ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಹಾಸಿಗೆ, ದಿಂಬು ನಿರಾಕರಿಸಲಾಗಿದೆ. ತೀವ್ರ ಮಾನಸಿಕ ಒತ್ತಡದಿಂದಾಗಿ ಅವರು ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದು, ಕ್ವಾರಂಟೈನ್ ಸೆಲ್‌ನಲ್ಲಿ ಬಿಗಿ ಭದ್ರತೆಯಲ್ಲಿ ಒಂಟಿಯಾಗಿ ಕಾಲ ಕಳೆಯುತ್ತಿದ್ದಾರೆ.
ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಗೆ ದಿನದಿಂದ ದಿನಕ್ಕೆ ಕಷ್ಟಗಳು ಹೆಚ್ಚುತ್ತಿವೆ. ಹಾಸಿಗೆ ಹಾಗೂ ದಿಂಬು ನೀಡುವಂತೆ ನ್ಯಾಯಾಲಯದ ಮೂಲಕ ಸಲ್ಲಿಸಿದ್ದ ವಿನಂತಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿರುವುದು ವರದಿಯಾಗಿದೆ.
ಮಾನಸಿಕವಾಗಿ ಕುಗ್ಗುತ್ತಿರುವ ದರ್ಶನ್
ನ್ಯಾಯಾಲಯದ ವಿಚಾರಣೆ ಮತ್ತು ಸೌಲಭ್ಯಗಳು ಸಿಗದಿರುವುದರಿಂದ ದರ್ಶನ್ ಈಗ ತೀವ್ರವಾಗಿ ಮಾನಸಿಕವಾಗಿ ಕುಗ್ಗಿದ್ದು, ದೈಹಿಕವಾಗಿ ತೂಕ ಇಳಿದಿದೆ ಎಂದು ಜೈಲು ಮೂಲಗಳು ಹೇಳಿವೆ. ಅತಿಯಾದ ಒತ್ತಡ ಹಾಗೂ ಆತಂಕದಿಂದಾಗಿ ದರ್ಶನ್ ಸುಮಾರು 10 ಕಿಲೋ ತೂಕ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಯಾವುದೇ ರೀತಿಯ ವ್ಯಾಯಾಮ ಅಥವಾ ಚಟುವಟಿಕೆಗಳಲ್ಲಿ ಭಾಗವಹಿಸದೇ, ದರ್ಶನ್ ಬಹುತೇಕ ಸಮಯವನ್ನು ಒಂಟಿಯಾಗಿ ಬ್ಯಾರಕ್‌ನಲ್ಲೇ ಕಳೆಯುತ್ತಿದ್ದಾರೆ. ಸಹ ಆರೋಪಿಗಳಾದ ಅನು, ಜಗದೀಶ್, ಪ್ರದೋಶ್, ನಾಗರಾಜ್ ಮತ್ತು ಲಕ್ಷ್ಮಣ್ ಅವರೊಂದಿಗೆ ಕೂಡ ಹೆಚ್ಚಿನ ಸಂವಹನ ನಡೆಸದೇ, ಒಂಟಿಯಾಗಿ ದರ್ಶನ್ ತೀವ್ರ ಮೌನವಾಗಿದ್ದಾನಂತೆ.
ಕ್ವಾರಂಟೈನ್ ಸೆಲ್‌ನಲ್ಲೇ ದರ್ಶನ್
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ನನ್ನು ಪ್ರಸ್ತುತ 20x30 ಅಳತೆಯ ಕ್ವಾರಂಟೈನ್ ಸೆಲ್‌ನಲ್ಲೇ ಇರಿಸಲಾಗಿಗಿದೆ. ಕೆಲ ದಿನಗಳ ಹಿಂದೆ ಕೋರ್ಟ್ ನೀಡಿದ್ದ ಆದೇಶದಂತೆ, ಜೈಲು ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಅದೇ ಸೆಲ್‌ನಲ್ಲೇ ಮುಂದುವರಿಸಲು ತೀರ್ಮಾನಿಸಿದ್ದಾರೆ. ದರ್ಶನ್ ಇದ್ದ ಸೆಲ್‌ನಲ್ಲಿ ಟಿವಿ ವ್ಯವಸ್ಥೆ ಇಲ್ಲ, ಆದರೆ ಎರಡು ಸಿಸಿಟಿವಿ ಕ್ಯಾಮರಾಗಳು ಅಳವಡಿಸಲಾಗಿದೆ. ಬೆಳಿಗ್ಗೆ 6.30ಕ್ಕೆ ಜೈಲು ಸಿಬ್ಬಂದಿ ಸೆಲ್‌ಗೆ ಭೇಟಿ ನೀಡಿ ತಪಾಸಣೆ ನಡೆಸುತ್ತಾರೆ.
ಭದ್ರತೆಯಲ್ಲಿ 24 ಗಂಟೆಗಳ ನಿಗಾ
ಬ್ಯಾರಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ನಾಲ್ವರು ಸಿಬ್ಬಂದಿಗಳಿಗೆ ಬಾಡಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ಸಿಬ್ಬಂದಿ ತಮ್ಮ ಶಿಫ್ಟ್ ಅವಧಿಯವರೆಗೆ ಬಾಡಿ ಕ್ಯಾಮರಾ ಆನ್‌ನಲ್ಲಿರಬೇಕು. ಶಿಫ್ಟ್ ಮುಗಿದ ಬಳಿಕ ಆ ದಿನದ ರೆಕಾರ್ಡ್ ಆಗಿರುವ ದೃಶ್ಯಾವಳಿಗಳನ್ನು ಜೈಲು ಸರ್ವರ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ. ಈ ಕ್ರಮವನ್ನು ಜೈಲು ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಹಾಗೂ ಯಾವುದೇ ಅನಾಹುತಗಳನ್ನು ನಡೆಯದಂತೆ ತಡೆಯಲು ಅಳವಡಿಸಿದ್ದಾರೆ.
ಜೈಲು ಅಧಿಕಾರಿಗಳ ನಿರ್ಧಾರ
ನಿನ್ನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ವೇಳೆ, ಆರೋಪಿಗಳು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್, ಭದ್ರತೆಯ ದೃಷ್ಟಿಯಿಂದ ಜೈಲು ಅಧಿಕಾರಿಗಳೇ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿತು. ಅದರ ಆಧಾರದ ಮೇಲೆ, ಅಧಿಕಾರಿಗಳು ದರ್ಶನ್‌ರನ್ನು ಪ್ರಸ್ತುತ ಇರುವ ಸೆಲ್‌ನಲ್ಲೇ ಇರಿಸಲು ತೀರ್ಮಾನ ಮಾಡಿದ್ದಾರೆ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆ
ದರ್ಶನ್ ಹಾಗೂ ಸಹಚರರ ವಿರುದ್ಧ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪವಿದೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರಿಯುತ್ತಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜೈಲು ಮೂಲಗಳ ಪ್ರಕಾರ, ದರ್ಶನ್ ಹಾಗೂ ಅವರ ಗ್ಯಾಂಗ್‌ನ ಸದಸ್ಯರ ಮೇಲೆ ಕಟ್ಟುನಿಟ್ಟಿನ ನಿಗಾವ್ಯವಸ್ಥೆ ಮುಂದುವರಿಸಲಾಗಿದೆ.
