ಬೆಂಗಳೂರು [ಮಾ.02]:   ಸಾಹಿತಿ ಹಾಗೂ ಪತ್ರಕರ್ತ ಗಿರೀಶ್‌ ಹತ್ವಾರ್‌ (ಜೋಗಿ) ಅವರ ಹೊಸ ಕಾದಂಬರಿ ‘ಅಶ್ವತ್ಥಾಮನ್‌’ ಕೃತಿಯು ಮುದ್ರಿತ ಪುಸ್ತಕ, ಇ-ಬುಕ್‌ ಮತ್ತು ಆಡಿಯೋ ಬುಕ್‌ (ಕೇಳು ಪುಸ್ತಕ) ಈ ಮೂರೂ ಆವೃತ್ತಿಯಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು. ತನ್ಮೂಲಕ ಇದು ಆಡಿಯೋ ರೂಪದಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಪುಸ್ತಕ ಎಂದೆನಿಸಿತು.

ಮೈಲ್ಯಾಂಗ್‌ ಬುಕ್ಸ್‌ ಸಂಸ್ಥೆಯು ಭಾನುವಾರ ನಗರದ ಬಸವನಗುಡಿಯ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವಲ್ಡ್‌ರ್‍ ಕಲ್ಚರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಶ್ವತ್ಥಾಮನ್‌’ ಕಾದಂಬರಿಯನ್ನು ಮುದ್ರಿತ ಪುಸ್ತಕ, ಇ-ಬುಕ್‌ ಹಾಗೂ ಆಡಿಯೋ ಈ ಮೂರೂ ಮಾದರಿಯಲ್ಲಿ ಬಿಡುಗಡೆ ಮಾಡಿತು. ಮುದ್ರಿತ ಪುಸ್ತಕವನ್ನು ಹಿರಿಯ ನಟ ಅಚ್ಯುತ್‌ ಕುಮಾರ್‌, ಇ-ಬುಕ್‌ ಅನ್ನು ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತು ಆಡಿಯೋ ಪುಸ್ತಕವನ್ನು ಹಿರಿಯ ರಂಗಕರ್ಮಿ, ನಟಿ ಅರುಂಧತಿ ನಾಗ್‌ ಅವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಅಶ್ವತ್ಥಾಮನ್‌ ಕಾದಂಬರಿಯನ್ನು ಇ-ಬುಕ್‌ ಮತ್ತು ಆಡಿಯೋ ಬುಕ್‌ ಆವೃತ್ತಿಯಲ್ಲಿ ಹೊರತಂದಿರುವ ಮೈಲ್ಯಾಂಗ್‌ ಬುಕ್‌ ಸಂಸ್ಥೆಯ ಮುಖ್ಯಸ್ಥರುಗಳಾದ ಪವಮಾನ್‌ ಹಾಗೂ ವಸಂತ ಶೆಟ್ಟಿ, ಆಡಿಯೋ ಆವೃತ್ತಿಗೆ ಧ್ವನಿ ನೀಡಿರುವ ನಟ ವಸಿಷ್ಠ ಸಿಂಹ ಹಾಗೂ ಕಾದಂಬರಿಯ ಕರ್ತೃ ‘ಕನ್ನಡಪ್ರಭ’ ಪುರವಣಿ ಸಂಪಾದಕರೂ ಆದ ಗಿರೀಶ್‌ ರಾವ್‌ ಹತ್ವಾರ್‌ ಉಪಸ್ಥಿತರಿದ್ದರು.

'ಪ್ರಬಂಧ ಓದಿಯೇ ಬಹುಮಾನ ಕೊಟ್ಟಿದ್ದರು ಸ್ವಾಮೀಜಿ' ಜೋಗಿ ನೆನಪು.

ಮೈಲ್ಯಾಂಗ್‌ ಆ್ಯಪ್‌ನಲ್ಲಿ ಲಭ್ಯ:  ಮೈಲ್ಯಾಂಗ್‌ ಬುಕ್ಸ್‌ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಮೈಲ್ಯಾಂಗ್‌ ಆ್ಯಪ್‌’ ಅನ್ನು ಓದುಗರು ತಮ್ಮ ಮೊಬೈಲ್‌ ಅಥವಾ ಟ್ಯಾಬ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡರೆ ಅಶ್ವತ್ಥಾಮನ್‌ ಕಾದಂಬರಿಯ ಮುದ್ರಿತ ಪುಸ್ತಕ, ಇ-ಬುಕ್‌ ಮತ್ತು ಆಡಿಯೋ ಪುಸ್ತಕ ಮೂರು ಆವೃತ್ತಿಯಲ್ಲಿ ಯಾವುದನ್ನು ಬೇಕಾದರೂ ಖರೀದಿಸಬಹುದು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲೇ ಪುಸ್ತಕ ಓದಲಿಷ್ಟಪಡುವವರು ಆ್ಯಪ್‌ನಲ್ಲಿ ನಿಗದಿತ ದರ ಪಾವತಿಸಿ ಇ-ಬುಕ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪುಸ್ತಕ ಓದಲು ಸಾಧ್ಯವಿಲ್ಲ, ಕನ್ನಡ ಓದಲು ಬರುವುದಿಲ್ಲ ಆದರೆ ಅರ್ಥವಾಗುತ್ತದೆ ಎನ್ನುವವರು ಆಡಿಯೋ ಬುಕ್‌ ಪಡೆದುಕೊಳ್ಳಬಹುದು. ಇನ್ನು, ಹಣ ಪಾವತಿಸಿ ಮುದ್ರಿತ ಪುಸ್ತಕವನ್ನೂ ತರಿಸಿಕೊಳ್ಳಬಹುದು. ಈಗಾಗಲೇ ನಮ್ಮ ಆ್ಯಪ್‌ನಲ್ಲಿ ಅಶ್ವತ್ಥಾಮನ್‌ ಕಾದಂಬರಿ ಜೊತೆಗೆ ಜೋಗಿ ಅವರ ಇನ್ನೂ ಕೆಲ ಪುಸ್ತಕಗಳು ಹಾಗೂ ನಟ ಪ್ರಕಾಶ್‌ ರೈ ಸೇರಿದಂತೆ ವಿವಿಧ ಲೇಖಕರ ಸುಮಾರು 100 ಪುಸ್ತಕಗಳು ಲಭ್ಯವಿದೆ ಎಂದು ಸಂಸ್ಥೆಯ ಸಿಇಓ ಪವಮಾನ್‌ ವಿವರಿಸಿದರು.