ಶ್ರೀರಾಮನ ಅವಹೇಳನ, ಲವ್ ಜಿಹಾದ್ಗೆ ಪ್ರೇರಣೆ: ಅನ್ನಪೂರ್ಣಿ, ನಯನತಾರಾ ವಿರುದ್ಧ ಎಫ್ಐಆರ್ ದಾಖಲು
ಅನ್ನಪೂರ್ಣಿ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ದೂರು ದಾಖಲು ಮಾಡಿದ್ದು, ನಟಿ ನಯನತಾರಾ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಅತ್ತ ಅಯೋಧ್ಯೆಯಲ್ಲಿ ಶತ ಶತಮಾನಗಳ ಕನಸು ಇದೀಗ ನನಸಾಗುತ್ತಿರುವ ಕಾಲ ಕೂಡಿ ಬಂದಿದೆ. ಇದೇ 22 ರಂದು ನಡೆಯಲಿರುವ ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠೆ ಕಾರ್ಯಕ್ಕೆ ಕೋಟ್ಯಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿನ ಶ್ರೀರಾಮನ ಭಕ್ತರೂ ಐತಿಹಾಸಿಕ ದಿನಕ್ಕಾಗಿ ಕಾಯುತ್ತಿದ್ದಾರೆ. ಹಿಂದೂಗಳು ಮಾತ್ರವಲ್ಲದೇ ವಿಶೇಷವಾಗಿ ಕೆಲವು ಮುಸ್ಲಿಮರು ಕೂಡ ಪ್ರಾಣ ಪ್ರತಿಷ್ಠೆ ಕಾರ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ಪ್ರಾಣ ಪ್ರತಿಷ್ಠೆಗೂ ಮುನ್ನ ವಾರಣಾಸಿಯಿಂದ ನಜ್ನೀನ್ ಅನ್ಸಾರಿ ಮತ್ತು ನಜ್ಮಾ ಪರ್ವಿನ್ ಎಂಬ ಇಬ್ಬರು ಮುಸ್ಲಿಂ ಮಹಿಳೆಯರು ಕಾಶಿಗೆ ‘ರಾಮಜ್ಯೋತಿ’ ತರಲು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದು, ಇನ್ನಷ್ಟು ಮಂದಿ ಇದರಲ್ಲಿ ಭಾಗಿಯಾಗಲು ಮುಂದೆ ಬಂದಿದ್ದಾರೆ. ಭಗವಾನ್ ರಾಮನ ಆತ್ಮವನ್ನು ಸಂಕೇತಿಸುವ ಜ್ಯೋತಿಯನ್ನು ಮುಸ್ಲಿಂ ಪ್ರದೇಶಗಳ ಮೂಲಕ ಭಗವಾನ್ ರಾಮನು ತಮ್ಮ ಪೂರ್ವಜ ಮತ್ತು ಪ್ರತಿಯೊಬ್ಬ ಭಾರತೀಯನ ಡಿಎನ್‌ಎ ಒಂದೇ ಎಂಬ ಸಂದೇಶವನ್ನು ರವಾನಿಸುವ ಮೂಲಕ ಈ ಕಾರ್ಯ ಅಭೂತಪೂರ್ವ ಯಶಸ್ಸನ್ನು ಪಡೆಯುತ್ತಿದೆ.
ಆದರೆ ಅದೇ ಇನ್ನೊಂದೆಡೆ, ಕೆಲವರು ಇದನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಾ ಕುಹಕವಾಡುತ್ತಿರುವ ನಡುವೆಯೇ, ಶ್ರೀರಾಮನ ಅವಹೇಳನ ಮಾಡುವಂಥ ಅನ್ನಪೂರ್ಣಿ ಹೆಸರಿನ ಚಿತ್ರ ಬಿಡುಗಡೆಯಾಗಿದ್ದು, ಇದರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಸದ್ಯ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಈ ಚಿತ್ರದಲ್ಲಿ ರಾಮನ ಬಗ್ಗೆ ಅವಹೇಳನ ಮಾಡಲಾಗಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇದೀಗ ಎಫ್ಐಆರ್ ದಾಖಲು ಮಾಡಲಾಗಿದೆ. ಜವಾನ್ ಚಿತ್ರದ ಖ್ಯಾತಿಯ ಬಳಿಕ ನಟಿ ನಯನತಾರಾ ಅನ್ನಪೂರ್ಣಿಯಲ್ಲಿ ಕಾಣಿಸಿಕೊಂಡಿದ್ದು, ಅವರ ವಿರುದ್ಧವೂ ಈಗ ದೂರು ದಾಖಲಾಗಿದೆ. ಇದು ಅವರ 75ನೇ ಚಿತ್ರವಾಗಿದೆ.
ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ @57: ದಿಲೀಪ್, ರೆಹಮಾನ್ ಆಗಿದ್ದು ಏಕೆ? ಹೇಗೆ?
ರಾಮನ ವಿರುದ್ಧ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಈ ಚಿತ್ರವು ಹಿಂದೂ ವಿರೋಧಿಯಾಗಿದೆ. ಅಷ್ಟೇ ಅಲ್ಲದೇ, ಚಿತ್ರವು ಲವ್ ಜಿಹಾದ್ ಅನ್ನು ಕೂಡ ಉತ್ತೇಜಿಸುತ್ತದೆ ಎಂದು ಆರೋಪಿಸಿರುವ ರಮೇಶ್ ಸೋಲಂಕಿ ಅವರು, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದಾರೆ. ಅನ್ನಪೂರ್ಣಿ ಆಹಾರದ ದೇವತೆಯಾಗಿದ್ದು, ನಯನತಾರಾ ಸಂಪ್ರದಾಯವನ್ನು ಮೀರಿಸಿದ್ದಾರೆ ಎಂದು ರಮೇಶ್ ಅವರು ತಿಳಿಸಿದ್ದು, ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಗವಾನ್ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ಇಡೀ ವಿಶ್ವವೇ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಝೀ ಸ್ಟುಡಿಯೋಸ್, ನಾಡ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಹಿಂದೂ ವಿರೋಧಿ ಸಿನಿಮಾ ಅನ್ನಪೂರಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ ಹಿಂದೂ ಪೂಜಾರಿಯ ಮಗಳು ಬಿರಿಯಾನಿ ಅಡುಗೆ ಮಾಡಲು ನಮಾಜ್ ಮಾಡುತ್ತಾಳೆ, ಈ ಚಿತ್ರದಲ್ಲಿ ಲವ್ ಜಿಹಾದ್ ಪ್ರಚೋದಿಸಲಾಗಿದೆ. ಫರ್ಹಾನ್ (ನಟ) ಭಗವಾನ್ ಶ್ರೀ ರಾಮ್ ಕೂಡ ಮಾಂಸಾಹಾರಿ ಎಂದು ಹೇಳುವ ಮೂಲಕ ನಟಿಯನ್ನು ಮಾಂಸ ತಿನ್ನಲು ಮನವೊಲಿಸಿದ್ದಾನೆ. ಇದು ಹಿಂದೂ ಭಾವನೆಗೆ ಧಕ್ಕೆ ತರುವಂಥದ್ದಾಗಿದೆ ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶ್ವದ ಏಕಮಾತ್ರ 7 ಸ್ಟಾರ್ ಹೋಟೆಲ್ನಲ್ಲಿ ಡಾ.ಬ್ರೋ: ಟಾಯ್ಲೆಟ್ನಿಂದ ಹಿಡಿದು ಮುಟ್ಟಿದ್ದೆಲ್ಲವೂ ಚಿನ್ನವೇ!