ನಿಮಗೆ ನನ್ನ ಮೇಲೆ ದ್ವೇಷ ಇದ್ದರೆ ನೇರವಾಗಿ ಎದುರು ಬಂದು ಮಾತಾಡಿ, ಬಚ್ಚಿಟ್ಟುಕೊಂಡು ಸಿನಿಮಾ ಮೇಲೆ ಹೊಡೀಬೇಡಿ. ಮದರ್ ಪ್ರಾಮಿಸ್ ಒಂದೊಳ್ಳೆ ಸಿನಿಮಾ ಅಂತ ಗುರುತಿಸಿಕೊಂಡಿದೆ ಎಂದರು ಡಾಲಿ ಧನಂಜಯ.
‘ನಿಮಗೆ ನನ್ನ ಮೇಲೆ ದ್ವೇಷ ಇದ್ದರೆ ನೇರವಾಗಿ ಎದುರು ಬಂದು ಮಾತಾಡಿ, ಬಚ್ಚಿಟ್ಟುಕೊಂಡು ಸಿನಿಮಾ ಮೇಲೆ ಹೊಡೀಬೇಡಿ. ಮದರ್ ಪ್ರಾಮಿಸ್ ಒಂದೊಳ್ಳೆ ಸಿನಿಮಾ ಅಂತ ಗುರುತಿಸಿಕೊಂಡಿದೆ, ಪ್ರೇಕ್ಷಕರೂ ಚೆನ್ನಾಗಿ ರಿಸೀವ್ ಮಾಡ್ತಿದ್ದಾರೆ, ಆದರೆ ಕೆಲವರು ನಡುವೆ ಬಂದು ನೆಗೆಟಿವ್ ಆಗಿ ಪ್ರಚಾರ ಮಾಡೋದು, ಕೆಟ್ಟದಾಗಿ ಕಾಮೆಂಟ್ ಮಾಡೋದು, ರೇಟಿಂಗ್ ಬೀಳೋ ಹಾಗೆ ಮಾಡೋದು ಇತ್ಯಾದಿ ಕೆಟ್ಟ ಕೆಲಸ ಮಾಡುತ್ತಿದ್ದಾರೆ.. ಇದನ್ನೆಲ್ಲ ನೋಡಿ ನೋಡಿ ಸಾಕಾಗಿದೆ. ಹೆಗ್ಗಣ ಮುದ್ದು ನನ್ನ ನಿರ್ಮಾಣದ ಕೊನೆಯ ಸಿನಿಮಾ ಅನಿಸುತ್ತೆ.’- ಇವು ಡಾಲಿ ಧನಂಜಯ ಅವರ ಬೇಸರದ ಮಾತುಗಳು.
‘ಮದರ್ ಪ್ರಾಮಿಸ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಧನಂಜಯ, ‘ಸಿನಿಮಾ ವಿರುದ್ಧ ಷಡ್ಯಂತ್ರ ಮಾಡುವವರು ಯಾರ ನಿಯಂತ್ರಣಕ್ಕೂ ಸಿಗೋದಿಲ್ಲ. ನನಗೂ ಸಿನಿಮಾದಾಚೆ ಬದುಕಿದೆ. ವೈಯಕ್ತಿಕ ಬದುಕನ್ನೂ ಎನ್‌ಜಾಯ್ ಮಾಡಬೇಕು. ಬರೀ ಇಂಥವರ ಜೊತೆಗೆ ಕಾದಾಡುತ್ತ ಆಯುಷ್ಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಳೆ ಆಸ್ಪತ್ರೆ ಬಿಲ್ ಕಟ್ಟೋದಕ್ಕೂ ಪರದಾಡಬೇಕಾಗಬಹುದು. ಸುಮ್ಮನೆ ನಟನೆ ಮಾಡ್ಕೊಂಡು ಹಾಯಾಗಿರೋಣ, ನಿರ್ಮಾಣ ಎಲ್ಲಾ ಸಾಕು ಅನಿಸ್ತಿದೆ. ಕೊನೆಗೂ ಹೇಳುವುದು ಸಿನಿಮಾ ಮೇಲೆ ಕೋಪ ಇದ್ದರೆ ನನ್ನ ಮೇಲೆ ತೀರಿಸಿ. ಈ ಚಿತ್ರದಲ್ಲಿ ಅನೇಕ ಹೊಸ ಪ್ರತಿಭೆಗಳಿದ್ದಾರೆ, ಅವರನ್ನು ತುಳಿಯದಿರಿ’ ಎಂದು ನೊಂದು ನುಡಿದರು.
ಚಿತ್ರರಂಗದ ಎಲ್ಲರಿಗೂ ಬೇಸರವಿದೆ
ಈ ವೇಳೆ ದರ್ಶನ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ‘ದರ್ಶನ್ ಅವರ ಇಂದಿನ ಸ್ಥಿತಿ ಬಗ್ಗೆ ಸುದೀಪ್, ಶಿವಣ್ಣ ಸೇರಿ ಚಿತ್ರರಂಗದ ಎಲ್ಲರಿಗೂ ಬೇಸರವಿದೆ. ರೇಣುಕಾಸ್ವಾಮಿ ಪ್ರಕರಣವಾದಾಗ ಅವರ ಕೆಲವು ಅಭಿಮಾನಿಗಳಿಗೂ ಸಿಟ್ಟು ಬಂದಿದೆ. ನನಗೂ ಬೇಸರವಾಗಿತ್ತು. ಅದಕ್ಕೇ ಹಿಂದೆ ಆ ರೀತಿ ಪ್ರತಿಕ್ರಿಯೆ ನೀಡಿದ್ದೆ. ನನಗೇನಾದರೂ ಟೈಮ್ ಟ್ರಾವೆಲ್ ಮಾಡೋ ಶಕ್ತಿ ಇದ್ದಿದ್ದರೆ ಈ ಸನ್ನಿವೇಶವನ್ನು ಬದಲಾಯಿಸಿಬಿಡುತ್ತಿದ್ದೆ ಎಂದು ಇತ್ತೀಚೆಗೆ ಹೇಳಿದ್ದೂ ಅದೇ ಮನಸ್ಥಿತಿಯಲ್ಲಿ. ನನ್ನ ಸಿನಿಮಾಗೆ ಜನ ಬರಲಿ ಅನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಅವರ ಅಭಿಮಾನಿಯಾಗಿ ಮಾತನಾಡುತ್ತಿದ್ದೇನೆ’ ಎಂದರು. ದರ್ಶನ್ ಅಭಿಮಾನಿಗಳು ಕೆಲವರು ಧನಂಜಯ್ ವಿರುದ್ಧ ಮಾತನಾಡಿದ್ದಕ್ಕೆ ಅವರು ಸ್ಪಷ್ಟನೆ ನೀಡಿದರು.
ನಿರ್ಮಾಪಕ ಹರ್ಷ ಮುರುಂಡಿ, ‘ಮಾಧ್ಯಮಗಳೆಲ್ಲ ಮದರ್ ಪ್ರಾಮಿಸ್‌ನಂಥಾ ಉತ್ತಮ ಚಿತ್ರಗಳನ್ನು ಬೆಂಬಲಿಸುತ್ತಿವೆ. ಅನಧಿಕೃತ ಟ್ರೋಲ್ ಪೇಜ್‌ಗಳ ವರಾತಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ಮೊದಲು ಸಿನಿಮಾ ಅಂದರೆ ಶೋಕಿ ಅನ್ನುವ ಭಾವನೆ ಇತ್ತು. ಈಗ ಚಿತ್ರ ಮಾಡುವ ಕಷ್ಟ ಗೊತ್ತಾಗಿದೆ’ ಎಂದರು. ನಿರ್ದೇಶಕ ಪೂರ್ಣಚಂದ್ರ ಮೈಸೂರು ಹಾಗೂ ಸಿನಿಮಾ ತಂಡದವರು ಇದ್ದರು.


