ಕನ್ನಡತಿ ದಿಶಾ ಮದನ್‌ಗೆ 78ನೇ ಕಾನ್ಸ್ ಚಲನಚಿತ್ರೋತ್ಸವಕ್ಕೆ ಆಹ್ವಾನ. ಮೇ 13 ರಿಂದ 24 ರವರೆಗೆ ನಡೆಯುವ ಈ ಉತ್ಸವದಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಮಿಂಚಲಿದ್ದಾರೆ. ನೃತ್ಯ ಮತ್ತು ಸಿನಿಮಾಗಳ ನಡುವೆ ಬೆಳೆದ ದಿಶಾ, ಈ ಅವಕಾಶವನ್ನು ಅವಿಸ್ಮರಣೀಯ ಎಂದಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.
78ನೇ ಕಾನ್ಸ್ ಚಲನಚಿತ್ರೋತ್ಸವ (78th Cannes Film Festival) ಫ್ರಾನ್ಸ್ನಲ್ಲಿ ಶುಭಾರಂಭಗೊಂಡಿದೆ. ಮೇ 13 ರಿಂದ 24 ರವರೆಗೆ ನಡೆಯಲಿರುವ ಈ ಸಮಾರಂಭದಲ್ಲಿ ರೆಡ್ ಕಾರ್ಪೆಟ್ (Red Carpet) ಎಲ್ಲರ ಆಕರ್ಷಣೆ. ಇಷ್ಟು ದಿನ ಬರೀ ಬಾಲಿವುಡ್ ಸ್ಟಾರ್ಸ್ ನೋಡ್ತಿದ್ದ ಕನ್ನಡಿಗರಿಗೆ ಈ ಬಾರಿ ಖುಷಿ ಸುದ್ದಿ ಇದೆ. ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಮ್ಮ ಕನ್ನಡತಿ, ಲಕ್ಷ್ಮೀ ನಿವಾಸದ ಭಾವನಾ ಅಲಿಯಾಸ್ ದಿಶಾ ಮದನ್ (Disha Madan) ಪಾಲ್ಗೊಳ್ತಿದ್ದಾರೆ. ಕಾನ್ಸ್ ಫಿಲ್ಮಂ ಫೆಸ್ಟಿವಲ್ ನಿಂದ ಆಹ್ವಾನ ಬಂದಿದೆ ಎಂಬ ಶುಭ ಸುದ್ದಿಯನ್ನು ಸ್ವತಃ ದಿಶಾ ಹೇಳಿದ್ದಾರೆ.
ತಮ್ಮ ಇನ್ಸ್ಟಾ ಖಾತೆಯಲ್ಲಿ ದಿಶಾ ಮದನ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ತಮ್ಮ ಬಾಲ್ಯ, ಡಾನ್ಸ್, ನಟನೆ ಬಗ್ಗೆ ಮಾತನಾಡಿದ ದಿಶಾ, ಕೊನೆಯಲ್ಲಿ ತಮಗೆ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ ಎನ್ನುವ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಆರಂಭದಲ್ಲಿ ತಮ್ಮನ್ನು ಪರಿಚಯ ಮಾಡಿಕೊಂಡಿದ್ದಾರೆ ದಿಶಾ. ತಮ್ಮ ಮೂರನೇ ಹುಟ್ಟುಹಬ್ಬದಂದೇ ಡಾನ್ಸ್ (Dance) ಕಲಿಕೆಯನ್ನು ದಿಶಾ ಶುರು ಮಾಡಿದ್ರು. ಶಾಲೆಯಲ್ಲಿ ಓದು, ಮನೆಯಲ್ಲಿ ಡಾನ್ಸ್. ಚಿಕ್ಕವರಿರುವಾಗ್ಲೇ ಮೂರು ನಾಲ್ಕು ಗಂಟೆ ನಿರಂತರ ಡಾನ್ಸ್ ಮಾಡ್ತಿದ್ದ ದಿಶಾ ಸುಸ್ತಾಗ್ತಿದ್ರು, ಊಟ ಮಾಡಿ ನಿದ್ರೆ ಮಾಡಿದ್ರೆ ಸಾಕು ಅನ್ನಿಸ್ತಿತ್ತು. ಅಮ್ಮ, ಡಾ. ರಾಜ್ ಕುಮಾರ್ ಹಾಡು ಹೇಳಿ ಅವರನ್ನು ಮಲಗಿಸ್ತಿದ್ರು. ಭಾನುವಾರ ಬಂದ್ರೆ ಅಜ್ಜನ ಜೊತೆ ಬಬ್ರುವಾಹನ ಸಿನಿಮಾ ನೋಡ್ತಿದ್ರು.
ನೃತ್ಯ ಮಾಡ್ತಾ ಸಿನಿಮಾ ನೋಡ್ತಾ ಬೆಳೆದ ದಿಶಾರಿಗೆ, ನೃತ್ಯ ಲಯಬದ್ಧತೆ, ಅಭಿವ್ಯಕ್ತಿ, ಭಾವನೆಗಳನ್ನು ಕಲಿಸ್ತು. ಸಿನಿಮಾ ಕಲ್ಪನೆಯನ್ನು ವಿಸ್ತರಿಸ್ತು. ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದ ಅವರು, ಅದನ್ನೇ ತಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಂಡ್ರು. ರಾಜ್ ಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಕಣಗಲ್, ಗಿರೀಶ್ ಕಾಸರವಳ್ಳಿ, ಶಂಕರನಾಗ್ ಇಂಥ ದಿಗ್ಗಜರು ನಮ್ಮ ಕರ್ನಾಟಕದವರು ಅಂತ ಹೇಳಿಕೊಳ್ಳೋಕೆ ನನಗೆ ಹೆಮ್ಮೆ ಆಗುತ್ತೆ ಎಂದ ದಿಶಾ, ನಾನು ಕರ್ನಾಟಕದಳು ಎನ್ನಲು ಮತ್ತಷ್ಟು ಹೆಮ್ಮೆ ಎಂದಿದ್ದಾರೆ. ಸಿನಿಮಾ ನೋಡ್ತಾನೆ ಬೆಳೆದ ನನಗೆ, ವಿಶ್ವದ ಕೆಲ ಅತ್ಯುತ್ತಮ ಸಿನಿಮಾ ವೀಕ್ಷಿಸಲು ಕಾನ್ಸ್ ಫೆಸ್ಟಿವಲ್ ಗೆ ಆಹ್ವಾನ ಬಂದಿದೆ. ಇದು ನನ್ನ ಪಯಣದ ಅವಿಸ್ಮರಣೀಯ ದಿನ ಎಂದು ದಿಶಾ ಹೇಳಿದ್ದಾರೆ. ಅಲ್ಲದೆ ಕೇನ್ಸ್ ಆಹ್ವಾನ ಪತ್ರಿಕೆಯನ್ನು ದಿಶಾ ತಮ್ಮ ವಿಡಿಯೋದಲ್ಲಿ ತೋರಿಸಿದ್ದಾರೆ.
ದಿಶಾ ಈ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ನಿಮ್ಮನ್ನು ನೋಡೋಕೆ ನಾವು ಕಾತುರರಾಗಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ದಿಶಾಗೆ ಶುಭಾಷಯಗಳ ಸುರಿಮಳೆಯಾಗಿದ್ದು, ದಿಶಾ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾರ್ಚ್ 9, 1992ರಂದು ಜನಿಸಿದ ದಿಶಾ, ಸೋಶಿಯಲ್ ಮೀಡಿಯಾ ಸ್ಟಾರ್, ಟಿಕ್ ಟಾಕ್ ಕ್ವೀನ್, ಡಾನ್ಸರ್ ಹಾಗೂ ಕಿರುತೆರೆಯ ಪ್ರಸಿದ್ಧ ನಟಿ. ಕುಲವಧು ಸೀರಿಯಲ್ ಸೇರಿದಂತೆ ಅನೇಕ ಸೀರಿಯಲ್ ನಲ್ಲಿ ನಟಿಸಿದ್ದ ದಿಶಾ, ಡಾನ್ಸ್ ಇಂಡಿಯಾ ಡಾನ್ಸ್, ಇಸ್ಮಾರ್ಟ್ ಸೂಪರ್ ಜೋಡಿ ಸೇರಿ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಶಶಾಂಕ್ ವಾಸುಕಿ ಅವರನ್ನು ಮದುವೆಯಾದ ಬಳಿಕ ಚಿಕ್ಕ ಗ್ಯಾಪ್ ತೆಗೆದುಕೊಂಡಿದ್ದ ನಟಿ ಮತ್ತೆ ಲಕ್ಷ್ಮೀ ನಿವಾಸದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ನಿವಾಸ ಸೀರಿಯಲ್ ನಲ್ಲಿ ಭಾವನಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ದಿಶಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಫ್ರೆಂಚ್ ಬಿರಿಯಾನಿ ಸಿನಿಮಾ ಹಾಗೂ ಹಂಬಲ್ ಪೊಲಿಟಿಷಿಯನ್ ನಾಗರಾಜ್ ವೆಬ್ ಸೀರೀಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ದಿಶಾ ಅವರಿಗೆ ಕರ್ನಾಟಕ ವಿಮೆನ್ ಅಚೀವರ್ಸ್ ಅವಾರ್ಡ್ 2024 ಲಭಿಸಿದೆ.


