ಬಿಎಸ್‌ ಲಿಂಗದೇವರು

ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಬಿಡುಗಡೆ ಆದ ದಿನ. ಪೌರಾಣಿಕ ಐತಿಹಾಸಿಕ, ಸಾಮಾಜಿಕ, ಸಾಹಿತ್ಯ ಕೃತಿಗಳ ಕತೆ ಆಧಾರಿತ ಸಿನಿಮಾಗಳಿಂದ ಈಗ ಸಿನಿಮಾಕ್ಕಾಗಿಯೇ ಕತೆಗಳು ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ.

86 ವರ್ಷಗಳ ಇತಿಹಾಸವಿರುವ ಕನ್ನಡ ಸಿನಿಮಾ ನೋಡೋಕೆ ಜನ ಚಿತ್ರ ಮಂದಿರಗಳಿಗೆ ಬರ್ತಾ ಇಲ್ವಾ ಅಥವಾ ಯಾವುದೇ ಭಾಷೆಯ ಸಿನಿಮಾ ನೋಡೋಕೆ ಜನ ಬರ್ತಾ ಇಲ್ವ?

ಇಷ್ಟೆಲ್ಲಾ ಪೀಠಿಕೆ ಹಾಕಿದ್ದು, ಇವತ್ತಿನ ಕನ್ನಡ ಚಲನಚಿತ್ರರಂಗ ಎತ್ತ ಸಾಗುತ್ತಿದೆ ಅನ್ನುವುದನ್ನ ಕಳೆದ ಎರಡು ಮೂರು ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಇಟ್ಟುಕೊಂಡು ಒಂದು ಅವಲೋಕನ ಮಾಡುವ ಉದ್ದೇಶದಿಂದ.

ಚಲನಚಿತ್ರಗಳು ಕೆಲವು ವರ್ಷಗಳ ಹಿಂದಿನವರೆಗೂ ಕಲೆಯಾಗಿ ಗರುತಿಸಿಕೊಂಡಿತ್ತು ಆಗ ಇದಕ್ಕೆ ಉದ್ಯಮದ ಮಾನ್ಯತೆ ಬೇಕು ಎಂಬ ಮಾತುಗಳು ಮತ್ತು ಹೋರಾಟಗಳು ನಡೆದು ಸಿನಿಮಾ ಒಂದು ಉದ್ಯಮ ಎಂದು ಸರ್ಕಾರ ಪರಿಗಣಿಸಿ ಉದ್ಯಮಕ್ಕೆ ಸಿಗುವ ಸವಲತ್ತುಗಳನ್ನು ಸಿನಿಮಾ ನಿರ್ಮಾಣಕ್ಕೂ ಕೊಡಲಾಯಿತು. ಉದಾಹರಣೆಗೆ ಸಿನಿಮಾ ನೆಗೆಟಿವ್‌ ಒತ್ತೆ ಇಟ್ಟುಕೊಂಡು ಬ್ಯಾಂಕ್‌ಗಳಿಂದ ನಿರ್ಮಾಪಕರು ಲೋನ್‌ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು. ಬೆರಳೆಣಿಕೆಯಷ್ಟುಸಿನಿಮಾ ನಿರ್ಮಾಣ ಆಗುತ್ತಿದ್ದ ಕಾಲವಾದ್ದರಿಂದ ಎಲ್ಲರೂ ಸ್ವಾಗತಿಸಿದರು ಕೂಡ. ಉದ್ಯಮದ ಮಾನ್ಯತೆ ಪಡೆದು ಅದರ ಸವಲತ್ತುಗಳನ್ನು ಪಡೆದ ಮೇಲೆ ಸಿನಿಮಾ ಕೇವಲ ಕಲೆಯಾಗಿ ಉಳಿಯದೆ ಉದ್ಯಮಗಳಿಗೆ ಅನ್ವಯವಾಗುವ ಎಲ್ಲಾ ಕಾನೂನುಗಳು, ನಿಯಮಗಳು ಸಿನಿಮಾಕ್ಕೂ ಬಂತು. ಇದರ ಫಲವಾಗಿ 2003ರಿಂದ Competition commission of India - CCIನ ಪರಿಧಿಗೆ ಒಳಗೊಂಡಿತ. CCI is the statuory authority responsible for reviewing combination and assessing whether or  not they cause or are likely to cause an appreciable adverse effect on competition within the relevant markets(s) in India. 

ಕನ್ನಡದ ಮೊದಲ ಇ-ಆಡಿಯೋ ಬುಕ್‌ ಬಿಡುಗಡೆ

ಹೀಗಾಗಿ ಇವತ್ತು ಸಿನಿಮಾವನ್ನು ಮಾರುಕಟ್ಟೆಯಲ್ಲಿ ಸಿಗುವ ವಸ್ತುವಾಗಿ ನೋಡುವಂತಾಯಿತು ಮತ್ತು ಪ್ರೇಕ್ಷಕರು ಗ್ರಾಹಕರಾದರು. ಕಲಾವಿದರು ವಸ್ತುಗಳಾದರು ಮತ್ತು ಕಲೆಯ ಆರಾಧಕರು, ಕಲೆ ಪ್ರೋತ್ಸಾಹ ಮಾಡುವವರು ಗ್ರಾಹಕರಾದ ಮೇಲೆ ಸಿನಿಮಾರಂಗ ಕೂಡ ಕಲಾರಂಗ, ಕಲೆಯನ್ನು ಪ್ರತಿನಿಧಿಸುವ ಒಂದು ಮಾಧ್ಯಮ ಎನ್ನುವುದು ಅಪ್ರಸ್ತುತ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಎಲ್ಲಿ ಸಾಂಸ್ಕೃತಿಕ ವಾತಾವರಣ ಇರಲ್ಲವೋ ಆ ಸಮಾಜ ಸತ್ತ ಹಾಗೆ ಅನ್ನುವುದು ನನ್ನ ನಂಬಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಆಗುತ್ತಿದೆ.

ಸಿನಿಮಾವನ್ನು ಒಂದು ಕಲೆಯಾಗಿ ಪರಿಗಣಿಸಿ, ಕೇವಲ ಮನರಂಜನೆ ದೃಷ್ಟಿಯಿಂದ ನೋಡದೆ, ಸಿನಿಮಾ ಸಮಾಜವನ್ನು ಚಿಂತನೆ ಮಾಡುವಂತೆ ಮಾಡುವ ಮಾಧ್ಯಮ ಮತ್ತು ಸಿನಿಮಾ ಎನ್ನುವುದು ಎಲ್ಲಾ ಕಲಾಪ್ರಕಾರಗಳ ಸಂಯೋಜಿತ ಕಲೆ ಎಂದು ನಂಬಿರುವವರಿಗೆ ಆಘಾತ ಆಗಿದೆ ಎಂಬ ಭಾವನೆ ನನ್ನದು.

ವ್ಯಾಪಾರಿ ನೆಲೆಗಟ್ಟಿನ ‘ಗಂಟು ಮೂಟೆ’, ‘ಗಿರ್ಮಿಟ್‌’, ‘ಮುಂದಿನ ನಿಲ್ದಾಣ’, ‘ಕಥಾಸಂಗಮ’, ‘ಅಳಿದು ಉಳಿದವರು’, ‘ಬಡ್ಡಿ ಮಗನ್‌ ಲೈಫು’, ‘ನಾನು ಮತ್ತು ಗುಂಡಾ’, ‘ಮತ್ತೆ ಉದ್ಭವ’, ‘ಮಾಲ್ಗುಡಿ ಡೇಸ್‌’, ‘ಲವ್‌ ಮಾಕ್‌ಟೇಲ್‌’, ‘ಜಂಟಲ್‌ಮ್ಯಾನ್‌’, ‘ದಿಯಾ’ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಒಳ್ಳೆಯ ವಿಮರ್ಶೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಕಾಣದ ಸಿನಿಮಾಗಳು, ನಿರ್ಮಾಪಕನಿಗೆ ತಾನು ಹಾಕಿದ ಹಣ ಮರಳಿ ಪಡೆಯಲು ಸಾಧ್ಯವಾಗದ ಸಿನಿಮಾಗಳು ಎಂದು ನಾನು ಭಾವಿಸುತ್ತೇನೆ. ಮೊದಲ ವಾರ ಹೆಚ್ಚೆಚ್ಚು ಪ್ರೇಕ್ಷಕರು ನೊಡದೆ, ಮುಂದಿನ ದಿನಗಳಲ್ಲಿ ಕೆಲವೇ ಕೆಲವು ಸ್ಕ್ರೀನ್‌ಗಳಲ್ಲಿ 50 ದಿನ ಪ್ರದರ್ಶನಗೊಂಡರೂ ನಿರ್ಮಾಪಕನಿಗೆ ಹಣ ಬರುವುದಿಲ್ಲ ಅನ್ನುವುದು ಸತ್ಯ.

ಷ. ಶೆಟ್ಟರ್‌ ಕಥಾನಕ; ಸ್ವತಂತ್ರ ಬಂದ ದಿನ ಸಿಹಿ ಬರುವುದು ಎಂದು ನಂಬಿ ನಡೆದವರು!

ಎಲ್ಲಿ ಎಡವಿದರು ಎಂಬ ಪ್ರಶ್ನೆ ಹಾಕಿಕೊಂಡರೆ...

1. ಪ್ರಚಾರ

ಈಗಿನ ಕಾಲಘಟ್ಟದಲ್ಲಿ ಪ್ರಚಾರದ ರೂಪುರೇಷೆ ಮತ್ತು ವಿಸ್ತಾರ ಬದಲಾಗಿ ನಮ್ಮಂತಹ ಸಿನಿಮಾ ನಿರ್ದೇಶಕರಿಗೆ ಗೊಂದಲ ಉಂಟಾಗಿರುವುದಂತೂ ಸತ್ಯ. ಎಲ್ಲಿ ಪ್ರಚಾರ ಮಾಡಬೇಕು- ಸಾಮಾಜಿಕ ಜಾಲತಾಣವೇ ಮತ್ತು ಸಂಪ್ರದಾಯದ ಮಾಧ್ಯಮದ ಮೂಲಕವೇ? ದಿನ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಪ್ರಚಾರ ಮಾಡಿದರೆ ಹೆಚ್ಚು ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಬರುತ್ತಾರೆ ಅನ್ನುವ ನಂಬಿಕೆ ಇತ್ತು, ಈಗಲೂ ಇದೆ. ಆದರೆ ಇವೆರಡಕ್ಕೂ ಈಗ ಹೆಚ್ಚು ಹಣ ಬೇಕು. ಒಂದು ಕೋಟಿಯ ವೆಚ್ಚದಲ್ಲಿ ಸಿನಿಮಾ ಮಾಡಲು ಸಾಧ್ಯ ಇದೆ. ಆದರೆ ಪ್ರಚಾರಕ್ಕೆ ಮಿತಿ ಇಲ್ಲ!! ಹೆಚ್ಚು ಜನರಿಗೆ ತಲುಪಿದ್ದೇವೆ ಎಂದು ಭಾಸವಾದರೂ ಅವರುಗಳನ್ನು ಚಿತ್ರಮಂದಿರಗಳಿಗೆ ಬರುವಂತೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಾಸ್ತವ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ, ನಟಿಯರು ಬಂದು ಪ್ರಚಾರ ಮಾಡಿದರೂ ಸಿನಿಮಾ ನಿರ್ಮಾಪಕನಿಗೆ ತಾನು ಹಾಕಿದ ಬಂಡವಾಳ ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಅನೇಕ ಗೊಂದಲಗಳು ಇದ್ದರೂ ಕನ್ನಡ ಚಲನಚಿತ್ರಗಳ ನಿರ್ಮಾಣದ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಅನ್ನುವುದು ಕೂಡ ಮತ್ತೊಂದು ಸತ್ಯ. ಸ್ಟಾರ್‌ ಸಿನಿಮಾಗಳು ಕೂಡ ಇದೇ ಒತ್ತಡದಲ್ಲಿವೆ.

2 . ಚಿತ್ರ ಮಂದಿರಗಳ ಕೊರತೆ

15ರಿಂದ 20ವರ್ಷಗಳ ಹಿಂದೆ ಸಮಾರು 1200ಕ್ಕೂ ಹೆಚ್ಚು ಚಿತ್ರಮಂದಿರಗಳು ಕರ್ನಾಟಕದಲ್ಲಿ ಇದ್ವು ಮತ್ತು ಅವೆಲ್ಲವೂ ಏಕಪರದೆ ಹೊಂದಿರುವ ಕನಿಷ್ಠ 500 ಪ್ರೇಕ್ಷಕರು ಕೂತು ಸಿನಿಮಾ ನೋಡಲು ಅವಕಾಶ ಇದ್ದ ಚಿತ್ರ ಮಂದಿರಗಳು. ಸಿನಿಮಾ ನಿರ್ಮಾಪಕನಿಗೂ ಚಿತ್ರಮಂದಿರ ಮಾಲೀಕರಿಗೂ ಅವಿನಾಭಾವ ಸಂಬಂಧ ಮತ್ತು ಎಲ್ಲಾ ಕಷ್ಟಸುಖಗಳಿಗೆ ಒಬ್ಬರಿಗೊಬ್ಬರು ಸ್ಪಂದಿಸುತ್ತಿದ್ದರು. ಆಗ ಕಲಾವಿದರನ್ನ ಆರಾಧಿಸುತ್ತಿದ್ದ ಪ್ರೇಕ್ಷಕ ವರ್ಗ ದೊಡ್ಡದಿತ್ತು, ಚಿತ್ರ ಮಂದಿರಗಳ ಮಾಲೀಕರು ಕೂಡ ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡು ಪ್ರೋತ್ಸಾಹ ಮಾಡುತ್ತಿದ್ದರು. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು ಮತ್ತು ಹಂಚಿಕೆದಾರರು ಒಂದು ಕುಟುಂಬದ ಸದಸ್ಯರಂತೆ ಇದ್ದು ಮತ್ತು ಆ ಕುಟುಂಬಕ್ಕೆ ಯಜಮಾನ ಇದ್ದ. ಸರ್ಕಾರದ ಕಾನೂನು ನಿಯಮಗಳು ಇದ್ದರೂ ಕೂಡ ಆ ಯಜಮಾನ ಹೇಳಿದ ಮಾತು ಅಂತಿಮ ಮತ್ತು ಆ ಯಜಮಾನ ಸ್ವಾರ್ಥವಿಲ್ಲದೆ ಎಲ್ಲರ ಒಳತಿಗಾಗಿ ತ್ಯಾಗ ಮಾಡಿ ತನ್ನ ನಂಬಿರುವ ಕುಟುಂಬವನ್ನ ಮುನ್ನಡೆಸಿದ ಹಲವಾರು ಉದಾಹರಣೆ ಇದ್ದಾವೆ.

ಬದಲಾದ ಇವತ್ತಿನ ಸಂದರ್ಭದಲ್ಲಿ ಏಕಪರದೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗಿ 400ರ ಆಸುಪಾಸಿನಲ್ಲಿ ಇರಬಹುದು. ಆದರೆ ಪರದೆಗಳ ಸಂಖ್ಯೆಯಲ್ಲಿ ಖಂಡಿತ ಏರಿಕೆಯಾಗಿದೆ. ಮಲ್ಟಿಪ್ಲೆಕ್ಸ್‌ಗಳ ಮೂಲಕ. ಈ ಮಲ್ಟಿಪ್ಲೆಕ್ಸ್‌ಗಳಿಂದಾಗಿ ಸರಕು ಮತ್ತು ಗ್ರಾಹಕನ ಮಾತಿಗೆ ಉತ್ತೇಜನ ಸಿಕ್ಕಿ ಸರ್ಕಾರದಿಂದ ಮಾನ್ಯತೆ ಕೂಡ ಬಂತು. ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಚಿತ್ರ ಮಂದಿರಗಳ ಮಾಲೀಕರು ಮತ್ತು ಹಂಚಿಕೆದಾರರ ಕುಟುಂಬ ಒಡೆಯಿತು ಅಥವಾ ಸ್ವಾರ್ಥರಹಿತ ಯಜಮಾನನಿಲ್ಲದೆ ಬಡವಾಯಿತು.

ಸ್ವಾರ್ಥವೇ ಹೆಚ್ಚಾಗಿ ಲೌಕಿಕ ಜಗತ್ತೇ ಸತ್ಯ ಎಂದು ನಂಬಿ ಎಲ್ಲವನ್ನೂ ಜಿಡಿಪಿ ಲೆಕ್ಕಾಚಾರ ಮಾಡಿ ಪ್ರಗತಿ ಎನ್ನುವ ಮಾರಿ ಹಿಂದೆ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಚಿತ್ರ ಮಂದಿರಗಳ ಮಾಲೀಕರು ಮತ್ತು ಹಂಚಿಕೆದಾರರನ್ನ ಪ್ರತಿನಿಧಿಸುವ ಸಂಘಟನೆಗಳಲ್ಲಿ ಸಮಾನತೆಯ ಚಿಂತನೆ ಮಾಡುವ ಪ್ರತಿನಿಧಿಗಳು ಬೇಕಾಗಿದ್ದಾರೆ. ಚಿತ್ರರಂಗದ ಅನೇಕ ಸಂಘಟನೆಗಳ ಚುನಾವಣೆಗಳು ಕೂಡ ಜಾತಿ, ಹಣ ಮತ್ತು ತೋಳ್ಬಲ ಇರುವವರಿಗೆ ಮಾತ್ರ ಅನ್ನುವ ಸ್ಥಿತಿ ಇದೆ. ಚುನಾವಣಾ ಹಿಂದಿನ ದಿನಗಳಲ್ಲಿ ನಡೆಯುವ ಗುಂಪುಗಾರಿಕೆ ಮತ್ತು ಸ್ಟಾರ್‌ ಹೋಟೆಲ್‌ನಲ್ಲಿ ನಡೆಯುವ ಪಾರ್ಟಿಗಳು ಈ ನನ್ನ ಮಾತಿಗೆ ಪೂರಕ.

ಒಟ್ಟಾರೆ ಕನ್ನಡ ಚಿತ್ರರಂಗ ಮುನ್ನಡೆಸುವ ನಾಯಕನ ಅವಶ್ಯಕತೆ ಹಿಂದೆಗಿಂತಲೂ ಈಗ ಜಾಸ್ತಿ ಇದೆ.

3. ಪರ್ಯಾಯ

ಸಿನಿಮಾ ನಿರ್ದೇಶಕ ತನ್ನ ಆಶಯಗಳನ್ನು ಹೇಳುವಾಗ/ ತಲುಪಿಸುವಾಗ ಏಕಾಗ್ರತೆ ಮತ್ತು ತಪಸ್ಸು ಅವಶ್ಯಕ, ಆಗ ಮಾತ್ರ ತನ್ನ ಉತ್ಕಟ ಅನುಭವಗಳನ್ನು ಕೊಡಲು ಸಾಧ್ಯ. ಇತಿಹಾಸದ ಅರಿವು ಮತ್ತು ಸೂಕ್ಷ್ಮ ಸಂವೇದನೆಗಳಿಗೆ ತುಡಿಯುವ ಮನಸ್ಸಿನ ಅಗತ್ಯತೆ ಕೂಡ ಇರಬೇಕು. ನಿರ್ದೇಶಕ ತನ್ನ ಕಾಲ್ಪನಿಕ ಲೋಕದಲ್ಲಿ ಇರುತ್ತಾನೆ, ಸಮಾಜದ ಅರಿವಿಗೆ ಮೂಡುವ ಮುನ್ನವೇ ತನ್ನ ಕಲೆಯಲ್ಲಿ ಅದನ್ನು ಪ್ರತಿಪಾದಿಸುತ್ತಾನೆ ಮತ್ತು ನಿರಂತರವಾಗಿ ಮಾರ್ಪಡುವ ಜಗತ್ತಿನ ಸುಳಿವನ್ನು ಅರಿತು ನಾಳೆಯ ಜಗತ್ತಿನ ಚಿತ್ರಗಳನ್ನು ಸಮಾಜದ ಮುಂದೆ ಇಡುತ್ತಾನೆ ಎನ್ನುವುದು ಪ್ರತಿಪಾದಿಸುತ್ತಾನೆ. ಆದರೂ ತಾನು ನಿರ್ದೇಶನ ಮಾಡಿದ ಚಿತ್ರಕ್ಕೆ ಮಾರುಕಟ್ಟೆಒದಗಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಕನ್ನಡ ಸಿನಿಮಾದ ಪ್ರೇಕ್ಷಕನಿಗೆ ಇವತ್ತು ಜಗತ್ತಿನ ಎಲ್ಲ ಭಾಷೆಯ ಚಿತ್ರಗಳನ್ನು ತನ್ನ ಅಂಗೈಯಲ್ಲಿ ನೋಡುವ ತಂತ್ರಜ್ಞಾನ ಬಂದಿದೆ. ಹಾಗಾಗಿ ನಮ್ಮ ಸಿನಿಮಾಗಳನ್ನು ಹಿಂದಿನ ಕಾಲಕ್ಕಿಂತ ಹೆಚ್ಚಾಗಿ ತುಲನೆ ಮಾಡುತ್ತಿದ್ದಾನೆ.

ತಂತ್ರಜ್ಞಾನದ ಬಳಕೆಯಿಂದ ನಾವು ಜಗತ್ತಿನ ಬೇರೆ ಭಾಷೆಯ ಚಿತ್ರಗಳಿಗೆ ಪೈಪೋಟಿ ಕೊಡಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಕಥೆ, ನಿರೂಪಣೆ ಶೈಲಿ ಮತ್ತು ಹೆಚ್ಚೆಚ್ಚು ಪ್ರಾದೇಶಿಕವಾದರೆ ಬೇರೆ ಭಾಷೆಯ ಸಿನಿಮಾಗಳಿಗೆ ಸ್ಪರ್ಧೆ ನೀಡಬಹುದು ಎಂಬ ಭಾವನೆ ನನ್ನದು.

ಜನತಾ ಚಿತ್ರಮಂದಿರಗಳನ್ನು ಸರ್ಕಾರ ಘೋಷಿಸಿದೆ. ಆದರೆ ಅದಕ್ಕೆ ತಗಲುವ ವೆಚ್ಚ ಮತ್ತು ನಿರ್ವಹಣೆಗ ಕಷ್ಟಅನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರದರ್ಶನ ವ್ಯವಸ್ಥೆಯಲ್ಲಿ ನಾವುಗಳು ಸಾಂಪ್ರದಾಯಿಕ ವ್ಯವಸ್ಥೆ ಬಿಟ್ಟು ಓಟಿಟಿ ಮತ್ತು ಟಿವಿ ಚಾನಲ್‌ಗಳನ್ನು ಸಮರ್ಥವಾಗಿ ಬಳಸಲು ಕಾರ್ಯರೂಪ ಸಿದ್ಧಗೊಳಿಸಬೇಕು. ಸಾಂಪ್ರದಾಯಿಕ ಚಿತ್ರಮಂದಿರಗಳನ್ನು ಬಿಟ್ಟು, ಜಿಲ್ಲೆ ಮತ್ತು ತಾಲ್ಲೂಕಿನ ಹಂತಗಳಲ್ಲಿ ಇರುವ ಸಮುದಾಯ ಭವನಗಳನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಚಲನಚಿತ್ರ ಪ್ರದರ್ಶನಕ್ಕೆ ಸಿದ್ಧ ಮಾಡಬಹುದಾ? ಚರ್ಚೆ ಅಗಲಿ.

ಇಂತಹ ಸಂದರ್ಭದಲ್ಲಿ ಸರ್ಕಾರ ಉದ್ಯಮದ ಮಾನ್ಯತೆಯನ್ನು ಸಡಿಲಗೊಳಿಸಿ, (ಸಂಪೂರ್ಣ ರದ್ದು ಬೇಡ) ಸಿನಿಮಾವನ್ನು ಒಂದು ಕಲೆಯಾಗಿ ಪರಿಗಣಿಸಿ, ಕನ್ನಡ ಚಲನಚಿತ್ರಗಳಿಗೆ ಕೊಡುತ್ತಿರುವ ಪ್ರೋತ್ಸಾಹ ಧನ ಸಹಾಯದ ನೀತಿಯನ್ನು ಇನ್ನಷ್ಟುಗಟ್ಟಿಗೊಳಿಸಿ, ದುರುಪಯೋಗ ಪಡೆದುಕೊಳ್ಳುತ್ತಿರುವರಿಗೆ ಕಡಿವಾಣ ಹಾಕಬೇಕು. ಆಗ ಮಾತ್ರ ನಾಯಿಕೊಡೆಗಳಂತೆ ಸಿನಿಮಾ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕಲು ಸಾಧ್ಯ.

ಇವೆಲ್ಲದರ ಜತೆಗೆ ಕನ್ನಡ ಸಿನಿಮಾಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ತರಬೇಕು!