ನಾನು, ವಿಷ್ಣು 6 ತಿಂಗಳು ಗಂಜಿ ಕುಡಿದು ಬದುಕಿದ್ದೆವು: 'ಯಜಮಾನ'ನ ಕತೆ ತೆರೆದಿಟ್ಟ ಭಾರತಿ!
* ಸಿನಿಮಾದಲ್ಲಿ ಅವಕಾಶವಿಲ್ಲದೆ ಬೆಂಜ್ ಕಾರು ಬಾಡಿಗೆಗೆ ಬಿಟ್ಟು ಡ್ರೈವರ್ ಆಗ ಹೊರಟಿದ್ದ ಸಾಹಸ ಸಿಂಹ
* ಭಾರತಿ ವಿಷ್ಣುವರ್ಧನ್ ಮನದಾಳದ ಮೆಲುಕು
* ಅಳಿಯ ಅನಿರುದ್‌್ಧ ನಿರ್ದೇಶನದಲ್ಲಿ ಪಂಚಭಾಷಾ ನಟಿ ಭಾರತಿ ಕುರಿತು ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರ
* ಹಲವು ಕುತೂಹಲಕರ ಘಟನೆ ಬಿಚ್ಚಿಟ್ಟ ತಾರೆ
ಬೆಂಗಳೂರು(ಆ.26): ‘ವಿಷ್ಣುವರ್ಧನ್ ಮತ್ತು ನಾನು ಸ್ಟಾರ್‌ಗಳಾಗಿದ್ದೆವು. ಆದರೆ ಒಂದು ಹಂತದಲ್ಲಿ ನಾವಿಬ್ಬರು ಮತ್ತು ನಮ್ಮಿಬ್ಬರು ಮಕ್ಕಳು ಆರು ತಿಂಗಳು ಗಂಜಿ ಕುಡಿದು ಬದುಕಿದ್ದೆವು. ದೇವರ ಆಶೀರ್ವಾದದಿಂದ ಮತ್ತೆ ಆ ಕಷ್ಟದಿಂದ ಎದ್ದುಬಂದೆವು.’
- ಹೀಗಂತ ಹೇಳಿಕೊಂಡಿದ್ದಾರೆ ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್. ಖ್ಯಾತ ನಟ ಅನಿರುದ್ಧ ನಿರ್ದೇಶಿಸಿರುವ, ಕೀರ್ತಿ ಅನಿರುದ್ಧ ನಿರ್ಮಾಣದ ‘ಬಾಳೇ ಬಂಗಾರ’ ಸಾಕ$್ಷ್ಯಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ತಮ್ಮ ಮತ್ತು ವಿಷ್ಣುವರ್ಧನ್ ಕುರಿತಾದ ಅನೇಕ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ.
ಬಿಗ್‌ಬಾಸ್‌ನಿಂದ ಪಡೆದಿದ್ದೂ, ಕಳ್ಕೊಂಡಿದ್ದು ಎರಡೂ ಇವೆ: ಸಂಬರಗಿ
ವಿಷ್ಣುವರ್ಧನ್ ಅವರು ಅವಕಾಶಗಳಿಲ್ಲದಾಗ ಡ್ರೈವಿಂಗ್ ಕೆಲಸಕ್ಕೆ ಮುಂದಾಗಿದ್ದರು ಎಂಬುದನ್ನು ತಿಳಿಸಿದ ಅವರು, ‘ಒಂದು ಹಂತದಲ್ಲಿ ಅವರಿಗೆ ಕೆಲಸ ಇರಲಿಲ್ಲ. ನಮ್ಮ ಬಳಿ ಇದ್ದ ಬೆಂಜ್ ಕಾರನ್ನು ಟ್ರಾವೆಲ್ಸ್‌ಗೆ ಜೋಡಿಸಿ ಕಾರು ಓಡಿಸುತ್ತೇನೆ ಎಂದಿದ್ದರು. ನಾನು ಸರಿ ಎಂದಿದ್ದೆ. ಮಾರನೇ ದಿನವೇ ಒಬ್ಬರು ನಿರ್ಮಾಪಕರು ಬಂದು ‘ಹೊಂಬಿಸಿಲು’ ಸಿನಿಮಾ ನೀವೇ ಮಾಡಬೇಕು ಅಂತ ಅಡ್ವಾನ್ಸ್ ಕೊಟ್ಟರು. ದೇವರು ಕೈಬಿಡಲಿಲ್ಲ’ ಎಂದರು.
ಮದುವೆಗೂ ಮೊದಲಿನ ದಿನಗಳನ್ನು ನೆನಪಿಸಿಕೊಂಡ ಅವರು, ‘ನಾನು ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳ ಚಿತ್ರಗಳಲ್ಲಿ ನಟಿಸುತ್ತಿದ್ದೆ. ಕೆಲವೊಮ್ಮೆ 24 ಗಂಟೆ ಕೆಲಸ ಮಾಡುತ್ತಿದ್ದೆ. ಮಧ್ಯಾಹ್ನದ ಬ್ರೇಕ್ ಸಮಯದಲ್ಲಿ ಮಾತ್ರ ನಿದ್ದೆ ಮಾಡುತ್ತಿದ್ದೆ. ಯಜಮಾನರ ಮೊದಲ ಸಿನಿಮಾ ಬಂದಾಗ ನಾನು ಆಗಲೇ ಸುಮಾರು 100 ಸಿನಿಮಾಗಳಲ್ಲಿ ನಟಿಸಿದ್ದೆ. ಆಗ ಒಂದ್ಸಲ ಅವರು ನನ್ನ ಭೇಟಿ ಮಾಡಲು ಬಂದಿದ್ದರು. ಆಮೇಲೆ ನಾಗರಹಾವು ಸಿನಿಮಾ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಹೋಗಿದ್ದೆ. ಆಮೇಲೆ ಅವರ ಜೊತೆ ನಟಿಸುವ ಅವಕಾಶ ಬಂತು. ನಾನು ಮತ್ತು ಅವರು ನಟಿಸಿದ ಮೊದಲ ಸಿನಿಮಾ ‘ಮನೆ ಬೆಳಗಿದ ಸೊಸೆ’. ಆ ಸಂದರ್ಭದಲ್ಲಿ ನಮ್ಮ ನಂಟು ಹೆಚ್ಚಾಯಿತು. ಅವರು ನನ್ನನ್ನು ಇಷ್ಟಪಟ್ಟಂತೆ ವರ್ತಿಸುತ್ತಿದ್ದರು. ಆಮೇಲೊಂದು ದಿನ ಅವರೇ ನನ್ನ ಬಳಿ ಮದುವೆ ಪ್ರಪೋಸಲ್ ಇಟ್ಟಾಗ ನಾನು ಮನೆಯವರು ಒಪ್ಪಿದ ಹುಡುಗನನ್ನು ಮದುವೆಯಾಗುತ್ತೇನೆ ಎಂದಿದ್ದೆ. ಆಗ ಅವರು ನಮ್ಮ ಮನೆಯವರಿಗೆ ಕ್ಲೋಸ್ ಆದರು’ ಎಂದರು.
ವಿಷ್ಣು ಓದಿದ ಶಾಲೆ ಉಳಿಸಲು ಮುಂದಾದ ನಟಿ ಪ್ರಣೀತಾ
ಮದುವೆಯಾಗಿದ್ದಕ್ಕೆ ಕಲ್ಲೇಟು:
ಮದುವೆ ದಿನದ ಬಗ್ಗೆ ಮಾತನಾಡಿದ ಭಾರತಿ, ‘ನಮ್ಮ ಮದುವೆ ದಿನ ಭಾರಿ ಅಭಿಮಾನಿಗಳು ಸೇರಿದ್ದರು. ನಮಗೆ ಊಟ ಕೂಡ ಮಾಡಲಾಗಿರಲಿಲ್ಲ. ಅಷ್ಟು ಜನ ಸೇರಿದ್ದರು. ಜನರಿಂದ ತಪ್ಪಿಸಿಕೊಳ್ಳಲು ತಾಳಿ ಕಟ್ಟಿದ ಮೇಲೆ ಹಿಂದಿನ ಬಾಗಿಲಿನಿಂದ ನಮ್ಮನ್ನು ಕಳುಹಿಸಿಕೊಟ್ಟಿದ್ದರು. ರಿಸೆಪ್ಷನ್ ಸಂದರ್ಭದಲ್ಲಿ ಮಹಡಿಯಲ್ಲಿ ನಿಂತು ಕೈಬೀಸುತ್ತಿದ್ದ ವೇಳೆ ನಮ್ಮ ಮೇಲೆ ಕಲ್ಲು ತೂರಾಟ ನಡೆದಿತ್ತು. ನನ್ನನ್ನು ಇವರು ಮದುವೆಯಾದರಲ್ಲ ಎಂಬ ಹೊಟ್ಟೆಕಿಚ್ಚಿಗೆ ಯಾರೋ ಕಲ್ಲು ಹೊಡೆದಿದ್ದರು ಅನ್ನಿಸುತ್ತದೆ’ ಎಂದರು.
ಅವರು ಬುದ್ಧಿವಂತರು:
ವಿಷ್ಣುವರ್ಧನ್ ಅವರ ಕೊನೆಯ ದಿನಗಳನ್ನು ನೆನೆದ ಭಾರತಿ, ‘ಯಜಮಾನರ ಮಡಿಲಲ್ಲಿ ಮಲಗಿ ನಾನು ಹೊರಟುಹೋಗಬೇಕು ಎಂದು ಯಾವಾಗಲೂ ಹೇಳುತ್ತಿದ್ದೆ. ಆದರೆ ಅವರು ಬುದ್ಧಿವಂತರು. ನನ್ನ ತೋಳಲ್ಲಿ ಮಲಗಿಕೊಂಡು ಎದ್ದು ಹೋದರು’ ಎಂದು ಭಾವುಕರಾದರು.
ವಿಷ್ಣುವರ್ಧನ್ ಸರ್ ನೆನಪು ಮಾಡಿಸಿದರು ಅನಿರುದ್ಧ್: ಸುಧಾರಾಣಿ
ಭಾರತಿ ವಿಷ್ಣುವರ್ಧನ್ ಜೀವನ ಆಧರಿಸಿದ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರವನ್ನು ಶೀಘ್ರದಲ್ಲಿ ಓಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಅನಿರುದ್ಧ ಹೇಳಿದ್ದಾರೆ.
ನನ್ನ ತೋಳಲ್ಲಿ ಮಲಗಿ ಎದ್ದು ಹೋದರು...
ಯಜಮಾನರ ಮಡಿಲಲ್ಲಿ ಮಲಗಿ ನಾನು ಹೊರಟುಹೋಗಬೇಕು ಎಂದು ಯಾವಾಗಲೂ ಹೇಳುತ್ತಿದ್ದೆ. ಆದರೆ ಅವರು ಬುದ್ಧಿವಂತರು. ನನ್ನ ತೋಳಲ್ಲಿ ಮಲಗಿಕೊಂಡು ಎದ್ದು ಹೋದರು.
- ಭಾರತಿ ವಿಷ್ಣುವರ್ಧನ್