ಕನ್ನಡ ಸಿನಿಮಾಗಳ ಬಗ್ಗೆ ಜನರನ್ನು ದೂಷಿಸುವುದು ಸರಿಯಲ್ಲ. ಜನರೇ ನಮ್ಮ ಮಾಲೀಕರು, ಅವರಿಗಾಗಿ ಸಿನಿಮಾ ಮಾಡುತ್ತೇವೆ. ಆದರೆ, ಅತಿಯಾದ ಹಾಡುಗಳು, ನೋಟಿಫಿಕೇಶನ್‌ಗಳಿಂದ ಅವರಿಗೆ ಬೇಸರವಾಗುತ್ತದೆ. ಚಿತ್ರಮಂದಿರದಲ್ಲಿ ನೋಡುವಂತಹ ಸಿನಿಮಾಗಳನ್ನು ಮಾಡಿದರೆ, ವೈಯಕ್ತಿಕವಾಗಿ ಆಹ್ವಾನಿಸಿದರೆ ಜನರು ಬರುತ್ತಾರೆ. ಮೊದಲು ನಾವು ಸರಿ ಹೋಗಬೇಕು, ಶಿಸ್ತು, ಒಗ್ಗಟ್ಟು ಮುಖ್ಯ. ತಪ್ಪು ಮಾಡಿ ಜನರನ್ನು ದೂಷಿಸುವುದು ತರವಲ್ಲ.

ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಸಿನಿಮಾದವರು ಮೊದಲು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ನಮ್ಮಲ್ಲಿ ಒಗ್ಗಟ್ಟಿಲ್ಲದೇ 15-20 ಸಿನಿಮಾ ಬಿಡುಗಡೆ ಮಾಡುವ ಬದಲು ಒಂದಾದ ನಂತರ ಒಂದರಂತೆ ಸಿನಿಮಾ ರಿಲೀಸ್ ಮಾಡಬೇಕು ಎಂದು ನಿರ್ದೇಶಕ ಯೋಗರಾಜ್ ಭಟ್ ಕನ್ನಡ ಚಿತ್ರೋದ್ಯಮಕ್ಕೆ ಬುದ್ಧಿ ಹೇಳಿದ್ದಾರೆ.

ಖಾಸಗಿ ವಾಹಿನಿಗೆ ಕೊಟ್ಟ ಸಂದರ್ಶನವೊಂದರಲ್ಲಿ ಮಾತನಾಡಿನ ನಿರ್ದೇಶಕ ಯೋಗರಾಜ್ ಭಟ್ ಅವರು, 'ಕನ್ನಡ ಸಿನಿಮಾ ನೋಡೋಕೆ ಬರ್ತಿಲ್ಲ ಎಂದು ಜನರ ಮರ್ಯಾದೆ ತೆಗಿತಿದ್ದೀವಿ ಅನಿಸುತ್ತದೆ. ಆ ಕೆಸವನ್ನು ನಾವು ಮೊದಲು ಬಿಡಬೇಕು. ಸತ್ಯ ಹೇಳಬೇಕು ಎಂದರೆ, ಸಿನಿಮಾದವರ ಜೀವನ ನಡೆಯುವುದೇ ಜನರಿಂದ. ನಾವು ಜನರಿಗಾಗಿಯೇ ಸಿನಿಮಾವನ್ನು ಮಾಡುವುದು. ಅವರೇ ನಮ್ಮ ನಿಜವಾದ ಮಾಲೀಕರು. ಅವರನ್ನ ನಾವೆಲ್ಲರೂ ಸೇರಿ ವಾರಕ್ಕೆ 15 ಸಿನಿಮಾ ಮಾಡಿ, ಗೋಗರೆದು ಕೂಗಿ-ಕೂಗಿ ಕರೆದರೂ ಅವರು ಗಾಬರಿಬಿದ್ದು ಯಾವ ಸಿನಿಮಾ ನೋಡುವುದಕ್ಕೂ ಬರೋದಿಲ್ಲ. ನಾವು ಗುಂಪಲ್ಲಿ ಒಟ್ಟಿಗೆ 20 ಹಾಡುಗಳನ್ನು ರಿಲೀಸ್ ಮಾಡ್ತೀವಿ. ಆದ್ರೆ, ಅಷ್ಟೆಲ್ಲಾ ಹಾಡುಗಳನ್ನು ಒಟ್ಟಿಗೆ ಕೇಳುವುದಕ್ಕೆ ಜನರಿಗೆ ಟೈಮ್ ಬೇಕು ಅಲ್ವಾ? ಒಂದೊಂದು ಹಾಡು 3ರಿಂದ 5 ನಿಮಿಷಗಳವರೆಗೆ ಇರುತ್ತವೆ.

ಒಬ್ಬೊಬ್ಬರ ಮೊಬೈಲ್‌ಗೆ ಸಾವಿರ ನೋಟಿಫಿಕೇಷನ್‌ಗಳು ಹೋಗುತ್ತವೆ. ನೀವು ಇದನ್ನು ನೋಡಿ, ಇದನ್ನೇ ಕೇಳಿ, ಇದು ಶ್ರೇಷ್ಠ, ಇದು ಅದ್ಭುತ ಎಂದು ನಮ್ಮ ಮುಂದೆಯೇ ಕ್ಯಾಪ್ಶನ್ ಹಾಕಿ ಅವರಿಗೆ ನೋಟಿಫಿಕೇಷನ್ ಕಳಿಸುತ್ತಾರೆ. ಆದರೆ, ಅವರಿಗೆ ಎಕ್ಸ್‌ಕ್ಲೂಸಿವ್ ಎನ್ನುವುದು ಅವರ ಮನಸ್ಸಿಗೆ ಯಾವುದೂ ಕನೆಕ್ಟ್ ಆಗುವುದೇ ಇಲ್ಲ. ಆಗ ಎಲ್ಲವನ್ನೂ ಒಟ್ಟಿಗೆ ರಿಜೆಕ್ಟ್ ಮಾಡಿಬಿಡ್ತಾರೆ. ನಾವು ಟಾಯ್ಲೆಟ್‌ನಲ್ಲಿ ಫ್ಲಶ್ ಬಟನ್ ಒತ್ತಿದಂತೆ ಒತ್ತಿ ಎಲ್ಲ ನೋಟಿಫಿಕೇಷನ್‌ ಅನ್ನೂ ಒಟ್ಟಿಗೆ ಬೀಸಾಡಿಬಿಡುತ್ತಾರೆ.

ಇದನ್ನೂ ಓದಿ: ತಡೆಯೋಕಾಗ್ದೇ ಕೊನೆಗೂ ನಟಿಮಣಿ ರಮ್ಯಾ ಸೀಕ್ರೆಟ್‌ ಬಾಯ್ಬಿಟ್ಟ ಯೋಗರಾಜ್‌ ಭಟ್!

ಜನರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ. ಥಿಯೇಟರ್‌ನಲ್ಲಿಯೇ ಕುಳಿತು ನೋಡುವಂತಹ ಸಿನಿಮಾಗಳನ್ನು ನಾವು ಮಾಡಿದ್ದೀವಾ? ನಾವು ಅಂಥಹ ಸಿನಿಮಾ ಮಾಡಿದರೆ ಅವರು ಥಿಯೇಟರ್‌ಗೆ ಬಂದೇ ಬರುತ್ತಾರೆ. ನಾವು ನಮ್ಮ ಸಂಬಂಧಿಕರನ್ನು ಮದುವೆಗೆ ಕರೆಯುವ ಹಾಗೆ, ಜನರನ್ನು ನಮ್ಮ ಸಿನಿಮಾ ನೋಡಲು ಬನ್ನಿ ಎನ್ನುವ ಹಾಗೆ ಕರೆಯಬೇಕಿದೆ. ವೈಯಕ್ತಿಕವಾಗಿ ಜನರ ಬಳಿ ಹೋಗಿ ಜನರನ್ನು ಭೇಟಿ ಮಾಡಿ ಸಿನಿಮಾ ನೋಡಲು ಬನ್ನಿ ಎಂದು ಕರೆದರೆ ಅವರು ಬಂದೇ ಬರುತ್ತಾರೆ. ಇಂದಿನ ದಿನಗಳಲ್ಲಿ ನಮ್ಮ ಸಂಬಂಧಿಕರನ್ನೇ ನಾವು ಮಾಡಿದ ಸಿನಿಮಾಗಳನ್ನು ನೋಡುವುದಕ್ಕೆ ಥಿಯೇಟರ್‌ಗೆ ಬನ್ನಿ ಎಂದು ಕರೆಯುತ್ತಿಲ್ಲ ಅಲ್ಲವೇ. ಆಲ್‌ರೆಡಿ ನಾವು ಎಲ್ಲರಿಂದಲೂ ಅಷ್ಟೊಂದು ದೂರ ಆಗಿದ್ದೇವೆ. 

ಇನ್ನು ಜನಕ್ಕೆ, ದುಡ್ಡು ಕೊಡುವ ಪ್ರೇಕ್ಷಕರಿಗೆ ಏಕೆ ನಾವು ಆರೋಪ ಮಾಡಬೇಕಾ?. ಅವರನ್ನು ಕರೆಯದೇ ಹೀಗೆ ಮಾತನಾಡಬಾರದು. ನಾವು ಸಿನಿಮಾದವರು ಜನರನ್ನು ಪರ್ಸನಲ್ ಆಗಿ ಸಿನಿಮಾ ನೋಡುವುದಕ್ಕೆ ಕರೆಯುತ್ತೀವಾ? ಆಗ ಮಾತ್ರ ಅವರು ನಮ್ಮನ್ನ ಬಂದು ಕಾಪಾಡುತ್ತಾರೆ. ಇಲ್ಲವೆಂದರೆ ಜನ ಅವರ ಪಾಡಿಗೆ ಅವರು ಇರುತ್ತಾರೆ. ಮೊದಲು ನಾವು ಸರಿ ಹೋಗಬೇಕು. ಆಮೇಲೆ ಜನ ಏನಂತಾರೆ ಎಂದು ಕೇಳಬೇಕು.

ಇದನ್ನೂ ಓದಿ: ಗಂಡಸ್ರಿಗೆ ಮದ್ವೆಯಾಗಿದೆ ಅಂತ ಗೊತ್ತಾಗೋ 3 ಲಕ್ಷಣ ಹೇಳಿದ್ರು ಯೋಗರಾಜ ಭಟ್ರು! ಒಪ್ತೀರಾ ಇದನ್ನು?

ನಾವೆಷ್ಟು ಗಬ್ಬೆದ್ದು ಹೋಗಿದ್ದೀವಿ ಎಂದರೆ ಇವತ್ತು ಒಂದು ದಿನದ ರಾತ್ರಿಯಲ್ಲಿ ಫುಲ್ ವೈರಲ್ ಆಗಬೇಕು ಎಂದು ಜನರಿಗೆ ಹಣ ಕೊಟ್ಟು ಹಾಡನ್ನು ಕೇಳಿಸುತ್ತಿದ್ದೇವೆ. ಇಂದಿನ ದಿನದಲ್ಲಿ ಯಾವ ಜನತೆ ಕೂಡ ಇಷ್ಟಪಟ್ಟು ಹಾಡನ್ನು ಕೇಳುತ್ತಿಲ್ಲ. ನಾವು ಹಣ ಕೊಟ್ಟು ಜಾಹೀರಾತು ಕೊಡುತ್ತಿದ್ದೇವೆ. ಆದರೂ ಅದನ್ನು ಜನ ನೋಡುವುದಿಲ್ಲ. ಎಲ್ಲರೂ ಒಟ್ಟಿಗೆ ಸಿನಿಮಾ ಅಥವಾ ಹಾಡನ್ನು ಬಿಡುಗಡೆ ಮಾಡ್ತೀವಿ. ಜನರ ಬಳಿ ಅಷ್ಟೊಂದು ಬಜೆಟ್ ಇರುತ್ತದೆಯೇ ಎಂಬ ಸಾಮಾನ್ಯ ಜ್ಞಾನವೂ ನಮಗೆ ಇರುವುದಿಲ್ಲ. ಒಟ್ಟಿಗೆ ಎಲ್ಲವನ್ನೂ ನೋಡುವುದಕ್ಕೆ ಜನರಿಗೆ ಹೇಗೆ ಸಾಧ್ಯ.? ಇನ್ನು ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ಬಾಯಿಂದ ಬಾಯಿಗೆ ಹರಡಿ (ಮೌತ್ ಪಬ್ಲಿಸಿಟಿ) ಆಗಿ ಜನರು ಥಿಯೇಟರ್‌ಗೆ ಬರುವಷ್ಟರಲ್ಲಿ ಸಿನಿಮಾನೇ ಅಲ್ಲಿ ಇರುವುದಿಲ್ಲ. ಅಂತಹ ಪರಿಸ್ಥಿತಿ ಇದೆ. ಸಿನಿಮಾಗಳು ಚಿತ್ರಮಂದಿರಕ್ಕೆ ಬಂದಿದ್ದು ಗೊತ್ತಾಗೊಲ್ಲ, ಹೋಗಿದ್ದೂ ಗೊತ್ತಾಗೋದಿಲ್ಲ. ಇದೆಲ್ಲವನ್ನೂ ನಾವು ಸಿನಿಮಾದವರು ತಿದ್ದಿಕೊಳ್ಳಬೇಕು.

View post on Instagram

ಒಂದು ಸಣ್ಣ ಶಿಸ್ತು ಕೂಡ ಇಲ್ಲ ನಮ್ಮಲ್ಲಿ. ಒಗ್ಗಟ್ಟು ಇಲ್ಲ. ಒಬ್ಬರಾದ ಮೇಲೆ ಒಬ್ಬರು ಬರಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಪಾಳೆ ಪ್ರಕಾರ ನಾವು ಚಿತ್ರಮಂದಿರಕ್ಕೆ ಸಿನಿಮಾ ಬಿಡುಗಡೆ ಮಾಡೊಲ್ಲ, ಅವರು ಸಿನಿಮಾ ನೋಡುವುದಕ್ಕೂ ಬರೊಲ್ಲ. ನಾವು ತಪ್ಪು ಮಾಡಿ ಜನರನ್ನು ಬ್ಲೇಮ್ ಮಾಡೋದು ಸರಿಯಲ್ಲ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.