ನಟಿ ಕಾವ್ಯ ಶೆಟ್ಟಿಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಸ್ಟಾರ್‌ ನಟ ಪೃಥ್ವಿರಾಜ್‌ ನಿರ್ದೇಶನದ ಈ ಚಿತ್ರದ ಹೆಸರು ‘ಬ್ರೋ ಡ್ಯಾಡಿ’. ಈ ಚಿತ್ರದ ನಾಯಕ ಮೋಹನ್‌ಲಾಲ್‌. ಸದ್ಯಕ್ಕೆ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಕಾವ್ಯ ಶೆಟ್ಟಿಮಾತುಗಳು ಇಲ್ಲಿವೆ.

ಆರ್‌. ಕೇಶವಮೂರ್ತಿ

- ನಟನೆ ಜತೆಗೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ನಟ ಪೃಥ್ವಿರಾಜ್‌ ಸುಕುಮಾರನ್‌. ಅವರು ಈ ಹಿಂದೆ ಮೋಹನ್‌ ಲಾಲ್‌ ಅಭಿನಯದಲ್ಲೇ ‘ಲೂಸಿಫರ್‌’ ಚಿತ್ರವನ್ನು ನಿರ್ದೇಶನ ಮಾಡಿದ್ದರು.

- ಮೊದಲ ನಿರ್ದೇಶನದ ಚಿತ್ರದಲ್ಲೇ ಯಶಸ್ಸು ಕಂಡ ನಟನ ಚಿತ್ರದಲ್ಲಿ ನಾನು ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ಪೃಥ್ವಿರಾಜ್‌ ಅವರಿಗೆ ಜೋಡಿ ಆಗಿರುತ್ತೇನೆ.

- ಈಗಾಗಲೇ ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಒಂದು ದಿನ ಮಾತ್ರ ನನ್ನ ಪಾತ್ರದ ಚಿತ್ರೀಕರಣ ಆಗಿದೆ. ಇದೇ ತಿಂಗಳ ಕೊನೆಯಲ್ಲಿ ಮತ್ತೆ ಶೂಟಿಂಗ್‌ ಶುರುವಾಗಲಿದೆ.

- ಈ ಹಿಂದೆ ಒಂದು ಮಲಯಾಳಂ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದೆ. ಆದರೆ, ಆ ಸಿನಿಮಾ ಯಾಕೋ ಟೇಕಾಫ್‌ ಆಗಲಿಲ್ಲ. ಹೀಗಾಗಿ ‘ಬ್ರೋ ಡ್ಯಾಡಿ’ ನನ್ನ ಮೊದಲ ಮಲಯಾಳಂ ಸಿನಿಮಾ.

- ಇದೊಂದು ಫ್ಯಾಮಿಲಿ ಡ್ರಾಮಾ ಸಿನಿಮಾ. ಕತೆಗೆ ಹೆಚ್ಚು ಮಹತ್ವ ಇರುವ ಚಿತ್ರ. ನಾನು ಈ ಚಿತ್ರಕ್ಕೆ ಕನೆಕ್ಟ್ ಆಗಿದ್ದು ಕಾಸ್ಟಿಂಗ್‌ ಡೈರೆಕ್ಟರ್‌ ಮೂಲಕ. ಅವರು ನನ್ನ ಪೋಟೋಗಳನ್ನು ನೋಡಿ ಪೃಥ್ವಿರಾಜ್‌ ಅವರಿಗೆ ಕಳಿಸಿದ್ದರಂತೆ. ಅವರು ಫೋಟೋ ನೋಡಿ ವಿಡಿಯೋ ಕಾಲ್‌ನಲ್ಲಿ ನನ್ನ ಜತೆ ಮಾತನಾಡಿದ ಮೇಲೆ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು.

ಕಮರ್ಷಿಯಲ್ ಮಾಡೆಲ್ 'ಕಾವ್ಯ ಶೆಟ್ಟಿ' ಫೋಟೋ ಗ್ಯಾಲರಿ!

- ಪೃಥ್ವಿರಾಜ್‌ ಸುಕುಮಾರನ್‌ ನನಗೆ ಕತೆ ಮತ್ತು ಪಾತ್ರದ ಬಗ್ಗೆ ವಿವರಿಸುತ್ತಿದ್ದಾಗಲೇ ಗೊತ್ತಾಗಿದ್ದು, ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೆ ಮಹತ್ವ ಕೊಟ್ಟಿದ್ದಾರೆ ಎಂಬುದು. ಹೀಗಾಗಿ ಈ ಚಿತ್ರದ ಮೂಲಕ ಮಲಯಾಳಂನಲ್ಲೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತೇನೆಂಬ ನಂಬಿಕೆ ಇದೆ.

- ಮಲಯಾಳಂನ ಸೂಪರ್‌ ಸ್ಟಾರ್‌ ಮೋಹನ್‌ಲಾಲ್‌, ಅದ್ಭುತ ನಟ ಪೃಥ್ವಿರಾಜ್‌ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬುದೇ ನನ್ನ ಅದೃಷ್ಟ. ಆ ಖುಷಿಯಲ್ಲಿದ್ದೇನೆ.

- ಇನ್ನೂ ಕನ್ನಡದಲ್ಲಿ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಜತೆಗೆ ರವಿಚಂದ್ರನ್‌ ಅವರ ಜತೆ ನಟಿಸಿರುವ ‘ರವಿ ಬೋಪಣ್ಣ’ ಹಾಗೂ ಯೋಗೀಶ್‌ ಜತೆ ಕಾಣಿಸಿಕೊಂಡಿರುವ ‘ಲಂಕೆ’ ಚಿತ್ರಗಳು ಬಿಡುಗಡೆಗೆ ರೆಡಿ ಆಗಿವೆ. ಜತೆಗೆ ‘ನಿಮಗೊಂದು ಸಿಹಿ ಸುದ್ದಿ’ ವೆಬ್‌ ಸರಣಿ ಕೂಡ ಶೂಟಿಂಗ್‌ ಮುಗಿಸಿದ್ದೇನೆ.