ಬೆಂಗಳೂರು (ಏ. 17):  ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಭಾರತದ ಅತಿದೊಡ್ಡ ರೇಡಿಯೋ ಜಾಲತಾಣಗಳಲ್ಲಿ ಒಂದಾದ ಬಿಗ್ ಎಫ್ಎಂ 92.7 ಬೆಂಗಳೂರು, ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದೆ.

ಬಿಗ್ ಎಫ್ಎಂ ಬೆಂಗಳೂರಿನ ಆರ್ ಜೆ ಪ್ರದೀಪ್ ತಮ್ಮ ರ‍್ಯಾಪ್ ಹಾಡಿನ ಮೂಲಕ ಮತದಾನದ ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

 

'ಯೋಚನೆ ಯಾಕೆ ಚೇಂಜ್ ಓಕೆ' ಎಂಬ ಟ್ಯಾಗ್ ನೊಂದಿಗೆ ಇತ್ತೀಚೆಗೆ ಹೊಸ ಬ್ರಾಂಡ್ ಆರಂಭಿಸಿದ ರೇಡಿಯೊ ಸ್ಟೇಷನ್, ಸಾಮಾಜಿಕ ಕಾಳಜಿಗಳ ಕುರಿತಾಗಿ ಹೊಸ ದೃಷ್ಟಿಕೋನವನ್ನು ಅಳವಡಿಸಿ, ಆ ಮೂಲಕ ಬದಲಾವಣೆ ತರುವ ನಂಬಿಕೆ ಹೊಂದಿದೆ. ಈ ಚಿಂತನೆಯನ್ನು ಮುಂದಿಟ್ಟುಕೊಂಡಿರುವ ರೇಡಿಯೋ ಸ್ಟೇಶನ್ "ಯೋಚನೆ ಯಾಕೆ ವೋಟ್ ಓಕೆ" ಎಂಬ ಅಭಿಯಾನದಡಿ, ಪ್ರತಿಯೊಂದು ಮತವೂ ಎಷ್ಟು ಮುಖ್ಯ ಎಂಬುದರ ಕುರಿತು ಜಾಗೃತಿ ಮೂಡಿಸಲಿದೆ. 

ಈ ಪ್ರಚಾರ ಕಾರ್ಯವು ಆಸಕ್ತಿದಾಯಕವಾಗಿದ್ದು, ರೇಡಿಯೋ ಸ್ಟೇಷನ್ ವಿಶೇಷವಾದ ರ್ಯಾಪ್ ವೀಡಿಯೋದ ಮೂಲಕ ಮತದಾನದ ಬಗ್ಗೆ ಸಂದೇಶವನ್ನು ಸಾರಲಿದೆ. ಇದು ಆರ್ ಜೆ ಪ್ರದೀಪ ಅವರ ಮೊದಲ ರ್ಯಾಪ್ ಹಾಡಾಗಿರಲಿದೆ.

ಇತ್ತೀಚೆಗೆ ಬಿಡುಗಡೆಯಾದ ಕಾರ್ಯಕ್ರಮ "ಫುಲ್ ಟೈಮ್ ಪಾಸ್" ನಲ್ಲಿ, ಆರ್ ಜೆ ಪ್ರದೀಪ ಮನರಂಜನೆ ಮತ್ತು ಅದ್ಭುತ ಸಂಗೀತದ ಮೂಲಕ ಮತ ಚಲಾಯಿಸುವ ಅಗತ್ಯತೆಯ ಕುರಿತು ತಿಳಿಸಿದ್ದಾರೆ. ಇದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂದೇಶವನ್ನು ರವಾನಿಸುತ್ತದೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ನಾಗರೀಕರಿಗೆ ಮತದಾನಕ್ಕಾಗಿ ಕೊಂಚ ಸಮಯ ಮೀಸಲಿಟ್ಟು, ಕಡ್ಡಾಯವಾಗಿ ಮತ ಚಲಾಯಿಸಲು ಆಹ್ವಾನ ನೀಡುತ್ತದೆ.

ಮತದಾನ ಪ್ರಾಮುಖ್ಯತೆ ಕುರಿತು ಮಾತನಾಡಿದ ಆರ್ ಜೆ ಪ್ರದೀಪ “ನಿಮ್ಮ ವೋಟ್ ನಲ್ಲಿದೆ ಪವರ್,ಮಾಡಿ ತೋರ್ಸಿ ಖದರ್… ಎಂಬ ಸಾಲುಗಳು ಈ ಹಾಡಿನಲ್ಲಿವೆ. ಹೀಗೆ ಮಾಡಿ ನಿಮ್ಮ ಬೆರಳ ಮೇಲೆ ನೀಲಿ ಇಂಕ್ ಮೂಡಿಸಿಕೊಂಡು ನಿಮ್ಮ ಪವರ್ ಚಲಾಯಿಸಿ. ಈ ಮೂಲಕ ಅತ್ಯುತ್ತಮ ನಾಯಕನನ್ನು ಆಯ್ಕೆ ಮಾಡಿ. ಮತದಾನ ಚಲಾಯಿಸಬೇಕು ಎಂಬುದು ಬೇರೆಯವರು ಒತ್ತಾಯಿಸಿ ಬರುವಂಥದ್ದಲ್ಲ, ನಿಮಗೇ ಅನಿಸುವಂತದ್ದು. ಹಾಗಾಗಿ ನಿಮ್ಮ ಜವಾಬ್ದಾರಿಯನ್ನು ನೀವೇ ಚಲಾಯಿಸಿ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತ ಚಲಾಯಿಸಿ” ಎಂದರು.

ಯಾವುದೇ ರಾಜಕೀಯ ಪಕ್ಷಗಳಿಗೆ ಬೆಂಬಲವಿಲ್ಲದ ಈ ವಿಡಿಯೋ, ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ಮಹತ್ವವನ್ನು ತಿಳಿಸಲಿದೆ. ಆರ್.ಜೆ.ಪ್ರದೀಪ ಅವರೊಂದಿಗೆ 92.7 ಬಿಗ್ ಎಫ್.ಎಂ.ನ ಟೆಕ್ನಿಷಿಯನ್ ತಂಡವನ್ನು ಹೊಂದಿರುವ ಈ ವಿಡಿಯೋ, 92.7 ಬಿಗ್ ಎಫ್ಎಂ ನ ಬೆಂಗಳೂರಿನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ನೇರ ಪ್ರದರ್ಶನಗೊಂಡು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.