ನಟನೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲೂ ಗೆದ್ದು ಬೀಗಿದ ಪ್ರಚಂಡ ಕುಳ್ಳ

ಎಷ್ಟೋ ಸಿನಿಮಾಗಳಲ್ಲಿ ಗೆದ್ದರು. ಅದೆಷ್ಟೋ ಸಿನಿಮಾಗಳಲ್ಲಿ ಬಿದ್ದರು. ಆದರೆ ದ್ವಾರಕೀಶ್ ಎಂದೂ ಸೋಲೊಪ್ಪಲಿಲ್ಲ. ದುಡ್ಡಿದ್ದರೂ ದುಡ್ಡಿಲ್ಲದಿದ್ದರೂ ಸಿನಿಮಾಗಳನ್ನು ಮಾಡಿ ತೋರಿಸಿದರು. ಸಿನಿಮಾಕ್ಕಾಗಿಯೇ ತಮ್ಮನ್ನು ಮುಡಿಪಾಗಿ ಇಟ್ಟಿದ್ದರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯ ಸರ್ಕಾರ 2007ರಲ್ಲಿ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಿತ್ತು. ಜೊತೆಗೆ ಅವರು ಎನ್‌ಟಿಆರ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

Dwarakish was Successful in Acting Directing and Producing in Kannada Cinema grg

ಬೆಂಗಳೂರು(ಏ.17): ದ್ವಾರಕೀಶ್ ಮೂಲ ಹೆಸರು ಬಂಗ್ಲೆ ಶಾಮರಾವ್ ದ್ವಾರಕನಾಥ್. ಅವರಿಗೆ ದ್ವಾರಕೀಶ್ ಎಂಬ ಹೆಸರು ಕೊಟ್ಟಿದ್ದು ಖ್ಯಾತ ನಿರ್ದೇಶಕ ಸಿ.ವಿ. ಶಿವಶಂಕರ್. ದ್ವಾರಕೀಶ್ ಹುಟ್ಟಿದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ಜನ್ಮ ದಿನಾಂಕ 1942ರ ಆಗಸ್ಟ್ 19. ಶಾಮರಾವ್ ಮತ್ತು ಜಯಮ್ಮ ದಂಪತಿಯ ಸುಪುತ್ರನಾದ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಪದವಿ ಪಡೆದರು. ನಂತರ ಸಹೋದರನ ಜೊತೆ ಸೇರಿಕೊಂಡು ಮೈಸೂರಿನ ಗಾಂಧಿ ಚೌಕದಲ್ಲಿ ಭಾರತ್ ಆಟೋ ಸ್ಪೇರ್ಸ್ ಎಂಬ ಮಳಿಗೆ ಆರಂಭಿಸಿದರು. ಸ್ವಲ್ಪ ಕಾಲ ಉದ್ಯಮ ಮುನ್ನಡೆಸಿದ ಅವರನ್ನು ಸಿನಿಮಾ ಎಷ್ಟು ತೀವ್ರವಾಗಿ ಸೆಳೆಯಿತು ಎಂದರೆ 1963ರಲ್ಲಿ ಅವರು ಉದ್ಯಮ ಬಿಟ್ಟು ಚಿತ್ರರಂಗ ಪದಾರ್ಪಣೆ ಮಾಡಿದರು.

ಅವರ ನಟನೆಯ ಮೊದಲ ಸಿನಿಮಾ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ‘ವೀರ ಸಂಕಲ್ಪ’. ನಂತರ ಅವರು ‘ಮದುವೆ ಮಾಡಿ ನೋಡು’, ‘ಸತ್ಯ ಹರಿಶ್ಚಂದ್ರ’ ಸಿನಿಮಾಗಳಲ್ಲಿಯೂ ನಟಿಸಿದರು. 1966ರಲ್ಲಿ ದ್ವಾರಕೀಶ್ ಇನ್ನಿಬ್ಬರು ನಿರ್ಮಾಪಕರ ಜೊತೆ ಸೇರಿಕೊಂಡು ‘ಮಮತೆಯ ಬಂಧನ’ ಸಿನಿಮಾ ನಿರ್ಮಿಸಿದರು. ಚಿತ್ರರಂಗದಲ್ಲಿ ಸಾಧನೆಯ ಮೊದಲ ಹಂತವಾಗಿ 1969ರಲ್ಲಿ ಅವರು ನಿರ್ಮಿಸಿದ ಚೊಚ್ಛಲ ಸಿನಿಮಾ ‘ಮೇಯರ್ ಮುತ್ತಣ್ಣ’.
ಡಾ.ರಾಜ್‌ಕುಮಾರ್‌, ಭಾರತಿ ಅಭಿನಯದ ಆ ಸಿನಿಮಾ ಸೂಪರ್‌ಹಿಟ್‌ ಆಯಿತು. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್‌ ಎಂಬ ಪ್ರಮುಖ ನಿರ್ಮಾಪಕರೊಬ್ಬರು ಸಿಕ್ಕಿದರು. ಅವರ ದ್ವಾರಕೀಶ್ ಚಿತ್ರ ಎಂಬ ನಿರ್ಮಾಣ ಸಂಸ್ಥೆ ಕನ್ನಡಿಗರಿಗೆ ಅತ್ಯುತ್ತಮ ಸಿನಿಮಾಗಳನ್ನು ನೀಡಿತು. 1985ರಲ್ಲಿ ದ್ವಾರಕೀಶ್ ನಿರ್ದೇಶನವನ್ನೂ ಒಂದು ಕೈ ನೋಡೋಣ ಎಂದು ನಿರ್ದೇಶಿಸಿದ ಸಿನಿಮಾ ‘ನೀ ಬರೆದ ಕಾದಂಬರಿ’.

ಏರಿಳಿತದ ಹಾದಿಯ ಏಕಾಂಗಿ ಪಯಣಿಗ ದ್ವಾರಕೀಶ್..!

ನಟನೆ, ನಿರ್ಮಾಣ, ನಿರ್ದೇಶನ ಹೀಗೆ ಎಲ್ಲದರಲ್ಲೂ ಯಶಸ್ಸು ಕಂಡ ಅಪರೂಪದ ಸಾಧಕ ದ್ವಾರಕೀಶ್. ಅವರ ನಿರ್ಮಾಣದ ಸಿನಿಮಾಗಳ ಸಂಖ್ಯೆ 50 ದಾಟಿದರೆ ನಿರ್ದೇಶನ ಮಾಡಿದ ಸಿನಿಮಾ ಸಂಖ್ಯೆ 20 ದಾಟುತ್ತದೆ. ‘ಡಾನ್ಸ್ ರಾಜ ಡಾನ್ಸ್’, ‘ರಾಯರು ಬಂದರು ಮಾವನ ಮನೆಗೆ’, ‘ಶ್ರುತಿ’ ಮುಂತಾದ ಯಶಸ್ವೀ ಚಿತ್ರಗಳು ಅವರ ನಿರ್ದೇಶನದ ಸಿನಿಮಾಗಳು.

ನಿರ್ಮಾಣ, ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಿದ ಅವರು ನಟನೆ ಮೂಲಕ ನಾಡಿನ ಮನಗೆದ್ದರು. ಕುಳ್ಳ ಎಂದೇ ಖ್ಯಾತಿ ಪಡೆದ ಅವರು ಕುಳ್ಳ ಎಂಬ ಹೆಸರನ್ನು ಅನೇಕ ಸಿನಿಮಾಗಳ ಶೀರ್ಷಿಕೆಯಲ್ಲಿ ಸೇರಿಸಿ ನಾಯಕ ನಟನಂತೆ ಮೆರೆದರು. ವಿಷ್ಣುವರ್ಧನ್ ಜೊತೆ ಆಪ್ತ ಸ್ನೇಹವನ್ನು ಹೊಂದಿದ್ದರು. ಈ ಜೋಡಿಯ ಸಿನಿಮಾಗಳು ಕನ್ನಡಿಗ ಮನಸೂರೆಗೊಳ್ಳುತ್ತಿದ್ದವು.

ಇದ್ದಕ್ಕಿದ್ದಂತೆ ಮನಸ್ತಾಪ ಮೂಡಿ ಹಲವು ವರ್ಷಗಳ ಕಾಲ ಅವರಿಬ್ಬರು ಸಿನಿಮಾ ಮಾಡಲಿಲ್ಲ ಮತ್ತು ಮಾತೂ ಆಡಲಿಲ್ಲ. ಕೊನೆಗೆ ಆ ಸ್ನೇಹ ಸರಿಹೋಗಿದ್ದು 2004ರಲ್ಲಿ ಬಿಡುಗಡೆಗೊಂಡ, ದ್ವಾರಕೀಶ್ ನಟನೆ-ನಿರ್ಮಾಣದ ‘ಆಪ್ತಮಿತ್ರ’ ಸಿನಿಮಾ ಮೂಲಕ. ಆ ಸಿನಿಮಾ ಎಂಥಾ ಜಯಭೇರಿ ಬಾರಿಸಿತ್ತು ಎಂದರೆ ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ರಣಜಿತ್ ಚಿತ್ರಮಂದಿರಗಳಲ್ಲಿ ಒಂದು ವರ್ಷಗಳ ಕಾಲ ಓಡಿತು.

ಕಿಟ್ಟು ಪುಟ್ಟು To ಆಪ್ತಮಿತ್ರ.. ವಿಷ್ಣುವರ್ಧನ್-ದ್ವಾರಕೀಶ್ ಸ್ನೇಹದಲ್ಲಿ ಬಿರುಕು ಮೂಡಲು ಅದೊಂದೇ ಕಾರಣ!

ದ್ವಾರಕೀಶ್ ವಿದೇಶದಲ್ಲಿ ತಮ್ಮ ಸಿನಿಮಾ ಚಿತ್ರೀಕರಣ ಮಾಡಿದರು. ಹಿಂದಿಯ ಖ್ಯಾತ ಗಾಯಕ ಕಿಶೋರ್‌ ಕುಮಾರ್‌ರನ್ನು ಕನ್ನಡಕ್ಕೆ ಕರೆತಂದು ‘ಆಡೂ ಆಟ ಆಡು’ ಹಾಡು ಹಾಡಿಸಿದರು. ಅದೆಷ್ಟೋ ಹೊಸ ಮುಖಗಳಿಗೆ ನಟನೆಯ ಅವಕಾಶ ಕೊಟ್ಟರು. ಅನೇಕರನ್ನು ನಿರ್ದೇಶಕರನ್ನಾಗಿ ಮಾಡಿದರು. ಎಷ್ಟೋ ಸಿನಿಮಾಗಳಲ್ಲಿ ಗೆದ್ದರು. ಅದೆಷ್ಟೋ ಸಿನಿಮಾಗಳಲ್ಲಿ ಬಿದ್ದರು. ಆದರೆ ದ್ವಾರಕೀಶ್ ಎಂದೂ ಸೋಲೊಪ್ಪಲಿಲ್ಲ. ದುಡ್ಡಿದ್ದರೂ ದುಡ್ಡಿಲ್ಲದಿದ್ದರೂ ಸಿನಿಮಾಗಳನ್ನು ಮಾಡಿ ತೋರಿಸಿದರು. ಸಿನಿಮಾಕ್ಕಾಗಿಯೇ ತಮ್ಮನ್ನು ಮುಡಿಪಾಗಿ ಇಟ್ಟಿದ್ದರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯ ಸರ್ಕಾರ 2007ರಲ್ಲಿ ಜೀವಮಾನ ಪ್ರಶಸ್ತಿ ನೀಡಿ ಗೌರವಿಸಿತ್ತು. ಜೊತೆಗೆ ಅವರು ಎನ್‌ಟಿಆರ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ದೂರದ ಸಂಬಂಧಿಯಾಗಿದ್ದ ಅಂಬುಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಂಬುದಾ ಎಂಎಸ್ಸಿ ಪದವೀಧರೆಯಾಗಿದ್ದು ಕಾಲೇಜು ಉಪನ್ಯಾಸಕಿಯಾಗಿದ್ದರು. ಹಲವಾರು ವರ್ಷಗಳ ಬಳಿಕ ದ್ವಾರಕೀಶ್ ಶೈಲಜಾ ಎಂಬವರನ್ನು ಪ್ರೇಮಿಸಿ ಎರಡನೇ ಮದುವೆಯೂ ಆಗಿದ್ದರು. ಇಬ್ಬರು ಪತ್ನಿಯರಲ್ಲಿ ದ್ವಾರಕೀಶ್ ಆರು ಮಕ್ಕಳನ್ನು ಹೊಂದಿದ್ದರು.

Latest Videos
Follow Us:
Download App:
  • android
  • ios