ರಾಜ್‌ಕುಮಾರ್‌ ಜೊತೆ ನಟಿಸಿದ್ದ ಸರಿತಾ ಎಲ್ಲಿದ್ದಾರೆ ಗೊತ್ತೇ: ಅಪ್ಪು ಜೊತೆ ಬಾಲ್ಯದಲ್ಲಿ ಅಭಿನಯಿಸಿದ್ದ ನಟಿ ಮತ್ತೆ ಚಿತ್ರಗಳಲ್ಲಿ ನಟಿಸಲು ಬರ್ತಿದ್ದಾರೆ.

ಸರಿತಾ. 80ರ ದಶಕದಲ್ಲಿ ಕನ್ನಡ ಸಿನಿಮಾವನ್ನು ಆಳಿದ ನಾಯಕ ನಟಿ. ರಾಜ್‌ಕುಮಾರ್‌, ವಿಷ್ಣುವರ್ಧನ್, ಶಂಕರ್‌ನಾಗ್‌, ಲೋಕೇಶ್, ಅನಂತ್‌ನಾಗ್‌, ಶ್ರೀನಾಥ್ ಹೀಗೆ ಎಲ್ಲರ ಜೊತೆ ನಟಿಸಿದ, ಕನ್ನಡಿಗರ ಮನಸ್ಸು ಗೆದ್ದ ನಟಿ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕೆ.ಬಾಲಚಂದರ್ ನಿರ್ದೇಶನದ ಮರೋ ಚರಿತ್ರ ಸಿನಿಮಾದಲ್ಲಿ. ನಂತರ ಅವರನ್ನು ಕನ್ನಡಕ್ಕೆ ಕರೆತಂದಿದ್ದು ಕೂಡ ಕೆ.ಬಾಲಚಂದರ್. ಕೆ.ಬಾಲಚಂದರ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅದರಲ್ಲೂ ಅ‍ವರೂ ಸೂಪರ್‌ಹಿಟ್‌ ಅನ್ನಿಸಿಕೊಂಡಿದ್ದು ಡಾ.ರಾಜ್‌ಕುಮಾರ್‌ ಜೊತೆ ಅಭಿನಯಿಸಿದ ಸಿನಿಮಾಗಳಲ್ಲಿ.

ಅಣ್ಣಾವ್ರಿಗೆ ಇಷ್ಟ ಸರಿತಾ ವಾಯ್ಸ್ 
ಕನ್ನಡ ಚಿತ್ರರಂಗಕ್ಕೆ ಸರಿತಾ ಎಂಟ್ರಿ ಕೊಟ್ಟ ಆರಂಭದ ಸಿನಿಮಾಗಳಲ್ಲಿ ಸರಿತಾ ಡಬ್ಬಿಂಗ್ ಮಾಡುತ್ತಿರಲಿಲ್ಲ. ಅವರನ್ನು ಒತ್ತಾಯಪೂರ್ವಕವಾಗಿ ಡಬ್ಬಿಂಗ್ ಮಾಡಿಸಿದ್ದು ಡಾ.ರಾಜ್‌ಕುಮಾರ್‌. ಅಣ್ಣಾವ್ರಿಗೆ ಸರಿತಾ ಅವರ ಧ್ವನಿ ಎಂದರೆ ತುಂಬಾ ಇಷ್ಟ. ಅದಕ್ಕಾಗಿ ಅವರು ನಟಿಯರು ಡಬ್ಬಿಂಗ್ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಿ, ಸರಿತಾ ಅವರಿಂದಾನೇ ಡಬ್ಬಿಂಗ್ ಮಾಡಿಸಿದರು. ಡಾ.ರಾಜ್‌ಕುಮಾರ್‌ ಅವರಿಗೆ ಸರಿತಾ ಅವರ ಧ್ವನಿ ಎಷ್ಟು ಹಿಡಿಸಿತ್ತು ಎಂದರೆ ಹಾಲು ಜೇನು ಸಿನಿಮಾದಲ್ಲಿನ 'ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ' ಹಾಡಿನಲ್ಲಿ ಬರುವ ಒಂದು ಸಾಲನ್ನು ಸರಿತಾ ಅವರ ಕೈಯಲ್ಲಿ ಹೇಳಿಸಿದ್ದರು. ಸರಿತಾ ಆ ಸಿನಿಮಾದ ಭಾಗವಾಗಿರಲಿಲ್ಲ. ಆದರೆ ಅವರ ಧ್ವನಿ ಬೇಕು ಎಂಬ ಕಾರಣಕ್ಕೆ ಅವರಲ್ಲಿ ವಿನಂತಿ ಮಾಡಿ ಆ ಧ್ವನಿಯನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದರು. ನೀವು ಈಗಲೂ ಆ ಹಾಡನ್ನು ಕೇಳಿದರೆ ಆರಂಭದಲ್ಲಿ ಕೇಳಿ ಬರುವ ಮಧುರ ಧ್ವನಿ ಸರಿತಾ ಅವರದ್ದು.

ನಟಿ ಸರಿತಾ ಬಗ್ಗೆ ನಿಮಗೆ ಗೊತ್ತಿರದ ವಿಚಾರ!

1978ರಲ್ಲಿ ತಪ್ಪಿದ ತಾಳ ಸಿನಿಮಾದಲ್ಲಿ ಕನ್ನಡಕ್ಕೆ ಬಂದ ಅವರು ಕನ್ನಡದ ಮೊದಲ ಇನ್ನಿಂಗ್ಸ್‌ನ ಕೊನೆಯ ಸಿನಿಮಾ ಮಾಡಿದ್ದು 1989ರಲ್ಲಿ. ಲೋಕೇಶ್ ನಟನೆಯ ಸಂಕ್ರಾಂತಿ ಸಿನಿಮಾ. ನಂತರ ಅವರು ಮಲಯಾಳಂ ನಟ ಮುಕೇಶ್ ಅವರನ್ನು ಮದುವೆಯಾದರು. ಅಲ್ಲಿಂದ ಅವರ ಸಿನಿಮಾ ಪ್ರಯಾಣದಲ್ಲಿ ಹಿನ್ನೆಡೆ ಆಗುತ್ತಾ ಹೋಯಿತು. ಅಲ್ಲಿಂದ ನಂತರ ಅವರು ಮತ್ತೆ ಕನ್ನಡಕ್ಕೆ ಬಂದಿದ್ದು 2012ರ ಸಿನಿಮಾ ದಶಮುಖ ಮೂಲಕ. ಅದಕ್ಕೂ ಮೊದಲು ಕೆಲವು ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದರು. 

ಮತ್ತೆ ಬರ್ತಿದ್ದಾರೆ
1988-1989ರ ಅವರು ನಟಿಸಿದ್ದು ಕೇವಲ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. ಪ್ರಮುಖವಾದುದು ತೆಲುಗಲ್ಲಿ ಮಹೇಶ್ ಬಾಬು, ಪ್ರಕಾಶ್ ರೈ ಜೊತೆ ನಟಿಸಿದ ಅರ್ಜುನ. ಈಗೀಗ ಸರಿತಾ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಮುಖೇಶ್ ಜೊತೆಗಿ ವಿವಾಹವೂ ಮುರಿದುಬಿತ್ತು. ನಂತರ ದುಬೈನಲ್ಲಿಯೇ ನೆಲೆಸಿದ್ದಾರೆಂದೂ ಹೇಳಲಾಗುತ್ತಿತ್ತು. ಅನಂತರ ಅವರು ಪ್ರೇಕ್ಷಕರಿಗೆ ಕಾಣಿಸಿಕೊಂಡಿದ್ದು ಅ‍ವರ ಮಗ ಶ್ರವಣ್ ನಟನೆಯ ಕಲ್ಯಾಣಮ್ ಸಿನಿಮಾ ಕಾರ್ಯಕ್ರಮದಲ್ಲಿ. ಅಲ್ಲಿ ಮಗನಿಗಾಗಿ ಗಂಡ ಹೆಂಡತಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಆ ಮಹಾನಟಿ ಮತ್ತೆ ನಿಮ್ಮೆದುರು ಬರುತ್ತಿದ್ದಾರೆ. ನಾಯಕ ನಟಿಯಾಗಿ ಅಲ್ಲ, ಬದಲಾಗಿ ನಾಯಕನ ತಾಯಿಯಾಗಿ. ಅ‍ವರನ್ನು ಮತ್ತೆ ತೆರೆ ಮೇಲೆ ಕರೆ ತಂದಿರುವುದು ತಮಿಳಿನ ಮಾವೀರನ್ ಸಿನಿಮಾ. ಶಿವಕಾರ್ತಿಕೇಯನ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಇದೇ ಶುಕ್ರವಾರ ಜುಲೈ 14ರಂದು ಬಿಡುಗಡೆಯಾಗುತ್ತಿದೆ. ಆ ಸಿನಿಮಾದಲ್ಲಿ ಸರಿತಾ ನಟ ಶಿವಕಾರ್ತಿಕೇಯನ್ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಿದ 'ಹೊಸ ಬೆಳಕು' ಸರಿತಾ ಹೇಗಿದ್ದಾರೆ ನೋಡಿ!

ಸರಿತಾರನ್ನು ಇಷ್ಟ ಪಡುವವರಂತೂ ಈ ಸಿನಿಮಾ ನೋಡಿಯೇ ನೋಡುತ್ತಾರೆ. ಸಿನಿಮಾ ನೋಡದವರು ಕೂಡ ಸರಿತಾ ವಾಪಸ್ ಬಂದಿದ್ದ ಸುದ್ದಿ ಕೇಳಿಯೇ ಖುಷಿ ಪಡುತ್ತಾರೆ. ಸರಿತಾ ಅವರ ನಟನೆಯ ಈ ಹೊಸ ಇನ್ನಿಂಗ್ಸ್ ಮುಂದುವರಿಯುತ್ತಲೇ ಇರಲಿ.