ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ಮತ್ತು ಸೈನಿಕರ ತ್ಯಾಗವನ್ನು ಕಟ್ಟಿಕೊಟ್ಟ ‘ಕಿತ್ತೂರು ಚೆನ್ನಮ್ಮ’, ‘ಮುತ್ತಿನ ಹಾರ’, ‘ವೀರಪ್ಪ ನಾಯ್ಕ’, ‘ಸಂಗೊಳ್ಳಿ ರಾಯಣ್ಣ’ ಸೇರಿದಂತೆ ಪ್ರಮುಖ ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.

ಸ್ವಾತಂತ್ರ್ಯ ದಿನಾಚರಣೆ ಬಂದಾಗ ದೇಶಭಕ್ತಿ ಗೀತೆಗಳು, ತ್ರಿವರ್ಣ ಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳು ಮನಸ್ಸಿನಲ್ಲಿ ಮೂಡುತ್ತವೆ. ಭಾರತೀಯ ಚಿತ್ರರಂಗವೂ ದೇಶಪ್ರೇಮದ ಭಾವನೆಯನ್ನು ಬೆಳ್ಳಿತೆರೆಗೆ ತಂದು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಸ್ವಾತಂತ್ರ್ಯ ಹೋರಾಟ, ಬ್ರಿಟಿಷರ ವಿರುದ್ಧದ ಹೋರಾಟದಿಂದ ಹಿಡಿದು ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರ ಕಥೆಗಳವರೆಗೆ ಹಲವು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿವೆ. ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಕನ್ನಡ ಸಿನಿಮಾಗಳಲ್ಲಿ ದೇಶಪ್ರೇಮವನ್ನು ವಿಭಿನ್ನವಾಗಿ ಕಟ್ಟಿಕೊಟ್ಟ ಕೆಲವು ಪ್ರಮುಖ ಚಿತ್ರಗಳನ್ನು ಮೆಲುಕು ಹಾಕೋಣ.

‘ಕಿತ್ತೂರು ಚೆನ್ನಮ್ಮ’ - ಬೆಳ್ಳಿತೆರೆಗೆ ಬಂದ ವೀರವನಿತೆಯ ಕಥೆ

ಕನ್ನಡ ಚಿತ್ರರಂಗದ ದೇಶಭಕ್ತಿ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ನೆನಪಾಗುವ ಹೆಸರು ‘ಕಿತ್ತೂರು ಚೆನ್ನಮ್ಮ’. 1961ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕಿತ್ತೂರು ರಾಣಿ ಚೆನ್ನಮ್ಮ ಅವರ ಬ್ರಿಟಿಷರ ವಿರುದ್ಧದ ಹೋರಾಟವನ್ನು ಅದ್ಭುತವಾಗಿ ತೆರೆಗೆ ತಂದಿತ್ತು. ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮುಂದಾದಾಗ, ಅವರ ವಿರುದ್ಧ ಧೈರ್ಯವಾಗಿ ಹೋರಾಡಿದ ವೀರರಾಣಿ ಚೆನ್ನಮ್ಮನ ಪಾತ್ರದಲ್ಲಿ ದಿವಂಗತ ನಟಿ ಬಿ. ಸರೋಜಾದೇವಿ ಮನೋಜ್ಞವಾಗಿ ಅಭಿನಯಿಸಿದ್ದರು. ವಿಶೇಷ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಕೂಡ ಕಾಣಿಸಿಕೊಂಡಿದ್ದರು. ಬಿ.ಆರ್. ಪಂತುಲು ನಿರ್ದೇಶನದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವವೂ ಲಭಿಸಿತ್ತು. ಇಂದಿಗೂ ‘ಚೆನ್ನಮ್ಮ’ ಎಂದಾಕ್ಷಣ ಬಿ. ಸರೋಜಾದೇವಿಯವರ ಪಾತ್ರ ಕಣ್ಮುಂದೆ ಬರುವಷ್ಟು ಈ ಸಿನಿಮಾ ಜನಪ್ರಿಯವಾಗಿದೆ.

‘ಮುತ್ತಿನ ಹಾರ’ - ಸೈನಿಕನ ಬದುಕಿನ ನೋವು-ನಲಿವು

ದೇಶಪ್ರೇಮದ ಜೊತೆಗೆ ಯುದ್ಧದ ಹಿಂದಿರುವ ಭಾವನಾತ್ಮಕ ಜಗತ್ತನ್ನು ಕಟ್ಟಿಕೊಟ್ಟ ಸಿನಿಮಾ ‘ಮುತ್ತಿನ ಹಾರ’. ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಈ ಚಿತ್ರದಲ್ಲಿ ಕೊಡಗಿನ ವೀರಸೈನಿಕ ಅಚ್ಚಪ್ಪನ ಜೀವನ, ಸಾಹಸ, ದಾಂಪತ್ಯ ಹಾಗೂ ಯುದ್ಧದ ಸನ್ನಿವೇಶಗಳನ್ನು ಮನಮುಟ್ಟುವಂತೆ ತೋರಿಸಲಾಗಿತ್ತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಯುದ್ಧದ ವೈಭವದ ಜೊತೆಗೆ ಸೈನಿಕನ ವೈಯಕ್ತಿಕ ಬದುಕಿನ ತ್ಯಾಗವನ್ನೂ ತೋರಿಸಿದ್ದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವ ಸಿಕ್ಕಿತ್ತು.

‘ತಾಯಿ ಸಾಹೇಬ’ - ಸ್ವಾತಂತ್ರ್ಯ ಹೋರಾಟದ ಮತ್ತೊಂದು ಮುಖ

ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲೇ ಮೂಡಿಬಂದ ಮತ್ತೊಂದು ಗಮನಾರ್ಹ ಸಿನಿಮಾ ‘ತಾಯಿ ಸಾಹೇಬ’. ಜಯಮಾಲಾ ಮತ್ತು ಸುರೇಶ್ ಹೆಬ್ಳೀಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ಸ್ವಾತಂತ್ರ್ಯಪೂರ್ವ ಭಾರತದ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯನ್ನು ತೆರೆದಿಟ್ಟಿತ್ತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಸಿನಿಮಾ 1997ರ ಡಿಸೆಂಬರ್ 31ರಂದು ತೆರೆಕಂಡು ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.

‘ವೀರಪ್ಪ ನಾಯ್ಕ’ - ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ!

ಸಾಹಸಸಿಂಹ ವಿಷ್ಣುವರ್ಧನ್ ಅವರ ಮತ್ತೊಂದು ಗಮನಾರ್ಹ ದೇಶಭಕ್ತಿ ಚಿತ್ರ ‘ವೀರಪ್ಪ ನಾಯ್ಕ’. ಬೆಳಗಾವಿ ಸಮೀಪದ ಹಳ್ಳಿಯೊಂದರ ಗಾಂಧಿವಾದಿ ದೇಶಪ್ರೇಮಿಯ ಬದುಕಿನ ಸುತ್ತ ಕಥೆ ಸಾಗುತ್ತದೆ. ದೇಶಪ್ರೇಮದ ಮುಂದೆ ವೈಯಕ್ತಿಕ ಸಂಬಂಧಗಳಿಗೂ ಬೆಲೆ ಇಲ್ಲ ಎಂಬ ಕಠಿಣ ಸಂದೇಶವನ್ನು ಸಿನಿಮಾ ನೀಡಿತ್ತು. ದೇಶದ್ರೋಹದ ಹಾದಿ ಹಿಡಿದ ಸ್ವಂತ ಮಗನ ವಿರುದ್ಧವೇ ಕಠಿಣ ನಿರ್ಧಾರ ತೆಗೆದುಕೊಳ್ಳುವ ತಂದೆಯ ಪಾತ್ರದಲ್ಲಿ ವಿಷ್ಣುವರ್ಧನ್ ಗಮನ ಸೆಳೆದಿದ್ದರು. ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರ 1999ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

‘ಹಗಲು ವೇಷ’ - ಬ್ರಿಟಿಷರ ವಿರುದ್ಧ ಶಿವಣ್ಣನ ಹೋರಾಟ

ಲವರ್ ಬಾಯ್ ಮತ್ತು ಹಳ್ಳಿ ಹುಡುಗನ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದ ಶಿವರಾಜ್‌ಕುಮಾರ್, ‘ಹಗಲು ವೇಷ’ ಸಿನಿಮಾದಲ್ಲಿ ವಿಭಿನ್ನ ದೇಶಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರದಲ್ಲಿ ಬ್ರಿಟಿಷರ ಆಳ್ವಿಕೆಯ ವಿರುದ್ಧ ದಂಗೆ ಎದ್ದ ಸ್ವಾತಂತ್ರ್ಯ ಹೋರಾಟಗಾರನ ಕಥೆಯನ್ನು ಹೇಳಲಾಗಿತ್ತು. 2000ರ ಮಾರ್ಚ್ 24ರಂದು ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು.

‘ವಂದೇ ಮಾತರಂ’ - ಯುವಕರನ್ನು ಉಗ್ರವಾದದತ್ತ ಸೆಳೆಯುವ ಜಾಲ

2001ರಲ್ಲಿ ಬಿಡುಗಡೆಯಾದ ‘ವಂದೇ ಮಾತರಂ’ ದೇಶಭಕ್ತಿಯ ಜೊತೆಗೆ ಸಮಕಾಲೀನ ಸಾಮಾಜಿಕ ಸಮಸ್ಯೆಯನ್ನೂ ತೆರೆಗೆ ತಂದ ಸಿನಿಮಾ. ರೆಬಲ್ ಸ್ಟಾರ್ ಅಂಬರೀಷ್ ಮತ್ತು ವಿಜಯಶಾಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಯುವಕರನ್ನು ಹೇಗೆ ಬ್ರೈನ್‌ವಾಶ್ ಮಾಡಿ ಉಗ್ರಗಾಮಿ ಚಟುವಟಿಕೆಗಳತ್ತ ಸೆಳೆಯಲಾಗುತ್ತದೆ ಎಂಬುದನ್ನು ತೋರಿಸಲಾಗಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾದ ದೇಶಭಕ್ತಿ ಗೀತೆಗಳು ಕೂಡ ಸಾಕಷ್ಟು ಜನಪ್ರಿಯವಾಗಿದ್ದವು.

‘ಸೈನಿಕ’ - ಕಾರ್ಗಿಲ್ ಯುದ್ಧದ ಕಹಿ ನೆನಪು

ಕಾರ್ಗಿಲ್ ಯುದ್ಧದ ಹಿನ್ನೆಲೆಯೊಂದಿಗೆ ಬಂದ ಸಿನಿಮಾ ‘ಸೈನಿಕ’. 2002ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹೆಸರಿನಲ್ಲೇ ದೇಶಸೇವೆಯ ಭಾವನೆ ಮೂಡಿಸುವ ಈ ಸಿನಿಮಾ ಯುದ್ಧಭೂಮಿಯಲ್ಲಿ ಸೈನಿಕರು ಎದುರಿಸುವ ಸವಾಲುಗಳು ಮತ್ತು ತ್ಯಾಗವನ್ನು ಕಥೆಯ ಮೂಲಕ ಹೇಳಲು ಪ್ರಯತ್ನಿಸಿತ್ತು. ಮಹೇಶ್ ಸುಖಧರೆ ನಿರ್ದೇಶನದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿತ್ತು.

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ - ರಾಯಣ್ಣನಾಗಿ ದರ್ಶನ್ ಅಬ್ಬರ

ಸ್ಯಾಂಡಲ್‌ವುಡ್‌ನ ಅದ್ಧೂರಿ ಐತಿಹಾಸಿಕ ಚಿತ್ರಗಳಲ್ಲಿ ಒಂದಾದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಕೂಡ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಸಿನಿಮಾ. ದರ್ಶನ್ ಸಂಗೊಳ್ಳಿ ರಾಯಣ್ಣನಾಗಿ ನಟಿಸಿದ್ದ ಈ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟದ ನಂತರ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ವೇಗ ನೀಡಿದ ರಾಯಣ್ಣನ ಸಾಹಸಗಾಥೆಯನ್ನು ತೆರೆಗೆ ತರಲಾಗಿತ್ತು. ಬ್ರಿಟಿಷರ ಕೈಗೆ ಸಿಕ್ಕಿಬಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣನ ಧೈರ್ಯ, ತ್ಯಾಗ ಮತ್ತು ದೇಶಪ್ರೇಮವನ್ನು ಸಿನಿಮಾ ಅದ್ಧೂರಿಯಾಗಿ ಕಟ್ಟಿಕೊಟ್ಟಿತ್ತು. ನಾಗಣ್ಣ ನಿರ್ದೇಶನದ ಈ ಸಿನಿಮಾ 2012ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡು, ದೀರ್ಘಕಾಲ ಪ್ರದರ್ಶನ ಕಂಡಿತ್ತು.

‘1944’ - ಹಳ್ಳಿಯಲ್ಲೂ ಹೊತ್ತಿಕೊಂಡ ಸ್ವಾತಂತ್ರ್ಯದ ಕಿಚ್ಚು

ಸ್ವಾತಂತ್ರ್ಯ ಹೋರಾಟದ ಕಥೆಯನ್ನು ನಗರದ ಹಿನ್ನೆಲೆಯ ಬದಲಿಗೆ ಉತ್ತರ ಕರ್ನಾಟಕದ ಗ್ರಾಮೀಣ ಪರಿಸರದಲ್ಲಿ ಕಟ್ಟಿಕೊಟ್ಟ ಸಿನಿಮಾ ‘1944’. ನವೀನ್ ಕೃಷ್ಣ ಮತ್ತು ಶೃತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದ ಕಥೆ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟದ ಸುತ್ತ ಸಾಗುತ್ತದೆ. ‘ರೊಟ್ಟಿ ಋಣ’ ನಾಟಕವನ್ನು ಆಧರಿಸಿದ ಈ ಚಿತ್ರ ಗ್ರಾಮೀಣ ಜನರ ಬದುಕಿನೊಂದಿಗೆ ಸ್ವಾತಂತ್ರ್ಯ ಹೋರಾಟ ಹೇಗೆ ಬೆಸೆದುಕೊಂಡಿತ್ತು ಎಂಬುದನ್ನು ತೋರಿಸಿತ್ತು.

ದೇಶಪ್ರೇಮಕ್ಕೆ ಕನ್ನಡ ಸಿನಿಮಾಗಳ ಕೊಡುಗೆ

ಕನ್ನಡ ಚಿತ್ರರಂಗದ ದೇಶಭಕ್ತಿ ಸಿನಿಮಾಗಳ ವಿಶೇಷತೆ ಏನೆಂದರೆ, ಪ್ರತಿಯೊಂದು ಸಿನಿಮಾ ದೇಶಪ್ರೇಮವನ್ನು ಒಂದೇ ರೀತಿಯಲ್ಲಿ ಹೇಳಿಲ್ಲ. ‘ಕಿತ್ತೂರು ಚೆನ್ನಮ್ಮ’ ಐತಿಹಾಸಿಕ ಹೋರಾಟವನ್ನು ಹೇಳಿದರೆ, ‘ಮುತ್ತಿನ ಹಾರ’ ಸೈನಿಕನ ತ್ಯಾಗವನ್ನು ತೋರಿಸಿತು. ‘ತಾಯಿ ಸಾಹೇಬ’ ಸ್ವಾತಂತ್ರ್ಯಪೂರ್ವ ಸಮಾಜದ ಮತ್ತೊಂದು ಮುಖವನ್ನು ತೆರೆದಿಟ್ಟಿತು. ‘ವೀರಪ್ಪ ನಾಯ್ಕ’ ದೇಶಕ್ಕಾಗಿ ವೈಯಕ್ತಿಕ ಸಂಬಂಧವನ್ನೇ ತ್ಯಜಿಸುವ ಕಥೆ ಹೇಳಿತು. ಇನ್ನು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟದ ವೀರಗಾಥೆಯನ್ನು ಅದ್ಧೂರಿಯಾಗಿ ಕಟ್ಟಿಕೊಟ್ಟಿತು. ಹೀಗೆ ಇತಿಹಾಸದ ಪುಟಗಳಲ್ಲಿದ್ದ ಹೋರಾಟಗಾರರ ಕಥೆಗಳಿಂದ ಹಿಡಿದು ಸೈನಿಕರ ತ್ಯಾಗದವರೆಗೆ, ಕನ್ನಡದ ಬೆಳ್ಳಿತೆರೆ ದೇಶಪ್ರೇಮದ ಹಲವು ಮುಖಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆ ಈ ಸಿನಿಮಾಗಳನ್ನು ನೆನಪಿಸಿಕೊಳ್ಳುವುದು ಕೂಡ ನಮ್ಮ ಸಿನಿಪರಂಪರೆಗೆ ಸಲ್ಲಿಸುವ ಒಂದು ಗೌರವವೇ ಸರಿ.