆ ಭಾಷಾ ಸೊಗಡು ಇನ್ನಷ್ಟುಪಸರಿಸುವಂತೆ ನೋಡಿಕೊಳ್ಳಬೇಕು. ಈ ಕಾರ್ಯ ನಿರಂತರವಾಗಿರಬೇಕು.

Latest Videos
Follow Us:
Download App:
  • android
  • ios