Chaddi Baddy Song: ಸ್ನೇಹಿತರ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ 'ಚಡ್ಡಿ ಬಡ್ಡಿ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಕಿರುತೆರೆಯಲ್ಲಿ 'ಕಾಮಿಡಿ ಕಿಲಾಡಿ' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದ್ದ ಹರೀಶ್ ಹಿರಿಯೂರು ಇದೀಗ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಅಭಿನಯದ 'ಚಂದ್ರಹಾಸ' ಚಿತ್ರದ ಮೊದಲ ಗೀತೆ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಹೊಸ ಪ್ರತಿಭೆಗಳ ತಂಡದೊಂದಿಗೆ ಮೂಡಿಬರುತ್ತಿರುವ ಈ ಚಿತ್ರಕ್ಕೆ ಆನಂದ್ ಎಸ್. ಕಲಕಬಂಡಿ ನಿರ್ದೇಶನ ಮಾಡಿದ್ದು, ಹಾಡಿನ ಮೂಲಕವೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಚಿತ್ರದ ಮೊದಲ ಹಾಡನ್ನು ನಿರ್ಮಾಪಕಿ ಶೈಲಜಾ ನಾಗ್ ಅನಾವರಣಗೊಳಿಸಿದರು. 'ಚಡ್ಡಿ ಬಡ್ಡಿ' ಎಂಬ ಶೀರ್ಷಿಕೆಯ ಈ ಸ್ನೇಹಗೀತೆಗೆ ಕನ್ನಡದ ಖ್ಯಾತ ಸಾಹಿತಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮನಸೆಳೆಯುವ ಧ್ವನಿ ನೀಡಿದ್ದಾರೆ. ವಿಶೇಷವೆಂದರೆ, ನಟ ಶರಣ್ ಮತ್ತು ಗಾಯಕ ನವೀನ್ ಸಜ್ಜು ಇದೇ ಮೊದಲ ಬಾರಿಗೆ ಜೊತೆಯಾಗಿ ಈ ಹಾಡಿಗೆ ಧ್ವನಿಯಾಗಿದ್ದು, ಹಾಡಿಗೆ ಮತ್ತಷ್ಟು ವಿಶೇಷತೆ ತಂದಿದ್ದಾರೆ. ಈ ಗೀತೆ ಡಿಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.
ಸ್ನೇಹದ ಮಹತ್ವ ಸಾರುವ ಹಾಡು
ಸ್ನೇಹಿತರ ನಡುವಿನ ಬಾಂಧವ್ಯವನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುವ 'ಚಡ್ಡಿ ಬಡ್ಡಿ' ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸ್ನೇಹದ ಭಾವನೆಗಳನ್ನು ಸರಳ ಪದಗಳಲ್ಲಿ ಕಟ್ಟಿಕೊಟ್ಟಿರುವ ಯೋಗರಾಜ್ ಭಟ್ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿಯ ಸಂಗೀತ ಉತ್ತಮ ಸಾಥ್ ನೀಡಿದೆ.
ಕಾಮಿಡಿ ಕಿಲಾಡಿ ತಂಡದಿಂದ ಹರೀಶ್‌ಗೆ ಬೆಂಬಲ
'ಚಂದ್ರಹಾಸ' ಚಿತ್ರದ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ ತಂಡದ ಕಲಾವಿದರಾದ ಅಪ್ಪಣ್ಣ, ಜಗ್ಗಪ್ಪ, ಸುಷ್ಮಿತಾ, ನಯನಾ ಸೇರಿದಂತೆ ಹಲವರು ಭಾಗವಹಿಸಿ ಹರೀಶ್ ಹಿರಿಯೂರಿಗೆ ಶುಭ ಹಾರೈಸಿದರು. ಈ ಮೂಲಕ ಸ್ನೇಹಿತನ ಹೊಸ ಸಿನಿಮಾ ಪ್ರಯಾಣಕ್ಕೆ ಬೆಂಬಲ ಸೂಚಿಸಿದರು.
ಹೊಸ ಪ್ರತಿಭೆಗಳ ಸಂಗಮ
ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿದ್ದಾರೆ. ಹರೀಶ್ ಹಿರಿಯೂರು ನಾಯಕನಾಗಿ ಅಭಿನಯಿಸಿದ್ದರೆ, ಛಾಯಾಶ್ರೀ ಉಮೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಜ್ಯೋತಿ ಮಂಗಳೂರು ಹಾಗೂ ಕಳಕಪ್ಪ ತಲವಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಚೇತನ್ ಶರ್ಮಾ ಛಾಯಾಗ್ರಹಣ ಮಾಡಿದ್ದು, ವಿ. ಗಿರೀಶ್ ಎಂ.ಸಿ. ಹಳ್ಳಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮೊದಲ ಹಾಡಿನ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ 'ಚಂದ್ರಹಾಸ' ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.


