ನಟಿ ಭಾವನಾ ರಾಮಣ್ಣ ಅವರು ಐವಿಎಫ್‌ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಮದುವೆಯಾಗದೆ ತಾಯ್ತನವನ್ನು ಸ್ವೀಕರಿಸುವ ತಮ್ಮ ಹಕ್ಕನ್ನು ಎತ್ತಿ ಹಿಡಿದಿದ್ದಾರೆ. ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗಿರುವ ಈ ವಿಷಯದ ಬಗ್ಗೆ ಭಾವನಾ ಅವರ ನಿಲುವು ಏನು?

ಬೆಂಗಳೂರು (ಜು.5): ಕನ್ನಡದ ಜನಪ್ರಿಯ ನಟಿ ಭಾವನಾ ರಾಮಣ್ಣ ಶುಕ್ರವಾರವಷ್ಟೇ ತಾವು ಅವಳಿ ಮಕ್ಕಳಿಗೆ ಗರ್ಭಿಣಿಯಾಗಿರುವುದಾಗಿ ಘೋಷಣೆ ಮಾಡಿದ್ದರು. ಮದುವೆಯಾಗದ ಅವರು ಐವಿಎಫ್‌ ಮೂಲಕ ಗರ್ಭ ಧರಿಸಿರುವುದಾಗಿ ತಿಳಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗಂಡಿನ ಸಂಪರ್ಕವೇ ಇಲ್ಲದೆ ಗರ್ಭಿಣಿಯಾಗುವ ತಮ್ಮ ನಿರ್ಧಾರವನ್ನು ಅವರು ಸಮರ್ಥನೆ ಮಾಡಿಕೊಂಡಿದ್ದು, ಮಕ್ಕಳನ್ನು ಪಡೆಯಲು ಹೆಣ್ಣು ಮದುವೆ ಆಗಲೇಬೇಕು ಎನ್ನುವ ನಿಯಮ ಎಲ್ಲೂ ಇಲ್ಲ ಎಂದು ತಿಳಿಸಿದ್ದಾರೆ. ಅದಲ್ಲದೆ, ಮಕ್ಕಳನ್ನು ಪಡೆಯುವ ನನ್ನ ನಿರ್ಧಾರಕ್ಕೆ ತಂದೆಯೂ ದೊಡ್ಡ ಮಟ್ಟದ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಐವಿಎಫ್‌ ಅಂದರೆ ಇನ್ ವಿಟ್ರೊ ಫರ್ಟಿಲೈಸರ್ ಮೂಲಕ ಗರ್ಭಿಣಿಯಾಗಿರುವ ಭಾವನಾ ರಾಮಣ್ಣ ನಿರ್ಧಾರದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿತ್ತು. ಅದರಲ್ಲೂ ಹುಟ್ಟುವ ಮಕ್ಕಳಿಗೆ ತಂದೆಯ ಪ್ರೀತಿಯೇ ಸಿಗದೇ ಇರುವಂತೆ ಮಾಡುವುದು ಸರಿಯಲ್ಲ ಎನ್ನಲಾಗಿತ್ತು. ಇದಕ್ಕೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ, 'ಎಲ್ಲರೂ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಸಂಗಾತಿ ಬೇಕು. ಆದರೆ, ಮಕ್ಕಳು ಮಾಡಿಕೊಳ್ಳಬೇಕು ಅನ್ನೋ ಕಾರಣಕ್ಕೆ ಮದುವೆ ಆಗಬಾರದು. ದೇವರು ನನಗೆ ತಾಯ್ತನ ಅನುಭವಿಸುವ ಶಕ್ತಿ ಕೊಟ್ಟಿದ್ದಾನೆ. ಪಾಕೃತಿಕವಾಗಿಯೂ ಅದು ನನಗೆ ಸಿಕ್ಕಿದೆ. ಭೂಮಿಯ ಮೇಲಿರುವ ಪ್ರತಿ ಪ್ರಾಣಿಯೂ ಕೂಡ ಮಗುವನ್ನು ಪಡೆಯುವ ಹಕ್ಕು ಹೊಂದಿದೆ. ಇದೇ ಜನರು ಗುಬ್ಬಚ್ಚಿ ಬಳಿ, ಹುಲಿ, ಸಿಂಹದ ಬಳಿ ಹೋಗಿ ಮಕ್ಕಳಾಗಿದ್ಯಲ್ಲ ನಿಮಗೆ ಮದುವೆ ಆಗಿದ್ಯಾ ಅಂತಾ ಕೇಳೋದಿಲ್ಲ. ಹಸುಗಳಲ್ಲಿ ಈಗಲೂ ಐವಿಎಫ್‌ ಮೂಲಕ ಕರು ಮಾಡಿಸುತ್ತಾರೆ ಎನ್ನುವ ಮೂಲಕ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ.

ನನ್ನ ಇಡೀ ಐವಿಎಫ್‌ ಟ್ರೀಟ್‌ಮೆಂಟ್‌ ಬೆಂಗಳೂರಿನಲ್ಲಿಯೇ ಆಗಿದೆ. ಕೆಲವರು ದೆಹಲಿ ಹೋಗಬಹುದಿತ್ತು. ಜನರಿಂದ ಮುಚ್ಚಿಡಬಬಹುದಿತ್ತು ಎಂದರು ಆದರೆ, ನನ್ನ ಬಗ್ಗೆ ನಾನು ಅಪ್‌ಡೇಟ್‌‌ ನೀಡಲೇಬೇಕು. ಅಭಿಮಾನಿಗಳು ಪ್ರೀತಿ ನೀಡಿದ್ದಾರೆ. ಹೆದರಿ ಬದುಕೋ ಅಗತ್ಯವಿಲ್ಲ. ನನ್ನ ತಂದೆ ತಾಯಿಯೇ ಇದಕ್ಕೆ ಒಪ್ಪಿಗೆ ಕೊಟ್ಟಿರುವಾಗ ನನಗೆ ಭಯ ಏಕೆ? ನಮ್ಮ ಸಮಾಜ ಶುರುವಾಗೋದು ಮನೆಯಿಂದಲೇ ತಾನೆ ಎಂದು ಹೇಳಿದ್ದಾರೆ.

ನನಗೀಗ 40 ವಯಸ್ಸು. ನನ್ನದೇ ರೀತಿಯಲ್ಲಿ ಲೈಫ್‌ ಅಭ್ಯಾಸ ಆಗಿರುತ್ತದೆ. ಈ ಹಂತದಲ್ಲಿ ಮತ್ತೊಬ್ಬರು ಜೀವನದಲ್ಲಿ ಬರೋದು ಬಲು ಕಷ್ಟ. ಅವರಿಗೂ ಅದು ಮಸ್ಯೆ ಆಗುತ್ತದೆ. ವಿವಾಹದಲ್ಲಿ ಕೆಲವು ಸಮಸ್ಯೆಗಳೇ ಜಾಸ್ತಿ. ಒಂದು ತಿಳಿದುಕೊಳ್ಳಿ ಗಂಡಸು ಬಂದ ಬಳಿಕ ಯಾರೂ ಹೆಣ್ಣಾಗೋದಿಲ್ಲ. ಹೆಣ್ಣು ಯಾವಾಗಲೂ ಹೆಣ್ಣಾಗಿಯೇ ಇರುತ್ತಾಳೆ ಎಂದು ಹೇಳುವ ಮೂಲಕ ತಾವು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.