ರವಿಚಂದ್ರನ್ ಅವರ ಚಿನ್ನ ಚಿತ್ರದ ನನ್ನವಳು ನನ್ನವಳು... ಹಾಡಿನಲ್ಲಿ ಬರುವ ಮುಟ್ಟದೆಯೇ ಮುದ್ದಾಡಲೇ ಲಿರಿಕ್ಸ್ ಹುಟ್ಟಿದ್ದು ಹೇಗೆ? ನಾಯಕಿಯನ್ನು ಮುಟ್ಟದೇ ಮುದ್ದಾಡೋದು ಹೇಗೆ ಎನ್ನುವ ಬಗ್ಗೆ ಹಂಸಲೇಖ ಏನ್ ಹೇಳಿದ್ದಾರೆ ನೋಡಿ...
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರ ಜೋಡಿಯಲ್ಲಿ ಹಲವು ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಹಾಡಿನಲ್ಲಿ ಮೋಡಿ ಮಾಡುವ ಗುಣ ಇವರಿಬ್ಬರಿಗೂ ಒಲಿದು ಬಂದಿರುವ ಕಾರಣ, ಕೆಲವೊಮ್ಮೆ ತಂತಾನೆಯಾಗಿಯೇ ಹಾಡುಗಳು ಹುಟ್ಟಿಕೊಂಡು ಬಿಡುತ್ತವೆ. 1994ರಲ್ಲಿ ಬಿಡುಗಡೆಯಾಗಿದ್ದ 'ಚಿನ್ನ' ಚಿತ್ರದ ಹಾಡೊಂದು ಆಗ ಟ್ರೆಂಡಿಂಗ್ನಲ್ಲಿ ಇತ್ತು. ರವಿಚಂದ್ರನ್ ಅವರೇ ನಿರ್ಮಿಸಿ, ಬರೆದು, ನಿರ್ದೇಶಿಸಿ, ನಟಿಸಿರುವ ಚಿತ್ರ ಇದಾಗಿದೆ. ಯಮುನಾ, ಪುನೀತ್ ಇಸ್ಸಾರ್ , ಮುಖ್ಯಮಂತ್ರಿ ಚಂದ್ರು , ಲೋಕನಾಥ್ ಮತ್ತು ಪಂಡರಿ ಬಾಯಿ ನಟಿಸಿರುವ ಈ ಸಿನಿಮಾದಲ್ಲಿ ನನ್ನವಳು, ನನ್ನವಳು ಎಂಬ ಹಾಡಿನಲ್ಲಿ ಮನದ ಜೊತೆ ಮಾತಾಡಲೇ, ಮುಟ್ಟದೆಯೇ ಮುದ್ದಾಡಲೇ ಎನ್ನುವ ಲಿರಿಕ್ಸ್ ಇದೆ. ಅದರ ಬಗ್ಗೆ ಇದೀಗ ಹಂಸಲೇಖ ಅವರು ಮಾತನಾಡಿದ್ದಾರೆ.
ಪತ್ರಕರ್ತ ಗೌರೀಶ್ ಅಕ್ಕಿ ಅವರಿಗೆ ನೀಡಿರುವ ಸಂದರ್ಶನದಲ್ಲಿ ಹಂಸಲೇಖಾ ಅವರು, ಈ ಕುತೂಹಲದ ವಿಷಯವನ್ನು ರಿವೀಲ್ ಮಾಡಿದ್ದಾರೆ. ಸ್ವಲ್ಪವೂ ಯೋಚಿಸದೇ ದಿಢೀರ್ ಹುಟ್ಟಿಕೊಂಡಿರುವ ಈ ಹಾಡಿನ ಲಿರಿಕ್ಸ್ ಬಗ್ಗೆ ರೋಚಕ ಸ್ಟೋರಿಯನ್ನು ಅವರು ಹೇಳಿದ್ದಾರೆ. ಅದಕ್ಕೂ ಮೊದಲು ರವಿಚಂದ್ರನ್ ಅವರು ಸಿನಿಮಾಕ್ಕೆ ಪ್ರಿಪೇರ್ ಆಗುವುದು ಹೇಗೆ ಎಂಬ ಬಗ್ಗೆ ಮಾತನಾಡಿದ್ದಾರೆ. ಹಂಸಲೇಖ ಅವರ ಮಾತಿನಲ್ಲಿಯೇ ಹೇಳುವುದಾದರೆ, 'ಮುಟ್ಟದೆಯೇ ಮುದ್ದಾಡದೇ ಹಾಡಿನ ಐಡಿಯಾ ರವಿಚಂದ್ರನ್ ಅವರದ್ದೇ. ಅಷ್ಟಕ್ಕೂ ರವಿಚಂದ್ರನ್ ಅವರು ಸಿನಿಮಾಕ್ಕೂ ಮೊದಲು ಏನ್ ಮಾಡ್ತಾರೆ ಎಂದ್ರೆ, ಸಿನಿಮಾ ಶುರುವಾದಾಗ ಯಾರಾದರೂ ಸುಂದರಿಯನ್ನು ಎಂಗೇಜ್ ಮಾಡಿಕೊಂಡು ಬಿಡುತ್ತಾರೆ. ಆಕೆ ಫ್ಲೈಟ್ ಇಳಿದು ಹೋಟೆಲ್ ರೂಮಿಗೆ ತಲುಪುವುದರ ಒಳಗೇನೇ ಆಕೆಯ ಎಲ್ಲಾ ಸಿನಿಮಾಗಳ ಮಾಹಿತಿ ಪಡೆದುಕೊಂಡಿರುತ್ತಾರೆ. ಆಕೆ ಅದೂವರೆಗೂ ಯಾವ್ಯಾವ ಸಿನಿಮಾ ಮಾಡಿದ್ದಾರೆ, ಅದರ ಎಲ್ಲಾ ಮಾಹಿತಿಗಳನ್ನು ಅವರು ತಲುಪಿಸಿರುತ್ತಾರೆ. ತಾನು ಯಾವ ರೀತಿ ಸಿನಿಮಾ ಮಾಡುತ್ತೇನೆ ಎಂಬುವುದನ್ನು ಅರ್ಥ ಮಾಡಿಸಿರುತ್ತಾರೆ. ರೂಮಿಗೆ ತಲುಪಿ ಸೆಟಲ್ ಆಗುವ ಹೊತ್ತಿಗೆ ಎರಡು ಸಿನಿಮಾ ತೋರಿಸ್ತಾರೆ. ಇದು ರವಿಚಂದ್ರನ್ ಅವರ ಸ್ಟೈಲ್' ಎಂದು ವಿವರಿಸಿದ್ದಾರೆ. ಆದ್ದರಿಂದ ಈ ಕ್ರೆಡಿಟ್ ರವಿಚಂದ್ರನ್‌ಗೆ ಹೋಗಬೇಕು ಎಂದಿದ್ದಾರೆ.
ಇದೇ ವೇಳೆ ರವಿಚಂದ್ರನ್ ಅವರು ಸೆಟ್ಗೆ ಬರುವ ವೇಳೆಗೆ ನಡೆಯುವ ಕ್ರಮಗಳ ಬಗ್ಗೆ ವಿವರಿಸಿದ ಅವರು, ಆರಂಭದಲ್ಲಿ ಅವರು ಹೀರೋಯಿನ್‌ಗೆ ಹೀಗೆಲ್ಲ ಸಿನಿಮಾ ಮಾಡುವ ಬಗ್ಗೆ ಹೇಳ್ತಾರೆ. ಅವರು ಶೂಟಿಂಗ್ ಸೆಟ್ಗೆ ಬರೋಷ್ಟ್ರರಲ್ಲಿ ರೆಡಿಯಾಗಿರ್ತಾರೆ. ಆಗ ಅವರು ರೆಡಿಯಾಗಿ ಸೆಟ್ಟಿಗೆ ಬರಬೇಕು. ಸೆಟ್ಟಿಗೆ ಬಂದು ಅಂಡರ್‌ಸ್ಟ್ಯಾಂಡಿಂಗ್‌ಗೆ ಬರಲಿಲ್ಲ ಅಂದರೆ, ಥೀಮ್ಸ್ ಎಲ್ಲಾ ಚೇಂಜ್ ಮಾಡುತ್ತಾರೆ ರವಿಚಂದ್ರನ್. ಈ ಹಾಡಿನಲ್ಲೂ ಅದೇ ರೀತಿ ಆಗಿತ್ತು. ಆ ಸಮಯದಲ್ಲಿ ನನಗೆ ಬಂದು ಕೇಳಿದರು. ರಾಜು ಒಂದು ಹಾಡು ಮಾಡೋಣ. ನಾನು ಹುಡುಗಿಯನ್ನು ಟಚ್ ಮಾಡುವುದಿಲ್ಲ. ಇಡೀ ಹಾಡನ್ನು ನಾನು ಅವಳ ಬಗ್ಗೆ ಹಾಡಬೇಕು. ಅಂತಹದ್ದೊಂದು ಹಾಡು ಮಾಡು ಎಂದರು. ಆಗ ನನಗೆ ತಲೆಬಿಸಿಯಾಯಿತು. ಸರ್ ಮುಟ್ಟದೆ ಹೇಗೆ ಪ್ರೀತಿ ಮಾಡೋದು? ಅಂದೆ. ಏನಾದರೂ ಒಂದು ಮಾಡಿಕೊಡಿ ಅಂದರು. ಆಗ ಸಡನ್ ಆಗಿ ಈ ಹಾಡು ಹೊಳೆಯಿತು ಎಂದಿದ್ದಾರೆ.
ಆ ಟೈಮ್ನಲ್ಲಿ ನನ್ನವಳು ನನ್ನವಳು ಹಾಡು ಹುಟ್ಟಿಕೊಂಡಿತು. ಮುಟ್ಟದೆಯೇ ಮುದ್ದಾಡಲೇ ಲೈನ್ ಸೇರಿಸಿದೆ. ಆಮೇಲೆ ಚರಣಕ್ಕೆ ಹೋದರೆ, ಅದ್ಭುತವಾದ ಸಾಲುಗಳು ತಂತಾನೇ ಬಂದವು. ತಂಗಾಳಿಯೇ ಅಂತೆಲ್ಲ ಬರೆದು, ಅದಕ್ಕೊಂದು ಹಮ್ಮಿಂಗ್ ಹಾಕಿದ್ವಿ. ಇದನ್ನು ನೋಡಿದಾಗ ಎಸ್.ಪಿ ಬಾಲಸುಬ್ರಹ್ಮಣ್ಯ ಸರ್ ಎಲ್ಲಯ್ಯ ನಿನಗೆ ಇಂಥದ್ದೆಲ್ಲಾ ಐಡಿಯಾ ಬರುತ್ತೆ ಎಂದು ಪ್ರಶ್ನಿಸಿದ್ರು. ಆಗ ನಾನು ಇದೆಲ್ಲಾ ರವಿಚಂದ್ರನ್ ತಲೆ ಎಂದೆ ಎಂದು ಹಂಸಲೇಖ ನಕ್ಕಿದ್ದಾರೆ. ಕೊನೆಗೆ ಎಸ್‌ಪಿಬಿ ಅವರು ಇದನ್ನು ತೆಲುಗಿನಲ್ಲಿ ಬಳಸಬಹುದಾ ಅಂತ ಹೇಳಿದರು. ಧಾರಾಳವಾಗಿ ಬಳಸಿಕೊಳ್ಳಿ ಅಂದೆ ಎಂದು ಹಾಡು ಹುಟ್ಟಿದ್ದನ್ನು ಹೇಳಿದ್ದಾರೆ.
