Asianet Suvarna News Asianet Suvarna News

ಯಶ್ ದಶಕದ ಹಾದಿ; ನೀವೂ ಒಮ್ಮೆ ಓದಿ!

ರಾಕಿಂಗ್ ಸ್ಟಾರ್ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸಡಗರ, ಸಂಭ್ರಮದಿಂದ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಒಮ್ಮೆ ಅವರ ದಶಕದ ಹಾದಿಯನ್ನು ನೋಡೋಣ! 

Decade cine journey of KGF actor Rocking star  Yash
Author
Bengaluru, First Published Jan 8, 2020, 9:09 AM IST

ನಮ್ಮೂರಿಗೆ ಹೋಗಿದ್ದೆ. ಅಲ್ಲಿ ಹಳೆಯ ಗೆಳೆಯನೊಬ್ಬ ಸಿಕ್ಕಿದ್ದ. ಏನು ಮಾಡ್ತಿದ್ದೀಯೋ ಅಂತ ಕೇಳಿದೆ. ಸುಖವಾಗಿದ್ದೀನಿ ಅಂದ. ವರ್ಷಕ್ಕೆ ಐವತ್ತು ಅರವತ್ತು ಸಾವಿರ ದುಡೀತೀನಿ. ಝಮ್ಮಂತ ಇದ್ದೀನಿ. ಹೊಟ್ಟೆತುಂಬ ತಿಂತೀನಿ, ನೆಮ್ಮದಿಯಾಗಿದ್ದೀನಿ ಅಂತ ಹೇಳುತ್ತಾ ಮಾತಿಗೂ ನಿಲ್ಲದೇ ಹೊರಟೇ ಹೋದ. ಎಂಥಾ ಮನಸ್ಥಿತಿ, ಎಂಥಾ ಸಾಧಕ ಅವನು ಅನ್ನಿಸಿಬಿಟ್ಟಿತು. ವರ್ಷಕ್ಕೆ ಐವತ್ತು ಸಾವಿರ ಸಂಪಾದನೆ ಮಾಡ್ತಾನೆ, ಯಾವ ಕೊರಗೂ ಇಲ್ಲ, ಯಾರ ಮಾತೂ ಕೇಳಲ್ಲ, ಯಾರಿಗೂ ಕಾಯೋದಿಲ್ಲ. ಅದಕ್ಕಿಂತ ಬ್ಯೂಟಿಫುಲ್‌ ಆದ ಜೀವನ ಮತ್ತೊಂದಿದೆಯೇ?

ಜೀವನದಲ್ಲಿ ಎಲ್ಲದಕ್ಕೂ ಒಂದು ಸ್ಟಾಂಡರ್ಡ್‌ ಸೆಟ್‌ ಮಾಡೋದು ನನ್ನ ಗುರಿ: ಯಶ್‌

ಯಶ್‌ ತನ್ಮಯರಾಗಿ ಮಾತಾಡುತ್ತಿದ್ದರು. ಬದುಕಿನ ಕುರಿತ ಮಾತು ಬಂದಾಗೆಲ್ಲ ಅವರು ತಮ್ಮನ್ನು ತಾವೇ ಮರೆಯುತ್ತಾರೆ. ಹಿಂದಿನ ದಿನಗಳ ನೆನಪಾಗಲೀ, ನಾಳೆಯ ಚಿಂತೆಯಾಗಲೀ ಇಲ್ಲದವರ ಹಾಗೆ ಆ ಕ್ಷಣದಲ್ಲಿ ಲೀನವಾಗುತ್ತಾರೆ. ಒಬ್ಬ ನಟನಿಗೆ ಅಗತ್ಯವಾಗಿ ಬೇಕಾಗಿರುವ ಗುಣ ಅದು. ಆದರೆ ಅವರ ಹೆಗಲ ಮೇಲಿರುವ ಹೊರೆ, ನೆತ್ತಿಯ ಮೇಲಿರುವ ಭಾರ, ವ್ಯಕ್ತಿತ್ವದ ಮೇಲಿರುವ ನಿರೀಕ್ಷೆ ಮತ್ತು ಅವರ ಮೇಲೆ ಹೂಡಲಾಗಿರುವ ಬಂಡವಾಳವನ್ನೆಲ್ಲ ನೆನಪಿಸಿಕೊಂಡರೆ ಎಂಥವರಿಗೇ ಆದರೂ ಗಾಬರಿಯಾಗುತ್ತದೆ.

ಒಬ್ಬ ನಟನ ಸ್ಥಾನಮಾನವನ್ನು ಚಿತ್ರರಂಗ ಅಳೆಯುವುದು ಯಶಸ್ಸಿನಿಂದ. ಚಿತ್ರೋದ್ಯಮ ಹಿಂದಿನ ಚಿತ್ರಗಳ ಯಶಸ್ಸಿನ ಆಧಾರದ ಮೇಲೆ ಈತ ನಂಬರ್‌ ವನ್‌, ಈತ ನಂಬರ್‌ ಟೂ ಎಂದು ತನ್ನ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡಿರುತ್ತದೆ. ಈ ಲೆಕ್ಕಾಚಾರಗಳ ಗುರುತ್ವಾಕರ್ಷಣೆಯಲ್ಲಿ ಮೀರಿದವರು ಯಶ್‌. ಪರಭಾಷೆಗಳಲ್ಲಿ ನಟಿಸುವುದೇ ಒಂದು ಸಾಧನೆ, ಚತುರ್ಭಾಷಾ ತಾರೆ, ಪಂಚಭಾಷಾ ತಾರೆ ಅಂತ ಕರೆಸಿಕೊಳ್ಳುವುದೇ ಹೆಗ್ಗಳಿಕೆ ಅಂತೆಲ್ಲ ಮಾತಾಗುತ್ತಿರುವ ಹೊತ್ತಲ್ಲಿ ಅವರು ಚಿತ್ರರಂಗವನ್ನೇ ಪರಭಾಷೆಗೆ ಒಯ್ದುಬಿಟ್ಟರು. ಕನ್ನಡದ ಮೊದಲ ಪ್ಯಾನ್‌ ಇಂಡಿಯಾ ಸ್ಟಾರ್‌ ಅನ್ನುವ ಹೆಗ್ಗಳಿಕೆಗೆ ಪಾತ್ರರಾದರು.

ನಮ್ಮ ಕುರಿತು ನಮಗಿರುವ ಕೀಳರಿಮೆ ತೊಲಗಿದರೆ ಎಲ್ಲವೂ ಸರಿಹೋಗುತ್ತೆ. ನಾವು ನಮ್ಮದು ಸಣ್ಣ ಚಿತ್ರರಂಗ ಅಂತಲೇ ಮಾತಾಡಿಕೊಂಡು ಬರುತ್ತಿದ್ದೆವು. ದಯವಿಟ್ಟು ನಮ್ಮ ಸಿನಿಮಾ ನೋಡಿ ಅಂತ ಕೇಳಿಕೊಳ್ಳುತ್ತಿದ್ದೆವು. ನಾನೊಂದು ಸಿನಿಮಾ ಮಾಡಿದ್ದೀನಿ, ನಿಮಗೆ ಮನರಂಜನೆ ಬೇಕಿದ್ದರೆ ಬಂದು ನೋಡಿ ಅಂತ ಎದೆತಟ್ಟಿಕೊಂಡು ಹೇಳುವಷ್ಟುಆತ್ಮಾಭಿಮಾನ ನಮ್ಮಲ್ಲಿದ್ದರೆ ಸಾಕು. ಅದು ಭಾಷೆಗೆ ನಾವು ತೋರಿಸುವ ಗೌರವವೂ ಹೌದು. ಸೆಟ್‌ ಅದ್ದೂರಿಯಾಗಿರಬೇಕು ಅಂತೇನೂ ಇಲ್ಲ , ಮೈಂಡ್‌ಸೆಟ್‌ ಬದಲಾದರೆ ಸಾಕು ಅಂತ ಮಾತಾಡುವ ಯಶ್‌, ಕನ್ನಡ ಚಿತ್ರರಂಗದ ಭರವಸೆಯ ಹರಿಕಾರರಾದರು.

ಯಶ್ ಬರ್ತ್ ಡೇ ಸಮಾರಂಭಕ್ಕೆ ಉಚಿತ ಬಸ್: ರಾಕಿಭಾಯ್ ನೋಡುವುದನ್ನು ಮಿಸ್ ಮಾಡ್ಕೊಬೇಡಿ

ಹೊಸ ಪ್ರತಿಭೆಗಳಿಂದ ನಿರ್ದೇಶನ ಮಾಡಿಸಿದ್ದು, ಇಡೀ ಸಿನಿಮಾ ತನ್ನದು ಅಂದುಕೊಂಡು ಅದರ ಜೊತೆಗೇ ಸಾಗಿದ್ದು, ಚಿತ್ರ ಬಿಡುಗಡೆಯಾದ ನಂತರವೂ ಅದನ್ನು ಕಾಪಾಡಿಕೊಂಡದ್ದು, ಮೆಟ್ಟಿಲು ಎಲ್ಲಿದೆ ಅಂತ ಹುಡುಕಿಕೊಂಡು ಹೋಗಿ ಭಾರತದ ಉದ್ದಗಲಕ್ಕೂ ಕೆಜಿಎಫ್‌ ಧ್ವಜ ಹಾರಿಸಿದ್ದು, ಅದು ಕೌಟುಂಬಿಕ ಕಾರ್ಯಕ್ರಮವಿರಲಿ, ಮಗಳ ಬರ್ತಡೇ ಇರಲಿ, ಮದುವೆಯ ರಿಸೆಪ್ಶನ್ನೇ ಇರಲಿ, ನಿರ್ಮಾಣ ಸಂಸ್ಥೆಯ ವಾರ್ಷಿಕೋತ್ಸವವೇ ಇರಲಿ - ಎಲ್ಲವೂ ಅತ್ಯುತ್ತಮವಾಗಿರಬೇಕು ಎಂದು ಬಯಸಿ, ಅದರಂತೆ ನಡೆಸಿದ್ದು - ಹೀಗೆ ಒಂದು ದಶಕದಲ್ಲಿ ಯಶ್‌ ಕ್ರಮಿಸಿದ ಹಾದಿ ಸರಳವಾದದ್ದೇನೂ ಆಗಿರಲಿಲ್ಲ. ಆದರೆ ಅವರಿಗೆ ಗುರಿ ಗೊತ್ತಿತ್ತು.

ಯಶ್‌ಗೀಗ 34. ಕನಸುಗಳ ವಯಸ್ಸಿನಲ್ಲೇ ಅವರು ವಾಸ್ತವದ ಲೆಕ್ಕಾಚಾರ ಮತ್ತು ದೊಡ್ಡದೊಂದು ಕನಸಿನ ಹುಡುಕಾಟದಲ್ಲಿದ್ದಾರೆ. 2009-2019ರ ನಡುವಿನ ಒಂದು ದಶಕ ಅವರನ್ನು ಮೇರುನಟನನ್ನಾಗಿ ರೂಪಿಸಿದೆ. ಇಲ್ಲಿಂದ ಮುಂದಿನ ಹತ್ತು ವರ್ಷಗಳು ಅವರ ಪಾಲಿನ ನಿರ್ಣಾಯಕ ವರ್ಷಗಳು. ಈ ಸವಾಲನ್ನು ಅವರು ಹೇಗೆ ನಿಭಾಯಿಸುತ್ತಾರೆ ಅನ್ನುವುದನ್ನು ಭಾರತೀಯ ಚಿತ್ರರಂಗ ಕುತೂಹಲದಿಂದ ಕಾಯುತ್ತಿರುವಂತಿದೆ.

ರಾಕಿಭಾಯ್ ಬರ್ತಡೇಗೆ ಅಭಿಮಾನಿಗಳಿಂದ ಸಮಾಜ ಸೇವೆ; ಫೋಟೋಗಳೇ ಎಲ್ಲಾ ಹೇಳ್ತವೆ!

ಅದಕ್ಕೆ ಸಾಕ್ಷಿಯೆಂಬಂತೆ ಕಳೆದ ವಾರ ಅವರು ಆಂಧ್ರಪ್ರದೇಶದ ಕಡಪಾದಲ್ಲಿ ಶೂಟಿಂಗು ನಡೆಸುತ್ತಿರುವಾಗ ಬಂದ ಜನಪ್ರವಾಹ, ಅವರು ಕನ್ನಡದ ಸ್ಟಾರ್‌ ಮಾತ್ರ ಅಲ್ಲ ಅನ್ನುವುದನ್ನು ಸಾಬೀತುಮಾಡಿದೆ.

ಯಶ್‌ಗೆ ಹ್ಯಾಪಿ ಬರ್ತಡೇ!

Follow Us:
Download App:
  • android
  • ios