ನಟಿ ಹಿತಾ ಚಂದ್ರಶೇಖರ್ ಹಾಗೂ ನಟ ಕಿರಣ್ ಶ್ರೀನಿವಾಸ್ ದಂಪತಿ ಮಕ್ಕಳನ್ನು ಹೊಂದದಿರಲು ನಿರ್ಧರಿಸಿರುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ..
ಮದುವೆಯಾದ ಬಳಿಕ ಮಕ್ಕಳನ್ನು ಹೊಂದಬೇಕು ಎನ್ನುವುದು ಬಹುತೇಕ ದಂಪತಿಗಳ ಸಹಜ ಬಯಕೆ. ಆದರೆ, ಜೀವನದ ವಿಚಾರದಲ್ಲಿ ಪ್ರತಿಯೊಬ್ಬರ ಆಯ್ಕೆಯೂ ವಿಭಿನ್ನವಾಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ ನಿಲ್ಲುವ ಜೋಡಿಗಳಲ್ಲಿ ನಟಿ ಹಿತಾ ಚಂದ್ರಶೇಖರ್ ಹಾಗೂ ನಟ ಕಿರಣ್ ಶ್ರೀನಿವಾಸ್ ಕೂಡ ಒಬ್ಬರು. ಮದುವೆಯಾಗಿ ಹಲವು ವರ್ಷಗಳಾಗಿದ್ದರೂ, ಈ ದಂಪತಿ ಮಕ್ಕಳನ್ನು ಹೊಂದದಿರಲು ನಿರ್ಧರಿಸಿದ್ದಾರೆ.
ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಇದೀಗ ಕಿರಣ್ ಶ್ರೀನಿವಾಸ್ ಬಹಿರಂಗವಾಗಿ ಮಾತನಾಡಿದ್ದಾರೆ. ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ನಿರ್ಧಾರದ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ಮಾತನಾಡಿರುವ ಅವರು, ಮಗುವಿನ ಜವಾಬ್ದಾರಿ ತೆಗೆದುಕೊಳ್ಳಲು ತಾನು ಸಿದ್ಧನಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಮದುವೆಗೂ ಮುನ್ನವೇ ಮಕ್ಕಳಿಲ್ಲ ಎಂಬ ನಿರ್ಧಾರ
ಕಿರಣ್ ಶ್ರೀನಿವಾಸ್ ಅವರ ಮಾತಿನ ಪ್ರಕಾರ, ಮಕ್ಕಳನ್ನು ಹೊಂದಬಾರದು ಎಂಬ ನಿರ್ಧಾರವನ್ನು ಅವರು ಮದುವೆಯಾದ ನಂತರ ತೆಗೆದುಕೊಂಡಿದ್ದಲ್ಲ. ಬದಲಿಗೆ, ಮದುವೆಗೂ ಮುನ್ನವೇ ಈ ಬಗ್ಗೆ ತಮ್ಮದೇ ಆದ ನಿರ್ಧಾರ ಹೊಂದಿದ್ದರು. ಮದುವೆಯ ಬಗ್ಗೆಯೂ ಆರಂಭದಲ್ಲಿ ತಮಗೆ ಹೆಚ್ಚಿನ ಆಸಕ್ತಿ ಇರಲಿಲ್ಲ ಎಂದು ಹೇಳಿರುವ ಕಿರಣ್, ಮಕ್ಕಳನ್ನು ಹೊಂದುವ ವಿಚಾರ ಸಂಪೂರ್ಣವಾಗಿ ತಮ್ಮ ವೈಯಕ್ತಿಕ ಆಯ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಪ್ರಕಾರ, ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಮಕ್ಕಳು ಇದ್ದಾರೆ. ಒಂದು ಮಗುವಿಗೆ ತಮ್ಮಿಂದ ಸಹಾಯ ಮಾಡಬೇಕು ಎನ್ನಿಸಿದರೆ, ಅಗತ್ಯವಿರುವ ಮಗುವಿಗೆ ಜೀವನ, ಶಿಕ್ಷಣ ಹಾಗೂ ಉತ್ತಮ ಭವಿಷ್ಯ ಕಲ್ಪಿಸಲು ತಾವು ಸಿದ್ಧರಿರುವುದಾಗಿ ಹೇಳಿದ್ದಾರೆ.
‘ನನ್ನ ಜನರೇಷನ್ ಕಂಟಿನ್ಯೂ ಆಗಬೇಕು ಅನ್ನೋದು ನನಗಿಲ್ಲ’
ಮಕ್ಕಳನ್ನು ಹೊಂದುವ ವಿಚಾರದಲ್ಲಿ ಕಿರಣ್ ಶ್ರೀನಿವಾಸ್ ಅವರ ನಿಲುವು ಸಾಕಷ್ಟು ಸ್ಪಷ್ಟವಾಗಿದೆ. ತಮ್ಮ ರಕ್ತ ಅಥವಾ ತಮ್ಮ ಜನರೇಷನ್ ಮುಂದುವರಿಯಬೇಕು ಎಂಬ ಕಾರಣಕ್ಕಾಗಿ ಮಗು ಬೇಕು ಎನ್ನುವ ಆಲೋಚನೆ ತಮ್ಮಲ್ಲಿಲ್ಲ ಎಂದು ಅವರು ಹೇಳಿದ್ದಾರೆ. ಅದರಲ್ಲೂ ಮುಖ್ಯವಾಗಿ, ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ತಾನು ಸಿದ್ಧನಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ತಮ್ಮ ತಂದೆ-ತಾಯಿ ತಮ್ಮನ್ನು ಅದ್ಭುತವಾಗಿ ಬೆಳೆಸಿದ್ದಾರೆ. ಆದರೆ, ತಾವು ಕೂಡ ಅದೇ ರೀತಿಯಲ್ಲಿ ಮಗುವನ್ನು ಬೆಳೆಸುತ್ತೇನೆ ಎಂಬ ವಿಶ್ವಾಸ ತಮ್ಮಲ್ಲಿಲ್ಲ. ಈ ಕಾರಣವೂ ತಮ್ಮ ನಿರ್ಧಾರದ ಹಿಂದೆ ಇದೆ ಎಂದು ಕಿರಣ್ ಶ್ರೀನಿವಾಸ್ ಹೇಳಿದ್ದಾರೆ.
ಹಿತಾ ಚಂದ್ರಶೇಖರ್ ಅವರಿಗೂ ಇದೇ ಅಭಿಪ್ರಾಯ
ಕಿರಣ್ ಶ್ರೀನಿವಾಸ್ ಅವರ ಪತ್ನಿ ಹಿತಾ ಚಂದ್ರಶೇಖರ್ ಕೂಡ ಈ ಹಿಂದೆ ಮಕ್ಕಳ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ತಮಗೆ ಮಗು ಬೇಕು ಎನ್ನುವ ಭಾವನೆ ಮೂಡಿಲ್ಲ ಎಂದು ಹೇಳಿದ್ದ ಹಿತಾ, ಇಂದಿನ ಜಗತ್ತಿನ ಪರಿಸ್ಥಿತಿಯನ್ನು ನೋಡಿದಾಗ ಮತ್ತೊಂದು ಮಗುವನ್ನು ಈ ಜಗತ್ತಿಗೆ ಕರೆತರುವ ಬಗ್ಗೆ ಯೋಚಿಸುವಂತಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ತಮ್ಮ ಮುದ್ದಿನ ನಾಯಿಮರಿಯನ್ನು ಕೂಡ ಮಗುವಿನಂತೆ ಸಾಕಬಹುದು ಎಂಬ ರೀತಿಯಲ್ಲಿ ಹಿತಾ ಈ ಹಿಂದೆ ಮಾತನಾಡಿದ್ದರು.
ಪೋಷಕರಿಂದಲೂ ಸಂಪೂರ್ಣ ಬೆಂಬಲ
ಮಕ್ಕಳು ಬೇಡ ಎಂಬ ತಮ್ಮ ನಿರ್ಧಾರಕ್ಕೆ ಎರಡೂ ಕುಟುಂಬಗಳಿಂದಲೂ ಬೆಂಬಲವಿದೆ ಎಂದು ಹಿತಾ ಚಂದ್ರಶೇಖರ್ ಈ ಹಿಂದೆ ಹೇಳಿದ್ದರು. ತಂದೆ ಸಿಹಿ ಕಹಿ ಚಂದ್ರು ಹಾಗೂ ತಾಯಿ ಸಿಹಿ ಕಹಿ ಗೀತಾ ಕೂಡ ತಮ್ಮ ನಿರ್ಧಾರವನ್ನು ಪ್ರಶ್ನಿಸಿಲ್ಲ ಎಂದು ಅವರು ತಿಳಿಸಿದ್ದರು. ಹೀಗಾಗಿ, ಕಿರಣ್ ಮತ್ತು ಹಿತಾ ಅವರ ‘ಮಕ್ಕಳು ಬೇಡ’ ಎಂಬ ನಿರ್ಧಾರ ದಿಢೀರ್ ತೆಗೆದುಕೊಂಡದ್ದಲ್ಲ. ಇಬ್ಬರೂ ತಮ್ಮ ವೈಯಕ್ತಿಕ ನಿಲುವು ಹಾಗೂ ಜೀವನದ ಆದ್ಯತೆಗಳನ್ನು ಅರ್ಥಮಾಡಿಕೊಂಡು ತೆಗೆದುಕೊಂಡ ನಿರ್ಧಾರ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಕಿರಣ್-ಹಿತಾ ಪ್ರೇಮಕಥೆ
ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಹಲವು ವರ್ಷಗಳ ಪ್ರೀತಿಯ ಬಳಿಕ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿತಾ ಸ್ಯಾಂಡಲ್‌ವುಡ್‌ನಲ್ಲಿ ‘ಒಂಥರಾ ಬಣ್ಣಗಳು’, ‘¼ ಕೆಜಿ ಪ್ರೀತಿ’, ‘ಯೋಗಿ ದುನಿಯಾ’, ‘ತುರ್ತು ನಿರ್ಗಮನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಕಿರಣ್ ಶ್ರೀನಿವಾಸ್ ‘ಹಾಗೆ ಸುಮ್ಮನೆ’, ‘ಪ್ರೀತಿಯಿಂದ ರಮೇಶ್’, ‘ಚಿರು’, ‘ಕಾಂಚನಾ’, ‘ಜ್ಯೂನಿಯರ್’, ‘ಬೇಲ್’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಕಿರುತೆರೆಯಲ್ಲೂ ಅವರು ಗುರುತಿಸಿಕೊಂಡಿದ್ದಾರೆ.
ಸದ್ಯ ಈ ದಂಪತಿಯ ಮಕ್ಕಳ ಕುರಿತ ನಿರ್ಧಾರ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ‘ಮಕ್ಕಳು ಬೇಡ’ ಎನ್ನುವುದು ಕೂಡ ಪ್ರತಿಯೊಬ್ಬ ದಂಪತಿಯ ವೈಯಕ್ತಿಕ ಆಯ್ಕೆ ಎಂಬ ವಿಚಾರವನ್ನು ಕಿರಣ್ ಶ್ರೀನಿವಾಸ್ ಅವರ ಮಾತುಗಳು ಮುನ್ನೆಲೆಗೆ ತಂದಿವೆ.


