ಹಂಪಿ ಕನ್ನಡ ವಿವಿಯ 29ನೇ ಘಟಿಕೋತ್ಸವದಲ್ಲಿ ನಾಗೇಂದ್ರ ಪ್ರಸಾದ್‌ ಅವರ 'ಕನ್ನಡ ಚಲನ ಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ' ಎಂಬ ಮಹಾ ಪ್ರಬಂಧಕ್ಕೆ ಡಿ. ಲಿಟ್‌ ಗೌರವ ನೀಡಿದೆ. 'ನಿನ್ನೆಯ ತನಕ ಆಯುರ್ವೇದದ ಡಾ. ವಿ ನಾಗೇಂದ್ರ ಪ್ರಸಾದ್‌ ಆಗಿದ್ದೆ. ಇಂದಿನಿಂದ ಡಿ ಲಿಟ್‌ ಪದವಿಯ ಡಾ. ವಿ ನಾಗೇಂದ್ರ ಪ್ರಸಾದ್‌ ಆಗಿದ್ದೇನೆ,' ಎಂದು ನಾಗೇಂದ್ರ ಪ್ರಸಾದ್‌ ಸ್ವಾರಸ್ಯಕರವಾಗಿ ಈ ಖುಷಿಯ ಸಂಗತಿ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಹೆಮ್ಮೆ ನಾಗೇಂದ್ರ ಪ್ರಸಾದ್; ಹಾಡಿಗೂ ಸೈ, ನಿರ್ದೇಶನಕ್ಕೂ ಜೈ!

ಕನ್ನಡ ಚಿತ್ರರಂಗದಲ್ಲಿ 'ಕವಿರತ್ನ' ಎಂದೇ ಗುರುತಿಸಿಕೊಂಡಿರುವ ನಾಗೇಂದ್ರ ಪ್ರಸಾದ್ ಗೀತ ರಚನಕಾರನಾಗಿ ಮಾತ್ರವಲ್ಲದೇ ನಿರ್ದೇಶಕ, ನಟ, ಸಂಭಾಷಣೆ ಬರಹಗಾರನಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಅದ್ಭುತ ಹಾಡುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನಾಗೇಂದ್ರ ಪ್ರಸಾದ್‌ ಅವರ 'ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ' ಹಾಡು ಹಾಗೂ  ಕರಿಯಾ ಚಿತ್ರದ  'ಕೆಂಚಾಲೋ ಮಂಚಾಲೋ' ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಮೂಲತಃ ಮಂಡ್ಯ ಜಿಲ್ಲೆಯ ನೆಲಮಂಗಲ ತಾಲೂಕಿನ ಇಜ್ಜಲ ಘಟ್ಟ ಎಂಬ ಪುಟ್ಟ ಊರಿನಲ್ಲಿ ನಾಗೇಂದ್ರ ಪ್ರಸಾದ್ ಜನಿಸಿದರು. ಮೈಸೂರು ಯೂನಿವರ್ಸಿಟಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪದವಿ ಪಡೆದಿರುವ ನಾಗೇಂದ್ರರವರು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ, ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಭಾವನಾ ಆಯುರ್ವೇದಿಕ್ ಸೆಂಟರ್‌ ನಡೆಸುತ್ತಿದ್ದರು. ನಾಗೇಂದ್ರ ಪ್ರಸಾದ್‌ ಅವರ ಸಿನಿ ಜರ್ನಿ ಜೊತೆ ಅವರ ಶೈಕ್ಷಣಿಕ ಪ್ರೇಮವನ್ನು ಹಾಗೂ ಜ್ಞಾನದಾಹವನ್ನು ಮೆಚ್ಚಲೇ ಬೇಕು.