ಯೋಗರಾಜ್ ಭಟ್ಟರು ಹುಡುಗರಿಗೆ "ಹೂಂ, ಆಂ, ಕರೆಕ್ಟ್" ಎಂಬ ಪ್ರೇಮ ಸಲಹೆ ನೀಡಿದ್ದಾರೆ. ಪತ್ನಿ ರೇಣುಕಾ ಅವರ ಮಾತು ಕೇಳದ ಭಟ್ಟರು, ಈ ಟಿಪ್ಸ್‌ ಬಳಸಿ ಮದುವೆಯಾದೆ ಎಂದಿದ್ದಾರೆ. ಹೆಚ್ಚಿನ ಮಾತು ಬೇಡವೆಂದಾದರೆ "ಮೊನ್ನೆ ನಿನ್ನ ಫ್ರೆಂಡ್ ಜೊತೆ ಏನಾಯ್ತು?" ಎಂದು ಕೇಳಿ ಎಂದೂ ತಮಾಷೆ ಮಾಡಿದ್ದಾರೆ.

ಕನ್ನಡ ಚಿತ್ರರಂಗ ನಿರ್ದೇಶಕ ಹಾಗೂ ಗೀತ ರಚನೆಕಾರ ಯೋಗರಾಜ ಭಟ್ಟರು ವಿಕಟಕವಿ ಎಂದೇ ಫೇಮಸ್​ ಆದವರು. ಅಷ್ಟು ಹಾಸ್ಯ ಪ್ರವೃತ್ತಿ ಅವರಲ್ಲಿದೆ. ಯೋಗರಾಜ್ ಭಟ್ ಅವರ ಹಾಡುಗಳೆಂದರೆ ಅದಕ್ಕೆ ಅದರದ್ದೇ ಆದ ವಿಶೇಷತೆಗಳಿವೆ. ಅವರು ಎಲ್ಲಿಯೇ ಹೋದರೂ ಹಾಸ್ಯದ ಮಾತುಗಳಿಂದ ರಂಜಿಸುವುದನ್ನು ಮಾತ್ರ ಬಿಡುವುದಿಲ್ಲ. ಇದೀಗ ಕಲರ್ಸ್​ ಕನ್ನಡದ ವತಿಯಿಂದ ಸೃಜನ್​ ಲೋಕೇಶ್​ ಜೊತೆ ನೀಡಿದ ಸಂದರ್ಶನದಲ್ಲಿ ಭಟ್ಟರು ಮದುವೆಯಾಗಬೇಕು ಎಂದಿರುವ ಹುಡುಗರಿಗೆ ಕೆಲವೊಂದು ಲವ್​ ಟಿಪ್ಸ್​ ನೀಡಿದ್ದಾರೆ. ಇದು ಕೇವಲ ನಾಲ್ಕು ಶಬ್ದಗಳ ಟಿಪ್ಸ್​. ಹೀಗೆ ಮಾಡಿದ್ರೆ ನಿಮ್ಮ ಗರ್ಲ್​ಫ್ರೆಂಡ್​ ಇಂಪ್ರೆಸ್​ ಆಗ್ತಾಳೆ, ಮದುವೆಯಾಗಿದ್ದರೆ ಹೆಂಡತಿನೂ ನಿಮ್ಮ ಮಾತು ಕೇಳುತ್ತಾಳೆ ಎಂದಿದ್ದಾರೆ ಅವರು.


ಎಲ್ಲಾ ಹೆಂಡತಿಯರಿಗೂ ಗಂಡನ ಮೇಲೆ ಒಂದಲ್ಲ ಒಂದು ಕಂಪ್ಲೇಂಟ್​ ಇರತ್ತೆ. ನಿಮಗೆ ಏನಿದೆ ಎಂದು ಸೃಜನ್​ ಲೋಕೇಶ್​ ಅವರು ಯೋಗರಾಜ್ ಭಟ್​ ಅವರ ಪತ್ನಿ ರೇಣುಕಾ ಅವರಲ್ಲಿ ಕೇಳಿದಾಗ, ರೇಣುಕಾ ಅವರು, 'ಇವ್ರು ನನ್ನ ಮಾತೇ ಕೇಳಿಸಿಕೊಳ್ಳಲ್ಲ. ನಾನು ಮಾತನಾಡುತ್ತಲೇ ಇರ್ತೇನೆ, ನಾನ್​ ಸ್ಟಾಪು. ಅವರು ನನ್ನ ಮುಖ ನೋಡೋದೂ ಇಲ್ಲ, ನನ್ನ ಮಾತು ಕೇಳಿಸಿಕೊಳ್ಳೋದೂ ಇಲ್ಲ. ಈಗ ನನ್ನನ್ನು ನೋಡ್ತಾ ಇದ್ರೂ ತಲೆ ಇನ್ನೆಲ್ಲೋ ಇರುತ್ತೆ' ಎಂದರು. ಆಗ ಇದು ನಿಜನಾ ಎಂದು ಕೇಳಿದಾಗ ಭಟ್ಟರು ಸಿಕ್ಕಿದ್ದೇ ಚಾನ್ಸ್​ ಎಂದುಕೊಂಡು ಟಿಪ್ಸ್​ ಕೊಟ್ಟೇ ಬಿಟ್ಟರು. 

ನನ್ ಹೆಂಡ್ತಿ ಉಗಿದಿರೋ ಎಲ್ಲಾ ಸಾಂಗೂ ಹಿಟ್ಟೇ: ಯೋಗರಾಜ ಭಟ್ಟರ ಯಶಸ್ವಿನ ಹಿಂದಿರೋ ಗುಟ್ಟು ಇದಂತೆ!


'ನೋಡಿ ಗಮನವಿಟ್ಟು ಕೇಳಿ. ಹುಡುಗರಿಗೆ ಟಿಪ್​ ಕೊಡಲು ಇಷ್ಟಪಡುತ್ತೇನೆ. ಗರ್ಲ್​ಫ್ರೆಂಡ್​ ಅನ್ನು ಇಂಪ್ರೆಸ್​ ಮಾಡಬೇಕು, ಆಕೆ ನಿಮ್ಮ ಮಾತು ಕೇಳಬೇಕು ಅಂತಿರೋ ಎಲ್ಲಾ ಹುಡುಗರು ಮೂರು ಡೈಲಾಗ್​ ಕಲಿಯಬೇಕು. ಅದೇನೆಂದರೆ, ಹೂಂ, ಆಂ ಮತ್ತು ಕರೆಕ್ಟ್​ ಎನ್ನೋದು. ಬೇಕಿದ್ರೆ ಒಹೋನೂ ಸೇರಿಸ್ಬೋದು. ಆರು ತಿಂಗಳು ನಾನು ಮಾಡಿದ್ದಕ್ಕೆ ಮದುವೆಯಾಗಿದ್ದು ಎಂದಿದ್ದಾರೆ. 2-3 ತಾಸು ಹೀಗೆ ಮಾತನಾಡಿದ ಮೇಲೆ ನಿಮಗೆ ರೆಸ್ಟ್​ ಬೇಕು ಎಂದ್ರೆ ಇನ್ನೊಂದು ಮಾಡಬೇಕು. ಅದೇನೆಂದ್ರೆ ಮೊನ್ನೆ ನಿನಗೂ ನಿನ್ನ ಫ್ರೆಂಡ್​ಗೂ ಏನೋ ಆಯ್ತು ಅಂದ್ಯಲ್ಲ ಎಂದು ಹೇಳಿದ್ರೆ ಸಾಕು, ಮತ್ತೆ ಎರಡು ತಾಸು.. ಫೋನ್​ ಪಕ್ಕಕ್ಕೆ ಇಟ್ಟು ಬ್ಯಾಟರಿ ಡೆಡ್​ ಆದ್ರೂ ಆ ಕಡೆಯಿಂದ ಬರ್ತಾನೇ ಇರ್ತದೆ' ಎಂದು ತಮಾಷೆ ಮಾಡಿದರು.

ಇನ್ನು ಯೋಗರಾಜ್​ ಭಟ್​ ಅವರ ಕುರಿತು ಹೇಳುವುದಾದರೆ, ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ, ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ. ಯೋಗರಾಜ್​ ಭಟ್ ಅವರು ಉತ್ತರಾಕಾಂಡ ಚಿತ್ರದಲ್ಲಿ ನಟಿಸಿದ್ದಾರೆ. 'ಪಾಟೀಲ' ಎಂಬ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,‌ ಈ ಮೂಲಕ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಂಡಿದ್ದಾರೆ. 'ಉತ್ತರಕಾಂಡ (Uttarakaanda)' ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ರೋಹಿತ್ ಪದಕಿ ನಿರ್ದೇಶಕರು.


 ಈ ಹಿಂದೆ ಸಂದರ್ಶನವೊಂದರಲ್ಲಿ ಅವರ ಪತ್ನಿ ರೇಣುಕಾ ಅವರು ತಮ್ಮ ಪತಿಯ ಕೆಲವೊಂದು ಗುಣಗಳನ್ನು ತೆರೆದಿಟ್ಟಿದ್ದರು. ಯೋಗರಾಜ್​ ಭಟ್​ ಅವರಿಗೆ ತಾವು ಮಾಡುವ ಸಿನಿಮಾ, ಹಾಡುಗಳ ಸಂಪೂರ್ಣ ಡಿಟೇಲ್ಸ್​ ನೆನಪಿದ್ದರೂ, ಕನಸಿನಲ್ಲಿ ಕೂಡ ಪರ್ಫೆಕ್ಟ್​ ಆಗಿ ಹೇಳಿದರೂ ತಮ್ಮ ಮದುವೆಯ ದಿನಾಂಕ ಮಾತ್ರ ನೆನಪು ಇರುವುದಿಲ್ಲ ಎಂದಿದ್ದರು. ಇವರನ್ನು ಮದ್ವೆಯಾದದ್ದು ನನ್ನ ತಂದೆಯ ಒತ್ತಾಯಕ್ಕೆ ಎಂದು ರೇಣುಕಾ ಅವರು ಓಪನ್​ ಆಗಿಯೇ ಹೇಳಿಕೊಂಡಿದ್ದರು. ಕೆಲಸಕ್ಕೆ ಹೋಗುತ್ತಿದ್ದ ನನಗೆ ಕೆಲಸ ಬಿಡಿಸಿದ್ರು, ಎಲ್ಲರಿಗೂ ಕೆಲಸ ಬಿಡಿಸಿ ತಮ್ಮ ಬಳಿ ಇಟ್ಟುಕೊಳ್ಳುವುದು ಎಂದರೆ ಇವರಿಗೆ ತುಂಬಾ ಖುಷಿ ಎನ್ನುತ್ತಲೇ ಭಟ್ಟರಂಥ ಪತಿಯನ್ನು ಪಡೆದಿರುವುದು ತಮ್ಮ ಪುಣ್ಯ ಎಂದೂ ಹೇಳಿದ್ದರು. ಶಿವರಾಜ್​ ಕುಮಾರ್​ ಜೊತೆಗಿನ ಸಂದರ್ಶನದಲ್ಲಿ ಭಟ್ಟರು ನಮ್ಮ ಹೆಂಡ್ತಿಯನ್ನು ನಾವು ಪ್ರೀತಿಸ್ತೇವೆ ಎಂದ ಮಾತ್ರಕ್ಕೆ, ಬೇರೆಯವರ ಪತ್ನಿಯರನ್ನು ಕಡೆಗಣಿಸ್ತೇವೆ ಎನ್ನೋದು ಅರ್ಥವಲ್ಲ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ದೊಡ್ಡದಾಗಿ ನಗುತ್ತ, ರೇಣುಕಾ ಅವರು ನಾನು ಏನೂ ಹೇಳಲ್ಲಪ್ಪ ಎನ್ನುತ್ತ ಬಾಯಿಗೆ ಬೀಗ ಹಾಕಿಕೊಂಡಿದ್ದರು. 

ಡಿವೋರ್ಸ್‌ ಸುದ್ದಿ ನಡುವೆಯೇ 'ನನ್ನ ಮುದ್ದಿನ ಗಂಡ' ಎಂದ ಮಾಸ್ಟರ್‌ ಆನಂದ್‌ ಪತ್ನಿ- ವಿಡಿಯೋ ವೈರಲ್‌

View post on Instagram