ಸಂಗೀತ ಮಾಂತ್ರಿಕ ಇಳಯರಾಜ ಅವರಿಗೂ ಬೆಂಗಳೂರಿಗೂ ಅವಿನಾಭಾವ ನಂಟಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಸಂಗೀತದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇಳಯರಾಜ, ಕನ್ನಡ ಚಿತ್ರರಂಗಕ್ಕೂ ಹಲವು ಅದ್ಭುತ ಹಾಡುಗಳನ್ನು ನೀಡಿದ್ದಾರೆ.

ಸಂಗೀತ ಮಾಂತ್ರಿಕ ಇಳಯರಾಜ ಅವರಿಗೂ ಬೆಂಗಳೂರಿಗೂ ಅವಿನಾಭಾವ ನಂಟಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಸಂಗೀತದ ಮೂಲಕವೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇಳಯರಾಜ, ಕನ್ನಡ ಚಿತ್ರರಂಗಕ್ಕೂ ಹಲವು ಅದ್ಭುತ ಹಾಡುಗಳನ್ನು ನೀಡಿದ್ದಾರೆ. ಆದರೆ ಅವರ ಸಂಗೀತ ಪಯಣದ ಒಂದು ಕುತೂಹಲಕಾರಿ ಸಂಗತಿ ಬಹುತೇಕರಿಗೆ ಗೊತ್ತಿಲ್ಲ. ಅದೇನೆಂದರೆ, ಕನ್ನಡದ 'ಪ್ರಿಯಾ' ಚಿತ್ರದ ಎಲ್ಲಾ ಹಾಡುಗಳನ್ನೂ ಅವರು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಕಂಪೋಸ್ ಮಾಡಿದ್ದರಂತೆ.

ಸಾಮಾನ್ಯವಾಗಿ ಸಂಗೀತ ನಿರ್ದೇಶಕರು ಸ್ಟುಡಿಯೋ ಅಥವಾ ನಾಲ್ಕು ಗೋಡೆಗಳ ನಡುವೆಯೇ ಕುಳಿತು ಹಾಡುಗಳನ್ನು ಸಿದ್ಧಪಡಿಸುತ್ತಾರೆ. ಆದರೆ ಇಳಯರಾಜ ಅವರ ಆಯ್ಕೆ ಮಾತ್ರ ವಿಭಿನ್ನವಾಗಿತ್ತು. ಬೆಂಗಳೂರಿನ ಹಸಿರು ಪರಿಸರದ ನಡುವೆ, ಸಾರ್ವಜನಿಕ ಉದ್ಯಾನವನದ ಬೆಂಚ್ ಮೇಲೆ ಕುಳಿತು ಚಿತ್ರದ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದರು. ಅಷ್ಟಕ್ಕೂ ಇಳಯರಾಜ ಅವರು ಕಬ್ಬನ್ ಪಾರ್ಕ್ ಅನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ? ಇದರ ಹಿಂದೆ ಒಂದು ಸ್ವಾರಸ್ಯಕರ ಘಟನೆಯಿದೆ.

ಕಬ್ಬನ್ ಪಾರ್ಕ್‌ನಲ್ಲಿ ಸಂಗೀತ ಸಂಯೋಜನೆಗೆ ಇಳಯರಾಜ ಪ್ಲ್ಯಾನ್

1978ರಲ್ಲಿ 'ಪ್ರಿಯಾ' ಚಿತ್ರದ ಸಂಗೀತ ಸಂಯೋಜನೆಯ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಇಳಯರಾಜ ಅವರು ಪಂಜು ಅರುಣಾಚಲಂ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದರು. ಆಗ ಬೆಂಗಳೂರಿನ ಕಬ್ಬನ್ ಪಾರ್ಕ್‌ನ ವಾತಾವರಣ ಅವರಿಗೆ ತುಂಬಾ ಇಷ್ಟವಾಗಿತ್ತು. ನಾಲ್ಕು ಗೋಡೆಗಳ ಒಳಗೆ ಕುಳಿತು ಸಂಗೀತ ಸಂಯೋಜನೆ ಮಾಡುವ ಬದಲು, ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಹಾಡುಗಳನ್ನು ಕಂಪೋಸ್ ಮಾಡೋಣ ಎಂದು ಅವರೇ ಸಲಹೆ ನೀಡಿದ್ದರಂತೆ.

ಅದರಂತೆ ಬೆಂಗಳೂರಿನಲ್ಲಿ ರೂಮ್ ಮಾಡಿಕೊಂಡಿದ್ದ ತಂಡ, ಇಳಯರಾಜ ಅವರ ಆಸೆಯಂತೆ ಕಬ್ಬನ್ ಪಾರ್ಕ್‌ಗೆ ತೆರಳಿತ್ತು. ಅಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಬೆಂಚ್ ಮೇಲೆ ಕುಳಿತುಕೊಂಡೇ ಅವರು ಚಿತ್ರದ ಹಾಡುಗಳ ಟ್ಯೂನ್ ಸಿದ್ಧಪಡಿಸಿದ್ದರು. ವಿಶೇಷವೆಂದರೆ, ಚಿತ್ರದ ಎಲ್ಲಾ ಹಾಡುಗಳನ್ನೂ ಸುಮಾರು ಅರ್ಧ ಗಂಟೆಯಲ್ಲೇ ಕಂಪೋಸ್ ಮಾಡಿದ್ದರು ಎಂಬ ವಿಚಾರವನ್ನು ಸಂದರ್ಶನದಲ್ಲಿ ಹಂಚಿಕೊಳ್ಳಲಾಗಿದೆ.

'ಪ್ರಿಯಾ' ಚಿತ್ರದ ಹಾಡುಗಳೇನು?

1978ರಲ್ಲಿ ಬಿಡುಗಡೆಯಾದ 'ಪ್ರಿಯಾ' ಚಿತ್ರದಲ್ಲಿ ಐದು ಹಾಡುಗಳಿದ್ದವು. ಇಳಯರಾಜ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡುಗಳು ಇಂದಿಗೂ ಸಂಗೀತಪ್ರಿಯರ ನೆಚ್ಚಿನ ಹಾಡುಗಳಾಗಿವೆ. 'ಡಾರ್ಲಿಂಗ್ ಡಾರ್ಲಿಂಗ್' ಹಾಡು ಕೂಡ ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.

ಆಗ ಇಳಯರಾಜ ಯಾರೆಂದು ಬೆಂಗಳೂರಿಗೇ ಗೊತ್ತಿರಲಿಲ್ಲ

ಈ ಘಟನೆಯನ್ನು ಸಂದರ್ಶನದಲ್ಲಿ ನೆನಪಿಸಿಕೊಂಡಿರುವವರು, 1978ರಲ್ಲಿ ಇಳಯರಾಜ ಅವರು ಇಂದಿನಷ್ಟು ದೊಡ್ಡ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಸಂಗೀತದ ಪ್ರತಿಭೆ ಮಾತ್ರ ಆಗಲೇ ಅದ್ಭುತವಾಗಿತ್ತು. ಕಬ್ಬನ್ ಪಾರ್ಕ್‌ನ ಸಾಮಾನ್ಯ ಬೆಂಚ್ ಮೇಲೆ ಕುಳಿತು ಹಾಡುಗಳನ್ನು ಕಂಪೋಸ್ ಮಾಡಿದ್ದ ವ್ಯಕ್ತಿ ಮುಂದೆ ಭಾರತೀಯ ಚಿತ್ರರಂಗದ ಸಂಗೀತ ಲೋಕದಲ್ಲಿ ಇತಿಹಾಸ ಸೃಷ್ಟಿಸುತ್ತಾರೆ ಎಂಬುದನ್ನು ಅಂದು ಯಾರೂ ಊಹಿಸಿರಲಿಲ್ಲ.

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಅರಳಿದ ಆ ಸಂಗೀತದ ಕ್ಷಣಗಳು ಇಳಯರಾಜ ಅವರ ಕನ್ನಡ ಚಿತ್ರರಂಗದೊಂದಿಗಿನ ನಂಟನ್ನು ನೆನಪಿಸುವ ಅಪರೂಪದ ಸಂಗತಿಗಳಲ್ಲಿ ಒಂದಾಗಿವೆ.

ಮೂರು ಹಾಡುಗಳಿಗೆ ಮಾತ್ರ ಹೆಚ್ಚು ಸಮಯ

ಇಳಯರಾಜ ಅವರ ಸಂಗೀತ ಪಯಣದಲ್ಲಿ ಕೆಲವು ಹಾಡುಗಳಿಗೆ ಮಾತ್ರ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರಂತೆ. ಕನ್ನಡದ 'ಪ್ರಿಯಾ' ಚಿತ್ರದ 'ಡಾರ್ಲಿಂಗ್ ಡಾರ್ಲಿಂಗ್', 'ಉದಯಗೀತಂ' ಚಿತ್ರದ 'ಪಾಡು ನಿಲಾವೆ' ಹಾಗೂ 'ಸಿಂಧು ಭೈರವಿ' ಚಿತ್ರದ 'ಕಲೈವಾಣಿ' ಹಾಡುಗಳಿಗೆ ಹೆಚ್ಚಿನ ಸಂಶೋಧನೆ ಮತ್ತು ತಯಾರಿ ಅಗತ್ಯವಿದ್ದ ಕಾರಣ ಹೆಚ್ಚು ಸಮಯ ಮೀಸಲಿಟ್ಟಿದ್ದರು ಎಂದು ಹೇಳಲಾಗಿದೆ. ಇನ್ನು 'ದಳಪತಿ' ಚಿತ್ರದ 'ಸುಂದರಿ ಕಣ್ಣಾಲ್ ಒಂದು ಸೇದಿ' ಹಾಡು ಸುಮಾರು ಎಂಟು ನಿಮಿಷಗಳಷ್ಟು ಉದ್ದವಿದ್ದ ಕಾರಣ ಅದನ್ನು ಸಿದ್ಧಪಡಿಸಲು ಮುಕ್ಕಾಲು ಗಂಟೆ ತೆಗೆದುಕೊಂಡಿದ್ದರಂತೆ. ಇಷ್ಟೊಂದು ಉದ್ದದ ಹಾಡಿಗೂ ಕೇವಲ 45 ನಿಮಿಷಗಳಲ್ಲಿ ಸಂಗೀತ ಸಿದ್ಧಪಡಿಸಿದ್ದು ಅವರ ಪ್ರತಿಭೆಗೆ ಸಾಕ್ಷಿ.