ಹೇಮಾ ಅಂತಿದ್ದ ಹೆಸರು Lata Mangeshkar ಆಗಿದ್ದು ಹೇಗೆ? ಗಾನ ಕೋಗಿಲೆಯ ಇಂಟರೆಸ್ಟಿಂಗ್ ಡೀಟೇಲ್ಸ್
ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ಗಾಯನ ನಿಲ್ಲಿಸಿದ್ದಾರೆ. ಆದರೆ ಅವರ ಸುಮಧುರ ಕಂಠ ಎಂದೂ ಗಾನಪ್ರಿಯರ ಮನದಲ್ಲಿರುತ್ತೆ. ಲತಾ ಅವರ ಹುಟ್ಟು ಹೆಸರು ಹೇಮಾ. ಅದು ಲತಾ ಅಂದ ಬದಲಾಗಿದ್ದು ಹಾಗೂ ಇತರ ಇಂಟರೆಸ್ಟಿಂಗ್ ಡೀಟೇಲ್ಸ್ ಇಲ್ಲಿದೆ.
ಭಾನುವಾರದ ಬೆಳಗಿಗೆ ಮಬ್ಬು ಕವಿದಂತೆ ಲತಾ (Lata Mangeshkar) ನಿಧನದ ಸುದ್ದಿ ಬಂದೆರಗಿದೆ. 92 ವರ್ಷ ವಯಸ್ಸಿನ ಈ ಗಾಯಕಿ 'ದಿ ಇಂಡಿಯನ್ ನೈಟಿಂಗೇಲ್' ಅಂತಲೇ ಪ್ರಸಿದ್ಧರಾದವರು. ಕೇವಲ 13 ವರ್ಷದ ಎಳೆಯ ಹರೆಯದಲ್ಲೇ ಅವರ ಸಂಗೀತ ಜರ್ನಿ ಶುರುವಾಯ್ತು. ಅವರ ಬಗೆಗಿನ ಕೆಲವು ಆಸಕ್ತಿಕರ ವಿಚಾರಗಳು ಇಲ್ಲಿವೆ.
1. ಲತಾ ಮಂಗೇಶ್ಕರ್ ಅವರ ತಾಯಿ ಶೇವಂತೀ ಅವರ ತಂದೆ ದೀನಾನಾಥ (Dinanath) ಮಂಗೇಶ್ಕರ್ ಅವರಿಗೆ ಎರಡನೇ ಹೆಂಡತಿ. ಶೇವಂತಿ ಅವರ ಅಕ್ಕ ನರ್ಮದಾ ಅವರೇ ದೀನಾನಾಥರ ಮೊದಲ ಹೆಂಡತಿ ಆಗಿದ್ದರು. ನರ್ಮದಾ ಚಿಕ್ಕ ವಯಸ್ಸಿನಲ್ಲಿ ನಿಧನರಾದ ಬಳಿಕ ಅವರ ತಂಗಿ ಶೇವಂತಿ ಅವರನ್ನು ದೀನಾನಾಥ ಮಂಗೇಶ್ಕರ್ ವಿವಾಹವಾದರು. 1927ರಲ್ಲಿ ದೀನಾನಾಥ ಮತ್ತು ಲತಾ ಅವರ ತಾಯಿ ಶೇವಂತಿ ಅವರ ವಿವಾಹವಾಯಿತು.
2. ಲತಾ ಮಂಗೇಶ್ಕರ್ ತಮ್ಮ ತಂದೆ ತಾಯಿಗೆ ಮೊದಲ ಮಗು. ಮದುವೆಯಾಗಿ ಎರಡು ವರ್ಷಗಳ ಬಳಿಕ ಅಂದರೆ 1929ರಲ್ಲಿ ಲತಾ ಅವರ ಜನನವಾಗುತ್ತದೆ. ಅವರ ಬಳಿಕ ಈ ದಂಪತಿಗೆ ನಾಲ್ಕು ಜನ ಮಕ್ಕಳಾಗುತ್ತಾರೆ. ಮೀನಾ, ಆಶಾ ಭೋಂಸ್ಲೇ (Asha Bhosle), ಉಷಾ ಹಾಗೂ ಹೃದಯನಾಥ್ ಎಂಬ ಮಕ್ಕಳು ಲತಾ ಜೊತೆಗೆ ಬೆಳೆಯುತ್ತಾರೆ.
ಆರಂಭದಲ್ಲಿ ನೆಲೆ ಕಾಣಲು ಹೆಣಗಿದ್ದ ಲತಾ, ಸ್ವರ ಸಾಮ್ರಾಜ್ಞೆಯಾಗಿ ಮಿಂಚಿದ್ದು ಹೇಗೆ?
3. ಲತಾ ಅವರ ತಂದೆ ದೀನಾನಾಥ ರಂಗಭೂಮಿ ಕಲಾವಿದ. ಜೊತೆಗೆ ಶಾಸ್ತ್ರೀಯ ಸಂಗೀತ ಗಾಯಕ. ಹದಿಮೂರರ ಎಳೆಯದ ವಯಸ್ಸಲ್ಲೇ ಲತಾ ಅವರನ್ನು ಗಾಯನದ ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಏಕೆಂದರೆ ಆ ಕಾಲದಲ್ಲಿ ಹೆಣ್ಣುಮಕ್ಕಳು ಮನೆಯಿಂದಾಚೆ ಹೋಗದ ಸ್ಥಿತಿ ಇತ್ತು. ಹೆಚ್ಚಿನ ಕುಟುಂಬಗಳು ಹುಡುಗಿಯರಿಗೆ ಗಾಯನ ಕಲಿಸಿದರೂ ಅದನ್ನು ಮನೆಯ ನಾಲ್ಕು ಗೋಡೆಗೆ ಸೀಮಿತಗೊಳಿಸಿದ್ದರು. ಆದರೆ ತಂದೆಯ ಒತ್ತಾಸೆಯಿಂದ ಲತಾ ಬೆಳೆಯುವುದು ಸಾಧ್ಯವಾಯಿತು.
4. ಲತಾ ಅವರ ಹುಟ್ಟು ಹೆಸರು ಲತಾ ಅಂತಲ್ಲ. ಹೇಮಾ ಅಂತ. ಆಕೆ ಹುಟ್ಟಿದಾಗ ಪ್ರೀತಿಯಿಂದ ಹೆತ್ತವರು ಹೇಮಾ ಎಂಬ ಹೆಸರಿಟ್ಟಿದ್ದರು. ಆದರೆ ಮೊದಲೇ ಹೇಳಿದಂತೆ ಲತಾ ಅವರ ತಂದೆ ರಂಗಭೂಮಿ ಕಲಾವಿದರು. ಪುಟ್ಟಮಗಳನ್ನು ಅವರು ರಂಗಭೂಮಿಗೂ ಕರೆತರುತ್ತಾರೆ. ಲತಾ ನಟಿಯಾಗಿಯೂ ಮಿಂಚುತ್ತಾರೆ. ಇಂಥಾ ಸಮಯದಲ್ಲಿ 'ಭವ ಬಂಧನ್' ಎಂಬ ನಾಟಕವನ್ನು ಆಡಿಸುತ್ತಾರೆ. ಅದರಲ್ಲಿ ಇವರು ಲತಿಕಾ ಎಂಬ ಪಾತ್ರವನ್ನು ಮಾಡುತ್ತಾರೆ. ಆ ಪಾತ್ರ ಕಲಾವಿದ ತಂದೆಗೆ ಅದೆಷ್ಟು ಇಷ್ಟವಾಗುತ್ತೆ ಅಂದರೆ ಆ ಬಳಿಕ ತಂದೆ ಮಗಳನ್ನು ಲತಾ ಅಂತಲೇ ಕರೆಯಲು ಶುರು ಮಾಡುತ್ತಾರೆ. ಕ್ರಮೇಣ ಅದೇ ಹೆಸರೇ ಉಳಿದುಬಿಡುತ್ತದೆ. ಆ ಪಾತ್ರ ಮಾಡಿದಾಗ ಲತಾ 5 ವರ್ಷದ ಪುಟ್ಟ ಪೋರಿ.
Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್ ಮಾಡಿದ್ದರು ಈ ವ್ಯಕ್ತಿ
5. ಲತಾ ಒಂದೇ ಒಂದು ದಿನ ಶಾಲೆಗೆ ಹೋಗಿದ್ದು. ಅವತ್ತು ಸ್ಕೂಲಿಗೆ ಹೋದಾಗ ಮೇಷ್ಟ್ರು ಉಳಿದ ಮಕ್ಕಳ ಮೇಲೆ ರೇಗುವ ಹಾಗೆ ಲತಾ ಮೇಲೂ ಯಾವುದೋ ಕಾರಣಕ್ಕೆ ರೇಗುತ್ತಾರೆ. ಅಕ್ಕರೆಯಲ್ಲಿ ಬೆಳೆದ ಲತಾ ಇದನ್ನು ಸಹಿಸದೇ ಇನ್ನು ಮುಂದೆ ಶಾಲೆಯ ಮೆಟ್ಟಿಲೇರುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದರಂತೆ ನಡೆದುಕೊಳ್ಳುತ್ತಾರೆ. 'ಆಗ ನಾವೆಲ್ಲ ಬಹಳ ತುಂಟ ಮಕ್ಕಳು. ಏನೇನೋ ತರಲೆ ಮಾಡುತ್ತಿದ್ದೆವು' ಎಂದು ಲತಾ ಹಿಂದೊಮ್ಮೆ ಬಾಲ್ಯದ ದಿನ ನೆನಪಿಸಿಕೊಂಡಿದ್ದರು.
6. ಲತಾ 1942ರಲ್ಲಿ 'ಕಿತಿ ಹಾಸಲ್' ಅನ್ನೋ ಸಿನಿಮಾಕ್ಕೆ ಮೊದಲ ಬಾರಿ ಹಾಡುತ್ತಾರೆ. ಆದರೆ ಈ ಸಿನಿಮಾ ಬಿಡುಗಡೆ ಆಗೋದಿಲ್ಲ. ಲತಾ ಅವರ ಮೊದಲ ಸಿನಿಮಾ ಹಾಡೂ ಬರೀ ರೆಕಾರ್ಡಿಂಗ್‌ಗಷ್ಟೇ ಸೀಮಿತಗೊಳ್ಳುತ್ತದೆ.
Lata Mangeshkar: ಶಾರದೆಯ ಪಾದ ಸೇರಿದ ಲತಾ ಮಂಗೇಶ್ಕರ್, ಹಾಡು ನಿಲ್ಲಿಸಿದ ಗಾನ ಕೋಗಿಲೆ
7. ಮುಂದೆ ಅನೇಕ ಅಡೆತಡೆಗಳನ್ನು ಎದುರಿಸಿ ಮರಾಠಿ, ಹಿಂದಿ ಚಿತ್ರಗಳ (Hindi Films) ಮೂಲಕ ಬೆಳಯುವ ಲತಾ ಬಹುಬೇಗ ತನ್ನ ಕಂಠಸಿರಿಯಿಂದ ಅದ್ಭುತ ಗಾಯಕಿಯಾಗಿ ಗುರುತಿಸಿಕೊಳ್ಳುತ್ತಾರೆ. ಅದು ಜ.27, 1963 ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಲತಾ ಅವರ ಗಾಯನ. 'ಏ ಮೇರೆ ವತನ್ ಕೆ ಲೋಗೋ..' ಎಂಬ ದೇಶಭಕ್ತಿ ಗೀತೆಯನ್ನು ಲತಾ ಅವರು ಎಷ್ಟು ಅದ್ಭುತವಾಗಿ ಹಾಡಿದರು ಅಂದರೆ ಅದನ್ನು ಕೇಳುತ್ತಿದ್ದ ಅಂದಿನ ಪ್ರದಾನಿ ನೆಹರೂ (Neharu) ಅವರ ಕಣ್ಣಿಂದ ಅಶ್ರಧಾರೆ ಸುರಿಯಿತು. ಅದಕ್ಕೂ ಮೊದಲು 1962ರ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ವೀರ ಯೋಧರಿಗೆ ಆ ಹಾಡನ್ನು ಅರ್ಪಣೆ ಮಾಡಲಾಯಿತು.