ಪುನೀತ ಪರ್ವ ಕಾರ್ಯಕ್ರಮಕ್ಕೆ ಅದ್ದೂರಿ ತಯಾರಿ. 25 ಸಾವಿರ ಜನ ಭಾಗಿ, ಭಾರತೀಯ ಚಿತ್ರರಂಗದ ಗಣ್ಯರ ಆಗಮನ
ಅಕ್ಟೋಬರ್ 21ರಂದು ನಡೆಯಲಿರುವ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಅದ್ದೂರಿ ತಯಾರಿ ನಡೆಯುತ್ತಿದೆ. ಇದು ಅಮೋಘವರ್ಷ ನಿರ್ದೇಶಿಸಿ, ಪುನೀತ್‌ರಾಜ್‌ಕುಮಾರ್ ನಟಿಸಿರುವ ಕೊನೆಯ ಚಿತ್ರ ‘ಗಂಧದಗುಡಿ’ಯ ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮ. ‘ಪುನೀತ ಪರ್ವ’ ಹೆಸರಿನಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ಸೇರಿದಂತೆ ಎಲ್ಲ
ಭಾಷೆಯ ನಟ, ನಟಿಯರಿಗೆ ಹಾಗೂ ಚಿತ್ರರಂಗದ ಹಲವು ಗಣ್ಯರಿಗೆ ಅಹ್ವಾನ ನೀಡಲಾಗಿದೆ. ಈ ಕುರಿತು ವಿವರಣೆ ನೀಡಲು ರಾಘವೇಂದ್ರ ರಾಜ್‌ಕುಮಾರ್, ಅಮೋಘವರ್ಷ ಮಾಧ್ಯಮಗಳ ಮುಂದೆ ಬಂದರು.
ರಾಘಣ್ಣ ಹೇಳಿದ್ದು
- ಅ.21ರ ಪುನೀತ ಪರ್ವ ಕಾರ್ಯಕ್ರಮ ಅಶ್ವಿನಿ ಪುನೀತ್‌ರಾಜ್‌ಕುಮಾರ್ ನೇತೃತ್ವದಲ್ಲಿ ನಡೆಯಲಿದೆ. ಅವರ ಜತೆಗೆ ನಾವು- ನೀವು ಎಲ್ಲರೂ ಇರುತ್ತೇವೆ. ಪುನೀತ್ ಅವರ
ಪ್ರೀತಿಯ ಸಿನಿಮಾ ಇದು. ಹೀಗಾಗಿ ಅಶ್ವಿನಿ ಅವರೇ ಮುಂದಾಳತ್ವ ವಹಿಸಿಕೊಳ್ಳಬೇಕು ಎಂಬುದು ಎಲ್ಲರ ಆಸೆ.
![]()
- ಈ ಕಾರ್ಯಕ್ರಮ ಸೆಲೆಬ್ರೇಷನ್ ಆಗಿರಬೇಕು. ಪುನೀತ್ ಇದ್ದಿದ್ದರೆ ಎಷ್ಟುಚೆನ್ನಾಗಿ ಕಾರ್ಯಕ್ರಮ ನಡೆಯುತ್ತಿತ್ತೋ ಅದಕ್ಕಿಂತ ಚೆನ್ನಾಗಿ ಮಾಡೋಣ. ವೇದಿಕೆ ಮೇಲೆ ಹಾಡು, ಡ್ಯಾನ್ಸ್ ಎಲ್ಲ ಮನರಂಜನೆ ಕಾರ್ಯಕ್ರಮ ಇರುತ್ತದೆ.
- ದೂರದಿಂದ ಬರುವ ಅಪ್ಪು ಅಭಿಮಾನಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ನಿನ್ನೆಯಿಂದಲೇ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬರಲು ಶುರು ಮಾಡಿದ್ದಾರೆ. ಪುನೀತ್ ನಮ್ಮ ಒಬ್ಬರ ಸ್ವತ್ತು ಅಲ್ಲ. ಇಡೀ ಕರ್ನಾಟಕದ ಸ್ವತ್ತು. ಹೀಗಾಗಿ ಅಪ್ಪು ಹೆಸರಿನ ಈ ಕಾರ್ಯಕ್ರಮ ಎಲ್ಲರಿಗೂ ಸೇರಬೇಕು. ಎಲ್ಲರಿಗೂ ತಲುಪಬೇಕು.
- ಅಪ್ಪು ಈಗ ಗಂಧದಗುಡಿ ಚಿತ್ರದ ಮೂಲಕ ಜನರಿಗೆ ಏನೋ ಹೇಳಲಿಕ್ಕೆ ಹೊರಟಿದ್ದಾರೆ ಎನ್ನುವ ನಂಬಿಕೆ ಇದೆ. ಪರಿಸರ, ಪ್ರಾಣಿ-ಪಕ್ಷಿ, ಪ್ರಕೃತಿಯ ಮಹತ್ವ, ಮನುಷ್ಯನ
ಪಯಣ.. ಹೀಗೆ ಎಲ್ಲವನ್ನು ಹೇಳಬೇಕು ಅಂತಾನೇ ಈ ಸಿನಿಮಾ ಮಾಡಿದ್ದಾರೆ. ಇಂಥದ್ದೊಂದು ಸಿನಿಮಾ ಮಾಡುವ ತನಕ ಆ ದೇವರು ಅಪ್ಪುನನ್ನು ಉಳಿಸಿದ್ದರು.
'ಪುನೀತ ಪರ್ವ' ಕಾರ್ಯಕ್ರಮಕ್ಕೆ ಯಾರೆಲ್ಲಾ ಬರ್ತಿದ್ದಾರೆ? ಸಂಪೂರ್ಣ ಮಾಹಿತಿ ಹಂಚಿಕೊಂಡ ರಾಘಣ್ಣ
ಕಾರ್ಯಕ್ರಮದ ಹೈಲೈಟ್ಸ್
1. ಕಳೆದ ಒಂದು ವಾರದಿಂದ ಬೆಂಗಳೂರಿನ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಅದ್ದೂರಿಯಾಗಿ ವೇದಿಕೆ ನಿರ್ಮಾಣ ಆಗುತ್ತಿದ್ದು, ಇದಕ್ಕಾಗಿ 350 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
2. ವೇದಿಕೆ ಮೇಲೆ ಕುನಾಲ್ ಗಾಂಜಾವಾಲ, ಅರ್ಮಾನ್ ಮಲಿಕ್ ಗಾಯನ ಹಾಗೂ ಶಿವಣ್ಣ, ಪ್ರಭುದೇವ, ರಮ್ಯಾ ಮೊದಲಾದವರು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
3. ನಟ ಯಶ್, ತೆಲುಗಿನ ಬಾಲಕೃಷ್ಣ, ರಾಣಾ ದಗ್ಗುಬಾಟಿ, ತಮಿಳಿನಿಂದ ಸೂರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಧಿಕೃತವಾಗಿದೆ.
4. ಕನ್ನಡದಲ್ಲೂ ಎಲ್ಲ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅಹ್ವಾನ ನೀಡಲಾಗಿದೆ. ಎಲ್ಲರು ಕೂಡ ತಮ್ಮ ತಮ್ಮ ಮನೆಯ ಕಾರ್ಯಕ್ರಮ ಎಂದುಕೊಂಡು ಬರುವ ನಿರೀಕ್ಷೆ ಇದೆ.
'ಪುನೀತ ಪರ್ವ'ಕ್ಕೆ ತಾರೆಗಳ ಸಮಾಗಮ: ಇಲ್ಲಿದೆ ಅಪ್ಪು ಬಳಗ!
5. ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. 10 ಸಾವಿರ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಎಷ್ಟೇ ಜನ ಬರಲಿ ಎಲ್ಲರಿಗೂ ಕಾರ್ಯಕ್ರಮ ನೋಡಲು ಅವಕಾಶ ಇದೆ.
6. ಅ.29 ರಂದು ಪುನೀತ್ ರಾಜ್‌ಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ. ಒಂದು ದಿನ ಮುಂಚಿತವಾಗಿ ಅ.28 ರಂದು ಅವರ ಕೊನೆಯ ಸಿನಿಮಾ ‘ಗಂಧದಗುಡಿ’ ಬಿಡುಗಡೆ ಆಗುತ್ತಿದೆ.
7. ಪುನೀತಪರ್ವ ಕಾರ್ಯಕ್ರಮಕ್ಕೆ ಆಗಮಿಸುವವರು ಬಿಳಿ ಬಣ್ಣದ ಉಡುಪು ಧರಿಸಲು ಮನವಿ ಮಾಡಲಾಗಿದೆ.
