ಸುಪ್ರೀಂ ಕೋರ್ಟ್ ತೀರ್ಪಿನ ಕಾರಣ ದರ್ಶನ್ ಗೆ ಜೈಲು ಭೀತಿ ಶುರುವಾಗಿದೆ. ಕಾಮಾಕ್ಯ ದೇವಿ ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಬೆಂಗಳೂರು (ಜು.29): ಒಂದೆಡೆ ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಹೇಳಿರುವ ಮಾತುಗಳಿಂದ ಕಂಗಾಲಾಗಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ನಟ ದರ್ಶನ್‌, ಥಾಯ್ಲೆಂಡ್‌ ಟ್ರಿಪ್‌ ಮುಗಿಸಿ ಬಂದವರೇ ದೇವಸ್ಥಾನಗಳ ಮೊರೆ ಹೋಗಲು ಆರಂಭಿಸಿದ್ದಾರೆ. ಥಾಯ್ಲೆಂಡ್‌ಗೆ ಹೋಗುವ ವೇಳೆ ಫುಲ್‌ ಜಾಲಿ ಮೂಡ್‌ನಲ್ಲಿದ್ದ ಕಿಲ್ಲಿಂಗ್‌ ಸ್ಟಾರ್‌, ವಾಪಾಸ್‌ ಬರುವಾಗ ಮುಖದಲ್ಲಿ ಮತ್ತೊಮ್ಮೆ ಜೈಲಿಗೆ ಹೋಗುವ ಭಯ ಕಾಣುತ್ತಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಜಾಮೀನು ನೀಡಿದ್ದ ವಿಚಾರವಾಗಿ ತೀರ್ಪು ನೀಡಲಿದೆ. ಅದರ ಬೆನ್ನಲ್ಲೇ ದರ್ಶನ್‌ಗೆ ದೇವಸ್ಥಾನಗಳ ನೆನಪಾಗಿ ಪೂಜೆ ಪುನಸ್ಕಾರ ಆರಂಭಿಸಿದ್ದಾರೆ.

ಪರಪ್ಪನ ಅಗ್ರಹಾರ ಬಳಿಕ ಬಳ್ಳಾರಿ ಜೈಲಿನಲ್ಲಿದ್ದಾಗ ಕುಳಿತುಕೊಳ್ಳಲೂ ಆಗದೇ ಇರಷ್ಟು ಬೆನ್ನುನೋವಿನ ಬಾಧೆ ಅನುಭವಿಸಿದ್ದ ದರ್ಶನ್‌, ಕೊನೆಗೆ ವೈದ್ಯಕೀಯ ಸಲಹೆ ಆಧರಿಸಿಯೇ ಜಾಮೀನು ಪಡೆದುಹೊರಬಂದಿದ್ದರು. ಆದರೆ, ಹೊರಬಂದ ಬಳಿಕ ಮಿಂಚಿನಂತೆ ಬೆನ್ನುನೋವು ಮಾಯವಾಗಿ, ಎಂದಿನಂತೆ ನಡೆಯಲು ಆರಂಭಿಸಿದ್ದರು. ಸಿನಿಮಾ ಶೂಟಿಂಗ್‌ಗಾಗಿ ಊರೂರು ಸುತ್ತಾಡಲು ಆರಂಭಿಸಿದ್ದರು.

ಆದರೆ, ದರ್ಶನ್‌ಗೆ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದರ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್‌ ಪೀಠ, ಹೈಕೋರ್ಟ್‌ ಜಾಮೀನು ನೀಡಿದ್ದ ರೀತಿಯನ್ನೇ ಪ್ರಶ್ನೆ ಮಾಡಿತ್ತು. ಇಡೀ ಕೇಸ್‌ನಲ್ಲಿ ವಿಚಾರಣೆ ಆಗುವ ಮುನ್ನವೇ ಹೈಕೋರ್ಟ್‌ ಈತನನ್ನು ನಿರ್ದೋಷಿ ಎಂದೇ ಪರಿಗಣಿಸಿ ಜಾಮೀನು ನೀಡಿರುವಂತೆ ಕಂಡಿದೆ. ಜಾಮೀನು ನೀಡಲು ಯಾವುದಾದರೂ ಒಂದು ಅಂಶ ಇದ್ದರೆ ಸಾಕು ಅಂತಾ ಯೋಚನೆ ಮಾಡಿ ತೀರ್ಮಾನ ಮಾಡಿರುವಂತೆ ಇದೆ ಎಂದು ಹೇಳಿತ್ತಲ್ಲದೆ, ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಸುಪ್ರೀಂ ಕೋರ್ಟ್‌ ಯಾವಾಗ ಹೀಗೆ ಹೇಳಿತೋ ಕಿಲ್ಲಿಂಗ್‌ ಸ್ಟಾರ್‌ಗೆ ಪುಕಪುಕ ಶುರುವಾಗಿದೆ. ಮತ್ತೊಮ್ಮೆ ಜೈಲಿನ ಕತ್ತಲ ಕೋಣೆ, ಟಿವಿ, ಮೊಬೈಲ್‌ ಇಲ್ಲದ ದಿನಗಳು, ಪಾರ್ಟಿ-ಪಬ್ಬುಗಳು ಇಲ್ಲದ ಸಮಯವನ್ನು ನೆನಪಿಸಿಕೊಳ್ಳಲು ಶುರು ಮಾಡಿದ್ದಾರೆ.

ಇದೆಲ್ಲದರ ಪರಿಣಾಮ ಎನ್ನುವಂತೆ ತನಗೆ ಜಾಮೀನು ಸಿಗಲು ಸಹಾಯ ಮಾಡಿದ್ದ ಅಸ್ಸಾಂನ ಕಾಮಾಕ್ಯ ದೇವಿಯ ಮೊರೆ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ದರ್ಶನ್‌ ಸ್ವತಃ ಅಸ್ಸಾಂ ಕಾಮಾಕ್ಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಣೆಯ ಮೇಲೆ ಕುಂಕುಮ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿದ್ದಾರೆ.

ಕೇವಲ ಫೋಟೋ ಮಾತ್ರ ಸದ್ಯ ಹೊರಬಂದಿದ್ದು, ಅಲ್ಲಿ ಯಾವ ಪೂಜೆ ನಡೆಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ. ದರ್ಶನ್‌ ಪರಪ್ಪನ ಅಗ್ರಹಾರ ಕೊನೆಗೆ ಬಳ್ಳಾರಿ ಜೈಲಿನಲ್ಲಿದ್ದ ವೇಳೆ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್‌, ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆ ಬಳಿಕವೇ ದರ್ಶನ್‌ಗೆ ಜಾಮೀನಿನಲ್ಲಿ ಯಶಸ್ಸು ಸಿಕ್ಕಿತ್ತು.