Asianet Suvarna News Asianet Suvarna News

ಕೇಳಿಸದೇ ಕಲ್ಲು ಕಲ್ಲಿನಲ್ಲಿ, ಅರಳುವ ಹೂಗಳೇ..ಹಾಡಿದ ಚಿತ್ರಾಗೆ ಹುಟ್ಟು ಹಬ್ಬದ ಸಂಭ್ರಮ

ಚಿತ್ರಾ. ಹೆಸರು ಕೇಳಿದ ಕೂಡಲೇ ಕನ್ನಡದ ಪ್ರಸಿದ್ಧ ಕೆಲವು ಹಾಡುಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಸ್ವರ ಮಾಧುರ್ಯದಿಂದಲೇ ಸ್ಪೂರ್ತಿ ತುಂಬಿದ ಈ ಬಹುಭಾಷಾ ಗಾಯಕಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
 

Indian multi lingual singer chitra celebrating 60th birthday on July 27
Author
First Published Jul 27, 2023, 11:00 AM IST | Last Updated Jul 27, 2023, 11:02 AM IST

-ವಿನಯ್ ಶಿವಮೊಗ್ಗ

ಅದು ಎಪ್ಪತ್ತರ ದಶಕದ ಸಮಯ. ಚಲನ ಚಿತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ರಾಜ್ಯಗಳ ಚಿತ್ರಗಳಲ್ಲಿ ಸಂಗೀತ ವಿಜೃಂಭಿಸುತ್ತಿದ್ದ ಕಾಲ. ಮಧುರವಾದ ಗೀತೆಗಳು ಒಂದಾದ ಮೇಲೆ ಇನ್ನೊಂದು ಬರುತ್ತಿದ್ದ ಕಾಲ. ಈಗಿನ ಹಾಗೆ ತಂತ್ರಜ್ಞಾನವಿಲ್ಲದ ಆ ಕಾಲದಲ್ಲಿ ಈ ಇಂಪಾದ ಹಾಡುಗಳನ್ನು ಕೇಳಲು ರೇಡಿಯೋಗೆ ಕಿವಿ ಆತುಕೊಂಡು ಕೇಳುತ್ತಿದ್ದ ಸಮಯವದು.  
    
ಆಗ ಬಿಡುಗಡೆಯಾದ ತಮಿಳು ಚಿತ್ರ ಸಿಂಧು ಭೈರವಿಯ ಗೀತೆಗಳು ಅತಿ ಜನಪ್ರಿಯವಾಗಿ ಅದರಲ್ಲೂ ವಿಶೇಷವಾಗಿ ಗಮನ ಸೆಳೆದ ಹೆಣ್ಣಿನ ಇನಿದನಿ ಯಾರದಿರಬಹುದೆಂದು ಎಲ್ಲಾ ಸಂಗೀತಾಭಿಮಾನಿಗಳು ಕಾತುರದಿಂದ ತಿಳಿಯಬಯಸಿದ್ದುಂಟು. ಈ ಗಾಯಕಿಯೇ ಕೆ.ಎಸ್. ಚಿತ್ರ!  ಕಾಕತಾಳೀಯವೆಂಬಂತೆ ಆ ಚಿತ್ರದ ಹಾಡುಗಳಿಗಾಗಿ ಚಿತ್ರ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ನೀಡುವ ಮೊದಲ ರಾಷ್ಟ್ರಪ್ರಶಸ್ತಿಗೆ ಭಾಜನರಾದರು! ಮುಂದೆ ನಡೆದದ್ದು ಇತಿಹಾಸ ಮಲೆಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ, ಬಂಗಾಳಿ ಒರಿಯಾ ಭಾಷೆಗಳಲ್ಲಿ ಸುಮಾರು 18000ಕ್ಕೂ ಹೆಚ್ಚು ಸಿನಿಮಾ ಗೀತೆಗಳನ್ನು ಹಾಡಿದ ಹೆಗ್ಗಳಿಕೆ ಚಿತ್ರಾ ಅವರದ್ದು. ಪಿ.ಸುಶೀಲಾ, ಎಸ್.ಜಾನಕಿ ಹಾಗೂ ವಾಣಿ ಜಯರಾಂ ನಂತರ ದಕ್ಷಿಣ ರಾಜ್ಯದ ಅತ್ಯಂತ ಬೇಡಿಕೆಯ ಗಾಯಕಿಯಾಗಿ ಎಲ್ಲಾ ಮಹಾನ್ ಸಂಗೀತ ನಿರ್ದೇಶಕರ ಅಚ್ಚುಮೆಚ್ಚಿನ ಗಾಯಕಿಯಾಗಿ ಚಿತ್ರ ಈಗಲೂ ತಮ್ಮ ಛಾಪನ್ನು ಉಳಿಸಿಕೊಂಡಿರುವುದು ಅವರ ಕಂಠಸತ್ವಕ್ಕೆ ಸಾಕ್ಷಿ. 

ಗಾಯಕ ಜಗಜಿತ್ ಸಿಂಗ್ ಜೀವನದ ವಿಶೇಷಗಳು 

ಸುಮಾರು 6 ಬಾರಿ ತಮ್ಮ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ. ಲೆಕ್ಕವಿಲ್ಲದಷ್ಟು ಬಾರಿ ಎಲ್ಲಾ ರಾಜ್ಯಗಳ ಪ್ರಶಸ್ತಿ ಹಾಗೂ ಎಲ್ಲಾ ಭಾಷೆಯ ಹಾಡುಗಳಿಗಾಗಿ Filmfare ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಪರೂಪದ ಬಹಳ ಮಧುರವಾದ ಶೃತಿ ಶುದ್ಧವಾದ ಶಾರೀರ ಹೊಂದಿರುವ ಚಿತ್ರ ಅವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಭದ್ರವಾದ ತಳಹದಿ ಇದೆ. ಶಾಸ್ತ್ರೀಯ ಸಂಗೀತದ ಜೊತೆ ಜೊತೆ ಸಿನಿಮಾ ಸಂಗೀತವನ್ನೂ ಸಮರ್ಥವಾಗಿ ಹಾಡಬಲ್ಲ ಕೆಲವೇ ಕೆಲವು ಗಾಯಕರಲ್ಲಿ ಚಿತ್ರ ಮೊದಲಿಗರಾಗಿ ನಿಲ್ಲುತ್ತಾರೆ. 
    
ಭಕ್ತಿ, ಪ್ರಣಯ, ಮುಗ್ಧ, ವಿರಹ ಮುಂತಾದ ವಿವಿಧ ಭಾವಗಳ ಪ್ರಾಧಾನ್ಯವಿರುವ ಗೀತೆಗಳನ್ನು ಚಿತ್ರಾರವರು ತಮ್ಮ ಅಪರೂಪವಾದ  voice modulations ಮೂಲಕ ಬಹಳ ಉತ್ಕೃಷ್ಟ ರೀತಿಯಲ್ಲಿ ಹಾಡಿ ಜನಪ್ರಿಯಗೊಳಿಸಿದ ಉದಾಹರಣೆ ಸಾಕಷ್ಚು ಸಿಗುತ್ತವೆ. ಹಿಂದಿ ಚಿತ್ರರಂಗದಲ್ಲೂ ಸಾಕಷ್ಚು ಕೆಲಸ ಮಾಡಿರುವ ಚಿತ್ರ ಅಲ್ಲೂ ತಮ್ಮ ಬೇಡಿಕೆಯನ್ನು ಉಳಿಸಿಕೊಂಡ ದಕ್ಷಿಣದ ಕೆಲವೇ ಕಲಾವಿದರಲ್ಲಿ ಒಬ್ಬರು . 

ಸುಬ್ಬಲಕ್ಷ್ಮಿಯೇ ಆಶೀರ್ವದಿಸಿದ್ದರು:    
ಒಮ್ಮೆ ಪುಟ್ಟಪರ್ತಿಯಲ್ಲಿ ಇವರು ಹಾಡಿದ ಭಜನೆಯನ್ನು ಕೇಳಿ ಭಾರತರತ್ನ M S ಸುಬ್ಬಲಕ್ಷ್ಮಿ ಇವರ ಬೆನ್ನು ತಟ್ಟಿ ಆಶೀರ್ವದಿಸಿದ್ದುಂಟು.  ಸಂಗೀತ ಕ್ಷೇತ್ರದ ಇನ್ನೊಂದು ಮೇರು ತಾರೆ ಭಾರತ ರತ್ನ ಲತಾ ಮಂಗೇಶ್ಕರ್ ಒಂದು ಖಾಸಗಿ ಸಂದರ್ಶನದಲ್ಲಿ ಚಿತ್ರ ಅವರ ಹಾಡುವ ಶೈಲಿ, ಅವಕ ಕಂಠ ನನಗೆ ಬಹಳ ಇಷ್ಟವಾಗುತ್ತದೆ ಎಂದು ಹೇಳಿದ್ದೂ ಇದೆ. 
    
ಭಾಷೆ ಯಾವುದೇ ಇರಲಿ  ಉಚ್ಛಾರ ಶುದ್ಧತೆ, ಇಂಪು, ಭಾವ ಶಕ್ತತೆಯ ಧ್ವನಿ ಚಿತ್ರ ಅವರ ಸಿದ್ಧಿ ಎಂದು ಹೇಳಬಹುದು. ಭಾರತ ಸರ್ಕಾರದ ಸರ್ವೋಚ್ಛ ನಾಗರಿಕ ಸನ್ಮಾನವಾದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಚಿತ್ರಾ,. ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ತಮ್ಮ ಸಂಗೀತ ಕಾರ್ಯಕ್ರಮ ನೀಡಿದ ಮೊದಲ ಭಾರತೀಯ ಗಾಯಕಿಯೂ ಹೌದು. 
 
ಮೂಲತಃ ದೇವರನಾಡೆಂದೇ ಕರೆಯಲ್ಪಡುವ ಕೇರಳದ ಈ ಸ್ವರ ಶಾರದೇ melody queen of Indiaಎಂದು ದೇಶಾದ್ಯಂತ ಹೆಸರು ಮಾಡಿರುವುದು ಇವರ ಸ್ವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಅತ್ಯಂತ ವಿನಯ ಹಾಗು ವಿನಮ್ರ ಭಾವದ ವ್ಯಕ್ತಿತ್ವ ಹೊಂದಿರುವ ಚಿತ್ರಾ ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜರಾಗಿ ಬೆಳೆದು ನಿಂತಿದ್ದಾರೆ .  

ಪಿ.ಸುಶೀಲಾ, ಎಲ್ ಆರ್ ಈಶ್ವರಿ ಅವರಿಗೆ  'ಸ್ವರ ಸಾಮ್ರಾಜ್ಞೆ' ಬಿರುದು
    
ಮೈ ಆಟೋಗ್ರಾಫ್‌ನ ಅರಳುವ ಹೂಗಳೇ, ಬೆಳ್ಳಿ ಕಾಲುಂಗುರ ಚಿತ್ರದ ಕೇಳಿಸದೇ ಕಲ್ಲು ಕಲ್ಲುಗಳಲ್ಲಿ, ತುತ್ತಾ ಮುತ್ತಾ ಚಿತ್ರದ ತುಸು ಮೆಲ್ಲ ಬೀಸೋ ಗಾಳಿಯೇ, ಗಟ್ಟಿಮೇಳದ ಹಂಸವೇ ಹಂಸವೇ ಸೇರಿ ಲಿಸ್ಟ್ ಮಾಡುತ್ತಾ ಹೋದರೆ ಚಿತ್ರಾ ಅವರು ಕನ್ನಡದಲ್ಲಿ ಹಾಡಿರುವ ಸಾಕಷ್ಟು ಗೀತೆಗಳು ಸಿಗುತ್ತವೆ. 1963ರ ಜುಲೈ27ರಂದು ಜನಿಸಿದ ಚಿತ್ರಾಗೆ ಇವತ್ತು ಅರವತ್ತರ ಹುಟ್ಟು ಹಬ್ಬ. ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಈ ಸ್ವರ ಕೋಗಿಲೆ ಹೀಗೆ ಸದಾ ಇಂಪಾಗಿ ಉಲಿಯುತ್ತಿರಲಿ.  ಎಂಬುದೇ ಅಭಿಮಾನಿಗಳ ಹಾರೈಕೆ 

Latest Videos
Follow Us:
Download App:
  • android
  • ios