ಕನ್ನಡ ಚಿತ್ರರಂಗ ನನ್ನ ಮೊದಲ ಆದ್ಯತೆ: ಕಿರುತೆರೆ ಬ್ಯೂಟಿ ಅಕ್ಷಿತಾ ಬೋಪಯ್ಯ ಜತೆ ಮಾತುಕತೆ
'ರಿಯಲ್ ಪೊಲೀಸ್' ಸಿನಿಮಾ ಹಾಗೂ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿ ಮೂಲಕ ಕನ್ನಡ ವೀಕ್ಷಕರ ಮನ ಗೆದ್ದ ನಟಿ ಅಕ್ಷಿತಾ ಬೋಪಯ್ಯ ಇದೀಗ ತಮಿಳು ಕಿರುತೆರೆ ಲೋಕದ ಬೇಡಿಕೆಯ ನಟಿ. ತನ್ನ ಜನ್ಮ ಭೂಮಿಗೆ ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ನಟಿಯ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಬ್ಯುಸಿ ಲೈಫಲ್ಲಿ ನಮ್ ಜೊತೆ ಸಿನ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
ವೈಷ್ಣವಿ ಚಂದ್ರಶೇಖರ್
- ಅಕ್ಷಿತಾ ಬೋಪಯ್ಯ ನೀವು ಓದಿದ್ದು, ಬೆಳದಿದ್ದು ಎಲ್ಲಿ?
ನಾನು ಹುಟ್ಟಿದ್ದು ಕೂರ್ಗ್‌ನಲ್ಲಿ. ವಿದ್ಯಾಭ್ಯಾಸ ಆಗಿದ್ದು ನಮ್ಮೂರು ಗೋಣಿಕೊಪ್ಪದಲ್ಲಿ. ಬಿ.ಕಾಂ ಪದವಿ ಮಾಡೋಕೆ ನಾನು ಮೈಸೂರಿಗೆ ಬಂದೆ. ವಿದ್ಯಾಭ್ಯಾಸ ಮುಗಿಸುತ್ತಿರುವಾಗ ನನ್ನ ಮೊದಲ ಸಿನಿಮಾ ರಿಯಲ್ ಪೊಲೀಸ್‌ಗೆ ಅವಕಾಶ ಸಿಕ್ತು. ಅದಾದ ಮೇಲೆ ಆ್ಯಡ್ ಶೂಟ್ ಮಾಡಿದೆ. ಪೋಥಿಸ್ ಸೀರೆ ಹಾಗೂ ಶರವಣ ಸಿಲ್ಕ್ಸ್‌ಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದೇನೆ.
- ನಟಿ ಆಗಬೇಕು ಎಂಬಾಸೆ ಚಿಗುರಿದ್ದು ಯಾವಾಗ?
ನಾನು ಪ್ರೋಫೆಷನಲ್ ಡ್ಯಾನ್ಸರ್. ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಕಲೆ ಬಗ್ಗೆ ದೊಡ್ಡ ದೊಡ್ಡ ಕನಸುಗಳಿದ್ದವು. ಎಲ್ಲರೂ ಅಪ್ಪ, ಅಮ್ಮ ಹೆಸರು ಬಳಸಿಕೊಳ್ಳುತ್ತಾರೆ. ಆದರೆ ನನ್ನ ಹೆಸರಿನಿಂದ ಊರಿನಲ್ಲಿ ನನ್ನ ತಂದೆ ತಾಯಿಯನ್ನು ಗುರುತಿಸಬೇಕು ಎಂಬ ಆಸೆ ಇತ್ತು. ಅಕ್ಷಿತಾ ತಂದೆ ಇವರು ಅಂತ ಗುರುತಿಸಬೇಕು ಜನ ಕನಸಿತ್ತು. ಎಲ್ಲರೂ ಓದಿ ಕಂಪನಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅವೆಲ್ಲಾ ಈಗ ತುಂಬಾನೇ ಕಾಮನ್ ಆಗಿದೆ, ನಾನು ಡಿಫರೆಂಟ್ ಆಗಿರಲಿ ಅಂತ ಇದನ್ನ ಆಯ್ಕೆ ಮಾಡಿಕೊಂಡೆ. ಡ್ಯಾನ್ಸರ್ ಆಗಿದ್ದೀನಿ ಸಿನಿಮಾನೂ ಯಾಕೆ ಟ್ರೈ ಮಾಡಬಾರದು ಎಂಬ ಯೋಚನೆ ಬಂದು, ಆಗ ನಾನು ಸಿನಿಮಾಗಳನ್ನು ನೋಡಿ, ನೋಡಿ ಅಭಿನಯ ಕಲಿತೆ. ಈಗ ನನ್ನ ಮೊದಲ ಸಿನಿಮಾ ನೋಡಿದ್ದರೆ ನಾನಾ ಹೀಗೆ ಮಾಡಿದ್ನಾ ಅನ್ಸುತ್ತೆ. ದಿನೇ ದಿನೇ ಅಭಿನಯ ಕಲಿಯುತ್ತಿರುವೆ. ಮೊದಲು ಕ್ಲಾಸಿಕಲ್ ಡ್ಯಾನ್ಸ್ ಮಾಡುತ್ತಿದ್ದೆ. ಈಗ ಎಲ್ಲಾ ಡ್ಯಾನ್ಸ್ ಫಾರ್ಮ್ ಮಾಡ್ತೀನಿ.
- ರಿಯಲ್ ಪೊಲೀಸ್, ಬ್ರಹ್ಮಚಾರಿ, ಐ ಲವ್ ಯೂ, ಶಿವಾರ್ಜುನ ನಂತರ ನಿಮ್ಮ ಲಿಸ್ಟ್‌ನಲ್ಲಿ ಯಾವ ಸಿನಿಮಾ ಇದೆ?
'ತ್ರಿವಿಕ್ರಮ್' ಹಾಗೂ 'P5' ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಈ ಚಿತ್ರಗಳು ಬಿಡುಗಡೆಯಾಗಲಿವೆ. ಸದ್ಯ ತಮಿಳು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದು, ಇಲ್ಲಿನ ಒಂದು ಚಿತ್ರ ತಂಡದ ಜತೆ ಮಾತುಕತೆ ನಡೆಯುತ್ತಿದೆ. ತಿಂಗಳಲ್ಲಿ 15 ದಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತೀನಿ. ಈ ನಡುವೆ ಕನ್ನಡದ ಕತೆಗಳನ್ನು ಕೇಳುವೆ. ಅಲ್ಲಿಯೂ ಮಾತುಕತೆ ನಡೆಯುತ್ತಿದೆ. ಕನ್ನಡ ಚಿತ್ರರಂಗ ನನ್ನ ಮೊದಲ ಆದ್ಯತೆ.
ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣನ್ನು ನೋವಿಸಬೇಡಿ, ಪ್ರತಿಭೆ ಗೌರವಿಸಿ: ಮಂದಾರ ಗೌಡ
- ಕನ್ನಡ ಸೀರಿಯಲ್ ಹಾಗೂ ತಮಿಳು ಸೀರಿಯಲ್, ಏನಾದರೂ ಡಿಫರೆನ್ಸ್ ಇದ್ಯಾ?
ನಮ್ಮ ಕನ್ನಡ ಸೀರಿಯಲ್‌ನಲ್ಲಿ prompt ಇರಲ್ಲ. ನಾವೇ ಲೈವ್ ವಾಯ್ಸ್‌ನಲ್ಲಿ ಮಾಡುವುದು. ಇಲ್ಲಿ ಧಾರಾವಾಹಿನ ಡಬ್ ಮಾಡ್ತಾರೆ. ತಮಿಳು ಸೀರಿಯಲ್ ಸಿಕ್ಕಿದ್ದು ಅನಿರೀಕ್ಷಿತ. ಕನ್ನಡದಲ್ಲಿ ಸಿನಿಮಾ ಮಾಡ್ತಿದ್ದೆ. ಇದೇ ಸಮಯಕ್ಕೆ Sun Tv ಅವರು ಬೆಂಗಳೂರಿನಲ್ಲಿ ಆಡಿಷನ್ ಮಾಡುತ್ತಿದ್ದರು. ಅದರಲ್ಲಿ ನಾನು ಪಾಲ್ಗೊಂಡೆ. ನನಗೆ ಭಾಷೆ ಬರುತ್ತಿರಲಿಲ್ಲ. ಸಂಪೂರ್ಣ ಸ್ಕ್ರೀಪ್ಟ್ ಇಂಗ್ಲೀಷ್‌ನಲ್ಲಿ ಬರೆದುಕೊಂಡು ಅಭ್ಯಾಸ ಮಾಡಿ ಆಡಿಷನ್ ಕೊಟ್ಟು, ಸೆಲೆಕ್ಟ್ ಆದೆ. ಚೆನ್ನೈನಲ್ಲಿ ನನಗೆ ಯಾರ ಸಂಪರ್ಕವೂ ಇರಲಿಲ್ಲ. ಧಾರಾವಾಹಿ ಮೂಲಕ ಅಲ್ಲಿಗೆ ಕಾಲಿಟ್ಟಿದ್ದು. ಒಂದೂವರೆ ತಿಂಗಳಲ್ಲಿ ಭಾಷೆ ಕಲಿತುಕೊಂಡೆ. ಇಲ್ಲಿ ಅವಕಾಶಗಳು ಹೆಚ್ಚಿವೆ. ರಿಯಲ್ ಟ್ಯಾಲೆಂಟ್‌ಗಳನ್ನು ಅಪ್‌ಲಿಫ್ಟ್ ಮಾಡುತ್ತಾರೆ. ಮೊದಲ ಧಾರಾವಾಹಿ ನಂತರ ಬ್ಯಾಕ್ ಟು ಬ್ಯಾಕ್ ಆಫರ್ಸ್ ಬಂದು. ಸದ್ಯ ತಮಿಳು ಭಾಷೆಯಲ್ಲಿ ನಾನು ಮಾಡುತ್ತಿರುವುದು ನಾಲ್ಕನೇ ಧಾರಾವಾಹಿ.
- ಲಾಕ್‌ಡೌನ್ ದಿನಗಳಲ್ಲಿ ಫಿಟ್ನೆಸ್ ಹೇಗೆ ಮೇನ್ಟೇನ್ ಮಾಡಿದ್ರೀ?
ಲಾಕ್‌ಡೌನ್‌ನಿಂದ ನಾನು ಜಿಮ್ ಕಡೆ ಮುಖ ಮಾಡಿ ಒಂದು ವರ್ಷವೇ ಆಯ್ತು. ಆದರೆ ನಾನು ಮನೆಯಲ್ಲಿಯೇ ಜಿಮ್ ಮಾಡುವೆ. ಶೂಟಿಂಗ್‌ನಿಂದ ಎಷ್ಟೇ ಲೇಟ್ ಆಗಿ ಬಂದರೂ ರಾತ್ರಿ 10 ಗಂಟೆ ಆದರೂ ಕಾರ್ಡಿಯೋ ಮಾಡೇ ಮಾಡುವೆ. ಆಮೇಲೆ ಡಯಟ್ ಸಹಾಯ. ಡ್ಯಾನ್ಸ್ ಅಭ್ಯಾಸ ಕಡಿಮೆ ಆಗಿದೆ. ಕೆಲವು ದಿನಗಳ ಹಿಂದೆ ಡ್ಯಾನ್ಸ್ ಮಾಸ್ಟರ್ ಸ್ಟುಡಿಯೋದಲ್ಲಿ ಡ್ಯಾನ್ಸ್ ಮಾಡಿದೆ ಅಷ್ಟೆ.
- ನಿಮ್ಮ ಲವಲವಿಕೆಗೆ ಸೀಕ್ರೆಟ್ ಎನು?
ನಾನು ಚಿಕ್ಕ ಹುಡುಗಿಯಿಂದಾನೂ ತುಂಬಾ ಬಬ್ಲಿ ಹುಡುಗಿ. ಜೋವಿಯಲ್ ವ್ಯಕ್ತಿ. ಬೇಗ ಜನರ ಜೊತೆ ಹೊಂದಿಕೊಳ್ಳುವೆ. ಚಿತ್ರೀಕರಣ ಮಾಡುವಾಗ ಯಾರಾದರೂ ಒಬ್ಬರೇ ಕೂತಿದ್ದರೇ, ನಾನು ಪರಿಚಯ ಮಾಡಿಕೊಂಡು ಹೋಗಿ ಮಾತನಾಡಿಸುವೆ. ಸಿಕ್ಕಾಪಟ್ಟೆ ಟಾಕೆಟಿವ್.
- ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೀರ. ಫ್ಯಾಮಿಲಿ ರಿಯಾಕ್ಷನ್ ಏನು?
ನನ್ನ ಕುಟುಂಬದಲ್ಲಿ ನಾನೇ ಮೊದಲ ವ್ಯಕ್ತಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದು. ಇಡೀ ಫ್ಯಾಮಿಲಿ ತುಂಬಾ ಬ್ರಾಡ್ ಮೈಂಡೆಡ್. ಅಮ್ಮಂಗೆ ತುಂಬಾ ಇಷ್ಟ ಇತ್ತು, ಅವ್ರಿಗೆ ಮಾಡೋಕೆ ಆಗಿಲ್ಲ ಅನ್ನೋದನ್ನ ನಾನು ಮಾಡಬೇಕು ಎಂಬ ಆಸೆ. ನಾನು ಪುಟ್ಟ ಹುಡುಗಿ ಇದ್ದಾಗಲೇ ಕರಾಟೆ, ಡ್ಯಾನ್ಸ್‌ಗೆ ಸೇರಿಸಿದ್ದರು. ನನ್ನ ಸೀರಿಯಲ್ ದಿನವೂ ನೋಡುತ್ತಾರೆ. ಏನೇ ತಪ್ಪಿದ್ದರೂ ಫೋನ್ ಮಾಡಿ ಹೇಳುತ್ತಾರೆ. ಬಟ್ಟೆ ಸರಿ ಇರಲಿಲ್ಲ, ಈ ಸೀನ್ ಓವರ್ ಆ್ಯಕ್ಟಿಂಗ್ ಮಾಡಿದೆ ಅಂತ. ತುಂಬಾ ಸಹಕರಿಸುತ್ತಾರೆ.
- ಯಾವ ರೀತಿ ಪಾತ್ರ ನಿಮಗೆ ಇಷ್ಟ ಆಗುತ್ತೆ, ನೀವು ಆಯ್ಕೆ ಮಾಡಿಕೊಳ್ಳುತ್ತಿರುವುದು ಹೇಗೆ?
ನನಗೆ ಇಷ್ಟ ಆಗುವುದು ಪರ್ಫಾರ್ಮೆನ್ಸ್ ಇರುವ ಪಾತ್ರ, ನಾನು ಅದನ್ನೇ ಆಯ್ಕೆ ಮಾಡಿಕೊಳ್ಳಲು ಇಷ್ಟ ಪಡುವೆ. ಯಾವುದೇ ಕಥೆ ಆಗಿರಲಿ, ಪಾತ್ರ ಡಂಬ್ ಆಗಿರಬಾರದು. ಸಿನಿಮಾದಲ್ಲಿ ರೊಮ್ಯಾನ್ಸ್ ಅಥವಾ ಅಳೋದು ಇರುತ್ತೆ. ಆದರೆ ಸೀರಿಯಲ್‌ನಲ್ಲಿ ಮಲ್ಟಿ ಶೇಡ್ ಇರುತ್ತೆ. ಪ್ರಮುಖ ಪಾತ್ರನೂ ಅಗಿರಬಹುದು, ನೆಗೆಟಿವ್ ಪಾತ್ರನೂ ಆಗಿಬಹುದು.
- ಕನ್ನಡ ಅಭಿಮಾನಿಗಳಿಗೆ ಒಂದು ಮಾತು ಹೇಳುವುದಾದರೆ....
ನಾನು ಮತ್ತೆ ಎರಡು ಚಿತ್ರದ ಮೂಲಕ ಕನ್ನಡದಲ್ಲಿ ಕಮ್‌ಬ್ಯಾಕ್ ಮಾಡುತ್ತಿರುವೆ. ತಿಂಗಳಲ್ಲಿ 15 ದಿನ ಫ್ರೀ ಇರುವೆ. ಆಗ ಚಿತ್ರ ಕತೆ ಕೇಳುವೆ. ಲಾಕ್‌ಡೌನ್ ಸಮಯ ಆಗಿರುವುದರಿಂದ ಯಾವು ಪ್ರಾಜೆಕ್ಟ್ ಆಯ್ಕೆ ಮಾಡಿಕೊಳ್ಳಬೇಕೆಂದು ತೀರ್ಮಾನ ಮಾಡಿಲ್ಲ. ನನ್ನ ಆಸೆಯಂತೆ ಉಪೇಂದ್ರ, ಚಿಕ್ಕಣ್ಣ, ನೀನಾಸಂ ಸತೀಶ್, ಅಂಬರೀಶ್, ಚಿರಂಜೀವಿ ಸರ್ಜಾ ಜೊತೆ ಅಭಿನಯಿಸಿರುವೆ. ನನ್ನ ದೊಡ್ಡ ಕನಸು ಏನೆಂದರೆ ಯಶ್ ಮತ್ತು ಸುದೀಪ್ ಸರ್ ಜೊತೆ ಅಭಿನಯಿಸಬೇಕು ಎಂದು. ಲೀಡ್ ರೋಲ್ ಇಲ್ಲವಾದರೂ ಸೆಕೆಂಡ್ ಲೀಡ್ ಆಗಿ ಮಾಡುವುದಕ್ಕೆ ಇಷ್ಟ.