ಸಿನಿಮಾ, ಕನ್ನಡ ಪ್ರೇಮ, ಕೃಷಿ ಮತ್ತು ಚೆಂದದ ಕುಟುಂಬ... ಈ ಎಲ್ಲವೂ ಸೇರಿದರೆ ನೆನಪಿರಲಿ ಪ್ರೇಮ್‌ ಸಿಗುತ್ತಾರೆ. ಮಳೆಯಲ್ಲಿ ನೆನೆಯೋ ಪ್ರೇಮದ ನಾಯಕ, ಮೈದಾನದಲ್ಲಿ ಹೊಡೆದಾಡಬಲ್ಲ ದಳಪತಿಯೂ ಎಲ್ಲವೂ ಆಗಬಲ್ಲ ಪ್ರೇಮ್‌ಗೆ ಏಪ್ರಿಲ್‌ 18 ಹುಟ್ಟುಹಬ್ಬ ಸಂಭ್ರಮ. ಈ ಸಂಭ್ರಮವೇ ಅವರೊಂದಿಗೆ ಮಾತು-ಕತೆಗೆ ಕಾರಣ.

ನನ್ನ ಹುಟ್ಟುಹಬ್ಬ ಮತ್ತು ಅನಾಥಾಶ್ರಮ

ಏಪ್ರಿಲ್‌ 18 ನನ್ನ ಹುಟ್ಟುಹಬ್ಬ. ನಾನು ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ಅನಾಥಶ್ರಮಕ್ಕೆ ಹೋಗುತ್ತಿದ್ದೆ. ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೇ ಟ್ರ್ಯಾಕ್‌ ಬಳಿ ಇರುವ ಅನಾಥಶ್ರಮ ಅದು. ಮನೆಯಲ್ಲಿ ನಾನೇ ಅಡುಗೆ ಮಾಡಿಕೊಂಡು ಅಲ್ಲಿಗೆ ಹೋಗಿ ನಾನೇ ಎಲ್ಲರಿಗೂ ಊಟ ಬಡಿಸುತ್ತಿದ್ದೆ. ಇದು ಪ್ರತಿ ವರ್ಷ ಸಿಗುತ್ತಿದ್ದ ಖುಷಿ. ಅದು ಭಾರಿ ಸಿಕ್ಕಿಲ್ಲ ಎನ್ನುವ ಬೇಸರ ಇದೆ. ಕೊರೋನಾ ಭೀತಿ, ಲಾಕೌ ಡೌನ್‌ ಸಂಕಷ್ಟ. ಹೀಗಾಗಿ ಅನಾಥಶ್ರಮಕ್ಕೆ ಹೋಗಲು ಆಗುತ್ತಿಲ್ಲ.

ನೆನಪಿರಲಿ ಪ್ರೇಮ್‌ ಫ್ಯಾಮಿಲಿ ಇದು, ತಂದೆ, ನಡೆದು ಬಂದ ದಾರಿ

ಬಯಸದೇ ಬಂದ ಭಾಗ್ಯ

ಪ್ರೇಮಂ ಪೂಜ್ಯಂ... ಇದು ನಾನು ಬಯಸದೆ ಬಂದ ಭಾಗ್ಯ. ನನ್ನ ಹೆಸರಿನಲ್ಲೇ ನನ್ನ 25ನೇ ಸಿನಿಮಾ ಬರುತ್ತಿದೆ ಎಂದರೆ ನಾನು ಅದೃಷ್ಟವಂತ. ಯಾವುದನ್ನೂ ನಾನಾಗಿಯೇ ಕೇಳಲಿಲ್ಲ. ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ಹೆಸರಿನ ಸಮೇತ ರೆಡಿಯಾಗಿ ನನ್ನ ಮುಂದೆ ಬಂದ ಸಿನಿಮಾ ಇದು.

ಜೀರೋದಿಂದ ಹೀರೋ

ಒಮ್ಮೆ ನನ್ನ ಪಯಣವನ್ನು ನಾನೇ ಹಿಂತಿರುಗಿ ನೋಡಿದಾಗ... ಅಲ್ಲಿ ಖುಷಿ ಇದೆ. ದುಃಖ ಇದೆ. ಜೀರೋದಿಂದ ಬಂದು ಹೀರೋ ಆದ ಪ್ರೇಮ್‌ ಇದ್ದಾನೆ. ಹೀರೋ ಆದ ಮೇಲೂ ನಿಲ್ಲಕ್ಕೆ ಹೋರಾಟ ಮಾಡಿದೆ. ಪ್ರೇಕ್ಷಕರು ನನ್ನ ಮೆಚ್ಚಿಕೊಂಡರು. 25 ಸಿನಿಮಾ ಮಾಡೋದು ಕೆಲವರಿಗೆ ಸಾಧನೆ ಅನ್ನಿಸಬಹುದು, ಕೆಲವರಿಗೂ ಏನೂ ಅಲ್ಲ ಅನಿಸಬಹುದು. ಆದರೆ, ತೀರಾ ಬಡತನದ ಕುಟುಂಬದಿಂದ ಬಂದ ಏನೇನೂ ಅಲ್ಲದ ವ್ಯಕ್ತಿಯೊಬ್ಬ ನೆನಪಿರಲಿ ಪ್ರೇಮ್‌ ಆಗಿ, 25 ಸಿನಿಮಾಗಳಲ್ಲಿ ನಟಿಸಿದ್ದನ್ನು ನೋಡಿದಾಗ ನನ್ನ ಬಗ್ಗೆ ನನಗೇ ಹೆಮ್ಮೆ ಅನಿಸುತ್ತದೆ.

ಕೊರೋನಾ ಸಂಕಷ್ಟ ದೂರವಾಗಲು ನೆನ​ಪಿ​ರಲಿ ಪ್ರೇಮ್‌ ಉರುಳು ಸೇವೆ

ಬದುಕಿನ ಮೂರು ಮೆಟ್ಟಿಲು

1. ಪ್ರಕಾಶ್‌: ಪ್ರಾಣ ಎನ್ನುವ ಚಿತ್ರಕ್ಕೆ ನನ್ನ ನಾಯಕನ್ನಾಗಿ ಮಾಡಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕರು ಇವರು. ನನ್ನ ಸಿನಿಮಾ ಬದುಕಿನ ಮೊದಲು ಮೆಟ್ಟಿಲು ಆಗಿದ್ದು ಹೀಗೆ.

2. ರತ್ನಜ: ಮಾಮೂಲಿ ಪ್ರೇಮ್‌ ಹೆಸರಿಗೆ ನೆನಪಿರಲಿ ಎನ್ನುವ ಸ್ಟಾರ್‌ ಡಮ್‌ ತಂದುಕೊಟ್ಟು, ನಾನೂ ಕೂಡ ಹೀರೋ ಎಂಬ ಭರವಸೆ ಕೊಡುವಂತೆ ಗೆಲುವು ಕೊಟ್ಟನಿರ್ದೇಶಕರು. ನನ್ನ ಕನಸುಗಳು ದೊಡ್ಡದಾಗಿ ಅರಳುವುದಕ್ಕೆ ಶುರುವಾಗಿದ್ದು ಈ ಚಿತ್ರದ ಯಶಸ್ಸಿನಿಂದ.

3. ತೂಗುದೀಪ ಪ್ರೊಡಕ್ಷನ್‌: ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ್‌ ಎಂಬುದೇ ದೊಡ್ಡ ಹೆಸರು. ಅದೇ ಕುಟುಂಬದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಇದ್ದಾರೆ. ಆದರೂ ಅವರ ಬ್ಯಾನರ್‌ನಲ್ಲಿ ನನಗೆ ಅವಕಾಶ ಕೊಟ್ಟು ನನ್ನ ಹೀರೋ ಮಾಡಿದ ದರ್ಶನ್‌, ದಿನಕರ್‌, ತೂಗುದೀಪ ಬ್ಯಾನರ್‌ ಅನ್ನು ಮರೆಯಲಾಗದು.

ನಾನು ಬಲವಾಗಿ ನಂಬುವ ವಿಷಯಗಳು

ಭಾಷೆ: ನಾವು ಹುಟ್ಟಿದಾಗಿನಿಂದಲೂ ಕಲಿಯಲು ಪ್ರಯತ್ನಿಸುವುದು ಭಾಷೆಯನ್ನು. ನಮ್ಮ ತಾಯಿ ಭಾಷೆ. ನನಗೆ ಕನ್ನಡವೇ ಉಸಿರು.

ರೈತ: ಭಾಷೆ ಜತೆಗೆ ಮನುಷ್ಯನಿಗೆ ಅತ್ಯಗತ್ಯ ಅನಿಸುವುದು ಅನ್ನ. ಇದರ ಹಿಂದಿನ ಶಕ್ತಿ ರೈತ. ನನಗೆ ರೈತ ಯಾವಾಗಲೂ ಹೀರೋನೆ.

ಸಿನಿಮಾ: ಒಬ್ಬ ನಟನಾಗಿ ಹೇಳುವುದಾದರೆ ನನಗೆ ಹೆಸರು, ಒಳ್ಳೆಯ ಜೀವನ, ಸಂಪಾದನೆ. ಅಭಿಮಾನಿ ವರ್ಗ ಕೊಟ್ಟಿದ್ದೇ ಸಿನಿಮಾ.

ಫಿಲಾಸಫಿ ಮತ್ತು ಮಹಾನುಭಾವರು

ಮಾಡೋ ಕೆಲಸದಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಇರಬೇಕು. ಪ್ರತಿ ದಿನ ನಾನು ದೇವರಲ್ಲಿ ಬೇಡುವುದು ಇದನ್ನೇ.

ಸತ್ಯ- ಅಹಿಂಸೆ ಎಂದ ಮಹಾತ್ಮಗಾಂಧಿ , ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಎಂದ ಭಗತ್‌ ಸಿಂಗ್‌ , ಸ್ವಾತಂತ್ರ್ಯ ಉಸಿರಾಗಬೇಕು ಎಂದ ಸುಭಾಷ್‌ ಚಂದ್ರಬೋಸ್‌, ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ನಾನು ನಂಬುವ ಚೇತನಗಳು.

ಇಷ್ಟದ ನಾಯಕ, ನಾಯಕಿ ಮತ್ತು ಸಂಗೀತಗಾರ

ನಾಯಕ ಅಂತ ಬಂದಾಗ ನನಗೇ ನಾನೇ ಇಷ್ಟ. ನಾಯಕಿಯರಲ್ಲಿ ಅಮೂಲ್ಯ ನನ್ನ ನೆಚ್ಚಿನ ನಟಿ. ಹಂಸಲೇಖ ಪದಗಳು- ಸಂಗೀತ ಅಂದರೆ ಪ್ರಾಣ.

ನನ್ನ ಅಪ್ಪ, ನನ್ನ ಆದರ್ಶ

ನನ್ನ ಬದುಕಿನ ಬಹು ದೊಡ್ಡ ಆದರ್ಶ ಮತ್ತು ರೋಲ್‌ ಮಾಡೆಲ್‌ ಎಂದರೆ ನನ್ನ ಅಪ್ಪ ಬಸಪ್ಪ. ಶಾಲೆಯ ಮುಖ ನೋಡಿಲ್ಲ. ಏನೂ ಓದಿಕೊಂಡಿಲ್ಲ. ಆದರೂ ಜೀವನ ಗೊತ್ತು. ನನ್ನ ತಾಯಿಯನ್ನು ಅದ್ಭುತವಾಗಿ ನೋಡಿಕೊಂಡವರು. ನನಗೆ ಅವರು ಆಸ್ತಿ ಮಾಡಿ ಕೊಡಲಿಲ್ಲ. ಆದರೆ, ಒಳ್ಳೆಯ ಬುದ್ಧಿ ಕೊಟ್ಟರು. ನಾನು ಇಂಥವರ ಮಗ ಅಂತ ಹೇಳಿಕೊಳ್ಳುವಂತಹ ಹೆಮ್ಮೆಯ ಜೀವನ ಅವರದ್ದು. ಕುಟುಂಬವನ್ನು ಪ್ರೀತಿಸುವುದನ್ನು ಅವರನ್ನ ನೋಡಿಯೇ ಕಲಿತೆ. ಇಷ್ಟೆಲ್ಲ ಆಗಿದ್ದ ನನ್ನ ಅಪ್ಪನಿಗಿಂತ ದೊಡ್ಡ ಸ್ಫೂರ್ತಿ-ಆದರ್ಶ ನನಗೆ ಬೇರೆ ಯಾರೂ ಇಲ್ಲ.

ನಾನು ಮತ್ತು ನನ್ನ ಕುಟುಂಬ

ಪತ್ನಿ ಜ್ಯೋತಿ. ನಾನು ಇಷ್ಟಪಟ್ಟು ಅತ್ಯಂತ ಸರಳವಾಗಿ ಮದುವೆಯಾದ ಹುಡುಗಿ. ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ನಗು ನಗುತ್ತ ಜತೆಗೆ ಇದ್ದ ಜೀವನದ ಗೆಳತಿ. ಮಗನ ಹೆಸರು ಏಕಾಂತ್‌. ಮಗಳು ಹೆಸರು ಅಮೃತಾ. ನನ್ನ ಮಗ ನಟ ಆಗುತ್ತೇನೆ ಎಂದು ಈಗಾಗಲೇ ನಿರ್ಧರಿಸಿದ್ದಾನೆ. ಮಗಳು ಕೂಡ ಚಿತ್ರರಂಗಕ್ಕೆ ಬರುತ್ತೇನೆ ಎಂದರೆ ಬೇಡ ಅನ್ನಲಾರೆ. ಅದು ಅವರ ಆಯ್ಕೆ. ಆದರೆ, ಅವರು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಶ್ರದ್ಧೆಯಿಂದ ಇರಿ ಅಂತ ಮಾತ್ರ ಹೇಳುತ್ತೇನೆ. ಮಗಳು ನಾಯಕಿ ಆಗುತ್ತೇನೆ ಎಂದರೆ ನಾನು ತಡೆಯಲ್ಲ.

ನನಗೆ ನಗು ತರಿಸುತ್ತಿದ್ದ ಆ ಸಲಹೆಗಳು

ಚಿತ್ರರಂಗಕ್ಕೆ ಬಂದ ಆರಂಭ ದಿನಗಳಲ್ಲಿ ನಾನು ಎಲ್ಲೇ ಹೋದರೂ ನನ್ನ ಕುಟುಂಬ ಸಮೇತ ಹೋಗುತ್ತಿದ್ದೆ. ಆಗೆಲ್ಲ ಕೆಲವರು, ನೋಡಿ ಮದುವೆ ಆಗಿದೆ ಅಂತ ಹೇಳಿಕೊಂಡರೆ ಸಿನಿಮಾ ಅವಕಾಶಗಳು ಬರಲ್ಲ. ಮಾರ್ಕೆಟ್‌ ಸಿಗಲ್ಲ ಎಂದು ಹೇಳಿ ಮದುವೆ, ಸಂಸಾರ ವಿಚಾರಗಳನ್ನು ಗುಟ್ಟಾಗಿಡಬೇಕು ಎಂದು ಸಲಹೆ ಕೊಡುತ್ತಿದ್ದರು. ಅವರ ಈ ಮಾತು ಕೇಳಿ ನನಗೆ ನಗು ಬರುತ್ತಿತ್ತು. ಯಾಕೆಂದರೆ ಇಷ್ಟಪಟ್ಟು ಮಾಡಿಕೊಂಡ ಮದುವೆನಾ ನಾನು ಹೇಗೆ ಗುಟ್ಟಾಗಿಡಲಿ?

ಸಿನಿಮಾಗಳಲ್ಲಿ ನನಗೆ ಅವಕಾಶ ಬರಲಿ ಬಿಡಲಿ ಐ ಯಾಮ್‌ ಮ್ಯಾರೀಡ್‌ ಮ್ಯಾನ್‌ ಅಂತ ಹೇಳುತ್ತಿದ್ದೆ. ಬಡತನ ನನ್ನ ಕ್ವಾಲಿಪಿಕೇಷನ್‌ ಅಂತಾನೂ ಹೇಳುತ್ತಿದ್ದೆ.

- ಆರ್‌ಕೆ