ನಟ ನವೀನ್ ಸಜ್ಜು,ವೈಷ್ಣವಿ, ರಾಘು ಶಿವಮೊಗ್ಗ, ಅದಿತಿ ಪ್ರಭುದೇವ, ನೀನಾಸಂ ಸತೀಶ್, ವಸಿಷ್ಠ ಸಿಂಹ ಹಾಗೂ ಧನ್ಯಾ ರಾಮ್‌ಕುಮಾರ್ ಹೊಸ ವರ್ಷವನ್ನು ಹೇಗೆ ಆಚರಣೆ ಮಾಡಲಿದ್ದಾರೆ ಎಂದು ಹಂಚಿಕೊಂಡಿದ್ದಾರೆ.
ಕೊಳಲಿಗೆ ಮರುಳಾಗಿ
- ನವೀನ್ ಸಜ್ಜು
ನನ್ನ ಮ್ಯಾನ್ಶನ್ ಹೌಸ್ ಮುತ್ತು ಅನ್ನೋ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಆ ಸಿನಿಮಾ ಆದಷ್ಟುಬೇಗ ರಿಲೀಸ್ ಆಗಿ, ಜನಮನ್ನಣೆ ಗಳಿಸಬೇಕು, ನಾನು ಹೀರೋ ಆಗಿರುವ ಇನ್ನೊಂದು ಸಿನಿಮಾ ಶೂಟಿಂಗ್ ಶುರುವಾಗಬೇಕು ಅನ್ನೋದು ಹೊಸವರ್ಷದ ದೊಡ್ಡ ಕನಸು. ಇದರ ಜೊತೆಗೆ ಲಾಕ್‌ಡೌನ್‌ನಲ್ಲಿ ನಾನು ಕೊಳಲು ಕಲಿಯಲು ಶುರು ಮಾಡಿದೆ. ನಮ್ಮ ಮ್ಯೂಸಿಕ್ ಟೀಮ್‌ನಲ್ಲಿರುವವರೊಬ್ಬರು ನನಗೆ ಈ ಕೊಳಲು ಗಿಫ್ಟ್ ನೀಡಿ, ಚೆನ್ನಾಗಿ ಕಲಿಯಿರಿ ಅಂದಿದ್ರು. ಈಗ ಕೊಳಲಿನ ಕಲಿಕೆ ಒಂದು ಹಂತಕ್ಕೆ ತಲುಪಿದೆ. ಹೊಸ ವರ್ಷ ಕೊಳಲು ಕಲಿಕೆ ಸ್ವತಂತ್ರ ರಾಗ ನುಡಿಸುವಷ್ಟುಮುಂದುವರಿಯಬೇಕು ಅನ್ನುವುದು ನನ್ನಾಸೆ.
ಹೊಸ ವರ್ಷ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ರಾಜತಂತ್ರ!
ಪರಿಪೂರ್ಣ ಕಲಿಕೆಗೆ ಹೊಸವರ್ಷ
- ವೈಷ್ಣವಿ
ಹೊಸ ವರ್ಷ ಸಿಕ್ಕಾಪಟ್ಟೆಕೆಲಸ ಮಾಡಬೇಕು. ಕೆಲಸ ಮಾಡೋದಷ್ಟೇ ಅಲ್ಲ, ಅದಕ್ಕೆ ನನ್ನನ್ನು ನಾನು ಅರ್ಪಿಸಿ ಪರಿಪೂರ್ಣತೆ ಬರೋ ಹಾಗೆ ಮಾಡಬೇಕು ಅನ್ನೋದು ನನ್ನ ರೆಸೊಲ್ಯೂಶನ್. ಸದ್ಯ ನನ್ನ ಬಹುಕೃತ ವೇಷಂ ಸಿನಿಮಾ ಮುಕ್ತಾಯದ ಹಂತದಲ್ಲಿದೆ. ಈಗ ಜಾಹೀರಾತುಗಳಿಗೆ ಸಂಬಂಧಿಸಿದ ಕೆಲಸಗಳಿವೆ. ಈ ಎಲ್ಲಾ ಕೆಲಸ ಮುಗಿದ ಮೇಲೆ 2021ಯಲ್ಲಿ ಹೊಸ ಸಿನಿಮಾ ಒಪ್ಪಿಕೊಳ್ತೀನಿ. ಲಾಕ್‌ಡೌನ್ ಟೈಮ್‌ನಲ್ಲೇ ಫ್ರೆಂಚ್ ಭಾಷೆ ಕಲಿತೆ. ಡ್ರಾಯಿಂಗ್ ಕಲಿಯುತ್ತಿದ್ದೆ. ಗಿಟಾರ್ ನುಡಿಸೋಕೆ ಶುರು ಮಾಡಿದೆ. ಹೊಸ ವರ್ಷ ಇವೆಲ್ಲದರಲ್ಲೂ ಪರಿಪೂರ್ಣತೆ ಸಾಧಿಸುತ್ತಾ ಹೋಗಬೇಕು. ಜೊತೆಗೆ ಅವಕಾಶ ಇದ್ದಾಗಲೆಲ್ಲ ಹೊಸತೇನಾದರೂ ಕಲೀಬೇಕು ಅನ್ನೋ ಆಸೆ ಇದೆ.
'ಶಕೀಲಾ'ಗೆ ಪೈರಸಿ ಕಾಟ;ನಿರ್ದೇಶಕ ಇಂದ್ರಜಿತ್ ಲಂಕೇಶ್ ಬೇಸರ!
ಬಿಡುವಿಲ್ಲದಷ್ಟುಕೆಲಸ ಮಾಡಬೇಕು
- ರಾಘು ಶಿವಮೊಗ್ಗ, ನಟ, ನಿರ್ದೇಶಕ
2020ನ ಬಹುಭಾಗ ಖಾಲಿ ಕೂತು ಬಿಟ್ಟಿದ್ವಿ. 2021ರಲ್ಲಾದರೂ ಒಂದು ದಿನವೂ ಬಿಡುವಿಲ್ಲದಂತೆ ಕೆಲಸ ಸಿಗಲಿ ಅನ್ನೋದು ನನ್ನ ಆಸೆ. ಚೆನ್ನಾಗಿ ಕೆಲಸ ಮಾಡಬೇಕು ಅನ್ನೋದೊಂದೇ ನನ್ನ ರೆಸೊಲ್ಯೂಶನ್. ಹೊಸ ವರ್ಷ ನನ್ನ ನಿರ್ದೇಶನದ ಹೊಸ ಸಿನಿಮಾ ಬರಲಿದೆ. ಸದ್ಯ ಐದು ಪ್ರಾಜೆಕ್ಟ್ಗಳಲ್ಲಿ ನಟಿಸುತ್ತಿದ್ದೇನೆ. ಇವೆಲ್ಲ ಯಶಸ್ವಿಯಾಗಲಿ ಅನ್ನೋ ಕನಸು. ಕಲಿಕೆ ನಿರಂತರ. ಹೊಸ ವರ್ಷದಲ್ಲೂ ಇದು ಮುಂದುವರಿಯುತ್ತದೆ.
ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟನೆ
ಅದಿತಿ ಪ್ರಭುದೇವ, ನಟಿ
ಕಲಿಕೆ ನಿರಂತರವಾಗಿರುತ್ತದೆ. ನಿರ್ದೇಶಕನ ಸೃಷ್ಟಿಯಲ್ಲಿ ಜೀವ ಪಡೆಯುವ ಕತೆ ಮತ್ತು ಪಾತ್ರವನ್ನು ತೆರೆ ಮೇಲೆ ಮತ್ತಷ್ಟುಜೀವಂತವಾಗಿಸುವುದನ್ನು ಮುಂದುವರಿಸುತ್ತೇನೆ. ಹೊಸ ರೀತಿಯ ಪಾತ್ರಗಳು, ಪ್ರಯೋಗಾತ್ಮಕ ಚಿತ್ರಗಳಲ್ಲೂ ತೊಡಗಿಸಿಕೊಳ್ಳುವ ಆಸೆ ಇದೆ. ಕಳೆದ ವರ್ಷ ಪ್ರತಿಯೊಬ್ಬರಿಗೂ ಜೀವನ ಅಂದರೆ ಏನೂ ಅಂತ ತೋರಿಸಿಕೊಟ್ಟಿದೆ. ನಿರೀಕ್ಷೆಯೇ ಮಾಡದಂತಹ ಸಂಕಷ್ಟಗಳು, ಸನ್ನಿವೇಶಗಳು, ಸಂದರ್ಭಗಳಿಗೆ ನಮ್ಮನ್ನು ಮುಖಾಮುಖಿ ಆಗಿಸಿದೆ. ಎದುರಿಸಿದ ಕಷ್ಟಗಳನ್ನು, ಅನುಭವಗಳನ್ನೇ ಅಡಿಪಾಯವಾಗಿಸಿಕೊಂಡು 2021ರಲ್ಲಿ ಅದ್ಭುತ ಜೀವನ ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ನನಗಾಗಿ ಹುಟ್ಟಿಕೊಳ್ಳುವ ಕತೆ, ಪಾತ್ರಗಳಿಗೆ ಜೀವ ತುಂಬಬೇಕು.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸುಧಾರಾಣಿ, ವಿಜಯ್ ಸೂರ್ಯ!
ಕಳರಿ, ಕುದುರೆ ಸವಾರಿ ಕಲಿಯಬೇಕು
ಸತೀಶ್ ನೀನಾಸಂ, ನಟ
ಬದುಕು ದೊಡ್ಡ ಕಲಿಕೆಯ ಶಾಲೆ. ಈ ವರ್ಷ ಕಲಿಕೆಗೆ ಹೆಚ್ಚು ಅದ್ಯತೆ ಕೊಡಬೇಕು. ಕಳರಿಪಯಟ್ಟು ಹಾಗೂ ಕುದುರೆ ಸವಾರಿ ಕಲಿಯುವ ಆಸೆ. 2021 ಮುಗಿಯುವ ಹೊತ್ತಿಗೆ ಇವೆರಡನ್ನು ಕಲಿತು, ನಂತರ ದೊಡ್ಡ ಮಟ್ಟದಲ್ಲಿ ಐತಿಹಾಸಿಕ ಸಿನಿಮಾವೊಂದರಲ್ಲಿ ನಟಿಸುವ ಆಸೆ ಇದೆ. ಮುಖ್ಯವಾಗಿ ಆರ್ಟ್‌ಗೆ ಸಂಬಂಧಿಸಿದ ಸೂಕ್ಷ್ಮ ಕಲೆಗಳನ್ನು ಕರಗತ ಮಾಡಿಕೊಳ್ಳುವುದಕ್ಕೆ ಈ ವರ್ಷ ಮೀಸಲು. ಇನ್ನು ನಾಲ್ಕು ಚಿತ್ರಗಳ (ಪೆಟ್ರೋಮ್ಯಾಕ್ಸ್, ದಸರಾ, ಮ್ಯಾಟ್ನಿ ಶೋ ಹಾಗೂ ತಮಿಳು ಚಿತ್ರ) ಶೂಟಿಂಗ್ ಮುಗಿಸಬೇಕು. ನನ್ನದೇ ನಿರ್ಮಾಣದ ‘ಮೈ ನೇಮ್ ಈಸ್ ಸಿದ್ದೇಗೌಡ’ ಚಿತ್ರಕ್ಕೆ ಚಾಲನೆ ಕೊಡಬೇಕು.
ಗ್ರೀಸ್‌ಗೆ ಹೋಗಿ ಬರಬೇಕು
- ಧನ್ಯಾ ರಾಮ್‌ಕುಮಾರ್
ನಟಿಯಾಗಿ ಇನ್ನಷ್ಟುತರಬೇತಿ ಪಡೆದುಕೊಳ್ಳಬೇಕು, ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಇದನ್ನು ಹೊರತುಪಡಿಸಿ ಹೇಳುವುದಾದರೆ ನಾನು ತಿರುಗಾಟಕ್ಕೆ ಮುಕ್ತ ಅವಕಾಶ ಸಿಕ್ಕ ತಕ್ಷಣ ಗ್ರೀಸ್‌ಗೆ ಹೋಗಬೇಕು, ಅಲ್ಲಿ ಸುತ್ತಾಡಬೇಕು ಎಂದುಕೊಂಡಿದ್ದೇನೆ. 2014ರಲ್ಲಿ ಅಲ್ಲಿಗೆ ಹೋಗಿ ಬಂದಿದ್ದೆ. ಅದಾದ ಮೇಲೆ ಅಲ್ಲಿಗೆ ಹೋಗಲು ಆಗಿಲ್ಲ. ನಾನು ತುಂಬಾ ಇಷ್ಟಪಡುವ ದೇಶ ಅದು. ಮಾಚ್‌ರ್ ವೇಳೆಗೆ ಹೊಸ ಸಿನಿಮಾ ಶೂಟ್‌ಗೆ ಹೋಗುವ ನಿರೀಕ್ಷೆ ಇದೆ. ಅದಕ್ಕೆ ಬೇಕಾದ ತಯಾರಿಗಳನ್ನು ವರ್ಷದ ಪ್ರಾರಂಭದಿಂದಲೇ ಮಾಡಿಕೊಳ್ಳುತ್ತೇನೆ.
ಅರಣ್ಯ, ವನ್ಯಜೀವಿ ಸಂರಕ್ಷಣಾ ಅಭಿಯಾನ
- ವಸಿಷ್ಠ ಸಿಂಹ
ಬನ್ನೇರುಘಟ್ಟದಿಂದ ನನ್ನ ಹೊಸ ವರ್ಷ ಪ್ರಾರಂಭವಾಗುತ್ತಿದೆ. ವನ್ಯ ಜೀವಿಗಳು, ಅರಣ್ಯ ಸಂರಕ್ಷಣೆ ಕುರಿತಾಗಿ ವಿವಿಧ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇನೆ. 2021ರಲ್ಲಿ ಮೂರು ತಿಂಗಳಿಗೆ ಒಂದರಂತೆ ನಾಲ್ಕು ಜೀವಿಗಳನ್ನು ದತ್ತು ತೆಗೆದುಕೊಳ್ಳುವ ಪ್ಲಾನ್ ಇದೆ. ಕಾಡು, ವನ್ಯ ಜೀವಿಗಳನ್ನು ನಾವು ಯಾಕೆ ರಕ್ಷಣೆ ಮಾಡಬೇಕು, ಅದರಿಂದ ಏನಾಗುತ್ತದೆ ಎನ್ನುವುದರ ಬಗ್ಗೆ ಜನತೆಗೆ ಅರಿವು ಮೂಡಿಸಬೇಕಿದೆ. ಇದರ ಬಗೆಗೆ ಡಾಕ್ಯುಮೆಂಟರಿಗಳನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಾವು ಹೀಗೊಂದು ಕಾರ್ಯ ಮಾಡಿ ಜನರಲ್ಲಿ ಅರಿವು ಮೂಡಿಸಬೇಕು. ಎಷ್ಟೆಲ್ಲಾ ಸೌಲಭ್ಯ ಕೊಟ್ಟಿರುವ ಪ್ರಕೃತಿಗೆ ನಾವು ಏನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯ. ಕಲಿಕೆಯ ವಿಚಾರಕ್ಕೆ ಬಂದರೆ ನಾನೊಬ್ಬ ನಟನಾಗಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಇದ್ದೇ ಇದೆ. ಇದಕ್ಕೆ ಪೂರಕವಾಗಿ ನನ್ನ ಕಲಿಕೆ, ಆಸಕ್ತಿ ಸದಾ ಇರುತ್ತದೆ. ಒಳ್ಳೆಯ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು, ಜಗತ್ತಿನ ಸಿನಿಮಾಗಳನ್ನು ನೋಡುತ್ತಾ ಹೊಸದನ್ನು ಕಲಿಯುವ ಆಸೆ ಇಟ್ಟುಕೊಂಡಿದ್ದೇನೆ.
ಚೆನ್ನಾಗಿ ಡ್ಯಾನ್ಸ್ ಕಲಿಯಬೇಕು
ನಟರಾಜ್
ವರ್ಷದ ಒಳಗೆ ಒಳ್ಳೆಯ ಡ್ಯಾನ್ಸರ್ ಆಗಬೇಕು ಎನ್ನುವ ಬಯಕೆ ಇದೆ. ಅದಕ್ಕಾಗಿ ಡ್ಯಾನ್ಸ್ ಕೋಚಿಂಗ್ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ. ಬೇಸಿಕಲಿ ಟ್ರಾವೆಲ್ ಪ್ರಿಯನಾದ ನಾನು 2020ರಲ್ಲಿ ಅಂದುಕೊಂಡು ಕೈ ಬಿಟ್ಟಿದ್ದ ಹಿಮಾಲಯ ಸೇರಿ ಹಲವಾರು ಜಾಗಗಳಿಗೆ ಹೋಗಬೇಕು ಎಂದುಕೊಂಡಿರುವೆ. ಲಾಕ್‌ಡೌನ್ ವೇಳೆಯಲ್ಲಿ ನಾಟಕ ರಚನೆ ಮಾಡಿಕೊಂಡಿದ್ದು, ಅದನ್ನು ರಂಗದ ಮೇಲೆ ತರಬೇಕು, ನಿರ್ದೇಶನಕ್ಕಿಳಿಯಬೇಕು, ಹೊಸ ತಲೆಮಾರಿನ ಯುವಕರೊಂದಿಗೆ ಬೆರೆಯಬೇಕು ಎಂದುಕೊಂಡಿದ್ದೇನೆ. ಈ ಜನರೇಷನ್ ಹುಡುಗರು ತುಂಬಾ ಶಾಪ್‌ರ್ ಇದ್ದಾರೆ. ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಒಡನಾಟ, ಅವರ ಆಲೋಚನಾ ಕ್ರಮಗಳನ್ನು ಗಮನಿಸುತ್ತಾ ನಾನು ಪ್ರಸ್ತುತವಾಗಿ ಇರಬೇಕು ಎಂದು ಬಯಸುತ್ತೇನೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 1, 2021, 3:40 PM IST