ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಹೊಸ ನಿಯಮಾವಳಿ ವಿರುದ್ಧ ಯಶ್‌ ಸಿಡಿದೆದ್ದಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ ಕೈಗೊಳ್ಳೋದು ಬಿಟ್ಟು ಹೊಟ್ಟೆಹೊರೆಯಲು ಮಾಡುತ್ತಿರುವ ವೃತ್ತಿಗೆ ಹೀಗೆ ಹೊಡೆತ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

‘ಸಭೆ ಸಮಾರಂಭ, ರಾರ‍ಯಲಿ ನಿಯಂತ್ರಣಕ್ಕೆ ಯಾವ ಕ್ರಮವೂ ಇಲ್ಲ. ಆದರೆ ನ್ಯಾಯವಾಗಿ ದುಡಿಯುತ್ತಾ ಹೊಟ್ಟೆಹೊರೆದುಕೊಳ್ಳುವವರ ಕೆಲಸಕ್ಕೇ ಹೊಡೆತ ನೀಡ್ತಿದ್ದೀರಿ. ಅಪಘಾತ ಆಗುವುದೆಂದು ವಾಹನ ಸಂಚಾರ ನಿಲ್ಲಿಸೋದು ಸರಿಯಾಗುತ್ತದೆಯೇ? ಕಟ್ಟುನಿಟ್ಟಿನ ಸಂಚಾರ ಕ್ರಮ ಸಾಕಲ್ಲವೇ?’ ಎಂದು ಯಶ್‌ ಸರ್ಕಾರಕ್ಕೆ ಕ್ಲಾಸ್‌ ತಗೊಂಡಿದ್ದಾರೆ.

ಕೊರೋನಾಗೆ ಪರಿಹಾರ ಗೊತ್ತಿಲ್ಲ, ಹಸಿವೆಗೆ ಗೊತ್ತಿದ್ಯಲ್ಲಾ..? ಜಿಮ್ ಕಾರ್ಮಿಕರ ಪರ ನಿಂತ ರಾಕಿ ಭಾಯ್ 

‘ರೋಗಕ್ಕೆ ಪರಿಹಾರ ಏನು ಎಂದು ನಮಗ್ಯಾರಿಗೂ ಗೊತ್ತಿಲ್ಲ. ಆದರೆ ಹಸಿವಿಗೆ ಪರಿಹಾರ ಗೊತ್ತಿದೆಯಲ್ಲ!’ ಎಂದು ಅವರು ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಗೆ ಸಾಮಾನ್ಯ ಜನರೂ ಯಶ್‌ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಶೇ.50 ಸೀಟು ಭರ್ತಿಗೆ ಮಾತ್ರ ಅವಕಾಶ ಎಂಬ ನಿಯಮವನ್ನು ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದಾಗಲೂ ಯಶ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಪುನೀತ್ ಮನವಿಗೆ ಸ್ಪಂದಿಸಿದ ಸಿಎಂ: ಸಿನಿಪ್ರಿಯರಿಗೆ ಭರ್ಜರಿ ಸಿಹಿಸುದ್ದಿ 

‘ನಮ್ಮಲ್ಲಿ ಜಾಗೃತಿ ಮೂಡಿದೆ. ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿರ್ಬಂಧಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು ಮುಳುವಾಗಬಾರದು. ಈ ಹಠಾತ್‌ ಧೋರಣೆ ಖಂಡನೀಯ. ಚಿತ್ರರಂಗಕ್ಕೆ ದುಡಿಯುವ ಅವಕಾಶ ಯಾಕಿಲ್ಲ. ಸೂಚನೆ ಕೊಡದೇ ಜಾರಿ ಮಾಡಿರುವ ಈ ನಿರ್ಬಂಧಗಳಿಗೆ ಚಿತ್ರರಂಗ ಬಲಿಯಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಿವರಾಜ್‌ ಕುಮಾರ್‌ ಸೇರಿದಂತೆ ಹಲವು ನಟರು ಅವರ ಮಾತನ್ನು ಅನುಮೋದಿಸಿದ್ದರು. ಆ ಬಳಿಕ ಪುನೀತ್‌ ರಾಜ್‌ಕುಮಾರ್‌ ನೇತೃತ್ವದಲ್ಲಿ ಯುವರತ್ನ ಚಿತ್ರತಂಡ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿದ್ದರು. ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಚಿತ್ರತಂಡದ ಮನವಿಗೆ ಸ್ಪಂದಿಸಿ, ಏ.7ರವರೆಗೂ ಥಿಯೇಟರ್‌ ಹೌಸ್‌ಫುಲ್‌ ಶೋಗೆ ಅನುಮತಿ ನೀಡಿದರು. ಸದ್ಯದ ಮಟ್ಟಿಗೆ ಚಿತ್ರರಂಗ ನಿಟ್ಟುಸಿರು ಬಿಟ್ಟಿದೆ. ಆದರೆ ಏ.7ರ ಬಳಿಕ ಮತ್ತೆ ಶೇ.50 ಸೀಟು ಭರ್ತಿಗೆ ಅವಕಾಶ ನೀಡಿದರೆ ಏನು ಮಾಡುವುದು ಅನ್ನುವ ಗೊಂದಲವೂ ಶುರುವಾಗಿದೆ.

ಈ ನಡುವೆ ಯಶ್‌ ಅಭಿನಯದ ಕೆಜಿಎಫ್‌ ಚಾಪ್ಟರ್‌ 2, ಜುಲೈ 16ಕ್ಕೆ ದೇಶ ಹೊರದೇಶಗಳಲ್ಲಿ ತೆರೆಗೆ ಅಪ್ಪಳಿಸಲು ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂಥಾ ಸಮಯದಲ್ಲೇ ಕೊರೋನಾ ಎರಡನೇ ಅಲೆಯ ಅಬ್ಬರ ಹೆಚ್ಚುತ್ತಿದೆ. ಸ್ಥಿತಿ ಹೀಗೇ ಮುಂದುವರಿದರೆ ಕೆಜಿಎಫ್‌ ಸೇರಿದಂತೆ ಹೆಚ್ಚಿನ ಚಿತ್ರಗಳ ಬಿಡುಗಡೆ ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಸೇವ್‌ ಫಿಟ್‌ನೆಸ್‌ ಇಂಡಸ್ಟ್ರಿ ಹೋರಾಟಕ್ಕೆ ಬೆಂಬಲ

ಜಿಮ್‌, ಫಿಟ್‌ನೆಸ್‌ ಸೆಂಟರ್‌ಗಳನ್ನು ಮುಚ್ಚಲು ಸರ್ಕಾರ ಆದೇಶ ನೀಡಿರೋದರ ವಿರುದ್ಧ ‘ಸೇವ್‌ ಫಿಟ್‌ನೆಸ್‌ ಇಂಡಸ್ಟ್ರಿ’ ಎಂಬ ಹೋರಾಟ ಸೋಷಿಯಲ್‌ ಮೀಡಿಯಾದಲ್ಲಿ ಆರಂಭವಾಗಿದೆ. ಸುರಕ್ಷತೆಯೊಂದಿಗೆ ಜಿಮ್‌ನಲ್ಲಿ ಶೇ.50 ಕಾರ್ಯಾಚರಣೆ ಅವಕಾಶ ನೀಡಬೇಕು ಎಂದು ಫಿಟ್‌ನೆಸ್‌ ಸಂಸ್ಥೆಯವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದೀಗ ಫಿಟ್‌ನೆಸ್‌ ಇಂಡಸ್ಟ್ರಿ ಹೋರಾಟಕ್ಕೆ ಯಶ್‌ ಬೆಂಬಲ ನೀಡಿದ್ದಾರೆ. ‘ಸಾಲ ಸೋಲ ಮಾಡಿ ಜಿಮ್‌ ನಡೆಸುವವರು ಕಷ್ಟಪಡುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಜಿಮ್‌ ಬಳಸಲು ಅನುಮತಿ ನೀಡಿದರೆ ಗ್ರಾಹಕರ ಆರೋಗ್ಯಕ್ಕೂ ಒಳ್ಳೆಯದು, ಜಿಮ್‌ ಮಾಲೀಕರೂ ಬದುಕಿಕೊಳ್ಳುತ್ತಾರಲ್ಲವೇ’ ಎಂದು ಯಶ್‌ ಪ್ರಶ್ನಿಸಿದ್ದಾರೆ.