ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಹಾಡೊಂದು ವಿವಾದಕ್ಕೆ ಸಿಲುಕಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಅಲೋಹೋಮರ’ ಹಾಡಿನ ಟ್ಯೂನ್ ತನ್ನದು ಎಂದು ಯುವ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್ ಹೇಳಿದ್ದಾರೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಹಾಡೊಂದು ವಿವಾದಕ್ಕೆ ಸಿಲುಕಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಅಲೋಹೋಮರ’ ಹಾಡಿನ ಟ್ಯೂನ್ ತನ್ನದು ಎಂದು ಯುವ ಸಂಗೀತ ನಿರ್ದೇಶಕ ತನ್ಮಯ್ ಗುರುರಾಜ್ ಹೇಳಿದ್ದಾರೆ. ಅಲೋಹೋಮರ ಗೀತೆಯ ‘ರತತ್ತತ್ತ ಥಾ’ ಟ್ಯೂನ್‌ ಹಾಗೂ ತಾನು ಸಂಗೀತ ನಿರ್ದೇಶಿಸಿದ ‘ಮಿಸ್ಸಿಂಗ್’ ಚಿತ್ರದ ಹಾಡಿನ ಟ್ಯೂನ್ ಒಂದೇ ರೀತಿ ಇರುವುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ.

ಆದರೆ ನೇರವಾಗಿ ಅಜನೀಶ್ ಅವರ ಮೇಲೆ ಟ್ಯೂನ್ ಕದ್ದ ಆರೋಪ ಹೊರಿಸದೇ, ‘ಸಂಗೀತ ಕ್ಷೇತ್ರ ಎಂಬುದು ಕ್ರಿಯಾತ್ಮಕ ಕ್ಷೇತ್ರ. ಇಲ್ಲಿ ಒಬ್ಬರಿಗೆ ಬಂದಿರುವ ಐಡಿಯಾ, ಆಲೋಚನೆ ಇನ್ನೊಬ್ಬರಿಗೂ ಬಂದಿರಬಹುದು. ಮುಂದೊಂದು ದಿನ ಕನ್ನಡದ ಕೇಳುಗ ಹೆಮ್ಮೆ ಪಡುವಂಥಾ ಸಂಗೀತ ನೀಡುವುದೇ ನನ್ನ ಗುರಿ’ ಎಂದಿದ್ದಾರೆ.

ಬಾಬಿ ಸಿ ಆರ್ ಪ್ರತಿಕ್ರಿಯೆ

ತನ್ಮಯ್ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಪಾರ್ಟನರ್ ಅಂಜು ಸಿ ಆರ್, ‘ಈ ಟ್ಯೂನ್ ಅನ್ನು ನಾವು 2 ವರ್ಷಗಳ ಹಿಂದೆಯೇ ರೆಡಿ ಮಾಡಿದ್ದೆವು. ಬಳಿಕ ಡೆವಿಲ್ ಸಿನಿಮಾಕ್ಕಾಗಿ ಬಳಸಿದೆವು. ತನ್ಮಯ್ ಅವರ ಟ್ಯೂನ್ ಅನ್ನು ಇದೇ ಮೊದಲ ಬಾರಿ‌ ಕೇಳುತ್ತಿದ್ದೇನೆ. ತನ್ಮಯ್ ಅವರ ಪ್ರತಿಭೆಗೆ ನನ್ನ ಮೆಚ್ಚುಗೆ ಇದೆ‌. ಆದರೆ ಸತ್ಯ ತಿಳಿಯದೇ ಇದರಲ್ಲಿ ಅನಾವಶ್ಯಕವಾಗಿ ಅಜನೀಶ್ ಅವರ ಹೆಸರನ್ನು ಎಳೆದು ತರಬಾರದಿತ್ತು’ ಎಂದಿದ್ದಾರೆ.

ಅಸಲಿಗೆ ‘ಡೆವಿಲ್’ ಸಿನಿಮಾದ ಅಲೋಹೋಮರ ಹಾಡಿನಲ್ಲಿ ಒಂದು ನಿರ್ದಿಷ್ಟ ಬೀಟ್​​ನ ಹೊರತಾಗಿ ಇನ್ಯಾವುದೂ ಸಹ ತನ್ಮಯ್ ಗುರುರಾಜ್ ಅವರ ಸಂಗೀತಕ್ಕೆ ಹೋಲಿಕೆ ಇಲ್ಲ. ಆದರೆ ‘ರತತ್ತತ್ತ ಥಾ’ ಎಂಬ ಕ್ಯಾಚಿ ಬೀಟ್​ ಮಾತ್ರ ಯಥಾವತ್ತು ‘ಮಿಸ್ಸಿಂಗ್’ ಸಿನಿಮಾದ ಹಾಡಿನಲ್ಲಿ ಇರುವಂತೆಯೇ ಇದೆ. ಆದರೆ ಟೆಂಪೊ ಮತ್ತು ಸ್ಪೀಡ್ ಮಾತ್ರ ತುಸು ಬದಲಾಗಿದೆ. ಈ ಬಗ್ಗೆ ಅಜನೀಶ್ ಅವರು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.