ನ.ರವಿಕುಮಾರ್

‘1942ನೆಯ ವರ್ಷದ ಒಂದು ದಿನ ಶಾಲೆಯಿಂದ ಮನೆಗೆ ಬರುವಾಗ, ಊರಮಧ್ಯದಲ್ಲಿ ನಿರ್ಮಿಸಿದ ‘ಬಾನ್‌ಫೈರ್‌’ನಲ್ಲಿ ವಿದೇಶಿ ವಸ್ತುಗಳನ್ನೆಲ್ಲಾ ಸುಡುವುದನ್ನು ಕಂಡೆ. ಇದರಿಂದ ಪ್ರಭಾವಿತನಾಗಿ, ತೊಟ್ಟಅಂಗಿಯನ್ನು ಅದರಲ್ಲಿ ಎಸೆದು, ತುಸು ಹೆಮ್ಮೆಯಿಂದಲೇ ಬರಿಮೈಯಲ್ಲಿ ಪಾಟೀಚೀಲ ಹೊತ್ತುಕೊಂಡು ಮನೆಗೆ ಬಂದೆ. ನನ್ನ ಅವತಾರ ಗಮನಿಸಿದ ಅಪ್ಪನ ಪ್ರಶ್ನೆಗೆ ಸ್ವದೇಶಿ ಅಭಿಮಾನವನ್ನು ಕೊಚ್ಚಿಕೊಳ್ಳುವುದಿನ್ನೂ ಪೂರ್ಣವಾಗಿರಲಿಲ್ಲ, ಅಷ್ಟರಲ್ಲೇ ಕಪಾಳಕ್ಕೊಂದು ಏಟು ಬಿತ್ತು! ಕಣ್ಣು, ಬಾಯಿ ಬಿಟ್ಟು ನೋಡುತ್ತಿರುವಾಗ ‘ಮಗನೇ ನಿನ್ನ ಅಂಗಿ ವಿದೇಶಿಯದ್ದಲ್ಲ, ನಿಮ್ಮವ್ವ ನೂತು ನೇಯಿಸಿದ ಖಾದಿ ಬಟ್ಟೆಯದು; ಅವಳೇ ಪ್ರೀತಿಯಿಂದ ಹೊಲಿದದ್ದು’ ಎಂದು ಅಪ್ಪ ಅಂದಾಗ ಅವಮಾನದಲ್ಲಿ ಬೆಂದಿದ್ದೆ. ಹುಂಬತನ ದೇಶಪ್ರೇಮವಲ್ಲ, ಹೋರಾಟಕ್ಕೂ ಅರಿವಿನ ನೆಲೆ ಬೇಕು ಎಂದು ಹೇಳಿದ ಅಪ್ಪನ ಮಾತಿನ ಚಾಟಿ ಮತ್ತು ತಿಂದ ಏಟಿನ ಚುರುಕು ಬಹಳ ಕಾಲ ನೋಯುತ್ತಿದ್ದವು...’

ಷ. ಶೆಟ್ಟರ್‌ ಹುಟ್ಟಿದ್ದು ಡಿಸೆæಂಬರ್‌ 11, 1935 ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ತುಂಗಭದ್ರಾ ದಡದ ಹಂಪಸಾಗರದಲ್ಲಿ (ಈಗ ಆ ಹಳ್ಳಿ ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿಹೋಗಿದೆ) ಇದು ಹಡಗಲಿ ತಾಲ್ಲೂಕಿನಲ್ಲಿಯೇ ಎರಡನೆಯ ದೊಡ್ಡ ಊರಾಗಿತ್ತು. ಶೆಟ್ಟರ್‌ ಅವರದು ಬಹುದೊಡ್ಡ ಮನೆತನ. ಆ ಕಾಲಕ್ಕೆ ‘ಸರೂರ ಮನೆತನ’ ಮತ್ತು ‘ಮತ್ತೂರು ಮನೆತನ’ಗಳು ಊರಿನ ಅರ್ಧದಷ್ಟುಭಾಗವನ್ನು ಆಕ್ರಮಿಸಿಕೊಂಡಿದ್ದವು. ಸರೂರ ಮನೆತನ ಆ ಸೀಮೆಯಲ್ಲೆಲ್ಲ ಪ್ರಸಿದ್ಧವಾಗಿದ್ದು, ಪಾಳೆಯಗಾರರ ಹಿನ್ನೆಲೆಯಿಂದ ಶೆಟ್ಟರ್‌ ಅವರಿಗೆ ಇತಿಹಾಸದಲ್ಲಿ ಅಭಿರುಚಿ ಮೂಡಿದ್ದು ಅವರ ಮಧ್ಯೆ ಪ್ರಚಲಿತವಿದ್ದ ದಂತಕಥೆಗಳಿಂದ. ಅಂಥ ಕಥೆಗಳಲ್ಲಿ ಶೆಟ್ಟರ್‌ ಮನೆತನಕ್ಕೆ ಸೇರಿದ್ದ ದಂತಕಥೆಗಳೂ ಇದ್ದವು. ಶೆಟ್ಟರ್‌ ಅವರ ತಾತ ವೀರಭದ್ರಪ್ಪ ಆ ಕಾಲದಲ್ಲಿಯೇ ರೆವಲ್ಯೂಷನರಿ ಆಗಿದ್ದ ಮುಂಡರಗಿ ಭೀಮರಾಯರ ಸಮಕಾಲೀನರು. ಇವರಿಬ್ಬರಿಗೂ ಒಳ್ಳೆಯ ಸಂಬಂಧ ಇತ್ತು. ಅಜ್ಜ ಆ ಕಾಲಕ್ಕೆ ಬಹಳ ಶ್ರೀಮಂತ. ಭೀಮರಾಯರಿಗೆ ಬೇಕಾದ ಹಣದ ಸವಲತ್ತುಗಳನ್ನು ಅಜ್ಜನೇ ಮಾಡಿಕೊಡುತ್ತಿದ್ದ. ಇವರಿಬ್ಬರ ಬಗ್ಗೆ ಸ್ಥಳಿಯ ಜಾನಪದ ಕವಿಗಳು ಅನೇಕ ಲಾವಣಿಗಳನ್ನು ಹೆಣೆದು ಹಾಡುತ್ತಿದ್ದರು. ಅಜ್ಜಿ ಹುಬ್ಬಳ್ಳಿಯವರು. ಅವರ ಮನೆತನವೂ ವ್ಯಾಪಾರಸ್ಥರದೇ. ತಂದೆ ಅಂದಾನಪ್ಪ ಶೆಟ್ಟರು ವ್ಯಾಪಾರಸ್ಥವೃತ್ತಿಯನ್ನೇ ಮುಂದುವೆರೆಸಿಕೊಂಡು, ತಮ್ಮ ವ್ಯವಹಾರವನ್ನು ಮುಂಬೈವರೆವಿಗೂ ವಿಸ್ತರಿಸಿಕೊಂಡೀದ್ದರು. ಬಲ್ಲ ಮೂಲಗಳ ಪ್ರಕಾರ ಗುಜರಾತಿನಿಂದ ಶೇಂಗಾ ಬೀಜವನ್ನು ತಂದು ಬಳ್ಳಾರಿಗೆ ಶೇಂಗಾ ಬೆಳೆಯನ್ನು ಪರಿಚಯಿಸಿದವರು ಇವರೇ. ತಾಯಿ ತೋಟಮ್ಮ ತುಂಬು ಸಂಪ್ರದಾಯಸ್ಥ ಮನೆತನದಿಂದ ಬಂದ ದಿಟ್ಟತನದ ಹೆಣ್ಣುಮಗಳು. ಬುದ್ಧಿವಂತೆ. ಮದುವೆಯಾಗಿ ಮನೆಗೆ ಬಂದಾಗ ಆಕೆಗೆ 11 ವರ್ಷ ವಯಸ್ಸು. ಮೊದಲೇ ಪಾಳೇಯಗಾರರ ಮನೆತನ. ಹದಿನಾರಂಕಣದ ಮನೆ. ಮೂರು ತೆರೆದ ಅಂಗಳದ, ಮೂರು ಬಾವಿಗಳ ಮನೆ. ಪ್ರತಿದಿನ ಐದು ಗಂಟೆಗೆ ಎದ್ದು ಮಡಿನೀರು ತರಬೇಕು. ಆಮೇಲೆ ಜಂಗಮರ ಪೂಜೆಗೆ ಅಣಿಮಾಡಬೇಕಿತ್ತು. ದನ ಕರು ಆಳು ಕಾಳು ಹೀಗೆ ಆಕೆಯ ದಿನದ ಬಹುಪಾಲು ಕಾಲವೆಲ್ಲ ಸಂಸಾರ ನಿರ್ವಹಣೆಗೆ ಕಳೆದುಹೋಗುತ್ತಿತ್ತು. ಇಂಥ ವಾತಾವರಣದಲ್ಲಿ ಶೆಟ್ಟರ್‌ ಅವರ ಬಾಲ್ಯ ರೂಪುಗೊಂಡದ್ದು.

ಭಾರತ ಸ್ವಾತಂತ್ರ್ಯ ಸಂಗ್ರಾಮದ ಆ ದಿನಗಳ ನೆನಪು ಶೆಟ್ಟರ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ‘ಏಳನೆಯ ವರ್ಷದಲ್ಲಿ, ನಮ್ಮ ಊರಿನ ಸರಕಾರಿ ಶಾಲೆಯಲ್ಲಿ ಎರಡನೆಯ ಕ್ಲಾಸಿನಲ್ಲಿ ಓದುತ್ತಿದ್ದಾಗ, 1942ರ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಲನವು ದೇಶಾದ್ಯಂತ ನಡೆಯುತ್ತಿತ್ತು. ಆ ಚಿತ್ರ ನನ್ನ ಮನಸ್ಸಿನ ಮೇಲೆ ಅಚ್ಚೊತ್ತಿದೆ. ಇದಕ್ಕೆ ಸಿಹಿಕಹಿ ಕಾರಣಗಳುಂಟು. ಊರಿನ ನಾಯಕರ ಆದೇಶದಂತೆ ಶಾಲಾ ಮಕ್ಕಳಾದ ನಾವೆಲ್ಲರೂ ಗಾಂಧಿ ಟೋಪಿ ಧರಿಸಿ, ಪ್ರತಿ ದಿನ ಬೆಳಗ್ಗೆ ಧ್ವಜ ಹಿಡಿದು ಪ್ರಭಾತಭೇರಿ ಹೊರಡುತ್ತಿದ್ದೆವು. ನನ್ನ ತಾಯಿ ಮನೆಯ ಪಡಸಾಲೆಯಲ್ಲಿ ಚರಕಾ ಕೇಂದ್ರ ತೆರೆದು, ಊರಿನ ಮಹಿಳೆಯರನ್ನೆಲ್ಲಾ ಕೂಡಿಸಿಕೊಂಡು, ದಿನದ ಬಹುಭಾಗ ನೂಲುವುದರಲ್ಲಿ ಕಳೆಯುತ್ತಿದ್ದರು. ಅವರ ಮಧ್ಯ ನುಸುಳಿ ಅವರನ್ನು ಕೆಲವೊಮ್ಮೆ ಪೀಡಿಸುತ್ತಿದ್ದೆ; ಕೆಲವೊಮ್ಮೆ ಅವರಷ್ಟೇ ನಿಷ್ಠನಾಗಿ ರಾಟೆ ತಿರುಗಿಸುತ್ತಿದ್ದೆ. ರಾಟೆಯಿಂದ ನಾನು ತೆಗೆದ ನೂಲಿನ ಉದ್ದ ಅಷ್ಟೇನೂ ಹೇಳಿಕೊಳ್ಳುವಷ್ಟಿರಲಿಲ್ಲ, ನಿಜ, ಆದರೆ ನಾನು ಸ್ನೇಹಿತರ ಮುಂದೆ ಹೇಳಿಕೊಳ್ಳುತ್ತಿದ್ದ ಮಾತಿನ ನೂಲು ಸಾಕಷ್ಟುಉದ್ದವಾಗಿರುತ್ತಿತ್ತು’ ಇದು ಶೆಟ್ಟರ್‌ ಹಿಂದಿನ ದಿನಗಳನ್ನು ನೆನೆದು ಹೇಳುವ ಮಾತುಗಳು.

ಖ್ಯಾತ ಇತಿಹಾಸಕಾರ ಷಡಕ್ಷರಿ ಶೆಟ್ಟರ್‌ ನಿಧನ

‘ದೇಶಕ್ಕೆ ಸ್ವಾತಂತ್ರ ಬಂದಾಗ ನಾನು ಹೊಸಪೇಟೆಯ ಮುನಿಸಿಪಲ್‌ ಶಾಲೆಯಲ್ಲಿ ವಿದ್ಯಾರ್ಥಿ (12 ವರ್ಷ). ದೇಶವೆಲ್ಲಾ ಖುಷಿಪಟ್ಟದಿನ ಅದು. ನಾವೂ ಬಿಳಿಬಟ್ಟೆ-ಗಾಂಧಿಟೋಪಿ ಹಾಕಿಕೊಂಡು, ಶಾಲೆಯ ಮುಂದೆ ಸಾಲಾಗಿ ನಿಂತು, ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿ, ಯಾರೋ ಮಾಡಿದ ಭಾಷಣ ಕೇಳಿದ್ದೆವು. ಇದೆಲ್ಲ ಈಗ ಸ್ವಲ್ಪ ಅಸ್ಪಷ್ಟವಾಗಿದೆ. ಆದರೆ ಭಾಷಣ ಮುಗಿದಮೇಲೆ ಪುಟ್ಟಿಯಲ್ಲಿ ತಂದು ಹಂಚಿದ ಲಿಂಬಿ ಹುಳಿ ಪೆಪ್ಪರಮೆಂಟ್‌ನ ರುಚಿ ಇನ್ನೂ ನಾಲಿಗೆಗೆ ಅಂಟಿಕೊಂಡಂತಿದೆ. ಆಗ ನಮ್ಮ ಹೆಡ್‌ಮಾಸ್ತರರು ಎಂ. ಎಂ. ಭಟ್ಟರು. (ಮದ್ರಾಸ್‌ ವಿಶ್ವವಿದ್ಯಾಲಯದ ಪೊ›ಫೆಸರ್‌ ಮರಿಯಪ್ಪ ಭಟ್ಟರ ಸೋದರ) ತುಂಬಾ ಶಿಸ್ತಿನ ಸ್ವಭಾವದ ವ್ಯಕ್ತಿ, ಒಳ್ಳೆಯ ಅಧ್ಯಾಪಕ.

ಮುಂದುವರೆದು ಅವರು ಹೇಳುತ್ತಾರೆ: ‘ಸ್ವತಂತ್ರ ಬಂದ ದಿನ ಸಿಹಿ ಬರುವುದು’- ಎಂಬ ಸುಲಭ ಸಿದ್ಧಾಂತವನ್ನು ಮೊದಲ ಸ್ವಾತಂತ್ರೋತ್ಸವನ್ನುಆಚರಿಸಿದ ಮೇಲೆ ರೂಪಿಸಿಕೊಂಡಿದ್ದ ನಮ್ಮ ಊಹೆ ಮುಂದಿನ ವರ್ಷಗಳಲ್ಲಿ ಆಚರಿಸಿದ ಸ್ವಾತಂತ್ರ ದಿನೋತ್ಸವಗಳು ನಿರಾಶೆ ತಂದಿದ್ದವು. ಈ ವರ್ಷಗಳಲ್ಲಿ ಧ್ವಜ ಹಾರಿಸಿದ್ದೆವು, ರಾಷ್ಟ್ರಗೀತೆ ಹಾಡಿದ್ದೆವು, ಭಾಷಣ ಕೇಳಿದ್ದೆವು, ಆದರೆ ಲಿಂಬು ಪೆಪ್ಪರಮೆಂಟ್‌ನ್ನು ಯಾರೂ ಕೊಟ್ಟಿರಲಿಲ್ಲ. ಸ್ವತಂತ್ರ ಬಂದರೆ ಪುಕ್ಕಟೆ ಸಿಹಿ ಸಿಗುವುದಿಲ್ಲ, ನಾವೇ ಗಳಿಸಿಕೊಳ್ಳಬೇಕು ಎನ್ನುವ ಅರಿವನ್ನಂತೂ ಇದು ತಂದುಕೊಟ್ಟಿತ್ತು’.

ಆ ಕಾಲದ ಸರಕಾರಿ ಶಾಲೆಗಳು ತುಂಬಾ ಚಿಕ್ಕದಾಗಿರುತ್ತಿದ್ದವು. ನಾಲ್ಕು-ಐದನೆಯ ತರಗತಿಗಳಲ್ಲಿದ್ದವರಿಗೆ ಮಾತ್ರ ಬೆಂಚಿನ ಮೇಲೆ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತಿತ್ತು. ‘ಆ ಬೆಂಚುಗಳನ್ನು ಮರೆತಿಲ್ಲ, ಏಕೆಂದರೆ ದಿನಕ್ಕೊಂದು ಬಾರಿಯಾದರೂ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ ನನಗೆ ಸಿಗುತ್ತಿತ್ತು. ಅದು ‘ಅತಿಜಾಣತನ ತೋರಿಸುವ ಚೇಷ್ಟೆಗಾಗಿ’ ಸಿಗುತ್ತಿದ್ದ ಬಹುಮಾನ’ ಈ ನೆನಪುಗಳು ಶೆಟ್ಟರ್‌ ಅವರಲ್ಲಿ ಇನ್ನೂ ಮಾಸದೆ ದಟ್ಟವಾಗಿ ಉಳಿದಿವೆ, ಹಸಿರಾಗಿವೆ. ಅವರು ಹೇಳುತ್ತಾರೆ: ‘ಗ್ರಾಮದ ಸಮಗ್ರ ಚಿತ್ರ ಈಗ ಮಬ್ಬಾಗಿದ್ದರೂ ನಮ್ಮೂರ ಪಕ್ಕದಲ್ಲಿ ಹರಿಯುತ್ತಿದ್ದ ತುಂಗಭದ್ರಾ ನದಿಯಲ್ಲಿ ಈಜಿದ್ದು, ವಿಶಾಲವಾದ ಅದರ ಮರಳ ಹಾಸಿನ ಮೇಲೆ ಪ್ರತಿ ಸಂಜೆ ಕುಸ್ತಿ, ಚಡುಗುಡು, ಗಿಲಿದಾಂಡು, ಕುಂಟಾಬಿಲ್ಲಿ, ಬಾಲ್‌ಬ್ಯಾಡ್‌ಮಿಟನ್‌ ಆಡಿದ್ದು, ಸ್ನೇಹಿತರೆಲ್ಲರೂ ಸೇರಿ ಜೋಳ-ಸಜ್ಜೆಯ ರೊಟ್ಟಿಹಂಚಿತಿಂದದ್ದು, ಒಮ್ಮೊಮ್ಮೆ ನಾಟಕ, ಕುಣಿತ, ಹಾಡು ಮುಂತಾದವನ್ನು ಮಾಡಿದ್ದು ಮಾತ್ರ ಮಬ್ಬಾಗಿಲ್ಲ. ಹಂಪಸಾಗರದ ಬಳಿ ಬಲಕ್ಕೆ ಮೈಮುರಿದು ತುಂಗಭದ್ರೆಯು ಹರಿಯುತ್ತಿದುದರಿಂದ, ಒಂದು ಕಿಲೋಮೀಟರ್‌ ಅಗಲದ ಮರಳಿನ ಮೈದಾನವನ್ನು ನಿರ್ಮಾಣವಾಗಿತ್ತು. ಈ ಜಲ ಕುಡಿಯಲು ಎಷ್ಟುಸಿಹಿಯಾಗಿತ್ತೋ, ಆಡಲು ಆ ಮರಳ ಹಾಸು ಅಷ್ಟೇ ಪ್ರಿಯವಾಗಿತ್ತು’.

‘ಹೊಸಪೇಟೆಯ ಶಾಲೆಯಲ್ಲಿದ್ದಾಗ, ವಿಶ್ವೇಶ್ವರಯ್ಯನವರು ತುಂಗಭದ್ರಾ ಡ್ಯಾಮ್‌ ನೋಡಲು ಬಂದಿದ್ದರು. ನಾವು ಕ್ಲಾಸಿಗೆ ಚಕ್ಕರ್‌ ಹಾಕಿ ಡ್ಯಾಮ್‌ವರೆಗೂ ಮೂರು ಮೈಲು ದೂರ ಓಡುತ್ತಾ ಹೋಗಿ ಅವರನ್ನು ನೋಡಿ ಖುಷಿಪಟ್ಟಿದ್ದೆವು. ನಮ್ಮ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಅಸ್ತಮಾದಿಂದ ತಪ್ಪಿಸಿಕೊಳ್ಳಲು ಚಳಿಗಾಲದಲ್ಲಿ ಹೊಸಪೇಟೆಯ ಡ್ಯಾಮ್‌ ಸೈಟಿನ ಬೆಟ್ಟದ ಮೇಲಿರುವ ತಂಗುತಾಣದಲ್ಲಿರುತ್ತಿದ್ದರು. ಆಗ ಅವರು ಬರಹೋಗುವ ಕಾರಿನ ದಾರಿಯಲ್ಲಿ ನಿಂತು, ಪ್ರತಿದಿನ ನಮ್ಮ ಮೊದಲ ರಾಷ್ಟ್ರಪತಿಗಳನ್ನು ಕುತೂಹಲದಿಂದ ನೋಡುತ್ತಾ, ಅವರೂ ಸಾಮಾನ್ಯ ಮನುಷ್ಯರಂತಿರುವುದನ್ನು ಕಂಡು ಆಶ್ಚರ್ಯಪಟ್ಟಿದ್ದೆವು. ಇದೇ ರೀತಿ ಒಮ್ಮೆ ನೆಹರೂ ಹೊಸಪೇಟೆಗೆ ಬಂದಿದ್ದರು. ಅಲ್ಲಿಂದ ಅವರು ಹಂಪಿಗೆ ಹೋಗುವಾಗ ಅಲ್ಲಲ್ಲಿ ನಿಂತು ಭಾಷಣ ಮಾಡುತ್ತಿದ್ದರು. ಸೈಕಲ್‌ ಮೇಲೆ ಹಿಂಬಾಲಿಸಿ ಅವರಾಡಿದ ಮಾತನ್ನು ಕೇಳುತ್ತಾ ಅವರ ಕಾಶ್ಮೀರೀ ಬಣ್ಣಕ್ಕೂ, ಆಕರ್ಷಕ ವ್ಯಕ್ತಿತ್ವಕ್ಕೂ ಮರುಳಾಗಿದ್ದೆವು. ಉಪರಾಷ್ಟ್ರಪತಿಯಾದ ಡಾ. ರಾಧಾಕೃಷ್ಣನ್‌ ಹೊಸಪೇಟೆಯ ಜನರನ್ನುದ್ದೇಶಿಸಿ ನಮ್ಮ ಶಾಲೆಯ ಆವರಣದಲ್ಲಿ ಒಮ್ಮೆ ಭಾಷಣ ಮಾಡಿದ್ದರು. ಮೊದಲ ಸಾಲಿನಲ್ಲಿ ನೆಲದ ಮೇಲೆ ಕುಳಿತು, ಅವರ ನಿರರ್ಗಳವಾದ (ನಮಗೆ ಅರ್ಥವಾಗದ) ಇಂಗ್ಲಿಷ್‌ ಭಾಷಣವನ್ನು ಕೇಳುವ ಖುಷಿ ನಮ್ಮದಾಗಿತ್ತು. ಮಾತಿಗಿಂತ ಹೆಚ್ಚಾಗಿದ್ದ ಆಕರ್ಷಣೆ ಎಂದರೆ, ಅತಿವೇಗದಿಂದ ಮಾತನಾಡುವಾಗ ಅವರ ಬಾಯಿಯ ಹನಿ ಸಿಂಪರಣೆ. ಇವೆಲ್ಲವೂ ಮರೆಯಲಾರದ ನನ್ನ ಬಾಲ್ಯದ ಅನುಭವಗಳು.ಇದಕ್ಕಿಂತಲೂ ದೊಡ್ಡ ಅನುಭವವೆಂದರೆ, ಸರ್ದಾರ್‌ ಪಟೇಲರು ಪೊಲೀಸ್‌ ಆಕ್ಷನ್‌ ಮೂಲಕ ಹೈದರಾಬಾದ್‌ ನವಾಬನನ್ನು ಬಗ್ಗಿಸುವಾಗ ತುಂಗಭದ್ರೆಯ ಆ ಕಡೆ ಇದ್ದ ನವಾಬನ ಮುನಿರಾಬಾದಿನಲ್ಲಿ ಹಗಲಿರುಳೂ ಸಿಡಿಯುತ್ತಿದ್ದ ತೋಪುಗಳ ಶಬ್ದ, ಮತ್ತು ಸೆರೆಗೊಳಗಾದ ರಜಾಕಾರರನ್ನು ಹೊಸಪೇಟೆಗೆ ತಂದು ನಿಲ್ಲಿಸಿದ ದೃಶ್ಯ.

ರಜಾಕಾರರ ರಾಕ್ಷಸೀ ಪ್ರವೃತ್ತಿಯ ಬಗ್ಗೆ ಬಾಲ್ಯದಲ್ಲಿ ಸಾಕಷ್ಟುಕೇಳಿದ್ದ ನಮಗೆ, ಕೈಕಾಲಿಗೆ ಕೋಳ ತೊಡಿಸಿದ್ದರೂ ಮುಂದೆ ನಿಂತು ಅವರನ್ನು ನೋಡುವ ಧೈರ್ಯ ಬಂದಿರಲಿಲ್ಲ. ಈ ಹಿಂಸಾಕಾಂಡದಲ್ಲಿ ಮೂಗು, ಕಿವಿ, ಮೊಲೆ ಕಳೆದುಕೊಂಡ ಹಲವು ಮಹಿಳೆಯರನ್ನು ಹೊಸಪೇಟೆಯಲ್ಲಿ ನಾವು ಸ್ವತಃ ಕಂಡಿದ್ದೆವು’.

ಅದು 1945 ಇಸವಿಯ ಒಂದು ದಿನ. ಶೆಟ್ಟರ್‌ ಅವರಿಗೆ ಆಗ ಹತ್ತು ವರ್ಷ. ಹಂಪಸಾಗರದ ಸರ್ಕಾರಿ ಶಾಲೆಯಲ್ಲಿ ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಆ ದಿನವನ್ನು ನೆನಪಿಸಿಕೊಳ್ಳುವುದು ಹೀಗೆ: ‘ನಮ್ಮ ಮನೆಯ ಮುಂದೆ ‘ಹುಲಿ’ ಆಡಲು ಬಂತು. ಅದರ ಸುತ್ತಲೂ ನೋಡಲು ನಿಂತಿದ್ದವರು ಅದಕ್ಕೊಂದು ಆವರಣ ಕಲ್ಪಿಸಿಕೊಟ್ಟಿದ್ದರು. ಪೈಲ್ವಾನ್‌ ಚಡ್ಡಿಯೊಂದನ್ನು ಬಿಟ್ಟು ಮೈತುಂಬಾ ಹುಲಿಯ ಬಾರುಗಳನ್ನು ಬರೆಸಿಕೊಂಡಿದ್ದವನ ಟೊಂಕದ ಪಟ್ಟಿಯ ಹಿಂದೆ ಒಂದು ಚೀಲವಿತ್ತು. ಅದರಲ್ಲಿ ಹುದುಗಿಸಿ ನಿಲ್ಲಿಸಿದ ಬೊಂಬನ್ನು ಹುಲಿಯ ಹಿಂದೆ ನಿಂತವನೊಬ್ಬ ಹಿಡಿದು, ಹುಲಿಯ ಹೆಜ್ಜೆಯನ್ನ ಅನುಸರಿಸಿ, ಹೆಜ್ಜೆ ಹಾಕುತ್ತಿದ್ದ. ಬೊಂಬು ಹುಲಿಯ ಬಾಲದ ಸಂಕೇತವಾಗಿತ್ತು. ಹುಲಿಯ ಎರಡೂ ಕೈಬೆರಳುಗಳಲ್ಲಿ ಬೆಳ್ಳಿಯ ಉಗುರುಗಳಿದ್ದರೆ, ಭುಜದ ಮೇಲೆ ನಾಲಗೆ ಚಾಚಿದ ಹುಲಿಯ ಮುಖ ಇತ್ತು. ಹುಲಿವೇಷದವನು ತೆರೆದ ಬಾಯಿಯ ಮೂಲಕ ಹೊರಜಗತ್ತನ್ನು ನೋಡುತ್ತಿದ್ದನು.

ದೊಡ್ಡವರ ಮನೆಗಳ ಮುಂದೆ, ಅಂಗಡಿಗಳ ಮುಂದೆ, ಊರಿನ ಕೂಡುದಾರಿಗಳಲ್ಲಿ, ಸಂತೆಯ ಜಂಗುಳಿಯ ಮಧ್ಯ, ದೇವಾಲಯಗಳ ಅಂಗಳಗಳಲ್ಲಿ ನಡೆಯುತ್ತಿದ್ದ ಹುಲಿಯಾಟಗಳು ವಿಶೇಷವಾಗಿರುತ್ತಿದ್ದವು. ಸುತ್ತುವರಿದವರಲ್ಲಿ ಕೆಲವರು ಅದನ್ನು ಹಿಂಬಾಲಿಸಿ, ಅದರ ಕುಂಡಿ ಚಿವುಟಿ, ಕೆಣಕುವ ಸಾಹಸ ಮಾಡುತ್ತಿದ್ದರು. ಕೆರಳಿದ ಹುಲಿ ಅವರನ್ನು ಅಟ್ಟಿಸಿಕೊಂಡು ಹೋಗಿ ಹಿಡಿಯಲು ಪ್ರಯತ್ನಿಸುತ್ತಿತ್ತು. ಕೆಲವೊಮ್ಮೆ ಕೈಗೆ ಸಿಕ್ಕ ಕೀಟಲೆಕಾರನನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಬೆಳ್ಳಿಯ ಉಗುರುಗಳಿಂದ ಅವನ ಅಂಗಿ, ಪಂಚೆಯನ್ನು ಚಿಂದಿ ಮಾಡುತ್ತಿತ್ತು; ಇನ್ನೂ ರೊಚ್ಚಿಗೆದ್ದಾಗ ಮೈಯನ್ನೋ ಮುಖವನ್ನೋ ಪರಚುತ್ತಿತ್ತು. ಹುಲಿಗೆ ಕೀಟಲೆ ಕೊಟ್ಟು, ಅದನ್ನು ಮೇಲಿಂದ ಮೇಲೆ ಕೆಣಕುವ ‘ಹೀರೋ’ಗಳು ನಮ್ಮ ಊರಿನಲ್ಲಿದ್ದು, ಹುಲಿ ಎಷ್ಟುಮುಖ್ಯವೋ ಅದನ್ನು ಕೆರಳಿಸುವವರೂ ಅಷ್ಟೇ ಮುಖ್ಯರೆನಿಸಿದ್ದರು.

ಅವತ್ತು ನಮ್ಮ ಮನೆಯ ಮುಂದೆ ನಡೆಯುತ್ತಿದ್ದ ಹುಲಿಯಾಟವನ್ನು ನಮ್ಮ ಅಪ್ಪ, ದೊಡ್ಡಪ್ಪ ಮತ್ತು ಊರಿನ ಹಿರಿಯರೆಲ್ಲರೂ ತೆರೆದ ಹಜಾರದಲ್ಲಿ ಹಾಸಿದ ಗಾದಿಯ ಮೇಲೆ ಕೂತು ನೋಡುತ್ತಿದ್ದರು. ನಾನು ಅವರ ಪಕ್ಕ ಕುಳಿತು ಹುಲಿಯಿಂದ ರಕ್ಷಿಸಿಕೊಂಡು, ಅರ್ಧಮುಕ್ಕಾಲು ಘಂಟೆಯ ಈ ಆಟವನ್ನು ನೋಡಿದ್ದೆ. ಕುಣಿದು ದಣಿದ ಹುಲಿಗೆ ಮತ್ತು ಅದರ ಹಿಂಬಾಲಕನಿಗೆ ಮಜ್ಜಿಗೆ ಸರಬರಾಜು ಮಾಡಿ ’ಪಾವಲಿ’ (ನಾಲ್ಕಾಣೆ) ಕಾಣಿಕೆ ಮತ್ತು ಬಾಲಕ್ಕೆ ಕಟ್ಟಲು ಒಂದು ಪಂಚೆಯನ್ನು ಉಡುಗೊರೆಯಾಗಿ ಕೊಟ್ಟಾಗ, ತುಂಬಾ ಖುಷಿಯಿಂದ ಹುಲಿ ಮಾಡುತ್ತಿದ್ದ ಆವೇಶದ ಕುಣಿತದ ಚಿತ್ರ ಕಣ್ಣಮುಂದಿದೆ.

ಮೊಹರಂ ತರುತ್ತಿದ್ದಷ್ಟುಖುಷಿಯನ್ನು ಕಾಮನ ಹಬ್ಬವೊಂದನ್ನು ಬಿಟ್ಟು ಇನ್ನಾವ ಹಬ್ಬವೂ ನಮಗೆ ತರುತ್ತಿರಲಿಲ್ಲ. ಅಲೀದೇವರು ತುಂಗಭದ್ರಾ ದಡದ ಮೇಲೆ ಸತ್ತ ನಂತರ, ನದಿಯ ವಿಶಾಲ ಉಸುಕಿನ ಹಾಸಿನಲ್ಲಿ ನಮ್ಮ ವೈಯಕ್ತಿಕ ಹುಲಿಯಾಟ ವಾರಗಟ್ಟಲೇ ಮುಂದುವರಿಯುತ್ತಿತ್ತು. ಗಂಟೆಗಟ್ಟಲೆ ಆಡಿ, ಹೊಳೆಯಲ್ಲಿ ಈಜಾಡಿ, ದೇವರನ್ನು ನಾವು ದಿನವೂ ದಫÜನ ಮಾಡಿ ಸಂಜೆ ಮನೆಗೆ ಬರುತ್ತಿದ್ದೆವು. ಬರುವಾಗ ಮರುದಿನ ಯಾರು ಹುಲಿಯಾಗಬೇನ್ನುವುದನ್ನು ನಿರ್ಧರಿಸುತ್ತಿದ್ದೆವು.

ನಮ್ಮ ಊರಿನಲ್ಲಿ ಎರಡು ಹುಲಿಗಳಿದ್ದವು: ಅವುಗಳಲ್ಲೊಂದಕ್ಕೆ ನಮ್ಮ ಮನೆತನದ ಹೆಸರಿತ್ತು. ಇದಕ್ಕೆ ಕಾರಣ, ಕಿನ್ನಾಳದಲ್ಲಿ ಒಬ್ಬ ಬಡಗಿ ಮಾಡಿದ ಹುಲಿ ಮುಖದಿಂದ ಆಕರ್ಷಿತನಾದ ನಮ್ಮ ಹಿರಿಯನೊಬ್ಬ ಅದನ್ನು ಸಾವಿರ ರೂಪಾಯಿಗೆ ಕೊಳ್ಳಲೆತ್ನಿಸಿದರೂ ಮಾರಲೊಪ್ಪದ್ದರಿಂದ, ಕುಂಬಿಯ ಮೇಲೆ ಒಣಗಲು ಇಟ್ಟಿದ್ದ ಹುಲಿಮುಖವನ್ನು ಅಪಹರಿಸಿ ಊರಿಗೆ ತಂದು ಅದರ ಹಣೆಯ ಮೇಲೆ ವಜ್ರದ ಹರಳನ್ನಿಟ್ಟು, ಅದನ್ನು ತೊಟ್ಟು ಮೊಹರಂನಲ್ಲಿ ಆಡಲು ಒಂದು ಮುಸ್ಲಿಂ ಮನೆತನಕ್ಕೆ ತುಂಡು ಹೊಲ ಕೊಟ್ಟಕತೆ ಪ್ರಸಾರದಲ್ಲಿತ್ತು. ಇದು ಎಷ್ಟುನಿಜವೋ ತಿಳಿಯದು. ಆದರೆ, ನಮ್ಮ ಮನೆಯ ಮುಂದೆ ಆಗುತ್ತಿದ್ದ ಮೊಹರಂ ಹುಲಿಯ ಕುಣಿತ ಊರಿನ ಪ್ರಮುಖ ಪ್ರಸಂಗವಾಗಿರುತ್ತಿತ್ತು. ಊರಿನ ಮುಖಂಡರು ಹುಲಿಗೆ ಸೆಲ್ಲೆ ಆಯಿರು ಮಾಡಿದರೆ ನಮ್ಮ ಮನೆಯವರು ಪಂಚೆ ಕೊಟ್ಟು ಮತ್ತು ಹಣದ ಆಯಿರು ಮಾಡುತ್ತಿದ್ದುದಂತೂ ನಿಜ.

ಊರಿನ ಜಮೀನ್ದಾರೀ ರಾಜಕೀಯ ಇನ್ನೊಂದು ಹುಲಿಯನ್ನು ಯಾವಾಗಲೋ ಹುಟ್ಟು ಹಾಕಿತ್ತು. ಕೆಳಗಿನ ಓಣಿಯ ಹುಲಿಯೆಂದು ಇದನ್ನು ಕರೆಯತ್ತಿದ್ದರು. ಇನ್ನೂ ಕೆಲವು ಸಂಪ್ರದಾಯಸ್ಥರು ‘ದನ ಕಾಯುವ ಹುಲಿ’ ಎನ್ನುತ್ತಿದ್ದರು. ಅದರ ಹುಲಿ ಮುಖವು ನಾರಿನಿಂದ ಮತ್ತು ಸಗಣಿಯಿಂದ ಮಾಡಿದ್ದೆಂದು ಆಡಿಕೊಳ್ಳುತ್ತಿದ್ದರು. ಇದೇನೇ ಇರಲಿ, ಕಿನ್ನಾಳದ ಹುಲಿಮುಖದಷ್ಟುಅದು ಲಕ್ಷಣವಾಗಿರಲಿಲ್ಲ’ - ಹೀಗೆ ಹೇಳುತ್ತಲೇ ಶೆಟ್ಟರ್‌ ಅವರು ತಮ್ಮ ಬಾಲ್ಯ ಕಾಲದ ಜೊತೆಗೆ ಆ ಕಾಲದ ಸಮಾಜದ ಚಿತ್ರವನ್ನು ಕಟ್ಟಿಕೊಡುತ್ತಾರೆ. ಆ ಕಾಲದಲ್ಲಿದ್ದ ಸಾಮರಸ್ಯಕ್ಕೆ ಇದೊಂದು ಉದಾಹರಣೆ.

ಮುಂದುವರೆದು ಅವರು ಹೇಳುತ್ತಾರೆ: ‘ನಮ್ಮ ಶಾಲೆಯ ಸಮೀಪ ಒಂದು ಮಸೀದಿ ಇತ್ತು. ಇದು ಊರ ಚಾವಡಿಯೂ ಆಗಿತ್ತು. ಪರ ಊರಿನವರು ಅಲ್ಲೇ ತಂಗುತ್ತಿದ್ದರು. ನಾವೂ ಕೆಲವು ಸಾರಿ ಅದರಲ್ಲಿ ಗೋಲಿ-ಗುಂಡು, ಬುಗುರೀ, ಹುಲಿಮನಿ ಆಡುತ್ತಿದ್ದೆವು. ಚಾವಡಿಯ ಹಾಸಿನ ಮೇಲೆ ಕೊರೆದ ಹುಲಿಮನಿಗಳು ಸದಾ ನಮ್ಮನ್ನು, ನಮ್ಮಂತಹ ಕೆಲವು ಸೋಮಾರಿಗಳನ್ನು, ಆಕರ್ಷಿಸುತ್ತಿದ್ದವು. ಮೊಹರಂ ಹಬ್ಬ ಶುರುವಾಗುತ್ತಿದ್ದುದೇ ‘ವೀರಭದ್ರ’ನ ಹೊಂಡತೋಡಿ ಬೆಂಕಿಹಾಕಿದ ನಂತರ. ಕೊನೆಗೊಳ್ಳುತ್ತಿದ್ದುದು ದೇವರ ದಫನದ ನಂತರ. ನಮ್ಮೂರ ಅಲೇ ದೇವರಿಗೆ ಸಕ್ಕರೆ ಓದಿಸುವುದು ಸಾಮಾನ್ಯವಾಗಿತ್ತು. ಊರಿನಲ್ಲಿದ್ದ ಒಂದೇ ಒಂದು ಶಾನುಭೋಗರ ಬ್ರಾಹ್ಮಣ ಮನೆಯವರನ್ನು ಬಿಟ್ಟರೆ, ಉಳಿದವರೆಲ್ಲರೂ, ಹೆಚ್ಚಾಗಿ ಲಿಂಗಾಯತರು, ಸಕ್ಕರೆ ಓದಿಸುತ್ತಿದ್ದರು. ಆಗಲೇ ನಾನು ಕೇಳಿದ್ದು ‘ಚುಂಗ್ಯಾ’ ಎಂಬ ಪದವನ್ನು. ಅಲೇದೇವರು ಮೆರವಣಿಗೆಯಲ್ಲಿ ಹೋಗಿ, ಹೊಳೆಯ ದಡದ ಮೇಲೆ ಸಾಯುವುದನ್ನು ನಾವೆಲ್ಲ ಕುತೂಹಲದಿಂದ ನೋಡುತ್ತಿದ್ದೆವು. ಹಿಂದಿನ ಸಂಜೆ ದೇವರು ಸಾಯುವುದನ್ನು ನೋಡಿದ ನಮಗೆ, ನಮ್ಮ ಮನೆಯ ಸಂಪ್ರದಾಯದಂತೆ ಮರುದಿನ ಪುನಃ ಮಡಿ ನೀರುಪಂಚೆ ಉಟ್ಟು ಕಲ್ಲಪ್ಪನ ಗುಡಿಗೆ ನೈವೇದ್ಯ ಕೊಟ್ಟುಬರುವುದರಲ್ಲಿದ್ದ ವಿರೋಧಾಭಾಸವೇನೂ ಕಾಣುತ್ತಿರಲಿಲ್ಲ. ಪ್ರತಿವರ್ಷವೂ ಸಾಯುತ್ತಿದ್ದ ದೇವರು ಮುಸ್ಲಿಮರದು, ಹುಟ್ಟುಸಾವು ಇಲ್ಲದ ಶಾಶ್ವತವಾಗಿ ಕಲ್ಲುಮೂರ್ತಿಯಾಗಿ ಕುಳಿತಿರುತ್ತಿದ್ದುದು ಕಲ್ಲಪ್ಪ ದೇವರು’.

ಹೊಸಪೇಟೆಯಲ್ಲಿ ಓದುತ್ತಿದ್ದಾಗ ಶೆಟ್ಟರ್‌ ಅವರ ಮಾಸ್ತರರಾದ ಮುತ್ತುಕೃಷ್ಣಾ ಮೂರು ದಿನ ವಿಹಾರಕ್ಕೆಂದು ಸಂಡೂರಿನ ಲೋಹಾದ್ರೀ ಕುಮಾರಸ್ವಾಮಿ ಬೆಟ್ಟಗಳಿಗೆ ಕರೆದೊಯ್ದು ಸುತ್ತಾಡಿಸಿದ್ದರು. ಆ ದಿನಗಳನ್ನು ಶೆಟ್ಟರ್‌ ಹೀಗೆ ನೆನಪಿಸಿಕೊಳ್ಳುತ್ತಾರೆ: ‘ನಮ್ಮ ಬೆನ್ನ ಹಿಂದೆ ಇಷ್ಟೊಂದು ಸೊಬಗಿನ ನಿಸರ್ಗವಿದೆ, ಬೆಟ್ಟಗಳ ಸಾಲಿದೆ, ತೀರ್ಥಕ್ಷೇತ್ರಗಳ ಸರಪಳಿ ಇದೆ, ಎಂಬುದನ್ನು ತಿಳಿದದ್ದು ಆಗಲೇ. ಬಳ್ಳಾರಿ ಜಿಲ್ಲೆಗೆ ಸಂಡೂರು ಒಂದು ಉದಕಮಂಡಲ ಅಥವಾ ಸಿಮ್ಲಾ ಇದ್ದಂತೆ. ಅಲ್ಲಿ ಸುತ್ತಾಡುವಾಗ ನಮ್ಮ ಕಾಫೀ ಮೈಬಣ್ಣ ಅಕ್ಷರಶಃ ಸ್ವರ್ಣ ಲೇಪನ ಪಡೆದುಕೊಳ್ಳುತ್ತಿತ್ತು. ಇದು ಬಳ್ಳಾರಿಯ ಲೋಹ ನಿಧಿಯ ಮಾಯಾಜಾಲ. ಉರಿಬಿಸಿಲು, ಕಾದ ಬಂಡೆ, ಒರಟು ಮಾತು ಬಿಟ್ಟರೆ ಬಳ್ಳಾರಿಯಲ್ಲೇನಿದೆ? ಎಂದು ಲೇವಡಿ ಮಾಡುವವರ ಬಾಯಿಮುಚ್ಚಲು ಸಂಡೂರಿನ ಬೆಟ್ಟಕಣಿವೆಗಳು ಸಾಕಾಗಿದ್ದವು.ಆಗ ಬಳ್ಳಾರಿ ಜಿಲ್ಲೆಯಲ್ಲಿ ಇದ್ದದ್ದು ಒಂದೇ ಕಾಲೇಜು. ಅದೂ ಎರಡು ವರ್ಷಗಳ ಇಂಟರ್‌ ಮೀಡಿಯಟ್‌ ಬೋಧನೆಗೆ’. (ಈಗ ಎರಡು ವಿಶ್ವವಿದ್ಯಾಲಯಗಳಿವೆ. ಸ್ನಾತಕೋತ್ತರ ಕೇಂದ್ರವಿದೆ. ಹಲವು ಊರುಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಾಲೇಜುಗಳಿವೆ)

1953ರಲ್ಲಿ ಶೆಟ್ಟರ್‌ ಕಾಲೇಜಿನಲ್ಲಿ ಪ್ರವೇಶ ಪಡೆದಾಗ, ಬಳ್ಳಾರಿಯಲ್ಲಿ ಏಕೀಕರಣದ ಹೋರಾಟ ಬಿರುಸಿನಿಂದ ನಡೆಯುತ್ತಿತ್ತು. ಪೊಟ್ಟಿಶ್ರೀರಾಮುಲು ಆಮರಣ ಉಪವಾಸ ಮಾಡಿ ಸತ್ತದ್ದನ್ನು ಶೆಟ್ಟರ್‌ ಕಂಡಿದ್ದರು. ಬೀದಿ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು, ಪ್ರತಿ ಸಂಜೆ ಸಾಂಭಶಿವ ಮೈದಾನದಲ್ಲಿ ನಡೆಯುವ ಭಾಷಣಗಳನ್ನು ಕೇಳುವುದು ಆ ಕಾಲದ ಯುವಕರಿಗೆ ಅನಿವಾರ್ಯವಾಗಿತ್ತು. ಕನ್ನಡದ ಮೇಲೆ ದಬ್ಬಾಳಿಕೆ ಮಾಡಲೆತ್ನಿಸುತ್ತಿದ್ದ ಆಂಧ್ರ ಜನರನ್ನು ಕರ್ನಾಟಕದವರು, ಆಂಧ್ರದವರು ಕನ್ನಡಿಗರನ್ನು ಮೂದಲಿಸುತ್ತಿದ್ದರು. ಬೀದಿ ಆಂದೋಲನ ಸೃಷ್ಟಿಸಿದ ಸಾಹಿತ್ಯದ ತುಣುಕೊಂದು ಶೆಟ್ಟರ್‌ ಅವರ ಜ್ಞಾಪಕದಲ್ಲಿದೆ. ‘ತೆಲುಗರನ್ನು ಮೂದಲಿಸಲು ನಮ್ಮ ಮಧ್ಯದಲ್ಲಿದ್ದ ಒಬ್ಬ ಕಿಡಿಗೇಡಿ ಕವಿ ‘ಬಿಸುಲಿಗೆ ಎಂಡಾ, ಎ(ಹೆ)ಂಡಾಕ್ಕೆ ಕಲ್ಲು, ಕಲ್ಲಿಗೆ ರಾಯಿ ಎಂದು ಕರೆಯುವ, ಎಲೇ ತೆಲುಗರೇ’ ಎಂಬ ಕಿರು ಕಾವ್ಯ ಬರೆದು, ಅದನ್ನು ಬಳ್ಳಾರಿಯ ದೊಡ್ಡ ದೊಡ್ಡ ಕಟ್ಟಡಗಳ ಮೇಲೆಲ್ಲಾ ಬರೆಸಿದ್ದನು. ಈ ಅಸಂಬದ್ಧ ಸ್ಲೋಗನ್ನಿನ ಗುರಿ ಗೊತ್ತಾಗುತ್ತಿರಲಿಲ್ಲ - ಆದರೆ ಬಳ್ಳಾರಿಯನ್ನೆಲ್ಲ ಆಂಧ್ರಮಯ ಮಾಡಿಕೊಂಡಿದ್ದ ಶಕ್ತಿಗಳ ವಿರುದ್ಧ ತೋರಿಸಿದ ಆಕ್ರೋಶ ಇದಾಗಿತ್ತೆಂಬುದರಲ್ಲಿ ಅನುಮಾನವಿಲ್ಲ’.

ಶೆಟ್ಟರ್‌ ಅವರು ಅಭ್ಯಾಸ ಮಾಡುತ್ತಿರುವಾಗಲೇ ಬಳ್ಳಾರಿ ಜಿಲ್ಲೆ ಮದ್ರಾಸ್‌ ಪ್ರಾಂತದಿಂದ ಬಿಡುಗಡೆ ಪಡೆದು ಮೈಸೂರು ಪ್ರಾಂತವನ್ನು ಸೇರಿದ್ದು. ಆದರೆ, ಆದೋನಿ, ಆಲೂರು, ರಾಯದುರ್ಗ ಆಂಧ್ರಕ್ಕೆ ಬಿಟ್ಟುಕೊಟ್ಟದ್ದರಿಂದ ಬಳ್ಳಾರಿ ಜಿಲ್ಲೆ ಕುಬ್ಜವಾಗಿತ್ತು. ಅಲ್ಲಿಯವರೆಗೂ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು ಸೇರುವ ಒತ್ತಾಸೆಯಲ್ಲಿರುತ್ತಿದ್ದ ಅನೇಕ ಯುವಕರು ಮೈಸೂರಿನ ಮಹಾರಾಜ ಕಾಲೇಜಿನ ಕಡೆ ನೋಡಬೇಕಾಯಿತು. ಶೆಟ್ಟರ್‌ ಅವರೂ ಕೂಡ ಮೈಸೂರಿನತ್ತ ಪ್ರಯಾಣ ಬೆಳೆಸಿದರು.

(ಅಂತರರಾಷ್ಟ್ರೀಯ ಇತಿಹಾಸಕಾರ ಪ್ರೊ ಷ ಶೆಟ್ಟರ್‌ ಅವರ ಜೀವನ ಮತ್ತು ದರ್ಶನವನ್ನು ಕುರಿತ ನ. ರವಿಕುಮಾರ್‌ ಅವರು ಬರೆದ ಪಾತಾಳ ಗರಡಿ ಪುಸ್ತಕದ ಒಂದು ಅಧ್ಯಾಯ)