ಕಾವೇರಿ ಹೋರಾಟಕ್ಕೆ ಧುಮಿಕಿದ ಮೊದಲ ಕನ್ನಡ ನಟ ದರ್ಶನ್ ತೂಗುದೀಪ
ಕಾವೇರಿ ನೀರಿನ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟರು ಆಗಮಿಸಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ ಬೆನ್ನಲ್ಲಿಯೇ ದರ್ಶನ್ ತೂಗುದೀಪ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಸೆ.20): ಕನ್ನಡ ನಾಡಿನ ಜೀವನದಿ ಕಾವೇರಿ ನದಿಯ ನೀರನ್ನು ರಾಜ್ಯ ಸರ್ಕಾರವು ತಮಿಳುನಾಡಿಗೆ ಹರಿಸುತ್ತಿದೆ. ಸರ್ಕಾರದ ನಡೆಯನ್ನು ವಿರೋಧಿಸಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ಕಾವೇರಿ ಉಳಿವಿಗಾಗಿ ಹೋರಾಟ ಆರಂಭಿಸಿದ್ದಾರೆ. ಈ ಕುರಿತು ಕನ್ನಡಪರ ಸಂಘಟನೆಗಳು ಸ್ಯಾಂಡಲ್‌ವುಡ್ ನಟರು ಕಾವೇರಿ ಚಳವಳಿಗೆ ಭಾಗವಹಿಸಬೇಕು ಎಂದು ಧಿಕ್ಕಾರ ಕೂಗಿದ ಬೆನ್ನಲ್ಲಿಯೇ ನಟ ದರ್ಶನ್ ತೂಗುದೀಪ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಕರಿತು ಟ್ವೀಟ್ ಎಕ್ಸ್‌ನಲ್ಲಿ (ಹಳೆಯ ಟ್ವಿಟರ್) ಪೋಸ್ಟ್ ಹಾಕಿಕೊಂಡಿರುವ ದರ್ಶನ್ ತೂಗುದೀಪ "ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ" ಎಂದು ಕರ್ನಾಟಕ ರೈತರು ಹಾಗೂ ಕನ್ನಡಪರ ಸಂಘಟನೆಗಳಿಗೆ ಬೆಂಬಲ ಸೂಚಿಸಿದ್ದಾರೆ.
ಸ್ಯಾಂಡಲ್‌ವುಡ್ ನಟರು ಕಾವೇರಿ ಹೋರಾಟಕ್ಕೆ ಬನ್ನಿ: ಯಶ್, ಸುದೀಪ್, ಶಿವರಾಜ್‌ಕುಮಾರ್ ವಿರುದ್ಧ ಆಕ್ರೋಶ
ಕಾವೇರಿ ಹೋರಾಟಕ್ಕೆ ಬಾರದ ಸ್ಯಾಂಡಲ್‌ವುಡ್ ನಟರ ವಿರುದ್ಧ ಧಿಕ್ಕಾರ ಕೂಗಿದ್ದ ಸಂಘಟನೆ: ಬೆಂಗಳೂರು (ಸೆ.20): ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ ಕನ್ನಡ ಚಲನಚಿತ್ರ ರಂಗದಲ್ಲಿ ಡಾಕ್ಟರ್ ರಾಜಣ್ಣ, ಮಂಡ್ಯದ ಗಂಡು ಅಂಬರೀಶ್, ವಿಷ್ಣುವರ್ಧನ್ ಅವರಿಗೆ ಮಾತ್ರ ಇತ್ತು. ಆದರೆ, ಇಂದು ಕಾವೇರಿ ಹೋರಾಟದ ಬಗ್ಗೆ ತಲೆಕೆಡಿಸಿಕೊಳ್ಳದ ಮೂರ್ಖ ಕನ್ನಡ ಚಿತ್ರರಂಗದ ನಟರುಗಳಿಗೆ ಧಿಕ್ಕಾರ... ಧಿಕ್ಕಾರ ಎಂದು ಕನ್ನಡಿಗರ ರಕ್ಷಣಾ ವೇದಿಕೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗಿತ್ತು.
ಮೈತ್ರಿ ಗಟ್ಟಿಗೊಳಿಸಲು ತಮಿಳುನಾಡಿಗೆ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ : ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ರಾಜಣ್ಣ, ಅಂಬರೀಶ್, ವಿಷ್ಣುವರ್ಧನ್ ನೆನಪಿಸಿದ್ದ ಕನ್ನಡಿಗರು: ಕನ್ನಡ ನಾಡಿನ ರೈತರಿಗೆ ಅನ್ಯಾಯವಾದಾಗ ಮುನ್ನುಗ್ಗಿ ಬರುವಂಥ ಶಕ್ತಿ... ಕನ್ನಡ ಚಲನಚಿತ್ರ ರಂಗದಲ್ಲಿ ಡಾಕ್ಟರ್ ರಾಜಣ್ಣ ಮಂಡ್ಯದ ಗಂಡು ಅಂಬರೀಶ್. ವಿಷ್ಣುವರ್ಧನ್ ನವರಿಗೆ ಮಾತ್ರ ಇತ್ತು... ಇಂದು ಅವರ ಕೂಗಿಲ್ಲದೆ ಎಷ್ಟೋ ರೈತರು ಹಾಗೂ ಕನ್ನಡದ ಮಕ್ಕಳು ಪರಭಾಶಿಗರ ಒತ್ತಡಕ್ಕೆ ಸಿಲುಕಿ ನಮ್ಮ ಕನ್ನಡ ನಾಡಿನ ಜೀವನದಿ ಕಾವೇರಿಯನ್ನು ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಚಲನಚಿತ್ರ ನಟರನ್ನು ನಂಬದೇ ಇನ್ನಾದರೂ 7 ಕೋಟಿ ಕನ್ನಡಿಗರು ರೈತರ ಪರವಾಗಿ ನಿಲ್ಲಬೇಕೆಂದು ನಿಮ್ಮಲ್ಲಿ ಕೈಮುಗಿದು ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ರೈತ ಉಳಿದರೆ ನಾವೆಲ್ಲ, ರೈತನಿಲ್ಲದ ಜಗವಿಲ್ಲ. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ ಎಂದು ಜೈ ಕಾವೇರಮ್ಮ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.