ಶಿಷ್ಯ ಮೂಲಕ ಹೀರೋ ಆದ ನಟ :

ಚಿತ್ರರಂಗದಲ್ಲಿ ದೀಪಕ್‌, ಶಿಷ್ಯದೀಪಕ್‌ ಅಂತಲೇ ಪರಿಚಯವಾದವರು. ಅದಕ್ಕೆ ಕಾರಣವಾಗಿದ್ದು ದೀಪಕ್‌ ಅಭಿನಯಿಸಿದ ಚೊಚ್ಚಲ ಚಿತ್ರ ‘ಶಿಷ್ಯ’. ಬಾ.ಮ. ಹರೀಶ್‌ ಇದರ ನಿರ್ಮಾಪಕ. ಇದು ಬಂದು ಹೋಗಿ ಇಲ್ಲಿ 15 ವರ್ಷ. ಅದಾದ ನಂತರ ದೀಪಕ್‌ 10ಕ್ಕೂ ಹೆಚ್ಚು ಚಿತ್ರಗಳಿಗೆ ಹೀರೋ ಆದರು. ಅದರಲ್ಲಿ ಕೆಲವು ಬಂದವು. ಇನ್ನು ಕೆಲವು ತೆರೆ ಕಾಣದೆ ಬಾಕ್ಸ್‌ನಲ್ಲಿ ಉಳಿದು ಹೋದವು. ಕೊನೆಯದಾಗಿ ಅವರು ಅಭಿನಯಿಸಿದ ಚಿತ್ರ ‘ಬೆಳ್ಳಿ’. ಅದು ಬಂದು ಹೋಗಿ ಇಲ್ಲಿಗೆ 6 ವರ್ಷ. ಅಲ್ಲಿಂದ ನಟನೆಯಿಂದ ದೂರವುಳಿದು ವನವಾಸದಲ್ಲಿದ್ದ ದೀಪಕ್‌ ಈಗ ಮತ್ತೆ ಬಂದಿದ್ದಾರೆ. ಹಾಗಂತ ಹೀರೋ ಆಗಿ ಅಲ್ಲ, ಬದಲಿಗೆ ವಿಲನ್‌ ಆಗಿ!

ಬಹಳಷ್ಟುನೋವಿದೆ, ಖುಷಿಯೂ ಇದೆ :

‘15 ವರ್ಷದ ಸಿನಿಮಾ ಜರ್ನಿ ನನ್ನದು. ಒಂದಷ್ಟುವರ್ಷ ದೂರವೂ ಉಳಿದಿದ್ದೇನೆ. ಅದರಿಂದಾಗಿ ತುಂಬಾ ನೋವಿದೆ. ಖುಷಿಯೂ ಇದೆ. ಮೊದಲ ಚಿತ್ರಕ್ಕೆ ಭವ್ಯ ಸ್ವಾಗತವೇ ಸಿಕ್ಕಿತು. ಮುಂದಿನ ಹಾದಿ ಸುಂದರವಾಗಿರುತ್ತೆ ಅಂದುಕೊಂಡೆ. ಆದರೆ ಹೂವಿನ ಹಾಸಿಗೆ ಆಗಲಿಲ್ಲ, ಬದಲಿಗೆ ಕಲ್ಲು ಮುಳ್ಳಿನ ಹಾದಿ ಆಯಿತು. ಗೆಲುವು ಸಿಗಲಿಲ್ಲ, ಸಂಭಾವನೆ ಕೂಡ ಹೆಚ್ಚಾಗಲಿಲ್ಲ. ಡಿಪ್ರೆಷನ್‌ಗೆ ಸಿಲುಕಿ, ಒಂದಷ್ಟುಕಾಲ ಸಿನಿಮಾದಿಂದ ದೂರ ಉಳಿದೆ. ಅವಕಾಶ ಸಿಕ್ಕರೆ ಬಣ್ಣ ಹಚ್ಚೋಣ ಅಂತಿದ್ದೆ, ಆಗ ಸಿಕ್ಕಿದ್ದು ‘ಏಕ್‌ ಲವ್‌ ಯಾ’ ಹಾಗೂ ‘ವೀರಂ’ ಚಿತ್ರಗಳು’. ಇಲ್ಲಿ ನಾನು ವಿಲನ್‌. ಹೀರೋ ಆಗುವುದಕ್ಕಿಂತ ಅದರಲ್ಲಿಯೇ ಮುಂದುವರೆಯೋಣ ಅಂದುಕೊಂಡಿದ್ದೇನೆ. ಇನ್ನೇನಿದ್ದರೂ ನನ್ನದು ವಿಲನ್‌ ವರ್ಷನ್‌’ ಎನ್ನುವ ಭಾವುಕ ಮಾತುಗಳ ಜತೆಗೆ 15 ವರ್ಷಗಳ ಸಿನಿ ಜರ್ನಿ ಮೆಲುಕು ಹಾಕಿದರು ದೀಪಕ್‌.

15 ವರ್ಷದ ಬಳಿಕ ಚಿತ್ರರಂಗಕ್ಕೆ ಶಿಷ್ಯ ದೀಪಕ್‌ ಕಮ್‌ ಬ್ಯಾಕ್!

ನಾನು ಅಹಂಕಾರಿ ಅಂದವರು ಯಾರೋ :

‘ದುರಹಂಕಾರ ನನಗಿಲ್ಲ. ನನ್ನ ಬಗ್ಗೆ ತುಂಬಾ ಸುಳ್ಳುಗಳಿವೆ. ದೀಪಕ್‌ ಕತೆ ಚೇಂಜ್‌ ಮಾಡಿಸ್ತಾರೆ, ಸೆಟ್‌ಗೆ ಲೇಟಾಗಿ ಬರ್ತಾರೆ ಅಂತೆಲ್ಲ ಹಬ್ಬಿಸಲಾಗಿದೆ. ಇದೆಲ್ಲ ಸುಳ್ಳು. ನನ್ನ ಹಾಕಿಕೊಂಡು ಸಿನಿಮಾ ಮಾಡಿದವರಿಗೆ ವಾಸ್ತವ ಗೊತ್ತಿದೆ. ಇಂತಹ ಸುಳ್ಳುಗಳನ್ನು ಯಾರು, ಯಾಕಾಗಿ ಹಬ್ಬಿಸಿದರೋ ಗೊತ್ತಿಲ್ಲ. ನಂಗೆ ದುಡಿಯೋದಿಕ್ಕೆ ಸಿನಿಮಾ ಅಲ್ಲ, ಸಿನಿಮಾ ನನ್ನ ಪ್ಯಾಷನ್‌. ನಾನು ಹೀರೋ ಎನ್ನುವುದಕ್ಕಿಂತ ಕಲಾವಿದ ಮಾತ್ರ. ಹೀರೋ ಪಾತ್ರವೇ ಬೇಕು ಅಂತ ಕಾಯೋದಿಲ್ಲ. ಅವಕಾಶ ಸಿಕ್ಕಷ್ಟುಅಭಿನಯಿಸುತ್ತಾ ಹೋಗಬೇಕು ಎನ್ನುವುದು ನನ್ನ ನಿರ್ಧಾರ. ಅವಕಾಶ ಕೊಡಬೇಕಿರುವುದು ಚಿತ್ರರಂಗ. ಅದಕ್ಕಾಗಿ ಕಾಯುತ್ತೇನೆ’ ಎನ್ನುತ್ತಾ ಒಂದಷ್ಟುಟೀಕೆಗಳಿಗೆ ಸ್ಪಷ್ಟನೆ ಕೊಡುತ್ತಾರೆ ದೀಪಕ್‌.

ಕೈಯಲ್ಲೀಗ ಎರಡು ಸಿನಿಮಾ:

‘ನಾನೀಗ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಜೋಗಿ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದಲ್ಲಿ ಪೊಲೀಸ್‌ ಪಾತ್ರಧಾರಿ. ಹಾಗೆಯೇ ಶಶಿಧರ್‌ ನಿರ್ಮಾಣದ ‘ವೀರಂ’ ಚಿತ್ರದಲ್ಲಿ ಖಡಕ್‌ ವಿಲನ್‌. ಎರಡು ಪಾತ್ರಗಳು ತುಂಬಾ ಪ್ರಾಮುಖ್ಯತೆ ಹೊಂದಿವೆ. ನಿರ್ದೇಶಕ ಜೋಗಿ ಪ್ರೇಮ್‌ ಅವರ ಜತೆಗೆ ಕೆಲಸ ಮಾಡುವುದಕ್ಕೆ ಖುಷಿ ಆಗುತ್ತದೆ. ಇನ್ನು ‘ ವೀರಂ’ ತಂಡ ತುಂಬಾ ಪ್ರಾಮಾಣಿಕತೆಯಿಂದ ಸಿನಿಮಾ ಮಾಡುತ್ತಿದೆ. ನನ್ನ ಮೇಲೆ ನಂಬಿಕೆ ಇಟ್ಟು ಅವರು ಈ ಪಾತ್ರ ಕೊಟ್ಟಿದ್ದಾರೆ. ಅವರ ವಿಶ್ವಾಸ, ನಂಬಿಕೆಗೆ ದಕ್ಕೆ ಆಗದ ಹಾಗೆ ಅಭಿನಯಿಸುವ ಹೊಣೆ ನನ್ನ ಮೇಲಿದೆ ’ ಎನ್ನುವ ಮಾತುಗಳನ್ನು ದೀಪಕ್‌ ಹಂಚಿಕೊಂಡರು.

ಅಭಿನಂದನೆ, ಗೌರವ ಅರ್ಪಣೆ:

ಚಿತ್ರರಂಗದಲ್ಲಿ ಶಿಷ್ಯ ದೀಪಕ್‌ ಅವರದ್ದೀಗ ಸೆಕೆಂಡ್‌ ಇನ್ನಿಂಗ್ಸ್‌. ‘ಏಕ ಲವ್‌ ಯಾ’ ಹಾಗೂ ‘ವೀರಂ’ ಚಿತ್ರಗಳಲ್ಲೀಗ ಅವರು ವಿಲನ್‌. ಅದೇ ಖುಷಿಯಲ್ಲಿ ಇತ್ತೀಚೆಗೆ ಅವರು ಸುದ್ದಿಗೋಷ್ಠಿಯೊಂದಿಗೆ ಮಾಧ್ಯಮದ ಮುಂದೆ ಬಂದಿದ್ದರು. ಅದು ಸುದ್ದಿಗೋಷ್ಠಿ ಎನ್ನುವುದಕ್ಕಿಂತ ಹಳೆಯದರ ವಿಮರ್ಶೆ, ಹೊಸದರ ಖುಷಿಯ ಮಾತು. ಜತೆಗೆ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರು, ಆನಂತರ ನಂಬಿ ಸಿನಿಮಾ ಮಾಡಿದವರಿಗೆ ಸನ್ಮಾನದ ಗೌರವ. ಆ ಮೂಲಕ ಒಂದಷ್ಟುಮಾತು ಹಂಚಿಕೊಂಡರು ದೀಪಕ್‌. ಅದೇ ನೆಪದಲ್ಲಿ ನಿರ್ಮಾಪಕರಾದ ಬಾ.ಮ. ಹರೀಶ್‌, ಬಾ.ಮ. ಗಿರೀಶ್‌, ವಿಜಯ್‌ ಕುಮಾರ್‌, ಶಶಿಧರ್‌ ಜತೆಗೆ ಪಿಆ ಒ ವಿಜಯ್‌ ಕುಮಾರ್‌ ಹಾಗೂ ನಾಗೇಂದ್ರ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು ನಟ ಶಿಷ್ಯ ದೀಪಕ್‌.

"