5 ರೂಪಾಯಿ CT ಸ್ಕ್ಯಾನ್ ನಿಜವೇ?; ನಟ ಸಂಚಾರಿ ವಿಜಯ್ ಸ್ವಂತ ಅನುಭವ!

5 ರೂಪಾಯಿಗೆ ಸಿಟಿ ಸ್ಕ್ಯಾನ್ ಮಾಡುತ್ತಿರುವುದು ನಿಜವೇ? ಯಾರೆಲ್ಲಾ ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ, ಇದರಿಂದ ಯಾರೆಲ್ಲಾ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಜನ ಜಂಗುಳಿ ಕಂಡ ನಟ ಸಂಚಾರಿ ವಿಜಯ್ ವಿವರಿಸಿದ್ದು ಹೀಗೆ......

Kannada actor Sanchari Vijay explains about Rs 5 for CT Scan in Govt hospitals vcs

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೇವಲ 5 ರೂಪಾಯಿಗೆ ಸಿಟಿ ಸ್ಕ್ಯಾನ್ ಮಾಡಿಸಲಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದೋ ಆಗಿದ್ದು, ಜನರ ಆಸ್ಪತ್ರೆ ಎನ್ನುವುದನ್ನು ಲೆಕ್ಕಿಸದೆ ಜಾತ್ರೆಗೆ ನುಗುವಂತೆ ನುಗುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಸಂಚಾರಿ ವಿಜಯ್ ಆಸ್ಪತ್ರೆಯಲ್ಲಿ ಏನೆಲ್ಲಾ ಆಗುತ್ತಾ? ಜನರ ಜೀವನ ಎಷ್ಟರ ಮಟ್ಟಿಗೆ ತೊಂದರೆಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.

(ಸಂಚಾರಿ ವಿಜಯ್ ಫೇಸ್‌ಬುಕ್‌ ಬರಹ)

ಬೆಳಗ್ಗೆ ಒಂಬತ್ತು ಗಂಟೆಗೆ ನನ್ನ ಕುಟುಂಬದ ಹಿರಿಯರೊಬ್ಬರನ್ನು ಎರೆಡನೇ ಲಸಿಕೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದೆ. 'ನೀವು ಕಾರಲ್ಲೇ ಕುಳಿತಿರಿ ನಾನು ಆಸ್ಪತ್ರೆಯೊಳಗಿನ ವ್ಯವಸ್ಥೆ ನೋಡಿಕೊಂಡು ಬರುತ್ತೇನೆ ಆಮೇಲೆ ನೀವು ಬನ್ನಿ' ಎಂದು ಹೇಳಿ ಆಸ್ಪತ್ರೆಯ ಅಂಗಳಕ್ಕೆ ಕಾಲಿಟ್ಟರೆ ದಂಗು ಬಡಿಸುವಷ್ಟು ಜನ. ಎರೆಡು ಕ್ಷಣ ಗಾಬರಿಯಾಗಿ ಹೊರಗೇ ನಿಂತುಬಿಟ್ಟೆ. ಒಂದು ಹೆಜ್ಜೆ ಒಳಗಿಟ್ಟರೂ ಒಬ್ಬರಲ್ಲಾ ಒಬ್ಬರನ್ನು ಸೋಕುವ ಸಾಧ್ಯತೆಯಿತ್ತು. ಯಾರಾದರೂ ನನ್ನನ್ನು ಮುಟ್ಟಿ ಸೋಂಕು ತಗುಲಿ ಅದರಿಂದ ಮತ್ತೆಲ್ಲಿ ನಾಲ್ಕು ಜನಕ್ಕೆ ಹರಡುವುದೋ ಎಂದು ಭಯಪಟ್ಟು ಒಳ ಹೊಗಲೋ ಅಥವಾ ಇಲ್ಲೇ ನಿಲ್ಲಲೋ ಎಂಬ ದ್ವಂದ್ವ ಶುರುವಾಗಿ ಅಲ್ಲೇ ನಿಂತುಬಿಟ್ಟೆ.

ಡಬಲ್ ಮಾಸ್ಕ್ ಅವಶ್ಯಕವೇ? ಮನೆಯಲ್ಲೂ ಧರಿಸಬೇಕಾ? ಕೊರೋನಾ ಆತಂಕಕ್ಕೆ AIIMS ಉತ್ತರ! 

ನಾನು ನಿಂತ ಜಾಗದಿಂದಲೇ ಅಲ್ಲಿ ನಡೆಯುತ್ತಿರುವುದನ್ನು ಗಮನಿಸಿದೆ ನೆರೆದಿದ್ದ ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿಯ ನಡುವೆ ಸಣ್ಣದಾಗಿ ಜಗಳ ನಡೆಯುತ್ತಿತ್ತು. ಆದರೆ ಯಾಕೆಂದು ತಿಳಿಯಲಿಲ್ಲ. ಅಲ್ಲಿನ ಸೆಕ್ಯುರಿಟಿಯೊಬ್ಬ ಬಿಟ್ಟೂ ಬಿಡದೆ ಅಲ್ಲಿದ್ದವರನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದ ಕೆಲವೊಮ್ಮೆ ಗದರುತ್ತಿದ್ದ ಆದರೆ ಯಾರೊಬ್ಬರೂ ಅವನ ಮಾತನ್ನು ಕೇಳಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ.

Kannada actor Sanchari Vijay explains about Rs 5 for CT Scan in Govt hospitals vcs

ಕೊನೆಗೊಂದಷ್ಟು ಜನ ಅರ್ಥ ಮಾಡಿಕೊಂಡು ಅಂತರ ಕಾಪಾಡಿಕೊಂಡ ನಂತರ ಕೊನೆಗೂ ಒಳ ಹೋಗಲು ಸ್ವಲ್ಪ ದಾರಿಯಾಯ್ತು. ಧೈರ್ಯ ಮಾಡಿ ಒಳಗೆ ಹೋಗಿ ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆ ' ನೆನ್ನೆಯೂ ಆಸ್ಪತ್ರೆಗೆ ಬಂದಿದ್ವಿ ಆದರೆ ತಡವಾಗಿ ಬಂದಿದ್ದರಿಂದ ಲಸಿಕೆ ಸಿಗಲಿಲ್ಲ ಹಾಗಾಗಿ ಇವತ್ತು ಬೇಗ ಬಂದಿದ್ದೇವೆ ಎಷ್ಟು ಗಂಟೆಗೆ ಲಸಿಕೆ ಕೊಡಬಹುದು?' ತಕ್ಷಣಕ್ಕೆ ಸ್ಪಂದಿಸಿದ ಸಿಬ್ಬಂದಿಯೊಬ್ಬರು ಒಳ ಹೋಗಿ ಟೋಕನ್ ತಂದು ಕೊಟ್ಟವರೇ 'ಐದು ನಿಮಿಷ ಇಲ್ಲೇ ಕುಳಿತುಕೊಳ್ಳಿ ಕಂಪ್ಯೂಟರ್ ಆನ್ ಆದ ಕೂಡಲೇ ಕರೆಯುತ್ತೇವೆ' ಎಂದು ಹೇಳಿ ಒಳ ನಡೆದರು.

ನಿಧಾನವಾಗಿ ಒಬ್ಬೊಬ್ಬರೇ ಎರೆಡನೆ ಲಸಿಕೆ ಪಡೆಯಲು ಬಂದು ಸೇರಿಕೊಳ್ಳತೊಡಗಿದರು ಮತ್ತೆ ಅದೇ ಧಾವಂತ ಶುರುವಾಯ್ತು ಆಕಸ್ಮಿಕವಾಗಿ ಎಲ್ಲಿ ಯಾರು ಮುಟ್ಟಿಬಿಡುತ್ತಾರೋ ಎಂದು. ಅವರ ನಡುವೆಯೇ ದಾರಿ ಮಾಡಿಕೊಂಡು ಯಾರನ್ನೂ ಸೋಕದಂತೆ ಜಾಗರೂಕತೆಯಿಂದ ಹೊರನಡೆದು ಜೊತೆಗೆ ಬಂದಿದ್ದವರನ್ನು ಕರೆದುಕೊಂಡು ಒಳಗೆ ಬಂದವನೇ 'ಯಾರನ್ನೂ ಸಂಪರ್ಕಿಸಬೇಡಿ' ಎಂದು ಜಾಗ್ರತೆ ವಹಿಸಿ ಅಲ್ಲಿದ್ದ ಕಲ್ಲಿನ ಬೆಂಚಿನ ಮೇಲೆ ಕೂರಿಸಿ ನಾನೂ ಅವರ ಪಕ್ಕದಲ್ಲಿ ಕುಳಿತೆ. ಹಿಂದೆ ಏನೋ ಗಿಜಿ ಗಿಜಿ ಶಬ್ದ ಕೇಳಿಸಿದಂತಾಯ್ತು ಹಾಗೆ ಕತ್ತು ಹೊರಳಿಸಿ ಹಿಂದೆ ನೋಡಿದರೆ ಹೃದಯ ಸ್ತಬ್ಧವಾಗುವಂತಹ ದೃಶ್ಯಗಳು ಕಿಟಕಿಯಿಂದಲೇ ಕಾಣುತ್ತಿದ್ದವು. ಮೊದಲನೇ ಬಾರಿಗೆ ನನ್ನ ಕಣ್ಣಾರೆ ಆಸ್ಪತ್ರೆಯೊಂದರಲ್ಲಿ ಕೊರೊನಕ್ಕೆ ತುತ್ತಾಗಿದ್ದವರ ಪರಿಸ್ಥಿತಿಯನ್ನು ಜೊತೆಗಿದ್ದವರ ಅಸಹಾಯಕ ಸ್ಥಿತಿಯನ್ನು ನೋಡಿದ್ದು.

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'! 

ಮುಖಕ್ಕೆ ವೆಂಟಿಲೇಟರ್ ಹಾಕಿಸಿಕೊಂಡ ಮಹಿಳೆಯೋರ್ವರು ದೀರ್ಘವಾಗಿ ಏದುಸಿರು ಬಿಡುತ್ತಾ ಕುಳಿತಿದ್ದರೆ, ಮತ್ತೊಬ್ಬರು ಬೆಡ್ ಮೇಲೆ ಅಂಗಾತ ಮಲಗಿ ಡಾಕ್ಟರ್ ಹೇಳುವ ಮಾತುಗಳನ್ನು ಮುಂದೇನಾಗುವುದೋ ಎಂಬ ಆತಂಕದಲ್ಲಿ ಕೇಳಿಸಿಕೊಳ್ಳುತ್ತಿದ್ದರು, ಮಗದೊಬ್ಬರು ಮಕಾಡೆ ಮಲಗಿ ಜೋರಾಗಿ ಉಸಿರಾಡುತ್ತಿದ್ದರೆ ಅವರ ಮನೆಯವರು ಬೆನ್ನು ಸವರುತ್ತಾ ಅವರಿಗೆ ಧೈರ್ಯ ತುಂಬುವ ಮಾತುಗಳನ್ನಾಡುತ್ತಿರುವ ದೃಶ್ಯಗಳು ನನ್ನ ಮನಸ್ಸನ್ನು ಕಲಕಿಬಿಟ್ಟವು. ಅಲ್ಲಿಯ ಪರಿಸ್ಥಿತಿ ನೋಡಲಾಗದೆ ಒಮ್ಮೆಲೇ ಉಸಿರುಗಟ್ಟಿದಂತಾಗಿ ಎದ್ದುಬಿಟ್ಟೆ. ಯಾವ್ಯಾವ ಕುಟುಂಬ ಏನೇನು ಸಂಕಟದಲ್ಲಿದೆಯೋ ಇಲ್ಲಿ ಉಳಿಯುವವರಾರು ಅಳಿಯುವವರಾರು ಎಂದು ಚಿಂತಿಸಿ ಮನಸ್ಸೇ ಅಸ್ಥವ್ಯಸ್ಥವಾಗಿಬಿಟ್ಟಿತು. ಹೀಗೆ ಯೋಚಿಸುತ್ತಾ ನಿಂತಿರುವಾಗಲೇ ನನ್ನ ಮುಂದೆ ಅಂಗಾತ ಮಲಗಿದ್ದ ದೇಹವೊಂದು ನಾಲ್ಕು ಚಕ್ರದ ಸ್ಟ್ರೆಚ್ಚರ್ ಮೇಲೆ ಸಾಗಿ ಮುಂದೆ ಹೋಯ್ತು. ದಿನನಿತ್ಯ ಸಾವಿನ ಸುದ್ದಿಗಳನ್ನು ಕೇಳಿ ಬೆದರಿದ್ದ ನಾನು ಬಿಟ್ಟ ಕಣ್ಣು ಬಿಟ್ಟ ಹಾಗೆ ಆ ವ್ಯಕ್ತಿಯ ಹೊಟ್ಟೆಯನ್ನೇ ನೋಡುತ್ತಿದ್ದೆ ಉಸಿರಾಟ ನಿಂತಿದೆಯೋ ಅಥವಾ ಇನ್ನೂ ಬದುಕಿರುವರೋ ಎಂದು. ಸ್ಟ್ರೆಚ್ಚರ್ ಅಷ್ಟು ದೂರ ಸಾಗಿದರೂ ನನ್ನ ಪ್ರಶ್ನೆಗೆ ಉತ್ತರವೇ ಸಿಗಲಿಲ್ಲ.

ಒಂದು ಕಡೆ ಈಗಲೋ ಆಗಲೋ ಎಂದು ಉಸಿರಾಡುತ್ತಿರುವ ದೇಹಗಳು, ಅವರನ್ನು ಉಳಿಸಿಕೊಡುವಂತೆ ಅಂಗಲಾಚುತ್ತಿರುವ ಅವರ ಕುಟುಂಬದವರು, ಮತ್ತೊಂದು ಕಡೆ ಲಸಿಕೆಗಾಗಿ ಗಂಟೆಗಟ್ಟಲೆ ಕಾಯ್ದು ಕೂತ ಹಿರಿಯ ಜೀವಗಳು, ಇನ್ನೊಂದು ಕಡೆ ಸಾವಿರಾರು ರೂಪಾಯಿ ಹೊಂದಿಸುವ ಶಕ್ತಿಯಿಲ್ಲದೆ 5 ರುಪಾಯಿಗೆ CT ಸ್ಕ್ಯಾನ್ ಮಾಡಿಸಲು ಮುಗಿಬಿದ್ದ ಬಡ ಜೀವಗಳು. ಹೀಗೆ ಜೀವಕ್ಕಾಗಿ ಬಡಿದಾಡುತ್ತಿದ್ದವರ ಮಧ್ಯೆ ನಿಂತ ನನಗೆ ಅನ್ನಿಸಿದ್ದು ಈ ಜೀವ ನೀರಿನ ಮೇಲಿನ ಗುಳ್ಳೆ ಯಾವಾಗ ಬೇಕಾದರೂ ಒಡೆದು ಹೋಗಬಹುದೆಂದು.

ಹೀಗೆ ಯೋಚಿಸುತ್ತಾ ಅರೆ ಕ್ಷಣ ಕಣ್ಮುಚ್ಚಿ ಬಿಡುವಷ್ಟರಲ್ಲೇ ಎರೆಡನೇ ಲಸಿಕೆ ಪಡೆಯಲು ವಯಸ್ಸಾದವರ ದಂಡೇ ಅಲ್ಲಿ ಸೇರಿತ್ತು. ಅವರೆಲ್ಲರ ಮುಖದಲ್ಲಿ ತಾನು ಬದುಕಬೇಕು ಬದುಕಿ ಇನ್ನೂ ಹತ್ತಾರು ವರ್ಷ ತನ್ನ ಕುಟುಂಬದವರ ಜೊತೆ ಕಾಲ ಕಳೆಯಬೇಕು ಎನ್ನುವ ಆಸೆಯಾಶಾಭಾವನೆ ಕಾಣಿಸುತ್ತಿತ್ತು. ಆ ಇಳಿ ವಯಸ್ಸಿನಲ್ಲೂ ಮಕ್ಕಳಂತೆ ಕ್ಯೂನಲ್ಲಿ ನಿಲ್ಲಲು ಪರದಾಡುತ್ತಿದ್ದದ್ದು ನೋಡಿ ಮಮ್ಮಲ ಮರುಗಿದೆ.

ಒಬ್ಬೊಬ್ಬರದ್ದು ಒಂದೊಂದು ರೀತಿಯ ದುಗುಡ, ಆತಂಕ, ನೂರಾರು ಪ್ರಶ್ನೆಗಳು. ಲಸಿಕೆ ಖಂಡಿತ ನಮಗೆ ಸಿಗುತ್ತೆ ಅಲ್ಲವಾ? ನಾನು ಇದು ಮೊದಲನೇ ಬಾರಿ ತೆಗೆದುಕೊಳ್ಳುತ್ತಿದ್ದೇನೆ ಇದಕ್ಕೆ ಪ್ರೊಸೀಜರ್ ಏನು? ನಾವು ಬೆಳಗ್ಗೆ 8ಗಂಟೆಯಿಂದಲೇ ಕಾಯುತ್ತಿದ್ದೇವೆ ಎಷ್ಟು ಗಂಟೆಗೆ ಟೋಕನ್ ಕೊಡುತ್ತಾರೆ? ನಮ್ಮ ಯಜಮಾನರಿಗೆ ಜಾಸ್ತಿ ಹೊತ್ತು ನಿಲ್ಲಲು ಆಗಲ್ಲ ನಮಗೆ ಲಸಿಕೆ ಬೇಗ ಕೊಡಬಹುದೇ? ಎಂದು ದೈನ್ಯತೆಯಿಂದ ಕೇಳಿಕೊಂಡರೆ ಇನ್ನೊಬ್ಬರು 'ಕ್ಯೂನಲ್ಲಿ ಬೆಳಗ್ಗೆಯಿಂದಲೇ ನಿಂತಿದ್ದೇವೆ ನೀವು ಹೀಗೆ ಯಾರೋ ಈಗ ಬಂದವರನ್ನು ಮುಂದೆ ಕಳಿಸಿದರೆ ಹೇಗೆ? ಎಂದು ಗಟ್ಟಿದನಿಯಲ್ಲಿ ಗದರುವ ಹೊತ್ತಿಗೆ ಗೇಟಿನ ಹೊರಗಿನಿಂದ ಓಡೋಡಿ ಬಂದ ನೋಡಲ್ ಆಫೀಸರ್ ಒಬ್ಬರು ದುಃಖದ ಕಟ್ಟೆಯೊಡೆದು ಅಲ್ಲಿದ್ದ ಹಿರಿಯ ವೈದ್ಯರೊಬ್ಬರಿಗೆ 'ನೋಡಿ ಸರ್ ನಾವು ಮನೆ ಮಠ ಎಲ್ಲ ಬಿಟ್ಟು, ನಮ್ಮ ಸಂಸಾರವನ್ನು ದೂರಮಾಡಿಕೊಂಡು, ನೂರಾರು ಜನರ ಒಳಿತಿಗಾಗಿ ನಮ್ಮ ಜೇವವನ್ನೂ ಲೆಕ್ಕಿಸದೆ ಎಲ್ಲರ ಜೊತೆ ಬಡಿದಾಡಿ ನಿಂತು ಲಸಿಕೆ ಕೊಡಿಸುತ್ತಿದ್ದೇವೆ. ಆದರೆ ಅಲ್ಲಿ ನೋಡಿ ಜನ ಜಂಗುಳಿ ಯಾರೋ ಒಬ್ಬ ನಮ್ಮ ಆಸ್ಪತ್ರೆಯಲ್ಲಿ 5 ರುಪಾಯಿಗೆ CT ಸ್ಕ್ಯಾನ್ ಮಾಡಿಸಿಕೊಂಡು ಇಂತಹ ಸರ್ಕಾರೀ ಆಸ್ಪತ್ರೆಯಲ್ಲಿ ಕೇವಲ 5 ರುಪಾಯಿಗೆ CT ಸ್ಕ್ಯಾನ್ ಮಾಡಿ ಕೊಡುತ್ತಾರೆ ಎಂದು ವಿಡಿಯೋ ಮಾಡಿ ಹಾಕಿದ್ದಾನೆ. ಅವನು ಕೊಟ್ಟಿರುವ ಸಂದೇಶವೇನೋ ಸರಿಯಾಗಿದೆ ಆದರೆ ಅದರಿಂದ ಇಲ್ಲಿ ಆಗುತ್ತಿರುವ ಅವಾಂತರ ನೋಡಿ, ಸ್ಕ್ಯಾನ್ ಗಾಗಿ ಜನ ಹೇಗೆ ದಂಡಿಯಾಗಿ ಸೇರುತ್ತಿದ್ದಾರೆ, ಹೀಗೆ ಜನ ಸೇರಿದರೆ ಖಂಡಿತ ನಾವು ವೈದ್ಯರು ನರ್ಸುಗಳು ಯಾರು ಬದುಕಿ ಉಳಿಯುವುದಿಲ್ಲ ಸರ್, ದಯವಿಟ್ಟು ಇದಕ್ಕೆ ಏನಾದರು ಪರಿಹಾರ ಹುಡುಕಿ ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದರು'. ಅಸಹಯಕರಾಗಿ ನಿಂತು ಕೇಳಿಸಿಕೊಳ್ಳುತ್ತಿದ್ದ ವೈದ್ಯರು ಅವರಿಗೆ ಏನೋ ಸಮಾಧಾನ ಹೇಳಿ ಒಳಗೆ ಕರೆದುಕೊಂಡು ಹೋದರು.

ನನ್ನೆದುರು ನಡೆದ ಈ ಘಟನೆಯಿಂದ ಕೇಳಿಸಿಕೊಂಡ ಮಾತುಗಳಿಂದ ನನ್ನ ಜಂಘಾಬಲವೇ ಉದುಗಿ ಹೋಯಿತು. ನಮಗಾಗಿ ಹಗಲು ರಾತ್ರಿ ಕಷ್ಟ ಪಡುತ್ತಿರುವ ಆಸ್ಪತ್ರೆ ಸಿಬ್ಬಂದಿಗೆ ಏನಾದರೂ ಹೆಚ್ಚುಕಡಿಮೆಯಾದರೆ ನಮ್ಮ ಗತಿಯೇನು ಒಂದು ಕ್ಷಣ ಉಸಿರೇ ನಿಂತು ಹೋದಂತಾಯ್ತು. ಆ ಕ್ಷಣಕ್ಕೆ ನನ್ನ ನೆನಪಿಗೆ ಬಂದಿದ್ದು ಮೊನ್ನೆಯಷ್ಟೇ ಮುಂದೆ ಬರಲಿರುವ ಮೂರನೆಯ ಅಲೆಯ ಎಚ್ಚರಿಕೆ ಕೊಟ್ಟ ಮತ್ತು ಅದು ಬಂದಾಗ ಆಸ್ಪತ್ರೆ ಸಿಬ್ಬಂದಿಯ ಕೊರತೆಯಿಂದ ಮುಂದೆ ಆಗಬಹುದಾದ ಅನಾಹುತದ ಕುರಿತು ಮಾತನಾಡಿದ ಡಾ. ದೇವಿ ಶೆಟ್ಟಿಯವರ ಮಾತು.

ಎಷ್ಟು ಬೇಗ ಲಸಿಕೆ ಕೊಟ್ಟಾರೋ ಎಷ್ಟು ಬೇಗ ಗೂಡು ಸೇರುವೆವೋ ಎಂದು ಹಲುಬುವಂತಾಯ್ತು. ಅಷ್ಟು ಹೊತ್ತಿಗೆ ಆ ಕಡೆಯಿಂದ ಟೋಕನ್ ನಂಬರ್ ಒನ್ ಅಂದರು ಒಳಗೆ ನಡೆದು ಲಸಿಕೆ ಪಡೆದದ್ದೇ ಓಡೋಡಿ ಬಂದು ಕಾರು ಹತ್ತಿ ಕೈಯ್ಯನ್ನು ಸ್ಯಾನಿಟೈಸರ್ನಿಂದ ತೊಳೆದು, ಮುಖಕ್ಕೆ ಮಾಸ್ಕ್ ಏರಿಸಿ ಮನೆಕಡೆ ಗಾಡಿ ತಿರುಗಿಸಿದವನೇ, ಏನೇನೋ ಧಾವಂತದ ಪ್ರಶ್ನೆಗಳು ಮನಸ್ಸಲ್ಲಿ ಬುಗ್ಗೆಗಳಂತೆ ಏಳತೊಡಗಿದವು. ಪಕ್ಕ ಕುಳಿತವರಿಗೆ ಕೇಳಿದರೆ ಎಲ್ಲಿ ಧೈರ್ಯ ಕಳೆದುಕೊಂಡು ಬಿಡುತ್ತಾರೋ ಎಂದು ತುಟಿಕ್ ಪಿಟಿಕ್ ಅನ್ನದೆ ವಿಗ್ರಹದಂತೆ ಕುಳಿತು ಮನೆ ಸೇರುವ ತನಕ ದಾರಿಯನ್ನು ಬಿಟ್ಟರೆ ಆಚೀಚೆ ತಿರುಗದೆ ಗಾಡಿ ಓಡಿಸಿದೆ.

ನಾವೆಲ್ಲರೂ ಜಾಗರೂಕರಾಗಬೇಕಾಗಿದೆ.

ಜವಾಬ್ದಾರಿ ನಮ್ಮದು.

Stay home stay safe.

ನಿಜಕ್ಕೂ ಆಸ್ಪತ್ರೆಯ ಸಿಬ್ಬಂದಿಗೊಂದು ನನ್ನ ಸಲಾಂ🙏

-ಸಂಚಾರಿ ವಿಜಯ್

Latest Videos
Follow Us:
Download App:
  • android
  • ios