ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತಕ್ಕೆ ನಟ ಯಶ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ ಏರುತ್ತಿದೆ. 280ಕ್ಕೂ ಮಂದಿ ಬಲಿಯಾಗಿದ್ದು 650ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಎರಡು ಪ್ಯಾಸೆಂಜರ್ ರೈಲು ಮತ್ತು ಗೂಡ್ಸ್ ರೈಲನ್ನು ಒಳಗೊಂಡ ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತ ದೇಶವನ್ನೆ ಬೆಚ್ಚಿಬೀಳಿಸಿದೆ.
ರೈಲ್ವೆ ಇತಿಹಾಸದಲ್ಲಿಯೇ ಭೀಕರ ಅಪಘಾತಗಳಲ್ಲಿ ಒಂದಾದ ಈ ರೈಲು ಅಪಘಾತಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಪ್ರತಿಕ್ರಿಯೆ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ನಟ ಯಶ್ ಸಹ ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಕಿಂಗ್ ಸ್ಟಾರ್, 'ಒಡಿಶಾ ರೈಲು ದುರಂತ ಎಷ್ಟು ಹೃದಯ ವಿದ್ರಾವಕವಾಗಿದೆ ಎಂದು ಪದಗಳಲ್ಲಿ ವಿವರಿಸುವುದು ಕಷ್ಟ. ಮೃತರ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರಿಗೆ ಕೃತಜ್ಞತೆಗಳು' ಎಂದು ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲು ಅರ್ಜುನ್
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಪ್ರತಿಕ್ರಿಯೆ ನೀಡಿ, 'ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಆಘಾತತಂದಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಗಾಯಗೊಂಡವರು ಶೀಘ್ರ ಚೇತರಿಕೆಗೆ ನನ್ನ ಪ್ರಾರ್ಥನೆ' ಎಂದು ಹೇಳಿದ್ದಾರೆ.
ಜೂ.ಎನ್ ಟಿ ಆರ್
'ರೈಲು ಅಪಘಾತದದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ನನ್ನ ಆಲೋಚನೆ ಈಗ ಈ ದುರಂತ ಘಟನೆಗೊಳಗಾದ ಪ್ರತಿಯೊಬ್ಬ ವ್ಯಕ್ತಿಗಳೊಂದಿಗೆ ಇವೆ. ಈ ಕಷ್ಟದ ಸಮಯದಲ್ಲಿ ಶಕ್ತಿ ಮತ್ತು ಬೆಂಬಲಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.
