ಕನ್ನಡ ಚಿತ್ರರಂಗದಲ್ಲಿ ಇಂದಿಗೂ `ಪ್ರೇಮಿಗಳ ದಿನಾಚರಣೆ' ಎಂದರೆ ರವಿಚಂದ್ರನ್ ಮತ್ತು ಹಂಸಲೇಖ ಅದರ ರಾಯಭಾರಿಗಳು! ಅಂಥ ಹಂಸಲೇಖ ಈ ಬಾರಿ ಪ್ರೇಮಿಗಳ ದಿನಾಚರಣೆಗೆ ತಮ್ಮ `ಸ್ಟ್ರಿಂಗ್ಸ್' ಸಂಸ್ಥೆಯ ಮೂಲಕ ಹಾಡೊಂದನ್ನು ಯೂ ಟ್ಯೂಬ್ ಮೂಲಕ ಬಿಡುಗಡೆ ಮಾಡಿದ್ದರು. ಸ್ವತಃ ಹಂಸಲೇಖಾ ಪುತ್ರಿ ನಂದಿನಿ ಹಂಸಲೇಖಾ ಅವರು ಹಾಡಿ ಅಭಿನಯಿಸಿದ್ದ `ಪುಕ್ಲ.. ಪುಕ್ಲ' ಎನ್ನುವ ಆ ಗೀತೆ ಇಂದು ದಾಖಲೆ ಮಟ್ಟದ ವ್ಯೂವ್ಸ್ ಪಡೆದುಕೊಂಡಿದೆ. ಅದಕ್ಕೆ ಕಾರಣ ಆ ಹಾಡಿಗೆ ನೀಡಿರುವಂಥ ವಿಭಿನ್ನವಾದ ಸಂಗೀತ ಸಂಯೋಜನೆ, ನಂದಿನಿಯವರ ಧ್ವನಿ ವೈಶಿಷ್ಟ್ಯ ಮತ್ತು ಹಾಡು ಪರದೆಯ ಮೇಲೆ ಮೂಡಿ ಬಂದಿರುವ ರೀತಿ ಎನ್ನುವುದನ್ನು ನೆನಪಿಸಲೇಬೇಕು. ಸಾಮಾನ್ಯವಾಗಿ ಹಂಸಲೇಖ ಅವರೇ ಸಾಹಿತ್ಯ ಸಂಗೀತ ಎರಡನ್ನು ಕೂಡ ನೀಡುತ್ತಾರೆ. ಆದರೆ ಪುಕ್ಲ ಗೀತೆಯ ಮೂಲಕ ಸೆಂದಿಲ್ ಎನ್ನುವ ಧೈರ್ಯವಂತ ರಚನೆಕಾರರನ್ನು ಹಂಸಲೇಖ ಪರಿಚಯಿಸಿದ್ದಾರೆ. ಚಿತ್ರರಂಗಕ್ಕೆ ಹೊಸಬರಲ್ಲದ ನಂದಿನಿ ತಮ್ಮ ಈ ಆಲ್ಬಮ್ ಗೀತೆಯ ಹೊಸತನ ಮತ್ತಿತರ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

ಮೊದಲ ಆಲ್ಬಮ್ ಸಾಂಗ್ ಅನುಭವ ಹೇಗಿತ್ತು?
ಕ್ಯಾಮೆರಾ, ನಟನೆ, ಹಾಡು ಇದ್ಯಾವುದೂ ನನಗೆ ಹೊಸದಲ್ಲ. ಆದರೆ ಅದೆಲ್ಲವೂ ಧಾರಾವಾಹಿ ಮತ್ತು ಸಿನಿಮಾಗಳಿಗೆ ಸಂಬಂಧಿಸಿತ್ತು. ಆದರೆ ನನ್ನದೇ ಆದ ಒಂದು ಸಿಂಗಲ್ ಹಾಡು; ಅದು ಕೂಡ ಪ್ರೇಮಿಗಳ ದಿನಾಚರಣೆಗಾಗಿ ವಿಶೇಷವಾಗಿ ತಯಾರಾದಾಗ ಒಂದು ಎಕ್ಸೈಟ್ಮೆಂಟ್ ಇತ್ತು. ಜತೆಗೆ ತಂದೆಯವರು `ಹೊಸದಾಗಿ ಏನಾದರೂ ಮಾಡೋಣ' ಎಂದು ರೆಡಿಯಾಗಿದ್ದರು. ಅವರೇ ಸಂಗೀತ ಕ್ರಿಯೇಟ್ ಮಾಡಿದರು. ವ್ಯಾಲಂಟೈನ್ ಡೇ ಎಂದೊಡನೆ ರೊಮ್ಯಾಂಟಿಕ್ ಹಾಡುಗಳು, ಹುಡುಗರು ಹುಡುಗೀರನ್ನು ರೇಗಿಸುವ ಹಾಡುಗಳು ಸಹಜ. ಆದರೆ ನಾವು ಆ ಟ್ರೆಂಡ್ ಬದಲಿಸೋಣ ಎನ್ನುವ ದೃಷ್ಟಿಯಲ್ಲಿ ಹುಡುಗಿಯೇ ಹುಡುಗನಿಗಾಗಿ ಕಾದು ಆತನನ್ನು `ಪುಕ್ಲ' ಎಂದು ಛೇಡಿಸುವ ಹಾಡನ್ನು ಸೆಂದಿಲ್ ಅವರಿಂದ ಬರೆಸಿದರು. ಇದು ಹುಡುಗಿ ತನ್ನ ನಿರೀಕ್ಷೆಗಳ ಬಗ್ಗೆ ಹೇಳುವ ಹಾಡು. ನಿಯಾಸ್ ಅವರು ನೃತ್ಯ ನಿರ್ದೇಶಿಸಿದ್ದರು.

ಕೊರೋನಾ ವಿರುದ್ಧ ವಡೆಯರ್ ಮಂತ್ರ

ಸಂಗೀತ ನಿರ್ದೇಶಕರ ಮಗಳಾಗಿ ನಿಮ್ಮ ಸಂಗೀತ ಪಯಣ ಹೇಗೆ ಸಾಗಿದೆ?
ನಾನು ನಾಲ್ಕನೇ ವರ್ಷ ವಯಸ್ಸಿರುವಾಗಲೇ ಶೇಷಾದ್ರಿ ಗವಾಯಿಗಳ ಬಳಿ ಹಿಂದೂಸ್ಥಾನಿ ಸಂಗೀತ ಕಲಿಯಲು ಆರಂಭಿಸಿದ್ದೆ. ಅದರ ಬಳಿಕ ಫಯಾಜ್ ಖಾನ್ ಎನ್ನುವ ಹಿಂದೂಸ್ಥಾನಿ ಗುರುಗಳ ಬಳಿ ಪ್ಲೇಬ್ಯಾಕ್ ಸಂಗೀತ ಕಲಿತೆ. ಪ್ರಸ್ತುತ ತಂದೆಯವರ ಬಳಿಯಲ್ಲೇ ಸಂಗೀತ ಕಲಿಯುತ್ತಿದ್ದೇನೆ. ಯಾಕೆಂದರೆ ನನಗೆ ಅವರಿಗಿಂತ ಬೇರೆ ಗುರು ಇಲ್ಲ ಎನ್ನುವುದು ನನ್ನ ಅನಿಸಿಕೆ. ವೃತ್ತಿಪರವಾಗಿ ನಾನು ಹಾಡಿದ್ದು 2006ರಲ್ಲಿ.  ಪ್ರಜ್ವಲ್ ದೇವರಾಜ್ ಅವರ ಪ್ರಥಮ ಚಿತ್ರ `ಸಿಕ್ಸರ್'ನಲ್ಲಿ ಒಂದು ಐಟಂ ಸಾಂಗ್ ಹಾಡಿದ್ದೆ. ಅದರ ಬಳಿಕ `ನಾನು ನನ್ನ ಕನಸು', `ನವಶಕ್ತಿ ವೈಭವ', `ಅಪ್ಪು ಪಪ್ಪು' ಸೇರಿದಂತೆ ಸುಮಾರು ಹತ್ತು ಸಿನಿಮಾಗಳಿಗೆ ಪ್ಲೇಬ್ಯಾಕ್ ಹಾಡಿದೆ. ನಾನು ಪ್ರಸ್ತುತ HSBC ಎನ್ನುವ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದೀನಿ. ಅಂತಾರಾಷ್ಟ್ರೀಯ ಮಟ್ಟದ ಜಗತ್ತಿನ ಶ್ರೇಷ್ಠ ಬ್ಯಾಂಕ್ ಎಂದು ಗುರುತಿಸಿಕೊಂಡಂಥ ಬ್ಯಾಂಕ್ ಇದು. ಅದರಲ್ಲಿ ನಾನು ರೊಬೋಟ್ ಡಿಸೈನರಾಗಿ ವೃತ್ತಿಯಲ್ಲಿದ್ದೇನೆ. ನಾನು ಏನೇ ಕೆಲಸ ಮಾಡುತ್ತಿದ್ದರೂ ಮೊದಲ ಆದ್ಯತೆಯಾಗಿ ಸಂಗೀತ ನನ್ನ ಮನೆ,ಮನದೊಳಗೆ ಮನೆ ಮಾಡಿರುತ್ತದೆ!

ಆದರೆ ಸಂಗೀತದಾಚೆ ಕೂಡ ನಿಮ್ಮ ಆಸಕ್ತಿ ಹರಡಿಕೊಳ್ಳಲು ಕಾರಣವೇನು?
ಸಂಗೀತದಲ್ಲಿ ನಾನು ಏನೇ ಕಲಿತರು ನಮ್ಮ ತಂದೆಯನ್ನು ಮೀರಿಸಲು ಅಸಾಧ್ಯ. ಯಾಕೆಂದರೆ ಒಬ್ಬ ಮನುಷ್ಯ ಮಾಡುವುದಕ್ಕಿಂತ ಹೆಚ್ಚಿನದನ್ನು ಅವರೊಬ್ಬರೇ ಮಾಡಿ ಬಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ನಾನೇನೇ ಸಾಧಿಸಿದರೂ, ಜನ ನನ್ನನ್ನು ಹಂಸಲೇಖ ಅವರ ಮಗಳು ಎಂದೇ ಗುರುತಿಸುತ್ತಾರೆ. ಆದರೆ ನನಗೆ ನಂದಿನಿಯ ತಂದೆ  ಹಂಸಲೇಖ ಎಂದು ಗುರುತಿಸಿಕೊಳ್ಳುವಂತೆ ಆಗಬೇಕು ಎನ್ನುವ ಆಸೆ ಇದೆ! ಇದನ್ನು ಈಗೊ ಅಂದುಕೊಳ್ಳಬಾರದು. ಹಾಗಾಗಿ ಅಂಥದೊಂದು ಗುರುತಿಸುವಿಕೆ ನನಗೆ ದೊರಕಬೇಕಾದರೆ, ಅದು ಬೇರೆ ಕ್ಷೇತ್ರಗಳಿಂದಲೇ ಎನ್ನುವ ನಂಬಿಕೆ ನನಗಿದೆ. ಮಾತ್ರವಲ್ಲ ನನ್ನ ಪ್ರತಿಯೊಂದು ಆಸಕ್ತಿಗಳ ಬಗ್ಗೆ ಹೇಳಿದಾಗಲೂ ಮುಂದೆ ನಿಂತು ಪ್ರೋತ್ಸಾಹಿಸುವವರು ಕೂಡ ನನ್ನ ತಂದೆಯವರೇ. ಹಾಗಾಗಿ ನನಗೆ ತುಂಬ ಉದ್ಯಮಗಳಲ್ಲಿ ಅನುಭವ ಪಡೆದುಕೊಳ್ಳಲು ಸಾಧ್ಯವಾಗಿದೆ. ನಾನು ಓದಿರುವುದು ಸೈಕಾಲಜಿ. ಬಳಿಕ ಏವಿಯೇಶನ್ ಮತ್ತು ಹಾಸ್ಪಿಟಾಲಿಟಿಯಲ್ಲಿ ಪೋಸ್ಟ್ ಗ್ರಾಜ್ಯುಯೇಶನ್ ಮಾಡಿದೆ. ಬಳಿಕ ಹಾಸ್ಪಿಟಾಲಿಟಿಯಲ್ಲಿ ಒಂದಷ್ಟು ಕೆಲಸ ನಡೆಸಿ ಜೆಟ್ ಏರ್ ವೇಸ್ ನಲ್ಲಿ ಏರ್ ಹೋಸ್ಟೆಸ್ ವೃತ್ತಿ ಮಾಡಿದ್ದೆ. ಜತೆಗೆ ಐಬಿಎಮ್ ನಲ್ಲಿ ಟೆಕ್ನಿಕಲ್  ಬ್ಯಾಕ್ ಗ್ರೌಂಡಲ್ಲಿ ಕೆಲಸ ಮಾಡಿದ ಅನುಭವ ಕೂಡ ಇದೆ.

ದಿಯಾ ಖುಷಿಯಾಗಿ ಮನಸ್ಸು ತೆರೆದಾಗ

ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವ ಗುರಿ ಇಲ್ಲವೇ?
ನಟನೆ ಬಗ್ಗೆ ಗಮನ ಹರಿಸುವಂತೆ ನನ್ನ ತಂದೆಯೂ ಪ್ರೋತ್ಸಾಹ ನೀಡಿದ್ದರು. ನನಗೂ ಇಷ್ಟವೇ. ಆದರೆ ಸದ್ಯಕ್ಕೆ ಬೇಡ ಎಂದುಕೊಂಡಿದ್ದೇನೆ. ಚಿಕ್ಕ ವಯಸ್ಸಲ್ಲಿ ತಂದೆಯವರ `ಪ್ರೀತಿಗಾಗಿ' ಧಾರಾವಾಹಿ ಮಾಡಿದ್ದೆ. ಅದರಲ್ಲಿ ನಾಯಕಿಯ ಬಾಲ್ಯವನ್ನು ನಾನೇ ಅಭಿನಯಿಸಿದ್ದೆ. ಶರತ್ ಬಾಬು ಮತ್ತು ಅಂಬಿಕಾ ಅವರ ಮಗಳ ಪಾತ್ರ ನನ್ನದಾಗಿತ್ತು. ಬಾಲ್ಯದಿಂದಲೇ ಸ್ಟೇಜ್ ಕಾರ್ಯಕ್ರಮ ಕೊಡುತ್ತಾ ಬಂದಿದ್ದೇನೆ. ಹಾಗಾಗಿ ವೇದಿಕೆಗಳು ನನಗೆ ಹೊಸತೇನಲ್ಲ. ಆದರೆ ಹಾಡು, ಸಂಗೀತ ಯಾವಾಗಲೂ ನನ್ನ ಜತೆಯಲ್ಲೇ ಇತ್ತು. ಆದರೆ ಅವುಗಳನ್ನು ಬಿಟ್ಟು ಹೊಸದಾಗಿ ಏನಾದರೂ ಕಲಿಯೋಣ ಎನ್ನುವತ್ತಲೇ ನನ್ನ ಗಮನವಿದೆ. ನನಗೆ ಟ್ರ್ಯಾವೆಲಿಂಗ್ ಅಂದರೆ ತುಂಬ ಇಷ್ಟ. ಅದು ಎಲ್ಲಾ ಅರ್ಥದಲ್ಲಿಯೂ. ಹಾಗಾಗಿ ಒಂದೇ ಕಡೆ ನಿಲ್ಲದೆ ಒಂದೊಂದು ಕಡೆ ಪಯಣ ಮಾಡುವ ಮೂಲಕ ಕಲಿಕೆಯ ಅನುಭೂತಿ ಪಡೆಯುತ್ತಿದ್ದೇನೆ. ಈಗ `ಪುಕ್ಲ' ಹಾಡಲ್ಲಿ ಕಾಣಿಸ್ಕೊಂಡಿದ್ದೇನೆ. ಇದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಇನ್ನಷ್ಟು ಆಲ್ಬಮ್ ಹಾಡುಗಳ ಮೂಲಕ ಸಕ್ರಿಯವಾಗುವ ಯೋಚನೆಯೂ ಮೂಡಿದೆ.