ಬಿಗ್ ಬಾಸ್ ಸಿಂಹಿಣಿ ಬಣ್ಣದ ಬದುಕು ಶುರು ಮಾಡಿ 9 ವರ್ಷ ಕಳೆದಿದೆ. ಹಳೆ ಫೋಟೋಗಳನ್ನು ಹಂಚಿಕೊಂಡು ಸಂಗೀತಾ ಶೃಂಗೇರಿ ಸಂಭ್ರಮಿಸಿದ್ದಾರೆ. 

ಬಿಗ್ ಬಾಸ್ (Bigg Boss) ಮನೆಯ ಸಿಂಹಿಣಿ ಸ್ಯಾಂಡಲ್ವುಡ್ ನಟಿ (Sandalwood actress) ಸಂಗೀತಾ ಶೃಂಗೇರಿ (Sangeeta Sringeri), ಬಣ್ಣದ ಬದುಕು ಶುರುವಾಗಿ 9 ವರ್ಷ ಕಳೆದಿದೆ. ಸಾಕಷ್ಟು ಕಾಂಟ್ರವರ್ಸಿ ಮಧ್ಯೆಯೇ ಸಂಗೀತಾ ಶೃಂಗೇರಿ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಈ ಖುಷಿಯಲ್ಲಿ ಸಂಗೀತಾ ಶೃಂಗೇರಿ, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದಿಷ್ಟು ಹಳೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಜರ್ನಿಗೆ ಸಹಾಯ ಮಾಡಿದೆ ಅನೇಕರನ್ನು ನೆನಪು ಮಾಡ್ಕೊಂಡಿದ್ದಾರೆ.

ಬಿಗ್ ಬಾಸ್ 10ರಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ ನಟಿ ಸಂಗೀತಾ, ಬಿಗ್ ಬಾಸ್ ಮನೆಯಲ್ಲಿ ಧೂಳೆಬ್ಬಿಸಿದ್ದರು. ಅವರ ವಾದ – ಕಿತ್ತಾಟ ನೋಡೋಕೆ ವೀಕ್ಷಕರು ಕಾದು ಕುಳಿತಿರ್ತಿದ್ರು. ಬಿಗ್ ಬಾಸ್ 11 ಶುರುವಾದಾಗ್ಲೂ, ಸಂಗೀತಾ ಶೃಂಗೇರಿಯಂತ ಕಂಟೆಸ್ಟೆಂಟ್ ಇಲ್ಲಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ತಮ್ಮ ಅಧ್ಬುತ ಆಟದಿಂದಲೇ ಟಾಪ್ 3ಯಲ್ಲಿ ಸ್ಥಾನ ಪಡೆದಿದ್ದ ಸಂಗೀತಾಗೆ ಅಭಿಮಾನಿಗಳು ಪ್ರೀತಿಯಿಂದ ಸಿಂಹಿಣಿ ಅಂತ ಹೆಸರಿಟ್ಟಿದ್ದರು. ಮನೆಯಿಂದ ಹೊರ ಬರ್ತಿದ್ದಂತೆ ಸಿಕ್ಕಾಪಟ್ಟೆ ಆಫರ್ ಸಿಗುತ್ತೆ ಎನ್ನುವ ನಿರೀಕ್ಷೆ ಫ್ಯಾನ್ಸ್ ಗಿತ್ತು. ಆದ್ರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಸಂಗೀತಾ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸಂಗೀತಾ, ಫೋಟೋಶೂಟ್, ವಿಡಿಯೋ ಪೋಸ್ಟ್ ಮಾಡ್ತಿರುತ್ತಾರೆ. ಈಗ ವರ್ಕ್ ಔಟ್ ನಲ್ಲಿ ಬ್ಯುಸಿ ಇರುವ ಸಂಗೀತಾ, ಅನೇಕ ವರ್ಕ್ ಔಟ್ ಫೋಟೋ ಪೋಸ್ಟ್ ಮಾಡಿ, ನಿಜವಾಗ್ಲೂ ಸಿಂಹಿಣಿ ಅನ್ನೋದನ್ನು ಸಾಭೀತುಪಡಿಸ್ತಿದ್ದಾರೆ. ಸಿನಿಮಾದಿಂದ ದೂರವಿದ್ರೂ ಸಂಗೀತಾ ಸುಮ್ಮನೆ ಕುಳಿತಿಲ್ಲ. ಅವರು ಕ್ರಿಸ್ಟಲ್ ಬ್ಯುಸಿನೆಸ್ ನಲ್ಲಿ ನಿರತರಾಗಿದ್ದಾರೆ. ಸಿನಿಮಾದಲ್ಲಿ ಏಕೆ ಮಾಡ್ತಿಲ್ಲ ಎನ್ನುವ ಬಗ್ಗೆ ಕೆಲ ದಿನಗಳ ಹಿಂದೆ ಸಂಗೀತಾ ಸ್ಪಷ್ಟನೆ ನೀಡಿದ್ರು. ಸಿನಿಮಾ ಕಥೆ, ಸಂಭಾವನೆ ಎಲ್ಲವೂ ಸಂಗೀತಾ ಸಿನಿಮಾ ರಿಜೆಕ್ಟ್ ಮಾಡೋಕೆ ಕಾರಣವಾಗಿದೆ. ಸಿನಿಮಾಗೆ ಆಫರ್ ಬರ್ತಿದೆ, ರಿಯಾಲಿಟಿ ಶೋಗೂ ಆಫರ್ ಬರ್ತಿದೆ. ಆದ್ರೆ ಇದ್ಯಾವುದೂ ನನ್ನ ಮನಸ್ಸಿಗೆ ಒಪ್ಪುತ್ತಿಲ್ಲ. ಒಪ್ಪಿಕೊಂಡ ಪ್ರಾಜೆಕ್ಟ್ ಶುರು ಆಗ್ತಿಲ್ಲ ಅಂತ ಈ ಹಿಂದೆ ಸಂಗೀತಾ ಶೃಂಗೇರಿ ಹೇಳಿದ್ರು. ಹೀರೋಗಳಿಗೆ ಸಿಗುವ ಮಾನ್ಯತೆ ಹಾಗೂ ಸಂಭಾವನೆ ಹೀರೋಯಿನ್ ಗಳಿಗೆ ಸಿಗ್ತಿಲ್ಲ ಎನ್ನುವ ಬೇಸರವನ್ನು ವ್ಯಕ್ತಪಡಿಸಿದ್ದರು.

ಸಂಗೀತಾ ಇನ್ಸ್ಟಾಪೋಸ್ಟ್ ನಲ್ಲಿ ಏನಿದೆ? : ಹರ ಹರ ಮಹಾದೇವನಿಂದ ಹಿಡಿದು, ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ 2 ವರೆಗಿನ ತಮ್ಮ ಜರ್ನಿಯ ಕೆಲ ಫೋಟೋಗಳನ್ನು ಸಂಗೀತಾ, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮನರಂಜನಾ ಉದ್ಯಮದಲ್ಲಿ 9 ವರ್ಷಗಳ ಅದ್ಭುತ ಪ್ರಯಾಣಕ್ಕೆ ನನ್ನ ನೆನಪುಗಳು ಅಂತ ಶೀರ್ಷಿಕೆ ಹಾಕಿದ್ದಾರೆ. ಹರ ಹರ ಮಹಾದೇವ, ಎ+, ಪಂಪ, 777 ಚಾರ್ಲಿ, ಲಕ್ಕಿ ಮ್ಯಾನ್ ಮತ್ತು ಶಿವಾಜಿ ಸುರತ್ಕಲ್ನಂತಹ ಕೆಲವು ಮಹಾಕಾವ್ಯಗಳ ಭಾಗವಾಗಿರುವುದು ನನ್ನ ನಿಜವಾದ ಅದೃಷ್ಟ ಎಂದು ಭಾವಿಸುತ್ತೇನೆ - ಪ್ರತಿಯೊಂದೂ ನನಗೆ ಮರೆಯಲಾಗದ ಪಾತ್ರಗಳನ್ನು ನೀಡಿದೆ. ಅದರಲ್ಲೂ, ಸತಿ ಮತ್ತು ಅನು (ಲಕ್ಕಿ ಮ್ಯಾನ್ನಿಂದ) ನನ್ನ ಹೃದಯದಲ್ಲಿ ಶಾಶ್ವತವಾಗಿ ವಿಶೇಷ ಸ್ಥಾನವನ್ನು ಪಡೆದಿವೆ. ಅದ್ಭುತ ಅವಕಾಶಗಳಿಗಾಗಿ ಕೃತಜ್ಞನಾಗಿದ್ದೇನೆ. ವಿಶೇಷವಾಗಿ ಮೊದಲ ಸಂಚಿಕೆ ಪ್ರಸಾರವಾದ 9 ವರ್ಷಗಳ ನಂತರ ಈ ಸುಂದರ ಮೈಲಿಗಲ್ಲನ್ನು ಗುರುತಿಸಲು ನನಗೆ ಸಹಾಯ ಮಾಡಿದ್ದಕ್ಕಾಗಿ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ನನ್ನನ್ನು ನಂಬಿದ್ದಕ್ಕಾಗಿ ನನ್ನ ಎಲ್ಲಾ ನಿರ್ದೇಶಕರು, ಸಹ ನಟರು ಮತ್ತು ನಿರ್ಮಾಪಕರಿಗೆ ಧನ್ಯವಾದಗಳು ಎಂದು ಪೋಸ್ಟ್ ಹಾಕಿದ್ದಾರೆ.

View post on Instagram