ಕಿಚ್ಚ ಸುದೀಪ್ ಅವರ ‘ಹೆಬ್ಬುಲಿ’ ಸಿನಿಮಾ ಬಂತೋ, ಆಗ ನಮ್ಮ ರಾಯಚೂರಿನಲ್ಲಿ ಈ ಸಿನಿಮಾದಲ್ಲಿ ಸುದೀಪ್ ಮಾಡಿರುವ ಹೇರ್‌ಕಟ್ ಬಹಳ ಜನಪ್ರಿಯವಾಯಿತು.
- ಹೇರ್ ಕಟ್ ಬಗ್ಗೆ ಮೊದಲೇ ಒಂದು ಕತೆ ಬರೆದಿದ್ದೆ. ಯಾವಾಗ ಕಿಚ್ಚ ಸುದೀಪ್ ಅವರ ‘ಹೆಬ್ಬುಲಿ’ ಸಿನಿಮಾ ಬಂತೋ, ಆಗ ನಮ್ಮ ರಾಯಚೂರಿನಲ್ಲಿ ಈ ಸಿನಿಮಾದಲ್ಲಿ ಸುದೀಪ್ ಮಾಡಿರುವ ಹೇರ್‌ಕಟ್ ಬಹಳ ಜನಪ್ರಿಯವಾಯಿತು. ಊರಿನ ಹೈಸ್ಕೂಲ್ ಹುಡುಗರು ಕೂಡ ಈ ಹೇರ್‌ಸ್ಟೈಲ್ ಮಾಡಿಕೊಂಡು ಓಡಾಡತೊಡಗಿದರು. ಈ ಬೆಳವಣಿಗೆ ಮೊದಲೇ ಬರೆದಿಟ್ಟಿದ್ದ ನನ್ನ ಕಥೆಗೆ ಮತ್ತೊಂದು ಆಯಾಮ ಸಿಗುವಂತೆ ಮಾಡಿತು. ನಮ್ಮ ಸಿನಿಮಾದ ಹೈಲೈಟ್ ಸುದೀಪ್ ಅವ್ರೇ.
- ನನ್ನ ಊರು ರಾಯಚೂರು. ನನ್ನೆಲ್ಲ ಸಿನಿಮಾಗಳಲ್ಲಿ ನನ್ನ ಊರಿನ ಕಥೆ ಹೇಳಬೇಕು ಅನ್ನುವ ಕನಸಿದೆ. ಹೆಬ್ಬುಲಿ ಕಟ್‌ನಲ್ಲಿ ಇರುವುದೂ ರಾಯಚೂರಿನ ಕಥೆ. ಇಡೀ ಸಿನಿಮಾ ರಾಯಚೂರಿನಲ್ಲೇ ಚಿತ್ರೀಕರಣಗೊಂಡಿದೆ.
- ದೇವನೂರು ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ, ‘ದೊಡ್ಡ ಹೋಟೆಲ್, ಮಾಲ್‌ಗಳು ಬಂದಿವೆ. ಕ್ಯಾಪಿಟಲಿಸಂ ಎಲ್ಲೆಡೆ ಆವರಿಸಿದೆ. ಆದರೆ ನಮ್ಮ ಆಂತರ್ಯದಲ್ಲಿರುವ ತಾರತಮ್ಯ ಭಾವ ಮಾತ್ರ ಹೋಗಿಲ್ಲ, ಅದು ಹೋಗುವ ಲಕ್ಷಣಗಳೂ ಕಾಣುತ್ತಿಲ್ಲ’ ಎಂಬ ಅರ್ಥದಲ್ಲಿ ಬರೆದಿದ್ದಾರೆ. ಅದೇ ನನ್ನ ಈ ಸಿನಿಮಾದ ತಿರುಳು.
- ಈ ಸಿನಿಮಾದಲ್ಲಿ ಕಚಗುಳಿ ಇಡುವ ಪ್ರೇಮಕಥೆ ಇದೆ. ಅದು ನಮ್ಮೆಲ್ಲರಿಗೂ ಕನೆಕ್ಟ್ ಆಗುವಂತಿದೆ. ಹುಡುಗಿಯನ್ನು ಒಲಿಸಿಕೊಳ್ಳಲು ತಾನು ಮಾಡಿಕೊಳ್ಳಬೇಕೆಂದಿರುವ ಹೇರ್‌ಕಟ್‌ಗಾಗಿ ಹುಡುಗ ಹೇಗೆಲ್ಲ ಸರ್ಕಸ್ ಮಾಡುತ್ತಾನೆ ಎಂಬುದನ್ನು ನವಿರಾದ ಹಾಸ್ಯದಲ್ಲಿ ನಿರೂಪಿಸಿದ್ದೇವೆ. ಇದರ ಜೊತೆಗೆ ನಾನು ಕಂಡ ನನ್ನೂರಿನ ನೈಜ ಘಟನೆಗಳೂ ಸಿನಿಮಾದ ಭಾಗಗಳಾಗಿವೆ.
- ನಮ್ಮ ಸಿನಿಮಾದ ಶೇ.70 ರಷ್ಟು ಕಲಾವಿದರು ರಂಗಭೂಮಿ ಹಿನ್ನೆಲೆಯವರು. ಅವರಿಗೆ ರಿಹರ್ಸಲ್ ಮಾಡಿಸಿ ಪಾತ್ರದ ಕತೆಗೆ ಕನೆಕ್ಟ್ ಮಾಡಿದ್ದೆ. ಹೀಗಾಗಿ ಸಿನಿಮಾದುದ್ದಕ್ಕೂ ಸಹಜ ಅಭಿನಯ ಬಂದಿದೆ.
- ಈ ಸಿನಿಮಾ ಟ್ರೇಲರ್ ನೋಡಿ ಇಡೀ ಕಥೆಯನ್ನೇ ಇದರಲ್ಲಿ ಹೇಳಿದ್ದೀರಲ್ಲಾ ಅಂದರೆ, ಅದು ನನ್ನಂಥಾ ಹೊಸ ನಿರ್ದೇಶಕರಿಗೆ ಅನಿವಾರ್ಯ ಎನ್ನುತ್ತೇನೆ. ಏಕೆಂದರೆ ನಮ್ಮ ಸಿನಿಮಾ ಕಥೆಯ ರುಚಿಯನ್ನು ಮೊದಲೇ ಪ್ರೇಕ್ಷಕರಿಗೆ ಮುಟ್ಟಿಸಬೇಕಿರುತ್ತದೆ. ಅವರಿಗೆ ಥೇಟರ್‌ನಲ್ಲೇ ಸರ್ಪ್ರೈಸ್ ಕೊಡುತ್ತೇವೆ ಎನ್ನುವುದು ನನ್ನಂಥವರಿಗೆ ಲಕ್ಸುರಿ. ಸ್ಟಾರ್ ಸಿನಿಮಾಗಳಲ್ಲಾದರೆ ಆ ಅನುಕೂಲ ಇರುತ್ತದೆ. ನಮ್ಮದು ಬ್ರಿಡ್ಜ್ ಸಿನಿಮಾ.
- ಸಾಹಿತ್ಯ ನನ್ನ ಆಸಕ್ತಿಯ ಕ್ಷೇತ್ರ. ಈ ಹಿಂದೆ ತೇಜಸ್ವಿ ಅವರ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಬರಹಗಾರರ ಬಳಗದಲ್ಲಿದ್ದೆ. ಆ ಸಿನಿಮಾಗೆ ಸಿಕ್ಕ ಗೆಲುವು ನನ್ನಂಥವರಿಗೆ ಸೃಜನಶೀಲ ಸಿನಿಮಾ ಮಾಡಲು ಪ್ರೇರಣೆಯಾಗಿದೆ. ಮುಂದೆ ತೇಜಸ್ವಿ ಕಥೆಗಳನ್ನಿಟ್ಟು ಒಂದು ಕಮರ್ಷಿಯಲ್ ಸಿನಿಮಾ ಮಾಡಬೇಕು ಎಂಬ ಆಸೆ ಇದೆ.
