Asianet Suvarna News Asianet Suvarna News

ಆಡಿಸುವವನು ಮೇಲೆ ಕುಂತವ್ನೆ; ಅತಿಯಾದರೆ ಅಧೋಗತಿ!

ಎಲ್ಲವೂ ನಿರ್ಮಾಪಕನ ಕೈಗೆ ಬಂದಿದೆ. ನಿರ್ಧಾರ ಮಾಡುವವನು ಅವನೇ. ಆಡಿಸುವಾಗ ಮೇಲೆ ಕುಂತವ್ನೆ ಅಂದರೆ ಪಕ್ಕದಲ್ಲೇ ಕುಂತವನೆ. ಆಡಿಸೋದಷ್ಟೇ ಅಲ್ಲ,

Indian Film composer Hamsalekha talks corona effect on industry
Author
Bangalore, First Published Mar 20, 2020, 10:31 AM IST

ಹಂಸಲೇಖಾ ಗಹಗಹಿಸಿ ನಕ್ಕರು.

ಅವರಿದ್ದಲ್ಲಿ ನಗು ಕೊರೊನಾಕ್ಕಿಂತ ಸಾಂಕ್ರಾಮಿಕ.

ಅದೇನೂ ಸಂತೋಷದ ನಗುವಾಗಿರಲಿಲ್ಲ. ಅದರಲ್ಲಿ ಸಣ್ಣ ನೋವಿತ್ತು.

ಸಿನಿಮಾಗಳೇನೋ ಬರುತ್ತಿವೆ. ನೋಡುವವರಿಲ್ಲ. ನೋಡುವವರಿಲ್ಲ ಎಂಬ ಚಿಂತೆ ಮಾಡುವವರಿಗೆ ಇದ್ದಂತಿಲ್ಲ.

ಹಾಗಿದ್ದರೆ ಸಿನಿಮಾ ಯಾರಿಗೆ. ಹಾಡು ಯಾರಿಗೆ. ಕತೆ ಯಾರಿಗೆ.

ಏನಾದರೂ ಮಾಡುತಿರು ತಿಮ್ಮ.. ಅದೇ ಈಗಿನ ವಿಧಾನ. ಒಂದು ಸಿನಿಮಾ ಮಾಡಲಿಕ್ಕೆ ಐವತ್ತು ಲಕ್ಷ ಬೇಕು. ಎಲ್ಲರೂ ಐದೈದು ಲಕ್ಷ ಹಾಕೋಣ. ಎಲ್ಲರೂ ಸೇರಿ ಸಿನಿಮಾ ಮಾಡೋಣ. ಅಲ್ಲಿಗೆ ಮುಗಿಯಿತು. ಮುಂದೇನು? ಯಾರಿಗೆ ಗೊತ್ತು, ಯಾರಿಗೆ ಬೇಕು?

`ಪುಕ್ಲ' ಎಂದು ಕುಣಿದ ಸಕಲಕಲಾ ವಲ್ಲಭೆ ನಂದಿನಿ ಹಂಸಲೇಖ

ಎಲ್ಲರೂ ಒಡೆಯರೇ ಆದಾಗ ಆಗುವ ಸಮಸ್ಯೆ ಇದು. ಯಾರೂ ಯಾರನ್ನೂ ಕೇಳುವಂತಿಲ್ಲ. ಯಾರೂ ಯಾರಿಗೂ ಹೇಳುವಂತಿಲ್ಲ. ಯಾರನ್ನೂ ಯಾರೂ ತಿದ್ದುವಂತಿಲ್ಲ. ಮಾಡಿದ್ದೇ ಮಾಟ, ಆಡಿದ್ದೇ ಆಟ, ನೋಡಿದ್ದೇ ನೋಟ. ಶೋ ಗೇಮ್‌ ಈಸ್‌ ನೋ ಗೇಮ್‌!

ಓವರ್‌ ಪ್ರಾಡಕ್ಟಿವಿಟಿ!

ಗಾಜಿನ ಬಳೆಗೂ ಪ್ಲಾಸ್ಟಿಕ್‌ ಬಳೆಗೂ ಇರುವ ವ್ಯತ್ಯಾಸ!

ಎಲ್ಲವೂ ಮತ್ತೆ ಮತ್ತೆ ಅದೇ ಚಕ್ರಕ್ಕೆ ಬೀಳುತ್ತಿದೆಯಾ?

ಪಲ್ಲವಿಗಿಂತ ಚರಣ ಭಾರ. ಚರಣಕ್ಕಿಂತ ಅನುಪಲ್ಲವಿ ಘೋರ. ಕಾಲ್‌ ಕೇಜಿ ಪಲ್ಲವಿ, ಮುಕ್ಕಾಲ್‌ ಕೇಜಿ ಚರಣ!

ಅದು ಕೇವಲ ಹಾಡಿನ ಪಾಡಷ್ಟೇ ಅಲ್ಲ, ಎಲ್ಲದರ ವಿಧಿಲೀಲೆ.

ಹಂಸಲೇಖ ಮತ್ತೊಮ್ಮೆ ಗಹಗಹಿಸಿ ನಕ್ಕರು.

ಕೈಯಾಡಿಸುತ್ತಲೂ ಇರುತ್ತಾನೆ. ಮಾಡಿದ್ದು ಕೆಡಿಸುತಾನೆ, ಕೆಡಿಸಿದ್ದ ನುಡಿಸುತಾನೆ, ಬರೆದದ್ದು ಅಳಿಸುತಾನೆ. ಅಳಿಸೋದ ಬರೆಯುತಾನೆ.

ಹೇಗೆ ಪಾರಾಗುವುದು ಈ ಅಗ್ನಿಕುಂಡದಿಂದ. ಯಾರು ಯೋಚಿಸುತ್ತಾರೆ.

60 ದಿನಗಳಲ್ಲಿ 54 ಸಿನಿಮಾ. ದುಭಿಕ್ಷ್ಯದಲ್ಲಿ ಅಧಿಕ ಮಾಸ. ಅಷ್ಟೇ ಅಲ್ಲ, ಅಧಿಕ ಮೋಸ ಕೂಡ ಖಾತ್ರಿ

ಹಾಗಿದ್ದರೆ ಪಾರಾಗಲು ದಾರಿಯೇನು?

ಮಾಡಿದ್ದನ್ನೇ ಮಾಡಬೇಕು, ಆದರೆ ಹೊಸತನ್ನು ಮಾಡಬೇಕು.

'ಸರಿಗಮಪ' ಸ್ಪರ್ಧಿಗೆ ಸಿಕ್ತು ಉಚಿತ ವಿದ್ಯಾಭ್ಯಾಸ, 25 ಸಾವಿರ ರೂ ಕೆಲಸ!

ಅದು ಹೇಗೆ? ದಿನವೂ ಮಾಡುವ ಊಟ, ದಿನದಿನವೂ ಹೊಸದಾಗಿರುವಂತೆ.

ಹಂಸ್‌ ಹೊಸದು ಮಾಡಲು ಹೊರಟಿದ್ದಾರೆ. ಹೊಸದು ಮಾಡಿದ್ದಾರೆ.

45 ಕೋಟಿ ಬಜೆಟ್ಟಿನ ಒಂದು ಮಹಾಸಿನಿಮಾ ಕೈಯಲ್ಲಿದೆ. ಅದಕ್ಕೆ ಹಂಸಲೇಖಾ ಸೌಂಡ್‌ ಸ್ಕಿ್ರಪ್ಟ್‌ ಮಾಡಿದ್ದಾರೆ. ಆಯಾ ಪಾತ್ರಧಾರಿಗಳಿಗೆ ಅದನ್ನು ತೋರಿಸಿದ್ದಾರೆ. ನೋಡಿದವರು ಮೆಚ್ಚಿಕೊಂಡು ಪಾತ್ರ ಮಾಡಲು ಅನುಮತಿ ಕೊಟ್ಟಿದ್ದಾರೆ. ಅದನ್ನು ಫೇರಿ ಟೇಲ್‌ ಅಂತ ಕರೆಯುತ್ತಾರೆ ಹಂಸ್‌. ಹಾಡಿನಲ್ಲೇ ಸಾಗುವ ಕತೆ. ಮೂರು ಪ್ರಮುಖ ಪಾತ್ರ. ಪ್ರತಿ ಪಾತ್ರದಲ್ಲೂ ಇಡೀ ಇಂಡಿಯಾದಿಂದ ಆಯ್ದ ಅತ್ಯುತ್ತಮ ನಟರು.

ಇಷ್ಟರಲ್ಲಾಗಲೇ ಸಿನಿಮಾ ಬರಬೇಕಾಗಿತ್ತು. ನಡುವೆ ನಾಯಕಿ ನಟಿಯ ವೈಯಕ್ತಿಕ ಕಾರಣದಿಂದ ಮುಂದೆ ಹೋಗಿದೆ. ಈಗ ಮದಕರಿ ನಾಯಕನ ಸಂಗೀತಕ್ಕೆ ಕೂತಿದ್ದೇನೆ, ಹನ್ನೆರಡು ಹಾಡುಗಳಿವೆ. ನನ್ನ ಹಿಡಿತಕ್ಕೆ ಕತೆಯನ್ನು ತೆಗೆದುಕೊಂಡಿದ್ದೇನೆ. ಅದು ಮುಗಿಯುತ್ತಿದ್ದಂತೆ ಸಿನಿಮಾ ಕೈಗೆತ್ತಿಕೊಳ್ಳುವೆ. ನನ್ನ ಬಹುದೊಡ್ಡ ಕನಸು ಅದು ಅನ್ನುತ್ತಾರೆ ಹಂಲೇ.

ಪರದೆಯ ಮೇಲೆ ಸೌಂಡ್‌ ಸ್ಕಿ್ರಪ್ಟ್‌ ಮೂಡಿ ಬಂತು. ಪಾತ್ರದ ಕುರಿತು ನಾಲ್ಕು ಮಾತು, ಇಡೀ ಕತೆ, ತಿರುವು,ರೋಚಕತೆ, ಭಾವುಕತೆಗಳೆಲ್ಲ ಹಾಡುಗಳಲ್ಲಿ ಮೂಡಿದವು. 23ರ ಹರೆಯದ ರಾಜಕುಮಾರಿ ಮೂಡಿ ಬಂದಳು.

 

ಅಮಿತಾಬ್‌ ಬಚ್ಚನ ಮನೆಗೆ ಹೋಗಿದ್ದಾಗ ನಡೆದ ಕತೆ ಹೇಳಿದರು ಅವರು.

ಸೌಂಡ್‌ ಸ್ಕಿ್ರಪ್ಟ್‌ ಕೇಳುತ್ತಿದ್ದಂತೆ ಮುಗುಳ್ನಕ್ಕು, ಶೂಟಿಂಗು ಯಾವಾಗ ಅಂತ ಕೇಳಿದರಂತೆ ಬಿಗ್‌ ಬಿ.

ಅದರ ಬೆನ್ನಿಗೇ ಮತ್ತೊಂದು ಕತೆಯನ್ನೂ ಹಂಸಲೇಖ ಸಿದ್ಧಮಾಡಿಟ್ಟುಕೊಂಡಿದ್ದಾರೆ. ನವಜಾನಪದ ಎಂಬ ಹೊಸ ಪರಿಕಲ್ಪನೆಯ ಆ ಚಿತ್ರದಲ್ಲಿ ಕನ್ನಡದ ಬಹುದೊಡ್ಡ ನಟ ನಟಿಸುತ್ತಾರೆ.

ಒಮ್ಮೆ ಮೈಸೂರಿನಲ್ಲಿ ಬೆಳ್ಳಿ ಹೆಜ್ಜೆ ಕಾರ‍್ಯಕ್ರಮದಲ್ಲಿದ್ದೆ. ಧೀಮಂತ ಮಹಿಳೆಯೊಬ್ಬರು ಎದ್ದು ನಿಂತು ಪ್ರಶ್ನೆ ಕೇಳಿದರು- ನೀವು ಮತ್ತೊಂದು ಸಂಗೀತಮಯ ಸಿನಿಮಾ ಮಾಡಿ ಅಂದರು. ನನ್ನ ಮಗನಿಗೋಸ್ಕರ ಮಾಡಿ ಅಂದರು. ಅಲ್ಲಿಯೇ ಆರು ಸಾಲುಗಳ ಹಾಡು ಕಂಪೋಸ್‌ ಮಾಡಿದೆ. ಅವರಿಗೆ ಹೇಳಿದೆ. ಅವರು ಒಪ್ಪಿಕೊಂಡರು. ಮುಂದೆ ಆ ಸಿನಿಮಾ ಖಾತ್ರಿ. ಅದರ ಮಜವೇ ಬೇರೆ ಇದೆ ಅಂತ ಮತ್ತೊಮ್ಮೆ ಗಹಗಹಿಸಿ ನಕ್ಕರು ಹಂಸಲೇಖಾ.

ಕಷ್ಟವಿರಲಿ, ಇಷ್ಟವಿರಲಿ, ನೋವಿರಲಿ, ನಲಿವಿರಲಿ. ಹಂಸಲೇಖಾ ನಗುತಿರಲಿ!

 

Follow Us:
Download App:
  • android
  • ios