ನಟ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿನ 'ಥಿಯೇಟರ್ ಮಾಫಿಯಾ' ಪೈರಸಿಗಿಂತಲೂ ಅಪಾಯಕಾರಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆ ಮಾಡಿದ್ದನ್ನು ಉಲ್ಲೇಖಿಸಿ, ಹಣ ಮತ್ತು ಪ್ರಭಾವವಿದ್ದ ತಮಗೇ ಅನ್ಯಾಯವಾದರೆ ಹೊಸಬರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. 

ದಾವಣಗೆರೆ (ಜ.4): ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ 'ಥಿಯೇಟರ್ ಮಾಫಿಯಾ' ದೊಡ್ಡ ಕಂಟಕವಾಗಿ ಪರಿಣಮಿಸಿದೆ ಎಂದು ಸಚಿವ ಜಮೀರ್ ಅಹ್ಮದ್ ಪುತ್ರ ಹಾಗೂ ನಟ ಝೈದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.

ಪೈರಸಿಗಿಂತಲೂ ಥಿಯೇಟರ್ ಮಾಫಿಯಾ ಡೇಂಜರ್!

ಸಿನಿಮಾ ರಂಗಕ್ಕೆ ಪೈರಸಿ ದೊಡ್ಡ ಹೊಡೆತ ನೀಡುತ್ತಿದೆ ನಿಜ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಪೈರಸಿ ಮಾಫಿಯಾಗಿಂತಲೂ ಥಿಯೇಟರ್ ಮಾಫಿಯಾ ಅತ್ಯಂತ ಅಪಾಯಕಾರಿಯಾಗಿದೆ. ತಂತ್ರಜ್ಞಾನ ನೆಕ್ಷ್ಟ್ ಲೆವೆಲ್‌ಗೆ ಬೆಳೆದಿರುವುದರಿಂದ ಪೈರಸಿ ತಡೆಯುವುದು ಕಷ್ಟವಾಗುತ್ತಿದೆ, ಆದರೆ ಚಿತ್ರಮಂದಿರಗಳ ಹಂಚಿಕೆಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಚಿತ್ರಮಂಡಳಿ ಮನಸ್ಸು ಮಾಡಿದರೆ ತಡೆಯಬಹುದು ಎಂದರು.

ಇಷ್ಟೆಲ್ಲ ಹಣ, ಪವರ್ ಇದ್ದ ನನಗೇ ಯಾಮಾರಿಸಿದ್ರು, ಇನ್ನು ಹೊಸಬರ ಕಥೆ ಏನು?

ತಮ್ಮ ಮೊದಲ ಚಿತ್ರದ ಕಹಿ ಅನುಭವ ಹಂಚಿಕೊಂಡ ಅವರು, ನನ್ನ ಮೊದಲ ಸಿನಿಮಾ ಬಿಡುಗಡೆಯಾದಾಗ ಮೊದಲು 100 ಸ್ಕ್ರೀನ್‌ಗಳನ್ನು ನೀಡಲಾಗಿತ್ತು. ಆದರೆ ಕೇವಲ ಮೂರ್ನಾಲ್ಕು ದಿನ ಕಳೆಯುವುದರೊಳಗೆ ಅದನ್ನು 50ಕ್ಕೆ ಇಳಿಸಲಾಯಿತು. ನನಗೆ ರಾಜಕೀಯ ಹಿನ್ನೆಲೆ ಇತ್ತು, ದೊಡ್ಡ ನೆಟ್‌ವರ್ಕ್ ಇತ್ತು. ಇಷ್ಟೆಲ್ಲಾ ಹಣ ಮತ್ತು ಪವರ್ ಇದ್ದ ನನಗೇ ಅವರು ಯಾಮಾರಿಸಿದರು. ಇನ್ನು ಯಾವುದೇ ಬೆಂಬಲವಿಲ್ಲದೆ ಬರುವ ಹೊಸಬರ ಸ್ಥಿತಿ ಎಷ್ಟು ಶೋಚನೀಯವಾಗಿರಬೇಡ? ಎಂದು ಪ್ರಶ್ನಿಸಿದರು.

ಕನ್ನಡ ಚಿತ್ರಗಳಿಗೆ ಕನಿಷ್ಠ ಸ್ಕ್ರೀನ್ ಕಡ್ಡಾಯವಾಗಲಿ

ಥಿಯೇಟರ್ ಮಾಫಿಯಾದಿಂದ ಹೊಸ ಕಲಾವಿದರು ಮತ್ತು ನಿರ್ಮಾಪಕರು ಬೀದಿಗೆ ಬರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕನ್ನಡ ಚಿತ್ರಗಳಿಗೆ ಮಿನಿಮಮ್ ಇಷ್ಟು ಸ್ಕ್ರೀನ್ ನೀಡಲೇಬೇಕು ಎಂಬ ನಿಯಮ ಬರಬೇಕು. ಅನ್ಯಾಯ ಮಾಡುವ ಚಿತ್ರಮಂದಿರಗಳ ವಿರುದ್ಧ ಫಿಲಂ ಚೇಂಬರ್ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನೋಟಿಸ್ ನೀಡಬೇಕು. ಹೊಸಬರಿಗೆ ನ್ಯಾಯ ಸಿಗದಿದ್ದರೆ ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ ಎಂದು ಝೈದ್ ಖಾನ್ ಆಗ್ರಹಿಸಿದರು.