ಮಡೆನೂರು ಮನು, ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಮಡೆನೂರು ಮನು ಮಾತನಾಡಿದ್ದ ಆಡಿಯೋಗೆ ಈಗ ಸ್ಪಷ್ಟನೆ ನೀಡಿದ್ದಾರೆ. ನಟ ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿರುವ ಮಡೆನೂರು ಮನು ಕ್ಷಮೆ ಕೇಳಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಸಹ ನಟಿ ಮೇಲೆ ಬಲತ್ಕಾರ, ಬಲವಂತದಿಂದ ತಾಳಿ ಕಟ್ಟಿದ ಆರೋಪದಲ್ಲಿ ಬಂಧಿತರಾಗಿದ್ದರು. ಸದ್ಯ ಮನು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಜೈಲಿನಲ್ಲಿದ್ದಾಗ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಮಡೆನೂರು ಮನು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು.

ಇದೀಗ ಮನುಗೆ ಕಿರುತೆರೆಯಲ್ಲೂ ಅವಕಾಶವಿಲ್ಲ, ಚಿತ್ರರಂಗದಲ್ಲೂ ಇಲ್ಲ ಎಂಬಂತಾಗಿದೆ. ಹೀಗಾಗಿ ಮಡೆನೂರು ಮನು, ಶಿವಣ್ಣ, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಮಡೆನೂರು ಮನು ಮಾತನಾಡಿದ್ದ ಆಡಿಯೋಗೆ ಈಗ ಸ್ಪಷ್ಟನೆ ನೀಡಿದ್ದಾರೆ. ನಟ ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿರುವ ಮಡೆನೂರು ಮನು ಅವರು ಧ್ರುವ ಸರ್ಜಾ ಬಳಿ ಕ್ಷಮೆ ಕೇಳಿದ್ದಾರೆ. ಮನುವನ್ನು ಕ್ಷಮಿಸಿರುವ ಧ್ರುವ ಸರ್ಜಾ ಅವರು ಶಿವಣ್ಣ, ದರ್ಶನ್ ಬಳಿ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದಾರೆ.

ಅಣ್ಣಾ ನಮಸ್ತೆ.. ಮಡೆನೂರು ಮನು ಮಾತನಾಡುತ್ತಾ ಇದ್ದೀನಿ. ನಾನು ನಿಜವಾಗಲೂ ಉದ್ದೇಶಪೂರ್ವಕವಾಗಿ ನಾನು ಮಾತನಾಡಿಲ್ಲ ಅಣ್ಣಾ. ನಾನು ತಪ್ಪು ಮಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ. ಒಂದು ಒಳ್ಳೆಯ ಸಿನಿಮಾವನ್ನು ಎಲ್ಲರೂ ಸೇರಿಕೊಂಡು ಕೊಂದು ಬಿಟ್ಟಿದ್ದಾರೆ. ಮುಂದೆ ಏನಾಗುತ್ತೋ ನನಗೆ ಗೊತ್ತಿಲ್ಲ. ಸಿನಿಮಾದಿಂದ ಬ್ಯಾನ್ ಮಾಡುವ ಬಗ್ಗೆ ಎಲ್ಲರೂ ಹೇಳುತ್ತಿದ್ದಾರೆ. ನೀವೆಲ್ಲಾ ಮನಸ್ಸು ಮಾಡಿದ್ರೆ ನಾನು ಮತ್ತೆ ನನ್ನ ಜೀವನ ಕಟ್ಟಿಕೊಳ್ತೀನಿ. ನಾನು ಕಲೆ ನಂಬಿ ಇಲ್ಲಿಗೆ ಬಂದಿದ್ದೇನೆ. ನನಗೆ ಬೇರೆ ಏನು ಗೊತ್ತಿಲ್ಲ. ಸಂಘ, ಸಹವಾಸ ಮಾಡಿ ಸ್ವಲ್ಪ ಕೆಟ್ಟು ಹೋಗಿದ್ದೇನೆ. ಇನ್ನು ಮುಂದಕ್ಕೆ ಯಾರ ಸಹವಾಸವೂ ನನಗೆ ಬೇಡ. ದಯಮಾಡಿ ಒಂದು ಅವಕಾಶ ಕೊಡಿ. ನೀವು ಅವಕಾಶ ಕೊಟ್ರೆ ಎಲ್ಲೋ ಒಂದು ಕಡೆ ಜೀವನ ಮಾಡುತ್ತೇನೆ. 16 ವರ್ಷಗಳಿಂದ ಕಷ್ಟಪಟ್ಟಿದ್ದೀನಿ. ತುಂಬಾ ಬದಲಾಗುತ್ತೀನಿ ಅಣ್ಣಾ. ದಯಮಾಡಿ ಕ್ಷಮಿಸಿ, ಕ್ಷಮಿಸಿ, ಕ್ಷಮಿಸಿ... ಅಣ್ಣಾ ಎಂದು ಹೇಳಿದ್ದಾರೆ.

ಇದಕ್ಕೆ ಧ್ರುವ ಸರ್ಜಾ ಅವರು, ಶಿವಣ್ಣ ಸರ್, ದರ್ಶನ್ ಸರ್‌ ನನಗಿಂತ ಸೀನಿಯರ್ಸ್. ಅವರ ಜೊತೆಗೆ ಮಾತನಾಡಿ. ನನ್ನ ಬಗ್ಗೆ ಯೋಚನೆ ಮಾಡಬೇಡಿ. ಡೋಂಟ್ ವರಿ. ದಯವಿಟ್ಟು ನಿಮ್ಮ ತಾಯಿ, ಹೆಂಡತಿ, ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಜೈ ಹನುಮಾನ್ ಎಂದು ರಿಪ್ಲೈ ಮಾಡಿದ್ದಾರೆ. ಇದಕ್ಕೆ ಮತ್ತೆ ಆಡಿಯೋ ಮೆಸೇಜ್ ಕಳಿಸಿರುವ ಮಡೆನೂರು ಮನು ಅವರು ಅಣ್ಣಾ ಖಂಡಿತ ನಾನು ನನ್ನ ಫ್ಯಾಮಿಲಿಯ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಾನು ತುಂಬಾ ಬದಲಾಗುತ್ತೇನೆ. ಬದಲಾಗಲು ಅವಕಾಶ ಕೊಟ್ಟಿರೋದೇ ನನ್ನ ದೊಡ್ಡ ಪುಣ್ಯ ನಿಜವಾಗಲೂ. ಜೈಲಿನಿಂದ ಆಚೆ ಬಂದು ಬೇಜಾರಿನಲ್ಲಿದ್ದೆ. ನಿಮ್ಮನ್ನು ಭೇಟಿ ಮಾಡಿ ಏನೇನು ನಡೆದಿದೆ ಅದನ್ನೆಲ್ಲಾ ಹೇಳಬೇಕು ಅಂದುಕೊಂಡಿದ್ದೇನೆ. ನೀವು ಎಲ್ಲಿ ಸಿಗುತ್ತೇನೆ ಅಂತ ಹೇಳಿದ್ರೆ ನಾನು ಅಲ್ಲಿಗೆ ಬಂದು ನಿಜವಾಗಲೂ ಬಂದು ಕ್ಷಮೆ ಕೇಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.