ಕನ್ನಡ ಚಲನಚಿತ್ರರಂಗ ಕಂಡ ಹೆಮ್ಮೆಯ ಗೀತರಚನೆಕಾರ ವಿ. ನಾಗೇಂದ್ರ ಪ್ರಸಾದ್. ಇವರು ಪೆನ್ ಹಿಡಿದರೆ ಸಾಕು ಅಲ್ಲೊಂದು ಅದ್ಭುತವಾದ ಹಾಡು ಹುಟ್ಟಿತೆಂದೇ ಅರ್ಥ. ಭಕ್ತಿಗೀತೆ, ಪ್ರಣಯಗೀತೆ ಎಲ್ಲಾ ರೀತಿ ಯ ಹಾಡುಗಳನ್ನು ರಚಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಗೀತ ರಚನೆ, ನಿರ್ದೇಶನ, ನಾಟಕ ರಚನೆ, ಸಂಭಾಷಣೆ ಎಲ್ಲದಕ್ಕೂ ಜೈ ಎನ್ನುವ  ಪ್ರತಿಭಾನ್ವಿತ. 

ಶ್ರೀ ಮಂಜುನಾಥ ಸಿನಿಮಾದ ’ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ.... ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಹಾಡು ಎಲ್ಲರ ಮನೆಯ ಸುಪ್ರಭಾತ ಎಂದರೆ ತಪ್ಪಾಗಲಿಕ್ಕಿಲ್ಲ.  ಧಮ್ ಚಿತ್ರದ ’ ಈ ಟಚ್ಚಲಿ ಏನೋ ಇದೆ... ಎಂದು ಕಚಗುಳಿ ಇಟ್ಟರೆ, ಕರಿಯಾ ಚಿತ್ರದ ’ಕೆಂಚಾಲೋ ಮಂಚಾಲೋ...’ ಎಂದು ಹುಡುಗರ ಪಾಲಿನ ರಾಷ್ಟ್ರಗೀತೆಯನ್ನು ಬರೆಯುತ್ತಾರೆ. 

ಸ್ವಾತಿ ಮುತ್ತು ಚಿತ್ರದಲ್ಲಿ ’ ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ... ಎಂದು ಲಾಲಿ ಹಾಡಿದ್ರೆ ಆಪ್ತಮಿತ್ರದಲ್ಲಿ ’ ಪಟಪಟ ಗಾಳಿಪಟ... ಎಂದು ಗಾಳಿ ಪಟ ಹಾರಿಸುತ್ತಾರೆ. ಇತ್ತೀಚಿಗೆ ಬಂದ ಕೆಜಿಎಫ್ -1 ರಲ್ಲಿ ಸಲಾಂ ರಾಕಿ ಭಾಯ್... ಎಂದು ಯಶ್ ಗೆ ಎಲ್ಲರೂ ಸಲಾಂ ಹೊಡೆಯುವಂತೆ ಮಾಡಿದರು. 

ಸಂಗೀತಕ್ಕೆ ಯಾವುದೇ ಹಂಗಿಲ್ಲ. ಹಾಗೇ ನಾಗೇಂದ್ರ ಪ್ರಸಾದ್ ಅವ್ರು ಇಂತದ್ದೇ ಹಾಡು ಅಂತ ಎಂದಿಗೂ ಫಿಕ್ಸ್ ಆದವರಲ್ಲ. ಕಮರ್ಷಿಯಲ್ ಹಾಡು ಎಂದಾಗ ಸಲಾಂ ರಾಕಿ ಬಾಯ್ ಅಂತಾರೆ. ಟಗರು ಬಂತು ಟಗರು ಹಾಗೂ ಕೋಟಿಗೊಬ್ಬ ಕೋಟಿಗೊಬ್ಬ ಟೈಟಲ್ ಸಾಂಗ್ ಕೂಡ ಇವ್ರ ಕೈನಲ್ಲೇ ಮೂಡಿರೋ ಹಾಡುಗಳು. ಇನ್ನೂ ಫೀಲಿಂಗ್ ಅಂದ ತಕ್ಷಣ ‘ಅಪ್ಪ ಐ ಲವ್ ಯು ಪಾ...’ ಅಂತ ಎಲ್ಲರ ಕಣ್ಣಲ್ಲಿ ನೀರು ತರಿಸುವಂತ ಸಾಹಿತ್ಯ ಬರೆದವರು ಇವರೇ. 

ಅದರ ಜೊತೆಯಲ್ಲಿ ಮನಸ್ಸಿನಲ್ಲೇ ಕೃಷ್ಣನ ನೆನೆಯುವ ‘ನೀನೇ ರಾಮ ನೀನೇ ಶಾಮ... ಅಂತನೂ ಬರೆದಿದ್ರು. ಪ್ರತಿ ವರ್ಷವೂ ಹಿಟ್ ಲೀಸ್ಟ್ ಸೇರುವಂತ ಹಾಡುಗಳು ಇವರ ಬತ್ತಳಿಕೆಯಿಂದ ಬರುತ್ತಲೇ ಇರುತ್ತವೆ. ಅದೇ ರೀತಿ ಇಂದಿಗೂ ಯುವ ಪ್ರೇಮಿಗಳನ್ನ ಕಾಡುವ ಹಾಡುಗಳು ಅಂದ್ರೆ ಶಾಂಕುತ್ಲೆ ಸಿಕ್ಕಳು...ಒಂದು ಮಳೆ ಬಿಲ್ಲು ..ಒಂದು ಮಳೆ ಮೋಡ ಹಾಡು. 

ಕೆ ವಿ ಜಯರಾಮ್ ನಿರ್ದೇಶನದ ಗಾಜಿನ ಮನೆ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಾಗೇಂದ್ರ ಪ್ರಸಾದ್ ಹಿಂತಿರುಗಿ ನೋಡಿದ್ದೇ ಇಲ್ಲ.

ಇವರು ಹುಟ್ಟಿದ್ದು ಡಿ. 03, 1975 ರಲ್ಲಿ ಮಂಡ್ಯ ಜಿಲ್ಲೆಯ ನೆಲಮಂಗಲ ತಾಲೂಕಿನ ಇಜ್ಜಲ ಘಟ್ಟ ಎಂಬ ಪುಟ್ಟ ಊರಿನಲ್ಲಿ ಜನಿಸಿದರು. ತಂದೆ ಎಂ ವಿ ವೆಂಕಟರಮಪ್ಪ, ತಾಯಿ ಚಂದ್ರಮ್ಮ. ಪ್ರಾಥಮಿಕ ಶಾಲಾ ಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ ಮುಗಿಸಿದ ನಾಗೇಂದ್ರ ಪ್ರಸಾದ್, ಮೈಸೂರು ಯೂನಿವರ್ಸಿಟಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. 1000 ಕ್ಕೂ ಹೆಚ್ಚಿನ ಚಿತ್ರಗಳಿಗೆ 3000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಶ್ರೀ ಮಂಜುನಾಥ, ಸ್ವಾತಿಮುತ್ತು, ಶಿವಲಿಂಗ ಸಿನಿಮಾ ಸೇರಿದಂತೆ 20 ಕ್ಕೂ ಹೆಚ್ಚು ಸಿನಿಮಾಗಳಿಗೆ ಡೈಲಾಗ್ ಬರೆದಿದ್ದಾರೆ.   ಅಂಬಿ, ಶಿಷ್ಯ, ಗೂಗಲ್ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. 

ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಸ್ವಾರಸ್ಯಕರ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ. ‘ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರಿನ ಕುರುಬರಹಳ್ಳಿಯಲ್ಲಿ `ಭಾವನಾ ಆಯುರ್ವೇದಿಕ್ ಸೆಂಟರ್’ ನಡೆಸ್ತಾ ಇದ್ದೆ. 1999 ರಲ್ಲಿ ಕೆ.ವಿ. ಜಯರಾಂ ನಿರ್ದೇಶನದ ‘ಗಾಜಿನ ಮನೆ’ ಚಿತ್ರಕ್ಕೆ `ಬೇವು ಬೆಲ್ಲ ಹಂಚಿಕೊಂಡೆ’ ಎಂಬ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ನನ್ನ ಹಾಡುಗಳ ಹಿಂದೆ ವರಕವಿ ಬೇಂದ್ರೆಯವರ ಪ್ರಭಾವವಿದೆ. ಮೆಲೋಡಿ ಸಾಂಗ್ ಬರೆಯೋದು ಅಂದ್ರೆ ನನಗಿಷ್ಟ' ಎಂದು ಹೇಳಿಕೊಂಡಿದ್ದಾರೆ. 

ಸದ್ಯ ವಿ ನಾಗೇಂದ್ರ ಪ್ರಸಾದ್ ಅವ್ರ ಕುರುಕ್ಷೇತ್ರದ ಹಾಡುಗಳು ಸಖತ್ ಸೌಂಡ್ ಮಾಡ್ತಿದೆ. ಸಾಹೋರೆ ಅಂತ ದುರ್ಯೋಧನನ ಪೌರುಷವನ್ನ ವರ್ಣಿಸೋ ಹಾಡು ಕಳೆದ ವಾರ ಬಿಡುಗಡೆ ಆಗಿದ್ದು ಈಗ 'ಜಾರು ತಂತಿ ನಿಮ್ಮ ಭುಜವು.. ಹಾಡು ಎಲ್ಲರ ಮನಸ್ಸು ಕದ್ದಿದೆ. ಈ ಮೂಲಕ ಸಾಕಷ್ಟು ವರ್ಷಗಳ ನಂತರ ಪೌರಾಣಿಕ ಹಾಡನ್ನು ಕೇಳುವ ಸದಾವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.