ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಫಂಗಸ್ ಆಗಿಲ್ಲ. ಹಿಮ್ಮಡಿಯಲ್ಲಿ ಬಿರುಕು ಇದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಲಯಕ್ಕೆ ವರದಿ ನೀಡಿದೆ.

ಬೆಂಗಳೂರು (ಅ.19): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಫಂಗಸ್ ಆಗಿಲ್ಲ. ಹಿಮ್ಮಡಿಯಲ್ಲಿ ಬಿರುಕು ಇದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಲಯಕ್ಕೆ ವರದಿ ನೀಡಿದೆ. ‘ಜೈಲಿನಲ್ಲಿ ಬಿಸಿಲು ಕೂಡ ಮೈಗೆ ತಾಗದೆ ಫಂಗಸ್ ಉಂಟಾಗಿದೆ. ಹಾಸಿಗೆ, ದಿಂಬು ಸೇರಿದಂತೆ ಜೈಲಿನ ನಿಯಮಾನುಸಾರ ಸೌಲಭ್ಯಗಳನ್ನು ಒದಗಿಸುತ್ತಿಲ್ಲ’ ಎಂದು ದರ್ಶನ್ ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಸೂಚಿಸಿತ್ತು.

ಅದರಂತೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಬಿ. ವರದರಾಜು ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಇರುವ ಬ್ಯಾರಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಬಿಸಿಲಿನ ಕೊರತೆಯಿಂದ ಮೈಗೆ ಫಂಗಸ್ ಉಂಟಾಗಿದೆ ಎಂಬ ದರ್ಶನ್‌ ಅಳಲಿನ ಬಗ್ಗೆ ಚರ್ಮರೋಗ ತಜ್ಞರಿಂದ ತಪಾಸಣೆ ನಡೆಸಲಾಗಿದೆ. ಫಂಗಸ್ ಉಂಟಾಗಿಲ್ಲ. ಕಾಲಿನ ಹಿಮ್ಮಡಿಯಲ್ಲಿ ಬಿರುಕು ಬಿಟ್ಟಿದೆ. ವೈದ್ಯರು ಎರಡು ದಿನಗಳಿಗೊಮ್ಮೆ ಬ್ಯಾರಕ್‌ಗೆ ಭೇಟಿ ನೀಡುತ್ತಾರೆ. ದರ್ಶನ್‌ ಬೆನ್ನು ನೋವಿಗೆ ಫಿಸಿಯೋಥೆರಪಿ ಸೌಲಭ್ಯ ಕಲ್ಪಿಸಲಾಗಿರುವ ಬಗ್ಗೆ ಪ್ರಾಧಿಕಾರದ ವರದಿ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.

ಜೈಲಿನ ನಿಯಮದಂತೆ 1 ತಾಸು ಬಿಸಿಲಿನಲ್ಲಿ ವಾಕಿಂಗ್ ಮಾಡಲು ಅವಕಾಶವಿದೆ. ಆದರೆ, ದರ್ಶನ್ ಸೆಲೆಬ್ರಿಟಿ ಆಗಿರುವ ಕಾರಣ ಅಕ್ಕ ಪಕ್ಕದ ಬ್ಯಾರಕ್‌ಗಳ ಮುಂದೆ ಓಡಾಡಿದರೆ ಇತರ ಕೈದಿಗಳು ಕೂಗಾಡುತ್ತಾರೆ. ಅಲ್ಲದೇ, ಸಮೀಪದಲ್ಲಿರುವ ಅಪಾರ್ಟ್‌ಮೆಂಟ್‌ಗಳಿಂದ ಫೋಟೋ ತೆಗೆಯುವ ಸಾಧ್ಯತೆ ಇರುವ ಕಾರಣ 1 ತಾಸಿನ ವಾಕಿಂಗ್‌ಗೆ ಜೈಲಿನ ಅಧಿಕಾರಿಗಳು ಆಕ್ಷೇಪಿಸಿದ್ದಾರೆ. ಆದರೆ, ನಿಯಮಾನುಸಾರ ಅವಕಾಶ ನೀಡಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಬ್ಯಾರಕ್‌ನಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಶೈಲಿಯ 2 ಶೌಚಗೃಹ, ಸ್ನಾನಗೃಹ ಸೌಲಭ್ಯ ಇದೆ. ವಿಚಾರಣಾಧೀನ ಕೈದಿಗಳಿಗೆ ಹೊರಗಿನ ಹಾಸಿಗೆ, ದಿಂಬಿಗೆ ಅವಕಾಶವಿಲ್ಲ.

ಜೈಲಿನ ಹಾಸಿಗೆಯನ್ನು ಬಳಸಬೇಕು. ಇನ್ನು ಟಿವಿ ಸೌಲಭ್ಯವಿಲ್ಲ ಎಂಬ ಆಕ್ಷೇಪವನ್ನು ಪರಿಶೀಲಿಸಲಾಗಿದ್ದು, ಕೆಲವು ಬ್ಯಾರಕ್‌ಗಳಿಗೆ ಟಿವಿ ಸೌಲಭ್ಯ ನೀಡಲಾಗಿದೆಯಾದರೂ ಎಲ್ಲಾ ಬ್ಯಾರಕ್‌ಗಳಿಗೆ ಟಿವಿ ಇರಲೇಬೇಕು ಎಂಬ ನಿಯಮವಿಲ್ಲ. ಫೋನ್‌ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್‌ ಮಾಡಲಾಗುತ್ತದೆ ಎಂಬ ದೂರಿಗೆ, ಆರೋಪಿಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಸ್ಪೀಕರ್ ಆನ್ ಮಾಡಲಾಗುತ್ತದೆ. ಅಲ್ಲದೇ, ಆರೋಪಿಗಳಿಗೆ ತಿಳಿಸಿಯೇ ಫೋನ್ ರೆಕಾರ್ಡಿಂಗ್‌ಗೂ ಅವಕಾಶವಿದೆ. ಈ ಕುರಿತು ನಿಯಮ ರೂಪಿಸಲಾಗಿದೆ ಎಂದು ಪ್ರಾಧಿಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕನ್ನಡಿ ಇಲ್ಲ

ವಿಚಾರಣಾಧೀನ ಕೈದಿಗಳಿಗೆ ಕನ್ನಡಿ, ಬಾಚಣಿಕೆ ಸೌಲಭ್ಯವನ್ನು ಒದಗಿಸುವುದಿಲ್ಲ. ಕೇವಲ ಸಜಾಬಂಧಿಗಳಿಗೆ ಒದಗಿಸಲಾಗುತ್ತದೆ. ಮೊನಚಾದ ಸಾಧನಗಳಿಂದ ಸಹಕೈದಿಗಳಿಗೆ ಅಪಾಯ ಉಂಟು ಮಾಡುವ ಮತ್ತು ಸ್ವಯಂ ಗಾಯ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣ ಅದನ್ನು ಒದಗಿಸುವುದಿಲ್ಲ. ಇನ್ನು ಭದ್ರತೆ ದೃಷ್ಟಿಯಿಂದ ಬ್ಯಾರಕ್‌ನಲ್ಲಿ ರಾತ್ರಿ ವೇಳೆಯು ಲೈಟ್ ಆನ್ ಇರುತ್ತದೆ. ಹೀಗಾಗಿ, ಕೈದಿಗಳಿಗೆ ಸಾಮಾನ್ಯವಾಗಿ ಒದಗಿಸಬೇಕಾದ ಸೌಲಭ್ಯಗಳು ದರ್ಶನ್‌ಗೆ ಸಿಗುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.