ಡಾ.ರಾಜ್‌ಕುಮಾರ್ ಅವರ 'ಮಂತ್ರಾಲಯ ಮಹಾತ್ಮೆ' ಚಿತ್ರದ ಕುರಿತಾದ ಒಂದು ವಿಶೇಷ ಸಂಗತಿ ಇಲ್ಲಿದೆ. ಚಿತ್ರದಲ್ಲಿ ರಾಘವೇಂದ್ರ ಸ್ವಾಮಿಯ ಪಾತ್ರಕ್ಕೆ ಆಯ್ಕೆಯಾದ ನಂತರ, ರಾಜ್‌ಕುಮಾರ್ ಕಠಿಣ ವ್ರತಗಳನ್ನು ಆಚರಿಸಿದರು. ಆದರೆ, ಚಿತ್ರದ ಡಬ್ಬಿಂಗ್ ವೇಳೆ ಕಣ್ಣು ಮುಚ್ಚಿ ಅಭಿನಯಿಸಿದ್ದರು. ಆಶ್ಚರ್ಯವೆಂದರೆ, ಅವರು ಈ ಚಿತ್ರವನ್ನು ಎಂದಿಗೂ ವೀಕ್ಷಿಸಲಿಲ್ಲ. ಏಕೆಂದರೆ, ಆ ಪಾತ್ರವನ್ನು ರಾಯರೇ ಮಾಡಿಸಿದ್ದಾರೆ ಎಂಬ ಭಾವನೆ ಅವರಲ್ಲಿತ್ತು ಎಂದು ಹೇಳಿದ್ದಾರೆ.

 ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್​ಕುಮಾರ್​ ಅವರ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವರ ಒಂದೊಂದು ಚಿತ್ರದ ಹಿಂದೂ ಒಂದೊಂದು ಕುತೂಹಲದ ಕಥೆಯಿದೆ. ತಾವು ನಟಿಸುವ ಚಿತ್ರದಲ್ಲಿ ಯಾವುದೇ ಪಾತ್ರವಿದ್ದರೂ ಸರಿ, ಆ ಪಾತ್ರದ ಒಳಗೆ ಹೊಕ್ಕು ಅವರು ಅಭಿನಯಿಸುತ್ತಿದ್ದ ಪರಿಯೇ ವಿಶೇಷ. ಇದೇ ಕಾರಣಕ್ಕೆ ಇಂದಿಗೂ ಡಾ.ರಾಜ್​ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರ ಹಾವಭಾವ, ಕಣ್ಣಿನಲ್ಲಿಯೇ ಅವರು ನಟಿಸುವ ವಿಧಾನ, ಅವರ ಕಣ್ಣಿನ ನೋಟ, ಯಾವ ಪಾತ್ರಕ್ಕೂ ಸೈ ಎನ್ನುವಂಥ ಅವರ ನಟನೆ, ಪರಕಾಯ ಪ್ರವೇಶ ಮಾಡಿದಂತೆ ನಟಿಸುವ ಅವರ ಪರಿ... ಇವೆಲ್ಲವುಗಳಿಂದಲೇ ಇಂದು ಡಾ.ರಾಜ್​ಕುಮಾರ್​ ಮೇರುನಟ ಎಂದೇ ಎನ್ನಿಸಿಕೊಂಡಿರುವುದು. ಇವರ ಬಗ್ಗೆ ಅವರ ಒಡನಾಟ ಇಟ್ಟುಕೊಂಡವರು ಹೇಳುವ ಒಂದೊಂದು ಸ್ವಾರಸ್ಯಕರ ಘಟನೆಗಳನ್ನು ಕೇಳುತ್ತಿದ್ದರೆ ಅಬ್ಬಾ ಎನ್ನಿಸುವುದು ಉಂಟು.

 ಸಾಹಿತಿ ಶ್ರೀಧರ ಮೂರ್ತಿ ಅವರು, ಕನ್ನಡ ಮಾಣಿಕ್ಯ ಯೂಟ್ಯೂಬ್​ ಚಾನೆಲ್​ಗೆ ನೀಡಿದ್ದ ಸಂದರ್ಶನದಲ್ಲಿ ಡಾ.ರಾಜ್​ಕುಮಾರ್​ ಅವರ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ಅದರಲ್ಲಿ ಒಂದು ಮಂತ್ರಾಲಯ ಮಹಾತ್ಮೆ ಚಿತ್ರ. ಈ ಚಿತ್ರದಲ್ಲಿ ಸಾಕ್ಷಾತ್​ ರಾಘವೇಂದ್ರನ ದರ್ಶನ ಮಾಡಿಸಿದವರು ಡಾ.ರಾಜ್​ಕುಮಾರ್​. ಈ ಚಿತ್ರಕ್ಕಾಗಿ ಹಲವಾರು ರೀತಿಯಲ್ಲಿ ಕಠಿಣ ವ್ರತವನ್ನೂ ಮಾಡಿದವರು ಅವರು. ಆದರೆ, ಈ ಚಿತ್ರವನ್ನು ಅವರು ಕೊನೆಯವರೆಗೂ ನೋಡಲೇ ಇಲ್ಲ ಎನ್ನುವುದು ಬಹುಶಃ ಯಾರಿಗೂ ತಿಳಿದಿರಲಿಕ್ಕಿಲ್ಲ. ಯಾವುದೇ ಚಿತ್ರ ಮುಗಿದ ಬಳಕ, ಅದಕ್ಕೆ ದನಿ ನೀಡುವ ಸಲುವಾಗಿ ಡಬ್ಬಿಂಗ್​ ಕಾರ್ಯ ನಡೆಯುತ್ತದೆ. ಆ ಸಂದರ್ಭದಲ್ಲಿಯೂ ರಾಜ್​ಕುಮಾರ್​ ಅವರು ಕಣ್ಣುಮುಚ್ಚಿಯೇ ಡಬ್ಬಿಂಗ್​ ಕಾರ್ಯದಲ್ಲಿ ತೊಡಗಿದ್ದರಂತೆ! ಬಹುಶಃ ಡಾ.ರಾಜ್​ಕುಮಾರ್​ ಅವರು ತಮ್ಮ ಚಿತ್ರವನ್ನು ನೋಡದ ಏಕೈಕ ಚಿತ್ರ ಇದು ಎಂದೇ ನಂಬಲಾಗಿದೆ.

ಪಾರ್ವತಿಗೆ ಮಾತ್ರ ಈ ವಿಷ್ಯ ಹೇಳ್ಬೇಡಪ್ಪಾ ಎಂದಿದ್ದ ಡಾ.ರಾಜ್​: ಆ ರಹಸ್ಯದ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪು..

ಇದಕ್ಕೆ ಕಾರಣವೂ ಅಷ್ಟೇ ಕುತೂಹಲವಾಗಿದೆ. ಅಷ್ಟಕ್ಕೂ ಈ ಚಿತ್ರ ಮಾಡುವ ಪೂರ್ವದಲ್ಲಿ ಯಾರು ಈ ಪಾತ್ರದಲ್ಲಿ ನಟಿಸಬೇಕು ಎನ್ನುವ ಬಗ್ಗೆ ದೊಡ್ಡ ಮಟ್ಟಿನ ಚರ್ಚೆ ನಡೆದಿತ್ತು. ಮಂತ್ರಾಲಯದಲ್ಲಿಯೇ ಮೂರು ಬಾರಿ ಚೀಟಿ ಎತ್ತಿದಾಗ ಇವರ ಹೆಸರೇ ಬಂದಿದ್ದರಿಂದ ಇವರೇ ಫೈನಲ್ ಆಗಿತ್ತು. ಆಗಿನ ಕಾಲದಲ್ಲಿ ಸಿನಿಮಾ 25 ವಾರ ಓಡಿತ್ತು. ಅದೊಂದು ಪವಾಡ ಎಂದೇ ಹೇಳಲಾಗಿತ್ತು. 1966ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕಾಗಿ ರಾಜ್ ಕುಮಾರ್ 43 ದಿನಗಳ ಕಟ್ಟುನಿಟ್ಟಾದ ಸಸ್ಯಾಹಾರಿಯಾಗಿದ್ದರು. ಚಪ್ಪಲಿ ಧರಿಸದೇ 18 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಇಷ್ಟೆಲ್ಲಾ ಮಾಡಿದ್ದ ರಾಜ್​ಕುಮಾರ್​, ಆ ಸಿನಿಮಾ ಯಾಕೆ ನೋಡಲಿಲ್ಲ ಎನ್ನುವ ಬಗ್ಗೆ ಶ್ರೀಧರ ಮೂರ್ತಿ ಅವರು ಹೇಳಿದ್ದಾರೆ.

'ಅವರ ಚಿತ್ರಗಳ ಬಗ್ಗೆ ಸಂದರ್ಶನದ ಸಮಯದಲ್ಲಿ ನನಗೆ ಅವರು ಮಂತ್ರಾಲಯ ಮಹಾತ್ಮೆ ಚಿತ್ರದ ಬಗ್ಗೆ ವಿವರಿಸಿದ್ದರು. ಚಿತ್ರದ ಡಬ್ಬಿಂಗ್​ ಮಾಡುವಾಗಲೂ ತಾವು ಕಣ್ಣುಮುಚ್ಚಿರುವುದಾಗಿ ಹೇಳಿದ್ದರು. ಅದಕ್ಕೆ ಕಾರಣ ಕೇಳಿದ್ದಾಗ ಅವರು, ನನ್ನ ಮನಸ್ಸಿನಲ್ಲಿ ನಾನು ರಾಘವೇಂದ್ರ ಸ್ವಾಮಿ ಆಗಿಬಿಟ್ಟೆ ಎನ್ನುವುದು ಬರಬಾರದಲ್ವಾ, ಏಕೆಂದರೆ ನಾನು ರಾಘವೇಂದ್ರ ಸ್ವಾಮಿ ಆಗಿಲ್ಲ, ರಾಯರೇ ಈ ಪಾತ್ರವನ್ನು ಮಾಡಿಸಿದ್ದಾರೆ. ಆದ್ದರಿಂದ ಎಲ್ಲಿಯೂ ನನ್ನ ಮನಸ್ಸಿಗೆ ಆ ಭಾವನೆ ಬರಬಾರದು ಎನ್ನುವ ಕಾರಣಕ್ಕೆ ನಾನು ಆ ಚಿತ್ರ ನೋಡಿಲ್ಲ. ಟಿವಿಯಲ್ಲಿ ಈ ಸಿನಿಮಾ ಬಂದರೂ ನೋಡುವುದಿಲ್ಲ' ಎಂದಿದ್ದರಂತೆ ಡಾ.ರಾಜ್​ಕುಮಾರ್​! ರಾಜ್​ಕುಮಾರ್ ಅವರು ತಮ್ಮ ಸಂದರ್ಶನವೊಂದರಲ್ಲಿ ಈ ಚಿತ್ರದ ಬಗ್ಗೆ ಮಾತನಾಡುತ್ತಾ, ಮಂತ್ರಾಲಯ ಮಹಾತ್ಮೆ ನನ್ನ ಇಷ್ಟದ ಚಿತ್ರ. ನಾನು ನನ್ನ ಯಾವ ಸಿನಿಮಾಗಳನ್ನೂ ನೋಡಿ ಎಂದು ಅಭಿಮಾನಿಗಳ ಬಳಿ ಕೋರಿದಿಲ್ಲ. ಆದರೆ ಮಂತ್ರಾಲಯ ಮಹಾತ್ಮೆಗೆ ಮಾತ್ರ ಕೋರಿದ್ದಿದೆ' ಎಂದಿದ್ದರು. ಆದರೆ ಖುದ್ದು ಆ ಚಿತ್ರವನ್ನು ನೋಡಿಲ್ಲ ಎನ್ನುವ ವಿಷಯವೀಗ ರಿವೀಲ್​ ಆಗಿದೆ. 

ಡಾ.ರಾಜ್​ಗೂ ಇತ್ತು ಸ್ಮೋಕಿಂಗ್​ ಚಟ: ಆ ರಾತ್ರಿ ನಡೆದ ಸ್ವಾರಸ್ಯಕರ ಘಟನೆ ನೆನಪಿಸಿಕೊಂಡ 'ಮುಖ್ಯಮಂತ್ರಿ' ಚಂದ್ರು

YouTube video player