'ಲೂಸಿಯಾ' ಚಿತ್ರದ ಮೂಲಕ ಕನ್ನಡ ಚಿತ್ರ ಜಗತ್ತಿಗೆ ಕಾಲಿಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್ ಅವರನ್ನು ಸ್ಯಾಂಡಲ್‌ವುಡ್ ಬಹು ಬೇಗ ಒಪ್ಪಿಕೊಂಡಿತು. ಇದೀಗ ಮಗುವಿನ ತಾಯಿಯಾಗಿ, ಫುಲ್ ಬ್ಯುಸಿಯಾಗಿದ್ದಾರೆ ಈ ನಟಿ. ಅಮ್ಮನಾಗಿ ತಿಂಗಳುಗಳಾದ ಮೇಲೆ ಮುದ್ದು ಮಗಳ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೀರಿಸ್‌ ಆಗಿ ಶೇರ್ ಮಾಡಿಕೊಂಡಿದ್ದಾರೆ.  

ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದರು ಈ ನಟಿ. ಈ ಗಲಾಟೆಯಲ್ಲಿ ಆರೋಪ, ಪ್ರತ್ಯಾರೋಪಗಳು ನಡೆದು, ದೂರು, ಪ್ರತಿ ದೂರು ದಾಖಲಾಗಿದ್ದವು. ಈ ವೇಳೆ ಪತ್ರವೊಂದಕ್ಕೆ ಸಹಿ ಹಾಕುವಾಗ ಲೇ ಶ್ರುತಿ ಹರಿಹರನ್‌‌ಗೆ ಮದುವೆ ಆಗಿರುವ ವಿಚಾರ ಬಹಿರಂಗಗೊಂಡಿತ್ತು. ಅಲ್ಲೀವರೆಗೂ ಈ 'ನಾತಿಚರಾಮಿ' ಬೆಡಗಿ, ತಾವು 'ಅರ್ಥೈಚ, ಧರ್ಮೇಚ, ಕಾಮೇಚ' ಸಪ್ತಪದಿ ತುಳಿದ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. 

ಶೃತಿ ಹರಿಹರನ್ ಬೇಬಿ ಬಂಪ್ ಆಯ್ತು, ಈಗ ಸೀಮಂತ ವಿಡಿಯೋನೂ ರಿವೀಲ್ !

ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಶ್ರುತಿ ಅವರನ್ನು ತಣ್ಣಗಾಗಿಸಲು ರೆಬೆಲ್ ಸ್ಟಾರ್ ಅಂಬರೀಷ್ ಸೇರಿ ಚಿತ್ರರಂಗದ ಗಣ್ಯರು ಬಹಳವಾಗಿ ಯತ್ನಿಸಿದ್ದರು. ಆದರೆ, ಸರ್ಜಾ ಅವರಾಗಲಿ, ಶ್ರುತಿ ಅವರಾಗಲಿ ಈ ವಿಷಯವಾಗಿ ಕಾಂಪ್ರೋಮೈಸ್ ಆಗಲು ಒಪ್ಪಲೇ ಇಲ್ಲ. ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.

#MeToo ವಿವಾದದ ಬೆನ್ನಲ್ಲೇ ಈ ಮಲೆಯಾಳಿ ನಟಿಯನ್ನು ಸ್ಯಾಂಡಲ್‌ವುಡ್ ತುಸು ನಿರ್ಲಕ್ಷಿಸಲು ಆರಂಭಿಸಿತು. ಆ ನಂತರ ಬಿಡುಗಡೆಯಾದ ಅದ್ಭುತ ಚಿತ್ರ 'ನಾತಿಚರಾಮಿ'ಯನ್ನೂ ಕನ್ನಡ ಚಿತ್ರಾಭಿಮಾನಿಗಳು ಕಲೆ ಹಾಗೂ ವೈಯಕ್ತಿಕ ಜೀವನವೇ ಬೇರೆ ಬೇರೆ ಎಂಬುದನ್ನೂ ಮರೆತು ತಿರಸ್ಕರಿಸಿದರು. ಇಷ್ಟೆಲ್ಲಾ ಆಗುವಾಗಲೇ 'ಬ್ಯುಟಿಫುಲ್ ಮನಸ್ಸಿ'ನ ಈ ಸುಂದರಿ ತಾಯಿಯಾಗುತ್ತಿರುವ ವಿಷಯವನ್ನು ರಿವೀಲ್ ಮಾಡಿದರು. 2019ರಲ್ಲಿ ತಾಯಿಯಾದ ಈ ಅದ್ಭುತ ಕಲಾವಿದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದನ್ನು ಸೋಷಿಯಲ್ ಮೀಡಿಯಾ ಮೂಲಕವೇ ಹೇಳಿ ಕೊಂಡಿದ್ದರು. ಮಗಳಿಗೆ 'ಜಾನಕಿ' ಎಂದು ಹೆಸರಿಟ್ಟದ್ದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿ ಕೊಂಡಿದ್ದರು. 

ಶೃತಿ ಹರಿಹರನ್ ಮಗಳಿಗೆ ನಾಮಕರಣ ಸಂಭ್ರಮ; ಮಗಳಿಗಿಟ್ರು ಪೌರಾಣಿಕ ಹೆಸರು!

ಈಗ ತಮ್ಮ ಮಗಳ ಫೋಟೋ ಶೂಟ್‌ ಮಾಡಿಸಿರುವುದನ್ನು ಶೇರ್ ಮಾಡಿಕೊಂಡಿದ್ದಾರೆ. ಜಾನಕಿಗೆ 16 ದಿನಗಳಿದ್ದಾಗ ಈ ಶೂಟ್ ಮಾಡಿಸಲಾಗಿದೆ. Tiny Yours ಕ್ಲಿಕ್‌ ಮಾಡಿರುವ ಫೋಟೋಗೆ 'ಮಕ್ಕಳು ಮಲಗುವುದನ್ನು ನೋಡುವುದಕ್ಕೇ ಖುಷಿ. ಮಿಸ್ J ಅನ್ನು ಬಟ್ಟೆಯಲ್ಲಿ ಸುತ್ತಿ ಹೆಡ್‌ಬ್ಯಾಂಡ್‌ ಹಾಕಿರುವುದನ್ನು ನೋಡುವುದೇ ಆನಂದ. ಅದರಲ್ಲೂ ಜಾನಕಿ ನೆಮ್ಮದಿಯಾಗಿ ನಿದ್ರಿಸಿದಳು' ಎಂದು ಬರೆದುಕೊಂಡಿದ್ದಾರೆ.