ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯನದ, ಉಮಾಪತಿ ನಿರ್ಮಾಣ ಹಾಗೂ ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಸಿನಿಮಾ ಬಿಡುಗಡೆಯಾದ 17 ದಿನಕ್ಕೇ 100 ಕೋಟಿ ಕ್ಲಬ್ ಸೇರಿದೆ.  ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ಅಭಿಮಾನಿಗಳಿಗೆ ದರ್ಶನ್‌ ಹಾಗೂ ಚಿತ್ರದ ತಂಡ ಧನ್ಯವಾದ ತಿಳಿಸಲು ವಿಜಯ ಯಾತ್ರೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಯಾವ ಊರಿಗೆ ಯಾವ ಸಮಯಕ್ಕೆ ಭೇಟಿ ಮಾಡುತ್ತಾರೆ ಎಂಬುದರ ಬಗ್ಗೆಯೂ ಮಾಹಿತಿ  ಹಂಚಿಕೊಂಡಿದ್ದರು. 

ರಾಬರ್ಟ್‌ ಚಿತ್ರದ 'ರಾಮ ನಾಮ' ವಿಡಿಯೋ ಸಾಂಗ್ ರಿಲೀಸ್! 

ದರ್ಶನ್ ಆಗಮನಕ್ಕೆ ಸಿದ್ಧತೆ ಮಾಡಿಕೊಳ್ಳಿತ್ತಿದ್ದ ಅಭಿಮಾನಿಗಳ ಜೊತೆ ಬೇಸರದ ಸಂಗತಿಯೊಂದನ್ನು ಇದೀಗ ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಂಚಿಕೊಂಡಿದ್ದಾರೆ.  'ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯ ಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದ ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಭೀತಿ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ. ನಿಮ್ಮ ಆರೋಗ್ಯವೇ ನಮ್ಮ ಹಾಗೂ ಸರ್ಕಾರದ ಮೊದಲ ಆದ್ಯತೆ. ದಯಮಾಡಿ ಮಾಸ್ಕ್ ಧರಿಸಿ, ನಿಮ್ಮ ಜಾಗೃತೆಯಲ್ಲಿರಿ. ಈಗಿನ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ, ನಾವು ಖಂಡಿತ ನಿಮ್ಮ ಊರಿಗೆ ಆಗಮಿಸುತ್ತೇವೆ. ನಿಮ್ಮ ಪ್ರೀತಿ-ವಿಶ್ವಾಸ ಸದಾ ಹೀಗೆ ಇರಲಿ. ಇಂತಿ ನಿಮ್ಮ ಪ್ರೀತಿಯ ದಾಸ,' ಎಂದು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

100 ಕೋಟಿ ಕಲೆಕ್ಷನ್ ಮುಟ್ಟಲಿದೆ ದರ್ಶನ್ ರಾಬರ್ಟ್‌ ಸಿನಿಮಾ?

"

ಇತ್ತೀಚಿನ ದಿನಗಳಲ್ಲಿ ಬಿಗ್ ಬಜೆಟ್ ಸಿನಿಮಾಗಳ ಆಡಿಯೋ ರಿಲೀಸ್, ಪ್ರಿ ರಿಲೀಸ್ ಹಾಗೂ ಸಕ್ಸಸ್‌ ಮೀಟ್‌ ಅದ್ಧೂರಿಯಾಗಿ ನಡೆಯುತ್ತವೆ.  ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ದುನಿಯಾ ವಿಜಯ್ 'ಸಲಗ' ಚಿತ್ರದ ಪ್ರಚಾರವನ್ನು ತುಂಬಾನೇ ಡಿಫರೆಂಟ್ ಆಗಿ ಮಾಡಿದ್ದಾರೆ. ಊರೂರಿನಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಿ ಸ್ಥಳೀಯ ಆಟಗಾರರನ್ನು ಗುರುತಿಸಿ ಗೌರವಿಸಿದ್ದಾರೆ. ಅಲ್ಲದೇ ಚಿತ್ರದ ಪ್ರಿ ರಿಲೀಸ್‌ ಕಾರ್ಯಕ್ರಮವನ್ನು ಹೊಸಕೋಟೆಯಲ್ಲಿ ಮಾಡುವುದಾಗಿ ತಿಳಿಸಿದ್ದಾರೆ. ಪುನೀತ್ ರಾಜ್‌ಕುಮಾರ್ 'ಯುವ ಸಂಭ್ರಮ'ದ ಪ್ರಯುಕ್ತ ಉತ್ತರ ಕನ್ನಡದಿಂದ ಮೈಸೂರಿನವರೆಗೂ ಯಾತ್ರೆ ಮೂಲಕ ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿ ಯಶಸ್ಸು ಕಾಣುತ್ತಿರುವ ರಾಬರ್ಟ್‌ ಚಿತ್ರ ತಂಡ, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಲು ಹಮ್ಮಿಕೊಂಡಿದ್ದ ವಿಜಯ ಯಾತ್ರೆಗೆ ಸರಕಾರ ನೀಡಿದ ಅನುಮತಿಯನ್ನೂ ಹಿಂಪಡೆದುಕೊಂಡಿದೆ.  ಮುಂಬರುವ ದಿನಗಳಲ್ಲಿ ಭೇಟಿ ಆಗೋಣ ಎಂದು ರಾಬರ್ಟ್‌ ತಂಡ ತಿಳಿಸಿದೆ.