Asianet Suvarna News Asianet Suvarna News

Lata Mangeshkar ಗಾಯನ ಲೋಕದ ಮಹಾರಾಣಿ: ಹಿರಿಯ ನಟ ಅನಂತ್ ನಾಗ್

ಆವತ್ತು ಕೇಳಿದ ಆ ಹಾಡು ಇವತ್ತಿಗೂ ನನ್ನ ಕಿವಿಯಲ್ಲಿದೆ. ಮನಸ್ಸಲ್ಲಿದೆ. ಆ ದನಿ, ಆ ಹಾಡು ನನ್ನ ಜೊತೆಗೇ ಸಾಗಿ ಬಂದಿದೆ. ಅನಂತರ ‘ಝನಕ್‌ ಝನಕ್‌ ಪಾಯಲ್‌ ಬಾಜೆ’ ಚಿತ್ರದಲ್ಲಿ ರಫಿ ಮತ್ತು ಲತಾ ಜೋಡಿಯ ಗಾಯನ ಗುಂಗು ಹಿಡಿಸಿತ್ತು. ಎಲ್ಲಿ ನೋಡಿದರಲ್ಲಿ ಗಾಯಕರು ಲತಾ ಹಾಡುಗಳನ್ನೇ ಹಾಡುತ್ತಿದ್ದರು. ಜನ ಖುಷಿಯಿಂದ ಕೇಳುತ್ತಿದ್ದರು.
 

Kannada Actor Anant Nag Pays Last Tributes to Lata Mangeshkar gvd
Author
Bangalore, First Published Feb 7, 2022, 7:37 AM IST

ಅನಂತ್ ನಾಗ್, ಹಿರಿಯ ನಟ

ಚಿಕ್ಕಂದಿನಲ್ಲಿ ನಾನು ಉತ್ತರ ಕನ್ನಡದ ಶಿರಾಲಿಯಲ್ಲಿದ್ದೆ. ನಮ್ಮ ತಂದೆ ಅಲ್ಲಿ ಚಿತ್ರಾಪುರ ಮಠದಲ್ಲಿದ್ದರು. ಹೊನ್ನಾವರ ಮತ್ತು ಭಟ್ಕಳ ನಮ್ಮ ಊರಿಗೆ ಹತ್ತಿರದ ಜಾಗಗಳು. ಅಲ್ಲಿ ಎರಡು ಟಾಕೀಸ್‌ ಇತ್ತು. ಚಿತ್ರಾಪುರ ಮಠದಿಂದ ಭಟ್ಕಳಕ್ಕೆ ಇದ್ದ ದೂರ ಮೂರು ಮೈಲು. ಹೊನ್ನಾವರಕ್ಕೆ 18 ಕಿಮೀ. ನಾವು ಭಟ್ಕಳಕ್ಕೆ ಸಿನಿಮಾ ನೋಡುವುದಕ್ಕೆ ಎತ್ತಿನ ಗಾಡಿ ಕಟ್ಟಿಕೊಂಡು ಹೋಗುತ್ತಿದ್ದೆವು. ಬೈಲಹೊಂಗಲದ ಸುಂದರವಾದ ಕೋಡುಗಳುಳ್ಳ ಎತ್ತುಗಳ ಆ ಗಾಡಿಯ ಮೇಲೆ ಮಾಡು ಕಟ್ಟುತ್ತಿದ್ದೆವು. ಹಾಗೆ ಎತ್ತಿನಗಾಡಿಯಲ್ಲಿ ಹೋಗಿ ನಾನು ನೋಡಿದ ಸಿನಿಮಾ ವಿ.ಶಾಂತಾರಾಮ್‌ ನಿರ್ದೇಶನದ ‘ದೋ ಆಂಖೇ ಬಾರಾ ಹಾತ್‌.’ ಆ ಸಿನಿಮಾದಲ್ಲಿನ ‘ಏ ಮಾಲಿಕ್‌ ತೇರೆ ಬಂದೇ ಹೈ ಹಮ್‌’ ಎಂಬ ಹಾಡಿನಲ್ಲಿ ನನಗೆ ಸಿಕ್ಕರು ಲತಾ ಮಂಗೇಶ್ಕರ್‌.

ಆವತ್ತು ಕೇಳಿದ ಆ ಹಾಡು ಇವತ್ತಿಗೂ ನನ್ನ ಕಿವಿಯಲ್ಲಿದೆ. ಮನಸ್ಸಲ್ಲಿದೆ. ಆ ದನಿ, ಆ ಹಾಡು ನನ್ನ ಜೊತೆಗೇ ಸಾಗಿ ಬಂದಿದೆ. ಅನಂತರ ‘ಝನಕ್‌ ಝನಕ್‌ ಪಾಯಲ್‌ ಬಾಜೆ’ ಚಿತ್ರದಲ್ಲಿ ರಫಿ ಮತ್ತು ಲತಾ ಜೋಡಿಯ ಗಾಯನ ಗುಂಗು ಹಿಡಿಸಿತ್ತು. ಎಲ್ಲಿ ನೋಡಿದರಲ್ಲಿ ಗಾಯಕರು ಲತಾ ಹಾಡುಗಳನ್ನೇ ಹಾಡುತ್ತಿದ್ದರು. ಜನ ಖುಷಿಯಿಂದ ಕೇಳುತ್ತಿದ್ದರು.

ನಾನು ಎಂಟನೇ ಕ್ಲಾಸಿಗೆ ಮುಂಬೈಗೆ ಹೋದೆ. ಆಗ ನನಗೆ 12 ವರ್ಷ ವಯಸ್ಸು ಇರಬೇಕು. ಇಸವಿ ಅಂದಾಜು 1961-62. ಆಗ ತಾನೇ ಭಾರತದ ಮೇಲೆ ಚೀನಾ ಆಕ್ರಮಣ ಮಾಡಿತ್ತು. ಮುಂಬೈಯಲ್ಲಿ ಬ್ಲಾಕೌಟ್‌ ಘೋಷಿಸಿದ್ದರು. ರಾತ್ರಿ ಹೊತ್ತು ಇಡೀ ನಗರದಲ್ಲಿ ದೀಪಗಳೇ ಉರಿಯುತ್ತಿರಲಿಲ್ಲ. ದೀಪ ಕಂಡರೆ ಎಲ್ಲಿ ಬಾಂಬ್‌ ಹಾಕುತ್ತಾರೋ ಎಂಬ ಆತಂಕ. ಒಂದಿಡೀ ನಗರ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿತ್ತು. ಇದೆಲ್ಲವೂ ನನಗೆ ದೊಡ್ಡ ಆಘಾತ ತಂದಿತ್ತು. ಭಾರತ ಸೋತಿತ್ತು. ಅವಮಾನ ಆಗಿತ್ತು. ಇದನ್ನೆಲ್ಲಾ ಯಾರಿಗೂ ಸಹಿಸಲು ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ನೆಹರೂ ಸಮ್ಮುಖದಲ್ಲಿ ಲತಾ ಅವರು ಒಂದು ಹಾಡು ಹಾಡಿದ್ದರು.

ಏ ಮೇರೆ ವತನ್‌ ಕೆ ಲೋಗೋ
ತುಮ್‌ ಖೂಬ್‌ ಲಗಾಲೋ ನಾರಾ
ಏ ಶುಭ್‌ ದಿನ್‌ ಹೈ ಹಮ್‌ ಸಬ್‌ಕಾ
ಲಹರಾ ಲೋ ತಿರಂಗಾ ಪ್ಯಾರಾ

ಆ ಹಾಡು ಕೇಳಿ ನೆಹರೂ ಅವರ ಕಣ್ಣಲ್ಲಿ ನೀರು ಬಂದಿತ್ತು. ಅಲ್ಲಿ ಇದ್ದವರೆಲ್ಲರೂ ಭಾವುಕರಾಗಿದ್ದರು. ಆ ಹಾಡು ಇಡೀ ದೇಶದ ಹೃದಯವನ್ನು ಮೀಟಿತ್ತು. ಲತಾ ತಮ್ಮ ಹಾಡಿನ ಮೂಲಕ ನಮಗೆ ಸಮಾಧಾನ ಹೇಳಿದ್ದರು. ಅದೆಲ್ಲವೂ ನನ್ನ ಮನಸ್ಸಲ್ಲಿ ಉಳಿದುಹೋಯಿತು. ಹಾಗಾಗಿಯೇ ಅವರು ನನಗೆ ಭೀಮಸೇನ ಜೋಶಿಯವರಷ್ಟೇ ಪೂಜನೀಯವಾದರು.

ಹೇಮಾ ಅಂತಿದ್ದ ಹೆಸರು Lata Mangeshkar ಆಗಿದ್ದು ಹೇಗೆ? ಗಾನ ಕೋಗಿಲೆಯ ಇಂಟರೆಸ್ಟಿಂಗ್‌ ಡೀಟೇಲ್ಸ್

ಲತಾ ಬಡತನದಿಂದ ಬಂದವರು. ಗೋವಾ ಮೂಲದವರು. ತಂದೆ ದೀನಾನಾಥ್‌ ಮಂಗೇಶ್ಕರ್‌ ನಾಟಕಗಳಲ್ಲಿ ನಟಿಸುತ್ತಿದ್ದರು, ಹಾಡುತ್ತಿದ್ದರು. ಅವರ ಕಲೆ ಮಗಳಿಗೂ ಒಲಿದು ಬಂತು. ಆದರೆ ಹಾದಿ ಸುಲಭದ್ದಾಗಿರಲಿಲ್ಲ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಅವರು ಹೇಳಿದ್ದು ನನಗೆ ನೆನಪಿದೆ- ‘ನನಗೆ ಇನ್ನೊಂದು ಜನ್ಮ ಅಂತ ಇದ್ದರೆ ಮತ್ತೆ ಲತಾ ಮಂಗೇಶ್ಕರ್‌ ಆಗಿ ಹುಟ್ಟಿಸಬೇಡ ದೇವರೇ ಎಂದು ಪ್ರಾರ್ಥಿಸುತ್ತೇನೆ.’ ಅವರು ಲತಾ ಮಂಗೇಶ್ಕರ್‌ ಆಗುವ ಮೊದಲಿನ ಕಷ್ಟಗಳು ಎಷ್ಟಿರಬೇಕು ಎಂಬುದನ್ನು ಆ ಮಾತುಗಳು ಹೇಳದೆಯೇ ಹೇಳಿದ್ದವು.

ಅವರ ಕಾಲದಲ್ಲಿ ಬಾಲಿವುಡ್‌ನಲ್ಲಿ ಉರ್ದು ಪ್ರಾಬಲ್ಯ ಇತ್ತು. ಲತಾ ಅವರು ಉರ್ದು ಕಲಿತು ಹಾಡಿದರು. ಮರಾಠಿ ಅಭಂಗ ಕಲಿತರು. ಪ್ರತೀ ಹಾಡಿನ ಆತ್ಮವನ್ನು ದಾಟಿಸಿದರು. ಅದೇ ಕಾರಣದಿಂದ ಹಲವು ದಶಕಗಳವರೆಗೆ ಗಾಯನ ಜಗತ್ತನ್ನು ಆಳಿದರು. ಅವರಿಗೆ ಯಾರೂ ಸ್ಪರ್ಧಿಗಳಿರಲಿಲ್ಲ. ಅವರನ್ನು ಸರಿಗಟ್ಟುವ ಒಬ್ಬರೂ ಆ ಕಾಲದಲ್ಲಿ ಬರಲೇ ಇಲ್ಲ. ಒಬ್ಬರೇ ಇಡೀ ಗಾಯನ ಜಗತ್ತನ್ನು ಆಳಿದರು.

ಆಗ ಎಲ್ಲರ ಬಳಿ ರೇಡಿಯೋ ಇರುತ್ತಿರಲಿಲ್ಲ. ರೇಡಿಯೋ ಖರೀದಿಸುವುದಕ್ಕೆ ಪೋಸ್ಟ್‌ ಆಫೀಸಿನಲ್ಲಿ ಲೈಸನ್ಸ್‌ ಪಡೆಯಬೇಕಿತ್ತು. ನಾನೊಮ್ಮೆ ಯಾವುದೋ ಅಂಗಡಿಗೆ ಹೋಗಿ ರೇಡಿಯೋ ಕೇಳಿದಾಗ ಅವನು ಲೈಸನ್ಸ್‌ ಇದೆಯಾ ಎಂದು ಕೇಳಿದ್ದ. ನಾನು ಹಳ್ಳಿಯಿಂದ ಬಂದವನು ಅಂತ ಇವನಿಗೆ ಗೊತ್ತಾಯಿತಾ, ಅದಕ್ಕೇ ಮೋಸ ಮಾಡುತ್ತಿದ್ದಾನಾ ಎಂದು ಆಲೋಚಿಸಿದ್ದೆ. ಅನಂತರ ಗೆಳೆಯರಿಂದ ರೇಡಿಯೋಗೆ ಲೈಸನ್ಸ್‌ ಬೇಕು ಅನ್ನುವುದು ತಿಳಿಯಿತು. ನಾವು ಎಲ್ಲೆಲ್ಲೋ ಹೋಗಿ ಬಿನಾಕ ಗೀತಮಾಲ ಎಂಬ ರೇಡಿಯೋ ಕಾರ್ಯಕ್ರಮ ಕೇಳುತ್ತಿದ್ದೆವು. ಅದರಲ್ಲಿ 1 ಗಂಟೆಯಲ್ಲಿ 18 ಹಾಡುಗಳು ಪ್ರಸಾರವಾದರೆ ಲತಾ ಅವರದೇ ಹಾಡುಗಳು. ಡ್ಯುಯೆಟ್‌ ಇದ್ದರೆ ಲತಾ ಮತ್ತು ರಫಿ. ಸೋಲೋ ಇದ್ದರೆ ಲತಾ ಅಥವಾ ರಫಿ. ಅವರಿಬ್ಬರ ಮಧ್ಯೆಯೇ ಸ್ಪರ್ಧೆ ಇತ್ತು. ನಾವೆಲ್ಲಾ ಒಟ್ಟಿಗೆ ಕುಳಿತು ಆ ಹಾಡುಗಳನ್ನು ಕೇಳುತ್ತಾ ಬೇರೆ ಜಗತ್ತಿಗೆ ಹೋಗುತ್ತಿದ್ದವು. ನಮಗಿದ್ದ ಏಕೈಕ ಮನರಂಜನೆ ಅದು. ಆ ಕಾರಣದಿಂದಲೇ ಆ ಕಾಲದ ಗಾಯಕರು ನಮಗೆ ಹೆಚ್ಚು ಆಪ್ತರು. ಅದರಲ್ಲೂ ಲತಾ ಹೃದಯಕ್ಕೆ ಹತ್ತಿರ.

ನಂತರ ಟ್ರಾನ್ಸಿಸ್ಟರ್‌ ಬಂತು. ಎಲ್ಲರ ಕೈಯಲ್ಲೂ ಪುಟ್ಟಪುಟ್ಟ ಟ್ರಾನ್ಸಿಸ್ಟರ್‌ಗಳು ಬಂದವು. ಲತಾ ಹೆಚ್ಚೆಚ್ಚು ಜನರಿಗೆ ತಲುಪಿದರು. ನಾನು ಸಿನಿಮಾಗೆ ಬಂದ ಮೇಲೆ ನನಗೊಂದು ಆಸೆ ಇತ್ತು. ನನ್ನ ಒಂದು ಚಿತ್ರಕ್ಕೆ ರಫಿ ಅವರಿಂದ ಹಾಡಿಸಬೇಕು ಅಂತ. ‘ನಾ ನಿನ್ನ ಬಿಡಲಾರೆ’ ಸಿನಿಮಾ ಹಿಂದಿಗೆ ರಿಮೇಕ್‌ ಆಗುವ ಸಂದರ್ಭದಲ್ಲಿ ನಾನು ನಿರ್ದೇಶಕರ ಬಳಿ ರಫಿ ಬಳಿ ಒಂದು ಹಾಡು ಹಾಡಿಸಿ, ನನಗೋಸ್ಕರ ಎಂದು ಕೇಳಿಕೊಂಡಿದ್ದೆ. ನಾನು ಹಾಗೆ ಕೇಳಿಕೊಂಡ ಮಾರನೇ ದಿನದ ಪತ್ರಿಕೆಯಲ್ಲಿ ರಫಿ ನಿಧನದ ಸುದ್ದಿ ಬಂದಿತ್ತು. ಅವತ್ತು ಆದ ಸಂಕಟ ಇನ್ನೂ ಎದೆಯಲ್ಲಿ ಉಳಿದುಕೊಂಡಿದೆ. ಅದೇ ಥರದ ಸಂಕಟ ಇವತ್ತೂ ಆಗುತ್ತಿದೆ.

Lata Mangeshkar Kannada Songs: ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡುವಂತೆ ಆಗಿದ್ದು ಹೇಗೆ?

ನನಗೆ ಭೀಮಸೇನ ಜೋಶಿ ಅಂದ್ರೆ ತುಂಬಾ ಪೂಜ್ಯ ಭಾವ. ಇತ್ತೀಚೆಗೆ ಅವರ ಹುಟ್ಟುಹಬ್ಬಕ್ಕೆ ಏನೋ ಬರೆಯಬೇಕು ಅಂತ ಕುಳಿತಾಗ ತೀವ್ರವಾದ ನೋವು, ವಿಷಾದ ಆವರಿಸಿಕೊಂಡಿತು. ಎರಡು ದಿನ ಮೌನವಾಗಿ ಕುಳಿತಿದ್ದೆ. ಲತಾ ಹೋದ ಸುದ್ದಿ ಕೇಳಿ ಅದೇ ಭಾವ ಆವರಿಸಿದೆ. ಕೆಲವರು ನಮಗೆ ಗೊತ್ತಿಲ್ಲದೆಯೇ ನಮ್ಮ ಬದುಕಿನ ಭಾಗವಾಗಿ ಹೋಗಿರುತ್ತಾರೆ. ಅವರು ಇದ್ದಕ್ಕಿದ್ದಂತೆ ಹೊರಟುನಿಂತಾಗ ನಮ್ಮ ಜೀವದ, ಭಾವಕೋಶದ ತುಣುಕೊಂದನ್ನು ಕಳೆದುಕೊಂಡಂತೆ ಭಾಸವಾಗುತ್ತದೆ. ಸೂತಕ ಇಲ್ಲದೆಯೇ ಸೂತಕ ಬರುತ್ತದೆ. ಒಮ್ಮೆಲೇ ಎಲ್ಲವೂ ನಿಂತುಹೋದಂತೆ ಅನ್ನಿಸುತ್ತದೆ. ಈ ಹೊತ್ತಿನ ಹಾಡು ನಿಂತು ಹೋದ ಕ್ಷಣದ ಮೌನ ಬಹಳ ದಿನ ಕಾಡಲಿದೆ.

Follow Us:
Download App:
  • android
  • ios